Author name: editor

ಪ್ರಾದೇಶಿಕ ವಾರ್ತೆಗಳು

ಅ.14ರಂದು ಅಕ್ಷರ ಸಭಾಂಗಣ ಉದ್ಘಾಟನೆ

ಮಂಗಳೂರು: ಮಂಗಳೂರಿನ ಪತ್ರಿಕಾ ಭವನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ “ಅಕ್ಷರ” ಸಭಾಂಗಣದ ಉದ್ಘಾಟನಾ ಸಮಾರಂಭ ಅ.14ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ. ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ನೂತನ ಸಭಾಂಗಣ ಉದ್ಘಾಟಿಸಲಿದ್ದಾರೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ದೀಪ ಪ್ರಜ್ವಲನೆಗೊಳಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಕೆ.ಆನಂದ ಶೆಟ್ಟಿ ನಾಮಫಲಕ ಅನಾವರಣಗೊಳಿಸಲಿದ್ದು, ಪ್ರೆಸ್ ಕ್ಲಬ್ ಅಧ್ಯಕ್ಷಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್.ಬಿ.ಎನ್., ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷಅನ್ನು ಮಂಗಳೂರು, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ರಕ್ತದಾನದಿಂದ ಪರರ ಜೀವ ಉಳಿಸುವ ಸಂಕಲ್ಪ -ಶಾಸಕ ಡಿ.ವೇದವ್ಯಾಸ ಕಾಮತ್

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ೨೫ ವರ್ಷದ ಸಾರ್ಥಕ ಜನಸೇವೆಯ ಅಂಗವಾಗಿ ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಯುವ ಮೋರ್ಚಾ ವತಿಯಿಂದ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಸಹಯೋಗದಲ್ಲಿ ಭಾನುವಾರ ನಗರದ ರೆಡ್‌ಕ್ರಾಸ್ ಶತಮಾನೋತ್ಸವ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.ಶಿಬಿರ ಉದ್ಘಾಟಿಸಿದ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ ” ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನಿಸ್ವಾರ್ಥ ಜನಸೇವೆ ದೇಶದ ಜನತೆಗೆ ಪ್ರೇರಣೆಯಾಗಿದೆ. ಅವರ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಯುವ ಮೋರ್ಚಾ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವ ಸಂಕಲ್ಪ ತಳೆದಿದ್ದಾರೆ’ ಎಂದರು.ಇAಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ” ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಅವಶ್ಯ ಇದ್ದರೆ ರೆಡ್‌ಕ್ರಾಸ್‌ನಿಂದ ಉಚಿತವಾಗಿ ರಕ್ತ ಪೂರೈಸಲಾಗುತ್ತಿದೆ. ರಕ್ತದ ಕೊರತೆ ನಿವಾರಿಸಲು ಸಂಘ, ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಬೇಕು. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದರು.ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು ಅಧ್ಯಕ್ಷತೆ ವಹಿಸಿದ್ದರು. ಎಂಎಲ್‌ಸಿ ಕಿಶೋರ್‌ಕುಮಾರ್ ಪುತ್ತೂರು, ಮಾಜಿ ಎಂಎಲ್‌ಸಿ ಕೆ.ಮೋನಪ್ಪ ಭಂಡಾರಿ, ಬಿಜೆಪಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ನಿತಿನ್ ಕುಮಾರ್, ನಂದನ್ ಮಲ್ಯ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್,ರಾಜ್‌ಗೋಪಾಲ್ ರೈ, ಪೂರ್ಣಿಮಾ, ಕಿಶೋರ್ ಕೊಟ್ಟಾರಿ, ರೆಡ್‌ಕ್ರಾಸ್ ಸೊಸೈಟಿಯ ನಿರ್ದೇಶಕರಾದ ಗುರುದತ್ ನಾಯಕ್, ರಾಘವೇಂದ್ರ ರಾವ್, ಪಿ.ಬಿ.ಹರೀಶ್ ರೈ, ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಅಶ್ವಿತ್ ಕೊಟ್ಟಾರಿ ಸ್ವಾಗತಿಸಿ, ಮೌನೀಶ್ ಚೌಟ ವಂದಿಸಿದರು, ಋತ್ವಿಕ್ ಕದ್ರಿ ಕಾರ್ಯಕ್ರಮ ನಿರೂಪಿಸಿದರು.ಶಾಸಕ ಡಿ.ವೇದವ್ಯಾಸ ಕಾಮತ್ ಸಹಿತ ೩೫೦ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ಫೋಟೋ _ಬಿಜೆಪಿ………..

ಪ್ರಾದೇಶಿಕ ವಾರ್ತೆಗಳು

ಅಂತಾರಾಷ್ಟ್ರೀಯ ಖ್ಯಾತಿ ಹೆಸರಾಂತ ಮತ್ತು ಯಶಸ್ವೀ ಯೋಗ ಪ್ರಾಣ ವಿದ್ಯಾ ಚಿಕಿತ್ಸಕ ಕೆ.ಮೋಹನ್ ದಾಸ್ ಬಾಳಿಗಾ ಅವರಿಂದ ತರಬೇತಿ ಪಡೆದ MP MLA’S NEWS ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್

ಮಂಗಳೂರು : ವೈದ್ಯಕೀಯ ಜಗತ್ತಿಗೆ ಸಾಧ್ಯವಾಗದ, ಸವಾಲೆನಿಸುವಂಥ ಅದೆಷ್ಟು ಪ್ರಕರಣಗಳನ್ನು ಯೋಗ ಪ್ರಾಣ ವಿದ್ಯಾ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಾಗುತ್ತಿದ್ದು,ಇದರ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಮನಗಂಡು ಭವಿಷ್ಯದಲ್ಲಿ ಟ್ರಸ್ಟ್ ಮೂಲಕ ವಿಸ್ತಾರ ಸಮಾಜಸೇವೆಯ ದೃಷ್ಟಿಕೋನವಿರಿಸಿರುವ Mp mla’s news ಪತ್ರಿಕೆ ಮತ್ತು mpmlasnewstv 24*7 news portal ನ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್.ಅವರು ಅಂತಾರಾಷ್ಟ್ರೀಯ ಖ್ಯಾತಿಯ ಜನಪ್ರಿಯ ಮತ್ತು ಅನುಭವಿ , ಹಿರಿಯ ಹಾಗೂ ಯಶಸ್ವಿ ಯೋಗ ಪ್ರಾಣ ವಿದ್ಯಾ ಚಿಕಿತ್ಸಕ ಕೆ.ಮೋಹನ್ ದಾಸ್ ಬಾಳಿಗಾ ಅವರಿಂದ ಯೋಗ ಪ್ರಾಣ ವಿದ್ಯಾ ಚಿಕಿತ್ಸೆ ಬಗ್ಗೆ ತರಬೇತಿ ಪಡೆದರು. ಮಂಗಳೂರಿನಲ್ಲಿ ಯೋಗ ಪ್ರಾಣ ವಿದ್ಯಾ ಫೌಂಡೇಶನ್ ಟ್ರಸ್ಟ್(R) ನಡೆಸಿದ ಯೋಗ ಪ್ರಾಣ ವಿದ್ಯಾ ಚಿಕಿತ್ಸೆ ಕುರಿತು ಅಂತಾರಾಷ್ಟ್ರೀಯ ತರಬೇತುದಾರರಾದ ಮೋಹನ್ ದಾಸ್ ಬಾಳಿಗಾ ಅವರು ತರಬೇತಿ ನಡೆಸುತ್ತಿದ್ದು, ಡಾ. ಅಶೋಕ್ ಶೆಟ್ಟಿ ಬಿ. ಎನ್.ಅವರು ಕಾರ್ಯಗಾರದಲ್ಲಿ ಭಾಗವಹಿಸಿ ತರಬೇತಿ ಪಡೆದರು. ಈ ಬಗ್ಗೆ ಯೋಗ ಪ್ರಾಣ ವಿದ್ಯಾ ಚಿಕಿತ್ಸಕ ಕೆ.ಮೋಹನ್ ದಾಸ್ ಬಾಳಿಗಾ ಅವರು ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರಿಗೆ ಸರ್ಟಿಫಿಕೇಟ್ ನೀಡಿದರು. ಮಾನವ ಸಂಪನ್ಮೂಲ ಮತ್ತು ಆಡಳಿತ ನಿರ್ವಹಣೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಎಂಬಿಎ ಸ್ನಾತಕೋತ್ತರ ಪದವಿ ಮತ್ತು ಪಿಜಿ ಡಿಪ್ಲೋಮಾ,ರಾಜ್ಯ ಶಾಸ್ತ್ರದಲ್ಲಿ ಎಂ. ಎ. ಸ್ನಾತ ಕೋತ್ತರ ಪದವಿ,ಜನರಲ್ ಮ್ಯಾನೇಜ್ ಮೆಂಟ್ ನಲ್ಲಿ ಗರಿಷ್ಠ ಅಂಕಗಳೊಂದಿಗೆ ಪಿಜಿ ಡಿಪ್ಲೋಮಾ , ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಮೂರು ವರ್ಷದ ಪಾಲಿಟೆಕ್ನಿಕ್ ಡಿಪ್ಲೋಮಾ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಡಾ. ಅಶೋಕ್ ಶೆಟ್ಟಿ ಬಿ. ಎನ್.ಅವರು ಇಂಡಿಯನ್ ಕೌನ್ಸಿಲ್ ಫಾರ್ ಎಜುಕೇಶನ್ ಮಿಷನ್ ನಿಂದ ಗೌರವ ಡಾಕ್ಟರೇಟ್ ಪಡೆದಿರುತ್ತಾರೆ.ಆಯೇಷಾ ಖಾನo ಅಧ್ಯಕ್ಷರಾಗಿರುವ ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು ಇದರ ವತಿಯಿಂದ ಮುಡಿಪು ಇನ್ಫೋಸಿಸ್ ನಲ್ಲಿ ಇನ್ಫೋಸಿಸ್ ಸಂಸ್ಥೆಯ ಜಂಟಿ ಸಹಕಾರದೊಂದಿಗೆ ನಡೆಸಿದ ಕೃತಕ ಬುದ್ಧಿಮತ್ತೆ AI ಶಿಬಿರದಲ್ಲಿ ತರಬೇತಿ, ಎರಡು ಬಾರಿ ಯೂನಿಸೆಫ್ ನಿಂದ ಮಕ್ಕಳ ಹಕ್ಕುಗಳು,ಆರೋಗ್ಯ ಕಾನೂನು ಮತ್ತು ರಕ್ಷಣೆ ಬಗ್ಗೆ ತರಬೇತಿ, ಕರ್ನಾಟಕ ಪತ್ರಿಕಾ ಅಕಾಡೆಮಿಯಿಂದ ಪತ್ರಿಕೋದ್ಯಮದ ಬಗ್ಗೆ ತರಬೇತಿ, ನೀನಾಸಂ ಹೆಗ್ಗೋಡು ಸಾಂಸ್ಕೃತಿಕ ಶಿಬಿರದಲ್ಲಿ ರಂಗ ಶಿಕ್ಷಣ, ನಟನೆ, ನಾಟಕ ರಚನೆ, ನಿರ್ದೇಶನದ ಬಗ್ಗೆ ತರಬೇತಿ ಪಡೆದಿರುವ ಡಾ.ಅಶೋಕ್ ಶೆಟ್ಟಿ ಬಿ.ಎನ್ ಅವರು 1997 ರಲ್ಲಿ ಸ್ಥಾಪನೆಗೊಂಡ ಕೃತ್ತಿಕಾಬ್ರಹ್ಮ ಕಲಾವಿದರು ಮಂಗಳೂರು ತಂಡದ ವ್ಯವಸ್ಥಾಪಕರಾಗಿ 10 ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ.ಅವುಗಳ ಪೈಕಿ, ಅಮ್ಮ, ಒಂಜಪ್ಪೆ ಜೋಕ್ಲು ಜನಪ್ರಿಯ ನಾಟಕಗಳು.ಅಮ್ಮ ನಾಟಕಕ್ಕೆ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಮೆಚ್ಚುಗೆ ಪ್ರಶಸ್ತಿ ಬಂದಿದೆ.ಪೂಮಾಲೆ ನಾಟಕವನ್ನು ಕುಡಾ ನಿರ್ದೇಶಿಸಿದ್ದಾರೆ.ಡಾ. ಅಶೋಕ್ ಶೆಟ್ಟಿ. ಬಿ. ಎನ್ ಅವರು ಕೃತ್ತಿಕಾಬ್ರಹ್ಮ ಕಾವ್ಯನಾಮದಿಂದ ನಿರ್ಭಿತ ಪತ್ರಿಕೋದ್ಯಮ, ರಂಗಭೂಮಿ, ಸಾಹಿತ್ಯ ಜಗತ್ತಿನಲ್ಲಿ ಗುರುತಿಸಿದ್ದಾರೆ. ಸವ್ಯಸಾಚಿ ಪುನರೂರು (ಕನ್ನಡ ), punarooru -75,(English),ಸಂಸತ್ತಿನಲ್ಲಿ ಕಟೀಲ್ ಕೇಳಿದ ಪ್ರಶ್ನೆಗಳು ಕೃತಿಗಳನ್ನು ರಚಿಸಿದ್ದಾರೆ.ಸಾರ್ವಜನಿಕ ಹಿತಾಸಕ್ತಿಯ ನಿರ್ಭಿತ ತನಿಖಾ ವರದಿಗಳನ್ನು ಪ್ರಕಟಿಸಿ 35 ಕ್ಕೂ ಹೆಚ್ಚು ಮಾನನಷ್ಟ ಸಂಬಂಧಿ ಕೋರ್ಟು ಕೇಸುಗಳನ್ನು ಎದುರಿಸಿ ನ್ಯಾಯಾಲಯದಲ್ಲಿ ತೀರ್ಪು ಮೂಲಕ ಜಯ ಗಳಿಸಿ ನಿರ್ಭಿತ ತನಿಖಾ ಪತ್ರಿಕೋದ್ಯಮಕ್ಕೆ ನ್ಯಾಯದ ಮೂಲಕ ಬಲ ತಂದು ಕೊಟ್ಟ ಡಾ. ಅಶೋಕ್ ಶೆಟ್ಟಿ ಬಿ. ಎನ್,ಈ ಹಿಂದೆ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಿರುವ IFSMN (R), New Delhi ನ 2004ರಲ್ಲಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿದ್ದ ಅವರು ಕಳೆದ 2 ಅವಧಿಗಳಲ್ಲಿ ಸತತವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚುನಾಯಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೌಹಾರ್ದ ಸಂಗಮದ ಯಶಸ್ವಿ ಸಂಘಟಕರಾಗಿ ಮಂಗಳೂರು ಟೌನ್ ಹಾಲ್ ನಲ್ಲಿ 12 ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಒಂದು ಒಟ್ಟಿನಲ್ಲಿ 13 ಸೌಹಾರ್ದ ಸಂಗಮಗಳನ್ನು ಸಂಘಟಿಸಿ 300 ಮಂದಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿರುವ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರಿಗೆ ಕರ್ನಾಟಕ ಸರಕಾರದಿಂದ ರಾಜ್ಯ ಪ್ರಶಸ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ. ಮಂಗಳೂರು ಪ್ರೆಸ್ ಕ್ಲಬ್ ನಿಂದ ಗೌರವ ಸನ್ಮಾನ, ದುಬೈ ಬಿಲ್ಲವರ ಬಳಗದಿಂದ ಸನ್ಮಾನ,ಚಾವಡಿ ಶಿಕ್ಷಣ ಸಮಿತಿ ಕಳ್ಳಿಗೆ ಗ್ರಾಮದಿಂದ ಸನ್ಮಾನ ,ನೇತಾಜಿ ಯುವಕ ಮಂಡಲ ಕುಪ್ಪಿಲದಿಂದ ಸನ್ಮಾನ,ಲಾಠಿ ಚಾರ್ಜ್ ಪತ್ರಿಕೆ,ಮಂಗಳೂರು ಮಲ್ಲ ಪತ್ರಿಕೆ,ಸುಮಸೌರಭ ಪತ್ರಿಕೆ,ಐಕಳ ಹರೀಶ್ ಶೆಟ್ಟಿ ಅವರು ಅಧ್ಯಕ್ಷರಾಗಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸನ್ಮಾನ ಸೇರಿದಂತೆ ಹಲವಾರು ಸಮಾಜ ಸೇವಾ ಸಂಘ – ಸಂಸ್ಥೆ, ಮಾಧ್ಯಮ ಸಂಸ್ಥೆಗಳಿಂದ ಸನ್ಮಾನ, ಜೋಡುಮಾರ್ಗ ಜೂನಿಯರ್ ಚೇಂಬರ್ ನಿಂದ ಉತ್ತಮ ವರದಿಗಾರ ಪ್ರಶಸ್ತಿ, ಮ್ಯಾಕ್ಸ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ನಿಂದ ಸೇವಾರತ್ನ ಪ್ರಶಸ್ತಿ ದೊರಕಿವೆ. ಡೈಲಿ 10 ನ್ಯೂಸ್ ಟಿವಿ ಚಾನೆಲ್ ನಲ್ಲಿ ಸುದ್ದಿ ಸಂಪಾದಕರಾಗಿದ್ದ ಇವರು ಸಂಕ್ರಾಂತಿ ಟಿ. ವಿ. ಎಂಬ ವೀಕ್ಲಿ ಸುದ್ದಿ ವಾಹಿನಿ ಹೊಂದಿದ್ದರು.ವಿಜಯಕರ್ನಾಟಕ, ಕೆನರಾಟೈಮ್ಸ್, ಕನ್ನಡ ಜನಾಂತರಂಗ, ಕರಾವಳಿ ಅಲೆ, ಮಂಗಳೂರು ಮಿತ್ರ,ಹೊಸ ಸಂಜೆ, ಕೃತ್ತಿಕಾ ಬ್ರಹ್ಮ, ಅಗ್ನಿ, ಪೊಲೀಸ್ ನ್ಯೂಸ್,ಪೊಲೀಸ್ ವರ್ಲ್ಡ್, ಕ್ರೈಂ ವಾರ್ತೆ, ನಮ್ಮ ಭೂಮಿ ಸೇರಿದಂತೆ ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ, ಮುಖ್ಯ ವರದಿಗಾರ, ಸುದ್ದಿ ಸಂಪಾದಕರಾಗಿ ದುಡಿದು ಪ್ರಸ್ತುತ Mp mla’s news ಮತ್ತು mpmlasnewstv 24×7ನ ಸಂಪಾದಕರಾಗಿದ್ದಾರೆ. mpmlasnewstv 24×7 news portal ದೇಶ ವಿದೇಶಗಳಲ್ಲಿ 0.15 ಮಿಲಿಯನ್ ಫಾಲ್ಲೋರ್ಸ್ ಗಳನ್ನು ಹೊಂದಿದೆ.ರಾಷ್ಟ್ರ, ಅಂತಾರಾಷ್ಟ್ರೀಯ ಪ್ರತಿಷ್ಟಿತ ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರು Mp MLA’s News ಮಹಾಪೋಷಕರಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕೊಚ್ಚಿಯಲ್ಲಿ ಪ್ರಪ್ರಥಮ ಬಾರಿಗೆ ವಿಜೃಂಭಿಸಲಿದೆ ಕೆರೆಕಾಡು ವಿನಾಯಕ ಮೇಳ

ಮೂಲ್ಕಿ : ಮಕ್ಕಳ ಮೇಳವೆಂದೆ ಕಳೆದ 19 ವರ್ಷದಿಂದ ಪ್ರಸಿದ್ಧಿಯಾಗಿರುವ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡವು ಇದೀಗ ಯುವ ಕಲಾವಿದರೊಂದಿಗೆ ಸದೃಢವಾಗಿದ್ದು, ಇತ್ತೀಚೆಗಷ್ಟೇ ತನ್ನ ,11ನೇ ವರ್ಷದ ಮುಂಬೈ ಪ್ರವಾಸವನ್ನು ಉಶಸ್ವಿಯಾಗಿ ನಿರ್ವಹಿಸಿದೆ.ಇದೀಗ ಅಕ್ಟೋಬರ್ 18ರಂದು ಪ್ರಪ್ರಥಮ ಬಾರಿಗೆ ಕೊಚ್ಚಿಗೆ ಪ್ರಯಾಣ ಬೆಳೆಸಲಿದೆ.ಸಾಂಸ್ಕೃತಿಕ ಕಲಾ ಉಪಾಸಕ ಕೊಳುವೈಲು ಎಸ್.ಎಸ್. ಸತೀಶ್ ಭಟ್ ಇವರ ಮಾರ್ಗದರ್ಶನದಲ್ಲಿ ಮೇಳದ ಸಂಚಾಲಕ ಜಯಂತ್ ಅಮೀನ್ ಇವರ ನೇತೃತ್ವದಲ್ಲಿ ಚೆನ್ನೈನ, ಕೊಚ್ಚಿಯ ತ್ರಿಪುಣಿಪುರದಲ್ಲಿ ಸಂಜೆ 6ಕ್ಕೆ ವಿಶೇಷ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಎಸ್ ಶ್ರೀನಿವಾಸನ್ ಇವರ ಸೇವಾರ್ಥವಾಗಿ ಶ್ರೀನಿವಾಸ ಕಲ್ಯಾಣ ಪ್ರಸಂಗ ನಡೆಯಲಿದ್ದು ಸುಮಾರು 22 ಕಲಾವಿದರು ಹಾಗೂ ಮೇಳದ ವೇಷಭೂಷಣದ ನಿರ್ವಹಣೆಯ ಕಲಾಕಾರರು ಭಾಗವಹಿಸಲಿದ್ದು ಭಾಗವತರಾಗಿ ಕಾವ್ಯಶ್ರೀ ಅಜೇರು ಇವರು ಭಾಗವಹಿಸಲಿದ್ದಾರೆ ಎಂದು ಮೇಳದ ಸಂಚಾಲಕ ಜಯಂತ್ ಅಮೀನ್ ಕೆರೆಕಾಡು ಇವರು ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಅಕ್ಟೋಬರ್‌ 11: ಮೂಲ್ಕಿ ಬಿಲ್ಲವ ಸಂಘದಲ್ಲಿ ಪ್ರಪ್ರಥಮ ಸಾಮೂಹಿಕ ದಾಂಡಿಯ ನೃತ್ಯ ಸಂಯೋಜನೆ.

ಮೂಲ್ಕಿ: 93 ವರ್ಷದ ಇತಿಹಾಸ ಇರುವಂತಹ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಅಕ್ಟೋಬರ್ 11ರಿಂದ ಆರಂಭಗೊಳ್ಳುವ ನವರಾತ್ರಿ ಉತ್ಸವದ ವಿಶೇಷ ಆಕರ್ಷಣೆಯಾಗಿ ಅಕ್ಟೋಬರ್ 11ರಂದು ಭಾನುವಾರ ಸಂಜೆ 8 ಗಂಟೆಯಿಂದ 10 ಗಂಟೆಯವರೆಗೆ ಸಾಮೂಹಿಕ ದಾಂಡಿಯ ನೃತ್ಯ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ.ಮೂಲ್ಕಿಯಲ್ಲಿ ಪ್ರಪ್ರಥಮವಾಗಿ ಸಂಯೋಜಿಸಲಾಗಿರುವ ದಾಂಡಿಯ ನೃತ್ಯ ಕಾರ್ಯಕ್ರಮವನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಡಾ. ರಾಜಶೇಖರ್ ಕೋಟ್ಯಾನ್ ಅವರು ವಿಶೇಷವಾಗಿ ಚಾಲನೆ ನೀಡಲಿದ್ದಾರೆ.ಮೂಲ್ಕಿ ಪರಿಸರದ ಜನತೆಗೆ ಮುಕ್ತವಾಗಿ ಪ್ರವೇಶವಿದ್ದು ಸಾಮೂಹಿಕ ದಾಂಡಿಯ ನೃತ್ಯ ಮಾಡುವವರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ಕೋಲಾಟದ ಕೋಲುಗಳೊಂದಿಗೆ ಭಾಗವಹಿಸಬೇಕು, ಶಿಸ್ತು, ಸಂಯಮದಿಂದ ಈ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಮಹಿಳೆಯರು, ಪುರುಷರು, ಮಕ್ಕಳಿಗೆ ಪ್ರತ್ಯೇಕವಾದ ನೃತ್ಯ ಗುಂಪುಗಳಾಗಿ ಅವಕಾಶ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗೆ ಸಂಘದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ನೀವರಿಯದ ನಾನಾ…!ನಾನಾ ವೈಶಿಷ್ಟ ನಟನೆಯ ಪಾಟೇಕರ್ ಅನನ್ಯ ವ್ಯಕ್ತಿತ್ವ

-ಇಕ್ಬಾಲ್ ಕುತ್ತಾರ್.ನಾನಾ ಪಾಟೇಕರ್ ಎಂಬ ವಿಶ್ವನಾಥ್ ಪಾಟೇಕರ್, ಭಾರತೀಯ ಚಲನಚಿತ್ರ ರಂಗದಲ್ಲಿ ಬೇರೆ ಯಾರೂ ಅನುಕರಿಸಲಾಗದಂತಹ, ಅನನ್ಯ ಮತ್ತು ಅಪರೂಪದ ವ್ಯಕ್ತಿತ್ವ ಹಾಗೂ ಅಪೂರ್ವ ನಟನಾ ಶೈಲಿಯ ಸ್ವಂತ ಮಾಲೀಕರು. ಅವರನ್ನು ‘ಆಂಗ್ರಿ ಮ್ಯಾನ್’ ಎಂದು ಮಾತ್ರ ಕರೆಯುವುದು ಅಪೂರ್ಣ. ಅವರು ಕೋಪ, ಕ್ರೌರ್ಯ, ನಿಗ್ರಹ, ದುರ್ಬಲತೆ, ಹಾಸ್ಯ ಮತ್ತು ಮಾನವೀಯತೆಯನ್ನು ಒಂದೇ ಪಾತ್ರದಲ್ಲಿ, ಕೆಲವೊಮ್ಮೆ ಒಂದೇ ಸೀನ್‌ನಲ್ಲಿ ಬೆರೆಸಬಲ್ಲ ಕೆಲವೇ ಅಪರೂಪದ ನಟರಲ್ಲಿ ಒಬ್ಬರಾಗಿದ್ದರು. ನಾನಾ ಪಾಟೇಕರ್ ಅವರ ನಟನೆಯ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ, ಅವರು ಪಾತ್ರವನ್ನು ಬರೇ ಅಭಿನಯಿಸುತ್ತಿರಲಿಲ್ಲ. ಅದರ ಮನೋವಿಜ್ಞಾನವನ್ನು ಅರ್ಥಮಾಡಿಕೊಂಡು ಅದರೊಳಗೆ ಆವಾಹಿಸುತ್ತಿದ್ದರು. ಅವರ ಒರಟುಧ್ವನಿ, ಕತ್ತರಿಸಿದಂತಹ ಸ್ಟಕ್ಯಾಟೋ ಶೈಲಿಯನ್ನು ತನ್ನದೇ ಆದ ಭಾಷೆಯಾಗಿಸಿತ್ತು. ಅವರು ದೊಡ್ಡದಾಗಿ ಕೂಗುವುದಕ್ಕಿಂತ, ನಿಶ್ಶಬ್ದವಾಗಿ ಮಾತನಾಡಿ, ಹಠಾತ್ ವಿರಾಮ ತೆಗೆದುಕೊಂಡು, ನಂತರ ಸ್ಫೋಟಗೊಳ್ಳುವ ರೀತಿ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸುತ್ತಿತ್ತು.ಅವರ ಕಣ್ಣಿನ ನೋಟ,ತೀವ್ರ ಶಕ್ತಿಶಾಲಿ ಮತ್ತು ವಾಸ್ತವಿಕ ಅಭಿನಯ, ವಿಶಿಷ್ಟ ಸಂಭಾಷಣೆ ಅಭಿವ್ಯಕ್ತಿ (ಸ್ಟ್ಯಾಕ್ಯಾಟೋ ಶೈಲಿ, ವ್ಯಂಗ್ಯ, ವಿಡಂಬನೆ ಮತ್ತು ತೀಕ್ಷ್ಣ ಹಾಸ್ಯ), ಭಾವಪೂರ್ಣ ಮತ್ತು ಆಕರ್ಷಕ ಮೋನೋಲಾಗ್‌ಗಳು,ದೇಹ ಭಾಷೆ ಮತ್ತು ಮುಖಭಾವಗಳ ಮೂಲಕ ಪಾತ್ರವನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಸಾಮರ್ಥ್ಯ ಅವರನ್ನು ಭಾರತೀಯ ಚಿತ್ರರಂಗದ ಮೇರುನಟರನ್ನಾಗಿ ರೂಪಿಸಿತು.ಅವರು ಹೀರೋ ಆಗಲಿ, ವಿಲನ್ ಆಗಲಿ, ಕಾಮಿಡಿ ಅಥವಾ ಸಪೋರ್ಟಿಂಗ್ ಆಗಲಿ—ಯಾವುದೇ ರೋಲ್ ಗಳಲ್ಲೂ ಪ್ರತಿ ಸೀನ್ ಅನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಕೆಲವು ಮಹತ್ವದ ಪಾತ್ರಗಳು:ಪರಿಂದಾ (1989) – ಅನ್ನಾ ಸೇಠ್ ಎಂಬ ಮಾನವೀಯತೆಯಿರುವ ಗ್ಯಾಂಗ್‌ಸ್ಟರ್. ಈ ಪಾತ್ರಕ್ಕಾಗಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟ) ಸಿಕ್ಕಿತು. ಬೆಂಕಿಯ ಭಯವಿರುವ ಈ ಗ್ಯಾಂಗ್‌ಸ್ಟರ್ ಪಾತ್ರವು ಹಿಂದಿ ಸಿನಿಮಾದ ಅತ್ಯಂತ ಭಯಾನಕ ಖಳನಾಯಕ ಪಾತ್ರಗಳಲ್ಲಿ ಒಂದು.ಕ್ರಾಂತಿವೀರ್ (1994) – ಪ್ರತಾಪ್ ನಾರಾಯಣ್ ತಿಲಕ್. ಸಮಾಜದ ಅನ್ಯಾಯದ ವಿರುದ್ಧ ಪ್ರತಿರೋಧದ ಕೋಪ. ಅವರ ಡೈಲಾಗ್ ಗಳು ಜನರ ಬಾಯಲ್ಲಿ ಹಾಡುಗಳಂತೆ ಉಳಿದವು. ಈ ಪಾತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತ (ಅತ್ಯುತ್ತಮ ನಟ) ಮತ್ತು ಫಿಲ್ಮ್‌ಫೇರ್ ಅವರ ಪಾಲಾಯಿತು.ಅಗ್ನಿ ಸಾಕ್ಷಿ (1996) – ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಮಾನಸಿಕವಾಗಿ ಅಸ್ಥಿರ, ನಿಯಂತ್ರಣಾಧೀನ ಪತಿಯ ಪಾತ್ರ.ಖಾಮೋಶಿ: ದಿ ಮ್ಯೂಸಿಕಲ್ – ಕಿವುಡ-ಮೂಕ ತಂದ ಜೋಸೆಫ್ ಬ್ರಗಾಂಜಾ. ಸಂಪೂರ್ಣವಾಗಿ ವಿಭಿನ್ನ, ಸೌಮ್ಯ ಮತ್ತು ಭಾವನಾತ್ಮಕ ಪಾತ್ರ.ವೆಲ್‌ಕಮ್ (2007) – ಉದಯ್ ಶೆಟ್ಟಿ. ಗಂಭೀರ ಗ್ಯಾಂಗ್‌ಸ್ಟರ್ ಪಾತ್ರವನ್ನು ಹಾಸ್ಯದಲ್ಲಿ ಪರಿವರ್ತಿಸಿ, ‘ಕಂಟ್ರೋಲ್ ಉದಯ್, ಕಂಟ್ರೋಲ್’ ಎಂಬ ಸಾಲನ್ನು ಅಮರಗೊಳಿಸಿದರು.ಅಂಕುಶ್, ಸಲಾಂ ಬಾಂಬೆ, ಅಬ್ ತಕ್ ಛಪ್ಪನ್, ಪ್ರಹಾರ್, ನಟಸಾಮ್ರಾಟ್ (ಮರಾಠಿ) – ಪೊಲೀಸ್, ಸೈನಿಕ, ಹಿರಿಯ ರಂಗಕಲಾವಿದ—ಎಲ್ಲಾ ಪಾತ್ರಗಳಲ್ಲೂ ಅವರು ತಮ್ಮದೇ ಆದ ಮುದ್ರೆಯನ್ನು ಛಾಪಿಸಿಬಿಟ್ಟರು. ಆರಂಭ ಮತ್ತು ರಂಗಭೂಮಿವಿಶ್ವನಾಥ್ ಪಾಟೇಕರ್ ಎಂಬ ಮೂಲ ಹೆಸರಿನೊಂದಿಗೆ 1951ರ ಜನವರಿ 1ರಂದು ಮಹಾರಾಷ್ಟ್ರದ ಮುರುದ್-ಜಂಜೀರಾದಲ್ಲಿ ಜನಿಸಿದ ನಾನಾ, ಕಲಾಭ್ಯಾಸಕ್ಕಾಗಿ ಮುಂಬೈನ ಸರ್ ಜೆ.ಜೆ. ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಆರ್ಟ್‌ಗೆ ಬಂದರು. ಆರಂಭದಲ್ಲಿ ಸಿನಿಮಾ ಪೋಸ್ಟರ್ ಬಣ್ಣಿಸುವ ಕೆಲಸ ಮಾಡುತ್ತಿದ್ದ ಅವರು, ನಂತರ ರಂಗಭೂಮಿಗೆ ಆಕರ್ಷಿತರಾದರು. ವಿಜಯಾ ಮೆಹ್ತಾ ಅವರಂತಹ ಗುರುಗಳೊಂದಿಗೆ ಕೆಲಸ ಮಾಡಿದ ಅನುಭವವೇ ಅವರ ನಟನೆಯನ್ನು ರೂಪಿಸಿತು. ರಂಗಭೂಮಿಯಲ್ಲಿ ಕಲಿತ ಧ್ವನಿ ನಿಯಂತ್ರಣ, ದೈಹಿಕ ಭಾಷೆ, ವಿರಾಮಗಳು ಮತ್ತು ಪ್ರೇಕ್ಷಕರನ್ನು ಹಿಡಿದಿಡುವ ಕಲೆ ಅವರ ಸಿನಿಮಾ ವೃತ್ತಿಜೀವನದುದ್ದಕ್ಕೂ ಕಾಣಸಿಗುತ್ತದೆ.1978ರಲ್ಲಿ ಮುಜಫರ್ ಅಲಿ ನಿರ್ದೇಶನದ ‘ಗಮನ್’ ಚಿತ್ರದ ಮೂಲಕ ಹಿಂದಿ ಸಿನಿಮಾಗೆ ಪ್ರವೇಶಿಸಿದ ಅವರು, ನಂತರ ಮರಾಠಿ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಸಕ್ರಿಯರಾದರು. ಅನನ್ಯ ವ್ಯಕ್ತಿತ್ವಬಾಲಿವುಡ್‌ನ ಸಾಂಪ್ರದಾಯಿಕ ನಾಯಕನ ಮಾದರಿಯನ್ನು ಅವರು ಎಂದಿಗೂ ಅನುಸರಿಸಲಿಲ್ಲ. ಗ್ಲಾಮರ್ ಇಲ್ಲದೆ, ಕುರ್ತಾ-ಗಂಚಾ ಧರಿಸಿ, ‘ಸನ್ ಆಫ್ ದಿ ಸಾಯಿಲ್’ ಆಗಿ ಉಳಿದುಕೊಂಡರು.ನಾನಾ ಪಾಟೇಕರ್ ಅವರ ವ್ಯಕ್ತಿತ್ವವೂ ಅವರ ನಟನೆಯಷ್ಟೇ ಸಂಕೀರ್ಣವಾಗಿತ್ತು. ಅವರು ನೇರ ನಿಷ್ಠುರ ಮಾತುಗಳಿಗೆ, ಕಠಿಣ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರು. ಅದೇ ಸಮಯದಲ್ಲಿ ಕೃಷಿಕರಿಗಾಗಿ, ಬರಪೀಡಿತರಿಗಾಗಿ ನಾಮ್ ಫೌಂಡೇಶನ್ ಮೂಲಕ ಬೃಹತ್ ಸೇವೆಯನ್ನೇ ಮಾಡಿದರು. ಮಕರಂದ್ ಅನಸ್‌ಪುರೆ ಜೊತೆ ಸೇರಿ ಮಹಾರಾಷ್ಟ್ರದ ರೈತರಿಗೆ ಸಹಾಯ ಮಾಡಿದ ಅವರ ಸೇವೆ ಮಾನವೀಯ ಮುಖವನ್ನು ತೋರಿಸುತ್ತದೆ.ಅವರು ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೇನೆಯೊಂದಿಗೆ ಇರಲು ಇಚ್ಛಿಸಿದ್ದರು. ಸರಳ ಜೀವನ, ಗ್ರಾಮೀಣ ಜೀವನ ಪ್ರೀತಿ, ರಾಜಕೀಯವಾಗಿ ಸ್ವತಂತ್ರ ಅಭಿಪ್ರಾಯಗಳು—ಇವೆಲ್ಲವೂ ಅವರನ್ನು ‘ಸಾಮಾನ್ಯ’ ಸ್ಟಾರ್‌ಗಳಿಂದ ಬೇರ್ಪಡಿಸುತ್ತಿದ್ದವು.ಅದೇ ವೇಳೆ, ಅವರ ಸ್ವಭಾವದಲ್ಲಿ ಕಠಿಣತೆ, ಕೋಪ ಮತ್ತು ವಿವಾದಗಳೂ ಇದ್ದವು.ಅವರ ವೈಯಕ್ತಿಕ ಜೀವನವೂ ಸಂಕೀರ್ಣವಾಗಿತ್ತು—ಪತ್ನಿ ನೀಲಕಾಂತಿ ಅವರೊಂದಿಗೆ ವಿವಾಹಿತರಾಗಿದ್ದರೂ ಬೇರೆಯಾಗಿ ವಾಸಿಸುತ್ತಿದ್ದರು. ಮಗ ಮಲ್ಹರ್ ಜೊತೆಗೆ, ಬಾಲ್ಯದಲ್ಲಿ ಕಳೆದುಕೊಂಡ ಇನ್ನೊಬ್ಬ ಮಗನ ನೆನಪು ಅವರನ್ನು ಕಾಡುತ್ತಿತ್ತು.ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಕೆಲವೇ ನಟರ ಸಾಲಿನಲ್ಲಿ ನಾನಾ ಪ್ರಮುಖರು. ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿಗಳು, 2013ರಲ್ಲಿ ಪದ್ಮಶ್ರೀ—ಇವು ಅವರ ಸಾಧನೆಗೆ ಸಂದ ಅತ್ಯಲ್ಪ ಗೌರವ ಮಾತ್ರ. ನಿಜವಾದ ಪರಂಪರೆ ಅವರು ಸೃಷ್ಟಿಸಿದ ಪಾತ್ರಗಳಲ್ಲಿದೆ. ಅವರನ್ನು ಅನುಕರಿಸುವ ಹಲವಾರು ನಟರುಗಳು ಇದ್ದಾರೆ, ಆದರೆ ನಕಲು ಮಾಡುವುದು ಸುಲಭ, ಅವರಂತೆ ಆಗುವುದು ಅಸಾಧ್ಯ.ಇಂದು (ಅಕ್ಟೋಬರ್ 8) ಗೋವಾದಲ್ಲಿ ಹೃದಯಾಘಾತದಿಂದ ನಾನಾ ಪಾಟೇಕರ್ ನಿಧನರಾದರು. 75 ವರ್ಷಗಳ ಅವರ ಜೀವನ, ಸುಮಾರು ಐದು ದಶಕಗಳ ನಟನೆ—ಇಂದು ನೆನಪಿನಲ್ಲಿ ಉಳಿಯುತ್ತದೆ. ಅವರ ತೀಕ್ಷ್ಣ ಧ್ವನಿ, ಅವರ ನೋಟ, ಅವರ ‘ಕಂಟ್ರೋಲ್’ ಇನ್ನೂ ಪ್ರೇಕ್ಷಕರ ಮನಸ್ಸಿನಲ್ಲಿ ಮೊಳಗುತ್ತಿರುತ್ತದೆ.ನಾನಾ ಪಾಟೇಕರ್ ಕೇವಲ ನಟರಾಗಿರಲಿಲ್ಲ. ಅವರು ಒಂದು ಅನುಭವವಾಗಿದ್ದರು. ನಾನಾ ಚಿಂತನೆ -ನಿಲುವುನಾನಾ ಚಿಂತನೆ ಯಾವುದೇ ರಾಜಕೀಯ ಪಕ್ಷದ ಚೌಕಟ್ಟಿಗೆ ಸೀಮಿತವಾಗಿರಲಿಲ್ಲ. ಅವರು ಸ್ವತಂತ್ರ, ನೇರ ಮತ್ತು ಜನಪರ ಚಿಂತನೆಯ ವ್ಯಕ್ತಿಯಾಗಿದ್ದರು. ಗ್ರಾಮೀಣ ಸಮಸ್ಯೆಗಳ ಜೊತೆ ಅವರ ಅತ್ಯಂತ ಪ್ರಬಲ ನಿಲುವು ರೈತರ ಪರವಾಗಿತ್ತು. 2015ರಲ್ಲಿ ನಾಮ್ ಫೌಂಡೇಶನ್ ಸ್ಥಾಪಿಸಿ, ಮಹಾರಾಷ್ಟ್ರದ ಬರಪೀಡಿತ ಪ್ರದೇಶಗಳಲ್ಲಿ (ವಿದರ್ಭ, ಮರಾಠವಾಡಾ) ನೀರಿನ ಸಂರಕ್ಷಣೆ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಹಾಯ, ಶಿಕ್ಷಣ ಮತ್ತು ಜೀವನೋಪಾಯಕ್ಕಾಗಿ ಕೆಲಸ ಮಾಡಿದರು.“ರೈತರು ‘ಅಚ್ಛೆ ದಿನ’ ಕಾಯಬೇಡಿ. ನೀವೇ ಸರ್ಕಾರವನ್ನು ನಿರ್ಧರಿಸಿ”. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಬದಲಿಗೆ ರಾಜಕೀಯ ಶಕ್ತಿಯಾಗಿ ಎದ್ದು ನಿಲ್ಲಬೇಕು ಎಂಬುದು ಅವರ ನಿಲುವಾಗಿತ್ತು.ಯಾವುದೇ ಪಕ್ಷಕ್ಕೆ ಸೇರಲಿಲ್ಲ (ಕಾಂಗ್ರೆಸ್, ಬಿಜೆಪಿ, ಶಿವಸೇನೆ ಎಲ್ಲರೂ ಕರೆದರೂ ನಿರಾಕರಿಸಿದರು). ಕಾರಣ: “ನಾನು ತುಂಬಾ ನೇರವಾಗಿ ಮಾತನಾಡುತ್ತೇನೆ. ಹೊಟ್ಟೆಯಲ್ಲಿ ಇರುವುದು ಬಾಯಿಗೆ ಬಂದುಬಿಡುತ್ತದೆ. ಒಂದು ತಿಂಗಳಲ್ಲಿ ನನ್ನನ್ನು ಹೊರಹಾಕಿಬಿಡುತ್ತಾರೆ”.ಅವರು ಎಲ್ಲಾ ಪಕ್ಷಗಳನ್ನು ರೈತರ ಸಮಸ್ಯೆಗಳನ್ನು ಪರಿಹರಿಸದಿದ್ದಕ್ಕಾಗಿ ಟೀಕಿಸುತ್ತಿದ್ದರು. ನಗರದ ಗ್ಲಾಮರ್‌ಗಿಂತ ಗ್ರಾಮೀಣ ಜೀವನಕ್ಕೆ ಆದ್ಯತೆ ನೀಡುತ್ತಿದ್ದರು. “ನಗರದ ಗೋಡೆಗಳು ನನಗೆ ಶವಪೆಟ್ಟಿಗೆಯಂತೆ ಕಾಣುತ್ತವೆ” ಎಂದು ಹೇಳಿದ್ದರು. ಸರಳ ಜೀವನಕ್ಕೆ ಆಧ್ಯತೆ ನೀಡುತ್ತಿದ್ದ ಅವರು ಭ್ರಷ್ಟಾಚಾರ, ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧ ತೀವ್ರವಾಗಿ ಮಾತನಾಡುತ್ತಿದ್ದರು.ನಾನಾ ಪಾಟೇಕರ್ ಅವರು ಕೊನೆಯವರೆಗೂ ಯಾವುದೇ ಐಡಿಯಾಲಜಿಗೆ ಅಂಟಿಸಿಕೊಳ್ಳದೆ, ಸಮಸ್ಯೆಯನ್ನು ನೋಡಿ ಪ್ರತಿಕ್ರಿಯಿಸುತ್ತಿದ್ದರು.

ಪ್ರಾದೇಶಿಕ ವಾರ್ತೆಗಳು

ಸರಕಾರಿ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸಂಪಾದಕರಾಗಿ ಹೊಸ ಅಂಗಣ ಪತ್ರಿಕೆಯನ್ನು ನಿರಂತರವಾಗಿ ಹೊರ ತಂದು ದಶಮಾನೋತ್ಸವದ ಸಂಭ್ರಮ ಕಂಡ ಡಾ.ಪಿ.ಹರಿಶ್ಚಂದ್ರ ಸಾಲ್ಯಾನ್ ಅವರ ಸಾಧನೆ ಜನ ಶ್ಲಾಘನೀಯವಾದದ್ದು. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಪ್ರಶಂಸನೀಯ ವಾದದ್ದು- ‘ಹೊಸ ಅಂಗಣ’ ದಶಮಾನೋತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಶ್ಲಾಘನೆ.

ಮೂಲ್ಕಿ: ನಿವೃತ್ತಿಯ ನಂತರ ವಿಶ್ರಾಂತ ಜೀವನ ನಡೆಸುವ ಬದಲು ಹತ್ತು ವರ್ಷಗಳ ಹಿಂದೆ ವಿಭಿನ್ನ ಶೈಲಿಯ ಹೊಸ ಅಂಗಣ ಕನ್ನಡ ಮಾಸಿಕ ಆರಂಭಿಸಿ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ದಶಮಾನೋತ್ಸವ ಸಂಭ್ರಮ ಆಚರಿಸುತ್ತಿರುವ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ ಪತ್ರಿಕೋದ್ಯಮ,ಸಾಹಿತ್ಯ ಸೇವೆ ಇತರರಿಗೆ ಅನುಕರಣೀಯ ಎಂದು ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ನಡೆದ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ ‘ಹೊಸ ಅಂಗಣ’ ಪತ್ರಿಕೆಯ ದಶಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಡಾ. ಸಾಲ್ಯಾನ್ ರಚಿಸಿದ ‘ತುಳುನಾಡ ಮದುಮೆ’ ಕೃತಿಯನ್ನು ಬಿಡುಗಡೆಗೊಳಿಸಿದರು. ಹತ್ತು ವರ್ಷಗಳಿಂದ ‘ಹೊಸ ಅಂಗಣ’ ನಿರಂತರವಾಗಿ ಪ್ರಕಟಗೊಳ್ಳುತ್ತಿರುವುದು ಶ್ಲಾಘನೀಯ. ಪತ್ರಿಕೆ ತನ್ನ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಮುಂದುವರೆಯಲಿ ಎಂದು ಶುಭ ಹಾರೈಸಿದರು. ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು. ರಾಜ್ಯ ಪ್ರಶಸ್ತಿ ಪ್ರದಾನ: ಹೊಸ ಅಂಗಣ’ ಪತ್ರಿಕೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಭಾನುಮತಿ ಶೆಟ್ಟಿ ಕಕ್ವಗುತ್ತು, ಸರೋಜಿನಿ ಸುವರ್ಣ, ಸುರೇಂದ್ರ ಜಿ. ಶೆಣೈ, ಎ. ಕೃಷ್ಣಾನಂದ ಶೆಟ್ಟಿ ಐಕಳ, ಜೈಕೃಷ್ಣ ಕೋಟ್ಯಾನ್, ಜೋನ್ ಕ್ವಾಡ್ರಸ್, ವಾಸು ಪೂಜಾರಿ ಚಿತ್ರಾಪು, ದಿನೇಶ್ ಕೆ. ಶೆಟ್ಟಿ ಮತ್ತು ಪುನೀತ್‌ಕೃಷ್ಣ ಅವರನ್ನು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು, ಪತ್ರಿಕೆಯ ಗೌರವ ಸಲಹೆಗಾರರನ್ನು ಸಮ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್, ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬಿಲ್ಲವ ಮಹಾಮಂಡಲ ಅಧ್ಯಕ್ಷ ಸೂರ್ಯಕಾಂತ ಜೆ. ಸುವರ್ಣ, ‘ಯುಗಪುರುಷ’ ಸಂಪಾದಕ ಭುವನಾಭಿರಾಮ ಉಡುಪ, ನ್ಯಾಯವಾದಿ ಭಾಸ್ಕರ ಹೆಗ್ಡೆ, ಶಾಂಭವಿ ಜೇಸಿಐ ಟ್ರಸ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹಬೀಬುಲ್ಲಾ, ವಿಜಯ ಎಚ್ ಸಾಲ್ಯಾನ್ , ಅಕ್ಷಯ ಎಚ್ ಸಾಲ್ಯಾನ್ , ತುಷಾರ್ ಎಚ್ ಸಾಲ್ಯಾನ್ , ಲಿವನ್ ಬೆಂಗಳೂರು, ಕಾಂತು ಸೇರ್ವೆಗಾರ ಧರ್ಮಚಾವಡಿ ಅಧ್ಯಕ್ಷ ವಾಸು ಪೂಜಾರಿ ಹಾಗೂ ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ಸುವರ್ಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಟಿ.ಸಾಲ್ಯಾನ್ ಪತ್ರಿಕೆ ಹಾಗೂ ತನ್ನ ಕೃತಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಅತಿಥಿಗಳನ್ನು ಗೌರವಿಸಿದರು. ವಿಜಯಾ ಹರಿಶ್ಚಂದ್ರ ಸಾಲ್ಯಾನ್ ಸಹಕರಿಸಿದರು.ಸಮಾರೋಪ ಸಮಾರಂಭ:ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಿರಂತರ ಓದುವ ಹವ್ಯಾಸ ವ್ಯಕ್ತಿಯನ್ನು ಜ್ಞಾನವಂತರನ್ನಾಗಿಸುತ್ತದೆ. ಅದಕ್ಕನುಗುಣವಾಗಿ ನಾಡಿನ ಉತ್ತಮ ಲೇಖಕರ ಲೇಖನ, ವಾರ್ತೆಗಳೊಂದಿಗೆ ಈ ಮಾಸಪತ್ರಿಕೆಯು ಪ್ರಕಟಗೊಳ್ಳುತ್ತಿದೆ . ಇಂದಿನ ಜಂಜಾಟದ ಬದುಕಿನಲ್ಲಿ ಸಾಹಿತ್ಯ ಚಟುವಟಿಕೆಗಳು ಅತ್ಯಂತ ಅಗತ್ಯ ಎಂದು ಹೇಳಿದರು.ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಎಸ್‌ಎನ್‌ಜಿ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಹರೀಂದ್ರ ಸುವರ್ಣ, ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಅಂಚನ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ, ಕನ್ನಂಗಾರ್ ಶ್ರೀ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಶೀನ ಪೂಜಾರಿ, ಉದ್ಯಮಿಗಳಾದ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ಹಾಗೂ ಪ್ರಭಾಕರ ಪೂಜಾರಿ, ಬಪ್ಪನಾಡು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುನಿಲ್ ಆಳ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮುಲ್ಕಿಯ ಚಂದ್ರಿಕಾ ಮತ್ತು ಶ್ರೀಮತಿ ಮಮತಾರವರ ಪ್ರಾರ್ಥನೆಯೊಂದಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.ದಿನೇಶ್ ಕೆ. ಶೆಟ್ಟಿ ಹಾಗೂ ವೈ.ಎನ್. ಸಾಲ್ಯಾನ್ ಸ್ವಾಗತಿಸಿದರು. ಚರಣ್ ಬಜಪೆ ಹಾಗೂ ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಷಿಪ್ ಗಾಗಿ ಅರ್ಜಿ ಆಹ್ವಾನ

ಬೆಂಗಳೂರು, ಅಕ್ಟೋಬರ್ 06:- ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಹಿಳಾ ಆಯವ್ಯಯದಡಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಪತ್ರಿಕೋದ್ಯಮದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಷಿಪ್ ಗಾಗಿ ಅವಕಾಶ ಕಲ್ಪಿಸಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಅಯೇಶಾ ಖಾನಂ ತಿಳಿಸಿದ್ದಾರೆ.ಬರವಣಿಗೆಯಲ್ಲಿ ಪರಿಣತಿ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿರುವ 2022-23, 2023-24, 2024-2025 ಹಾಗೂ 2025-2026ನೇ ಶೈಕ್ಷಣಿಕ ವರ್ಷದಲ್ಲಿ ಪಡೆದ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 20 ಅಭ್ಯರ್ಥಿಗಳಿಗೆ ಇಂಟರ್ನ್ಷಿಪ್ ಅವಕಾಶ ಒದಗಿಸಲಾಗುವುದು.ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಎರಡು ತಿಂಗಳ ಇಂಟರ್ನ್ಷಿಪ್ಗೆ ಅವಕಾಶ ಕಲ್ಪಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕಾಡೆಮಿ ವತಿಯಿಂದ ಸ್ಟೈಪೆಂಡ್ ನೀಡಲಾಗುವುದು.ಅಭ್ಯರ್ಥಿಗಳು ತಮ್ಮ ಸ್ವವಿವರ (Curriculum Vitae) ದೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಪೂರಕ ದಾಖಲೆಗಳೊಂದಿಗೆ ಗೂಗಲ್ ಫಾರ್ಮ್ https://docs.google.com/forms/d/e/1FAIpQLSfYwla-tbEhbvzUmRvWdsOCn44knMZ7orPgzExhxJsmUxIxlQ/viewformರಲ್ಲಿ ಅರ್ಜಿ ಸಲ್ಲಿಸುವುದು. ಅಭ್ಯರ್ಥಿಗಳ ಆಯ್ಕೆಯ ಅಂತಿಮ ತೀರ್ಮಾನ ಅಕಾಡೆಮಿಯ ಸಮಿತಿಯದ್ದೇ ಅಗಿರುತ್ತದೆ.ಅರ್ಜಿ ಸಲ್ಲಿಸಲು 2026 ರ ಅಕ್ಟೋಬರ್ 23 ಕೊನೆಯ ದಿನವಾಗಿದೆ. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಅಯೇಶಾ ಖಾನಂ ಅವರು ಅಕಾಡೆಮಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top