ವಿಶೇಷ ಲೇಖನ- ಡಾ. ಅಶೋಕ್ ಶೆಟ್ಟಿ ಬಿ. ಎನ್.
ಮಂಗಳೂರು: ಅಪೂರ್ವ ವ್ಯಕ್ತಿತ್ವ, ಅದ್ಭುತ ಕಂಠಸಿರಿಯ ದಕ್ಷಿಣ ಕನ್ನಡದ ಮಂಗಳೂರಿನ ಮೂಲ್ಕಿ ಮೂಲದ, ಕರಾವಳಿಯ ಸುವರ್ಣ ಕಂಠ ಎಂದೇ ಹೆಸರುವಾಸಿಯಾಗಿರುವ ರಾಷ್ಟ್ರ, ಅಂತಾರಾಷ್ಟ್ರೀಯ ಗಾನ ಪ್ರಪಂಚದಲ್ಲಿ ತನ್ನದೇ ಆದ ಗಾಯನ ಶೈಲಿಯಿಂದ, ಸ್ವರ ಮಾಧುರ್ಯದಿಂದ ಸೂಪರ್ ಸ್ಟಾರ್ ಗಾಯಕರೆಂದೇ ಮನೆಮಾತಾಗಿರುವ ಬಹುಭಾಷಾ ಚಲನಚಿತ್ರ ಗಾಯಕ, ಗಾನ ಸಾಮ್ರಾಟ, ಅದ್ಬುತ ಕಂಠ ಸಿರಿಯ ರವೀಂದ್ರ ಪ್ರಭು ಅವರ ಸಾಧನೆ ನಿಜಕ್ಕೂ ಅಸಾಮಾನ್ಯ.
MP MLA’s NEWS 13ನೇ ಸೌಹಾರ್ದ ಸಂಗಮಕ್ಕೆ ಜೀವ ತುಂಬಿದ ಗಾನಸುಧೆ:
ಕಳೆದ ವರ್ಷ ಅಂದರೆ ಜೂನ್ 24, 2025 ರಂದು ಮಂಗಳೂರು ಟೌನ್ ಹಾಲ್‌ನಲ್ಲಿ ಸಂಜೆ 4 ರಿಂದ 9 ಗಂಟೆಯವರೆಗೆ ನಡೆದ MP MLA’s NEWS 13ನೇ ಸೌಹಾರ್ದ ಸಂಗಮದಲ್ಲಿ ರವೀಂದ್ರ ಪ್ರಭು ಅವರು ತಮ್ಮ ಪ್ರಸಿದ್ಧ ‘ರಾಗ್ ರಂಗ್” ತಂಡದ ಕಲಾವಿದರೊಂದಿಗೆ ನೀಡಿದ ಸೌಹಾರ್ದ ಗಾಯನ ಕಾರ್ಯಕ್ರಮ ಇತಿಹಾಸವಾಯಿತು.
ಸೌಹಾರ್ದ ಸಂಗಮ ಎಂದೊಡನೆ ಖುಷಿಯಿಂದ ಬಂದು, ಯಾವುದೇ ಸಂಭಾವನೆಯ ಡಿಮ್ಯಾಂಡ್ ಮಾಡದೇ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಸುಮಾರು ಮೂರು ಗಂಟೆಗಳ ಕಾಲ ವಿವಿಧ ಭಾಷೆಗಳಲ್ಲಿ ಹಾಡಿ ಜನಮೆಚ್ಚುಗೆಗೆ ಪಾತ್ರರಾದರು. ಅವರ ಈ ದೊಡ್ಡ ಗುಣವೇ ಅವರನ್ನು ಎಲ್ಲರಿಂದ ಭಿನ್ನವಾಗಿಸುತ್ತದೆ.
ಈ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣ, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ನಮ್ಮ ಕುಡ್ಲ ಟಿವಿ ವಾಹಿನಿಯ ನೇರ ಪ್ರಸಾರ*ದ ಮೂಲಕ *ಲಕ್ಷಕ್ಕೂ ಅಧಿಕ ಮಂದಿ ಪ್ರೇಕ್ಷಕರು ವೀಕ್ಷಿಸಿ ಶ್ಲಾಘನೆ ವ್ಯಕ್ತಪಡಿಸಿದ್ದರು.

ರೇಡಿಯೋ ಇಲ್ಲದ ಮನೆಯಿಂದ 10,000 ವೇದಿಕೆಗಳವರೆಗೆ – ರೋಚಕ ಪಯಣ:
ಅವರ ಬಾಲ್ಯದ ದಿನಗಳು ಅತ್ಯಂತ ರೋಚಕ ಮತ್ತು ಸ್ಫೂರ್ತಿದಾಯಕ. ಆ ಕಾಲದಲ್ಲಿ ಮನೆಯಲ್ಲಿ ರೇಡಿಯೋ ಕೂಡ ಇರಲಿಲ್ಲವಂತೆ, ಪಕ್ಕದ ಮನೆಯಿಂದ ಹಾಡು ಕೇಳಿ, ಅದನ್ನೇ ಮನನ ಮಾಡಿ ಕಲಿತವರು ಇವರು. ಯಾವುದೇ ದೊಡ್ಡ ಶಾಸ್ತ್ರೀಯ ತರಬೇತಿ ಇಲ್ಲದೇ, ತಮ್ಮದೇ ಆದ ದನಿಯಿಂದ ಕರಾವಳಿ ಜನರ ಮನಸ್ಸು ಗೆದ್ದವರು. ಇಂದು ಕರಾವಳಿಯ ಸೂಪರ್ ಸ್ಟಾರ್ ಸಿಂಗರ್ ಆಗಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಯಾವುದೇ ಕಾರ್ಯಕ್ರಮಗಳಲ್ಲಿ ರವೀಂದ್ರ ಪ್ರಭು ಅವರ ಹಾಡಿದ್ದೆಂದರೆ ಅಲ್ಲೊಂದು ಅಚ್ಚುಕಟ್ಟುತನ, ಶಿಸ್ತು, ಸಮಯಪಾಲನೆ ಇರುತ್ತದೆ. ಪ್ರೇಕ್ಷಕರನ್ನು ತದೇಕಚಿತ್ತರನ್ನಾಗಿಸಿ ಇಡೀ ಕಾರ್ಯಕ್ರಮವನ್ನು ಸೂಪರ್ ಹಿಟ್ ಗೊಳಿಸಬಲ್ಲ ಚಾಕಚಕ್ಯತೆ ಅವರಿಗಿದೆ. ಗಾಯನವೆಂಬುದು ಅವರಿಗೆ ಗಾಡ್ ಗಿಫ್ಟ್, ಅವರು ನಿಜವಾದ ಸರಸ್ವತಿ ಪುತ್ರ ಎಂದರೆ ತಪ್ಪಾಗಲಾರದು.
ಬಹುಭಾಷಾ ಪ್ರತಿಭೆ ಮತ್ತು ‘ರಾಗ್ ರಂಗ್’ ಸಾಮ್ರಾಜ್ಯ:
ಕನ್ನಡ ಅವರ ಉಸಿರಾದರೂ, ತುಳು, ಕೊಂಕಣಿ, ಬ್ಯಾರಿ, ಉರ್ದು, ಹಿಂದಿ, ಮಲಯಾಳಂ, ಕೊಡವ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಬಲ್ಲ ಅದ್ಭುತ ಗಾಯಕ. ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಮುಕೇಶ್, ಮನ್ನಾ ಡೆ, ಡಾ. ರಾಜ್‌ಕುಮಾರ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್, ಸಿ. ಅಶ್ವತ್, ಪುತ್ತೂರು ನರಸಿಂಹ ನಾಯಕ್ ಅವರಂತಹ ದಿಗ್ಗಜರ ಹಾಡುಗಳನ್ನು ತಮ್ಮದೇ ಸ್ವಂತ ಧಾಟಿಯಲ್ಲಿ ಹಾಡುವಲ್ಲಿ ಅವರು ಎತ್ತಿದ ಕೈ.



ಮಂಗಳೂರಿನಲ್ಲಿ ‘ರಾಗ್ ರಂಗ್’ ಎಂಬ ವೃತ್ತಿಪರ ಸಂಗೀತ ತಂಡವನ್ನು ಕಟ್ಟಿ, ಕಳೆದ ಎರಡು ದಶಕಗಳಿಂದ ನಿರಂತರ ಕಾರ್ಯಕ್ರಮ ನೀಡುತ್ತಿದ್ದಾರೆ. ಭಕ್ತಿಗೀತೆ, ಕೀರ್ತನೆ, ಗಝಲ್, ಲಘು ಸಂಗೀತ, ಸಿನಿ ಗೀತೆಗಳು ಸೇರಿದಂತೆ 15ಕ್ಕೂ ಹೆಚ್ಚು ಆಡಿಯೋ/ವಿಡಿಯೋ ಆಲ್ಬಂಗಳಿಗೆ ತಾವೇ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿ, ಧ್ವನಿ ನೀಡಿದ್ದಾರೆ. ಕನ್ನಡ ಮತ್ತು ತುಳು ಚಲನಚಿತ್ರಗಳ ಹಿನ್ನೆಲೆ ಗಾಯಕರಾಗಿ, ತುಳು ರಂಗಭೂಮಿಯ ಬಹುತೇಕ ನಾಟಕ ತಂಡಗಳಲ್ಲಿ ಹಾಡಿದ್ದಾರೆ.
ದೇಶ-ವಿದೇಶಗಳಲ್ಲಿ ಕನ್ನಡದ ಕಂಪು:
ಕಳೆದ 40 ವರ್ಷಗಳಲ್ಲಿ 10,000ಕ್ಕೂ ಹೆಚ್ಚು ಸ್ಟೇಜ್ ಶೋ ಮಾಡಿರುವ ಇವರು, ದುಬೈ, ಅಬುಧಾಬಿ, ಶಾರ್ಜಾ, ಬಹ್ರೇನ್, ಕುವೈತ್, ಮಸ್ಕತ್, ದೋಹಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ನೂರಾರು ಕಾರ್ಯಕ್ರಮ ನೀಡಿದ್ದಾರೆ. 2008ರಲ್ಲಿ ದುಬೈನ ಇಂಡಿಯನ್ ಹೈಸ್ಕೂಲ್ ಆಡಿಟೋರಿಯಂನಲ್ಲಿ ನಡೆದ ‘ಗೋಲ್ಡನ್ ಓಲ್ಡೀಸ್ ಮೆಲೋಡಿ ನೈಟ್’ನಲ್ಲಿ 9 ಸದಸ್ಯರ ತಂಡದ ನೇತೃತ್ವ ವಹಿಸಿದ್ದರು.
ಪ್ರಶಸ್ತಿ ಮತ್ತು ಬಿರುದುಗಳು:
- ಜಿಲ್ಲಾಡಳಿತ ನೀಡುವ ‘ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ’
- ‘ತುಳುನಾಡ ಗಾನ ಗಂಧರ್ವ’ ಬಿರುದು
- 59ನೇ ಬೆಂಗಳೂರು ಗಣೇಶ ಉತ್ಸವದಲ್ಲಿ ಸನ್ಮಾನ
ಫೇಮಸ್ ಹಾಡುಗಳು: ಹೂ ಬೇಕೆ ಪರಿಮಳದ, ಹರಿ ಕುಣಿದ, ಬಾರೋ ಕೃಷ್ಣಯ್ಯ, ಕಂಡೆ ನಾ ಗೋವಿಂದನಾ ಮುಂತಾದವು ಇಂದಿಗೂ ಅಭಿಮಾನಿಗಳ ಬಾಯಲ್ಲಿ.
ರವೀಂದ್ರ ಪ್ರಭು ಅವರು ತುಂಬಾ ಮಂದಿ ಯುವ ಗಾಯಕ-ಗಾಯಕಿಯರನ್ನು ಬೆಳಕಿಗೆ ತಂದಿದ್ದಾರೆ. ಅವರಲ್ಲಿರುವ ಅದ್ಭುತ ಕಲೆ, ಸದ್ಗುಣ ಮತ್ತು ಉತ್ತಮ ವ್ಯಕ್ತಿತ್ವವೇ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಲು ಕಾರಣ.
MP MLA’s NEWS ತಂಡದ ಪರವಾಗಿ ಗಾನ ಸಾಮ್ರಾಟ ರವೀಂದ್ರ ಪ್ರಭು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು












































































































































































