ಜಾತಿ ವಿಚಾರಣೆ: ಆಟಕ್ಕುಂಟು ಲೆಕ್ಕಕ್ಕಿಲ್ಲದ ಡಿ.ಸಿ.ಆರ್.ಇ ಪೊಲೀಸ್ ಠಾಣೆಗಳು. MP MLA’S NEWS EXCLUSIVE PUBLIC VIEW By SREERAM DEEWANA

94.1K Views 4d ago

ಉಡುಪಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ ಸಿ, ಎಸ್ ಟಿ)ಗಳ ಜನರ ಹಕ್ಕುಗಳ ರಕ್ಷಣೆ ಹಾಗೂ ದೌರ್ಜನ್ಯ ತಡೆಯುವ ಸಲುವಾಗಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿ ಸಿ ಆರ್ ಇ)ಗಳು ಪ್ರಸ್ತುತ ಸ್ವತಂತ್ರ ಪೊಲೀಸ್ ಠಾಣೆಗಳಾಗಿ ಬದಲಾಗಿದ್ದರೂ ಎಸ್ ಸಿ – ಎಸ್ ಟಿ ಜನರಿಗೆ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
ಪ್ರಕರಣ ಎಷ್ಟೇ ಗಂಭೀರವಾಗಿರಲಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು
ತನಿಖೆಯಲ್ಲಿ ನಿಧಾನಗತಿ ಅನುಸರಿಸುವುದರಿಂದ ಡಿ ಸಿ ಆರ್ ಇ ಪೊಲೀಸ್ ಠಾಣೆಗಳು ದೂರುದಾರರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ತನಿಖೆಗಳಲ್ಲಿ ಆಗುತ್ತಿರುವ ವಿಳಂಬಗಳಿಗೆ ಸಿಬ್ಬಂದಿಗಳ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆಯಾದರೂ, ಇದು ಪೂರ್ಣ ಸತ್ಯವಲ್ಲ. ಇರುವ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಹಾಗೂ ಕಾಳಜಿ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸದೇ ಇರುವುದೂ ತನಿಖೆಯಲ್ಲಿನ ವಿಳಂಬಕ್ಕೆ ಬಹುಮುಖ್ಯ ಕಾರಣವಾಗಿದೆ.
2025ರ ಮಾರ್ಚ್ ವರೆಗೆ ಯಾವುದೇ ದೂರರ್ಜಿಗಳ ಆಧಾರದಲ್ಲಿ ಎಫ್ ಐ ಆರ್ ದಾಖಲಿಸಲು ಡಿ ಸಿ ಆರ್ ಇ ಗೆ ಅಧಿಕಾರವಿರಲಿಲ್ಲ. ತನಿಖೆ ನಡೆಸಿ ಸಂಬಂಧಿಸಿದವರಿಗೆ / ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಷ್ಟೇ ಇವರ ಅಧಿಕಾರ ವ್ಯಾಪ್ತಿಯಲ್ಲಿತ್ತು. ಆದರೆ, 2025 ಎಪ್ರಿಲ್ 14ರ ನಂತರ ರಾಜ್ಯ ಸರಕಾರ ಡಿ ಸಿ ಆರ್ ಇ ಸೆಲ್ ಗಳನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳನ್ನಾಗಿ ಮಾರ್ಪಡಿಸಿತು. ಆದರೆ, ಇಲ್ಲೂ ಕೆಲವೊಂದು ಲೋಪ ದೋಷಗಳು, ಗೊಂದಲಗಳಿಂದಾಗಿ, ಸ್ಪಷ್ಟತೆಯ ಕೊರತೆಯಿಂದಾಗಿ ಬಹುತೇಕ ಪ್ರಕರಣಗಳ ತನಿಖೆಗಳು ತಾರ್ಕಿಕ ಅಂತ್ಯ ಕಾಣದೆ ನೆನೆಗುದಿಗೆ ಬಿದ್ದಿರುವುದು ಕಂಡುಬರುತ್ತದೆ.
ಒಂದು ಉದಾಹರಣೆಯನ್ನು ಉಲ್ಲೇಖಿಸುವುದಾದರೆ, ಅದು ಕುಂದಾಪುರ ತಾಲೂಕು ಅಂಪಾರು ಗ್ರಾಮದ ನಿವಾಸಿಗಳಾದ, ಪಂಗಡಗಾರ ಜಾತಿಯ ಸಮಾಜಸೇವಾ ಸಂಘದ ಪ್ರಮುಖರಾದ ರಾಘವೇಂದ್ರ ಪಂಗಡಗಾರ ಹಾಗೂ ಸಂದೀಪ್ ಪಂಗಡಗಾರ ಅವರು ಉಡುಪಿ ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಹಕ್ಕುಗಳ ಜಾರಿ‌ನಿರ್ದೇಶನಾಲಯ (ಡಿ ಸಿ ಆರ್ ಇ ಪೊಲೀಸ್ ಠಾಣೆ)ಕ್ಕೆ ನೀಡಿದ ದೂರುಗಳು.
ಸಾಮಾನ್ಯ ವರ್ಗಕ್ಕೆ ಸೇರಿದ ‘ಪಂಗಡಗಾರ’ ಜಾತಿಯ ಕೆಲವರು ತಾವು ವಾಲ್ಮೀಕಿ ನಾಯಕ ಜಾತಿಗೆ ಸೇರಿದ ನಾಯಕ ಪರಿವಾರದವರೆಂದು ಸುಳ್ಳು ಮಾಹಿತಿ ನೀಡಿ ಮೋಸದಿಂದ ಪರಿಶಿಷ್ಟ ಪಂಗಡದಡಿಯಲ್ಲಿ ಜಾತಿ ಪ್ರಮಾಣಪತ್ರ ಪಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸುವಂತೆ ರಾಘವೇಂದ್ರ ಹಾಗೂ ಸಂದೀಪ್ ಅವರು ಉಡುಪಿ ಜಿಲ್ಲಾಧಿಕಾರಿಗಳು,ಡಿ ಸಿ ಆರ್ ಇ ಮಂಗಳೂರು ಮತ್ತು ಡಿ ಸಿ ಆರ್ ಇ ಉಡುಪಿಗೆ ದೂರು ಸಲ್ಲಿಸಿದ್ದರು.
ಇವರು ಹಾಗೂ ಇತರ ಕೆಲವರು ಸಲ್ಲಿಸಿದ ಇಂತಹ ಕೆಲವು ದೂರುಗಳಿಗೆ 2026ರ ಸೆಪ್ಟೆಂಬರ್ ತಿಂಗಳಿಗೆ ಅಮೋಘ ಎರಡು ವರ್ಷಗಳಾಗುತ್ತವೆ. ಆದರೂ ಇಂತಹ ದೂರುಗಳನ್ನು ಸಮಗ್ರವಾಗಿ ತನಿಖೆ ನಡೆಸಿ ಸ್ಪಷ್ಟವಾದ ಅಂತಿಮ ವರದಿ ಸಲ್ಲಿಸುವ ಕರ್ತವ್ಯ ನಿರ್ವಹಿಸುವಲ್ಲಿ ಡಿ ಸಿ ಆರ್ ಇ ಪೊಲೀಸ್ ಠಾಣೆಗಳು ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತವೆ.
ರಾಜ್ಯದಲ್ಲಿ ಜಿಲ್ಲೆಗೊಂದರಂತೆ 33 ಡಿ ಸಿ ಆರ್ ಇ ಪೊಲೀಸ್ ಠಾಣೆಗಳು ಕಾರ್ಯ‌ನಿರ್ವಹಿಸುತ್ತಿವೆ ಪ್ರತಿ ಠಾಣೆಗಳಲ್ಲೂ ಡಿ ಎಸ್ ಪಿ ಹಂತದ ಅಧಿಕಾರಿಯಿದ್ದು, ಇವರ ಸೂಚನೆ, ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗಾದ ಮತ್ತು ಆಗುತ್ತಿರುವ ಜಾತಿ ಆಧಾರಿತ ದೌರ್ಜನ್ಯಗಳು, ಸರಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಪರಿಶಿಷ್ಟರಿಗೆ ತಲುಪದೆ ವಂಚನೆಗೊಳಗಾದಾಗ, ತಲುಪುವಾಗ ಆಗುತ್ತಿರುವ ಸಮಸ್ಯೆಗಳ ಬಗ್ಗೆ, ಪರಿಶಿಷ್ಟರ ಮೂಲಭೂತ ಹಕ್ಕುಗಳಿಗೆ ಚ್ಯುತಿಯಿಂಟಾದಾಗ, ಜಾತಿ ವಿಚಾರದಲ್ಲಿ ಗೊಂದಲ, ಅನ್ಯಾಯ, ಸಮಸ್ಯೆಗಳುಂಟಾದಾಗ ಡಿ ಸಿ ಆರ್ ಇ ಪೊಲೀಸ್ ಠಾಣೆಗಳಿಗೆ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸುವ, ಚಾರ್ಜ್ ಶೀಟ್ (ದೋಷಾರೋಪಣಾ ಪಟ್ಟಿ) ಸಲ್ಲಿಸುವ ಅಧಿಕಾರವಿದೆ.
ಆದರೆ, ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ಡಿ ಸಿ ಆರ್ ಇ ಪೊಲೀಸ್ ಠಾಣೆಗಲ್ಲಿ ಮಹತ್ವದ ಪ್ರಕರಣಗಳ ಕಡತಗಳು ಒಂದು ಗತಿ ಕಾಣದೆ ಕಪಾಟುಗಳಲ್ಲಿ ಕೊಳೆಯವಂತಾಗಿದೆ. ನೊಂದ, ಶೋಷಿತ ಸಮುದಾಯಗಳಿಗೆ ನ್ಯಾಯ ಮರೀಚಿಕೆಯಾಗಿದೆ.
ಯಾರು ಯಾವ ಜಾತಿ, ಯಾವ ಜಾತಿ ಯಾವ ವರ್ಗ: ವಿಚಾರಣೆ, ತೀರ್ಮಾನಿಸುವವರು ಯಾರು ?*
ಯಾರು ಯಾವ ಜಾತಿ ? ಮತ್ತು ಯಾವ ಜಾತಿ ಯಾವ ವರ್ಗಕ್ಕೆ ಸೇರಬೇಕೆಂದು ಅಂತಿಮವಾಗಿ ವಿಚಾರಣೆ ನಡೆಸುವವರು, ತೀರ್ಮಾನಿಸುವವರು ಯಾರು ಎಂಬುದು ಸಾರ್ವಜನಿಕವಾಗಿ ಇನ್ನೂ ಗೊಂದಲಕಾರಿಯಾಗಿಯೇ ಉಳಿದಿರುವ ಒಂದು ಬಹುಮುಖ್ಯ, ಗಂಭೀರವಾದ ವಿಷಯ.
ಈ ಸಂಬಂಧ ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೆ, ವಿಶೇಷ ಸಂದರ್ಭಗಳಲ್ಲಿ ಜಿಲ್ಲಾ ಹಂತದಲ್ಲಿರುವ ಜಾತಿ ಪರಿಶೀಲನಾ ಸಮಿತಿ ಸ್ಥಳ ಪರಿಶೀಲನೆ ನಡೆಸಿ, ವಿಚಾರಣೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತದೆ. ಜಿಲ್ಲಾಧಿಕಾರಿಗಳು ಮತ್ತೆ ಇಂತದ್ದೇ ಪ್ರಕರಣಗಳನ್ನು ಡಿ ಸಿ ಆರ್ ಇ ಗೆ ಹೆಚ್ಚಿನ ವಿಚಾರಣೆಗಾಗಿ ವರ್ಗಾಯಿಸುತ್ತಾರೆ. ಡಿ ಸಿ ಆರ್ ಇ ಅಧಿಕಾರಿಗಳು ವಿಚಾರಣೆ ನಡೆಸಿದರೆ ನಡೆಸಿದರು, ಬಿಟ್ಟರೆ ಬಿಟ್ಟರು. ವಿಚಾರಣೆ ನಡೆಸಿದರೆ, ತನಿಖಾ ವರದಿಯನ್ನು ಡಿ ಸಿ ಆರ್ ಇ ಉನ್ನತ ಅಧಿಕಾರಿಗಳಾದ ಎಡಿಜಿಪಿಯವರಿಗೆ ಸಲ್ಲಿಸುತ್ತದೆ. ಯಾವುದಕ್ಕೂ ಕಾಲಮಿತಿ ಇದ್ದಂತಿಲ್ಲ. ನಂತರ ಅಲ್ಲಿನ ಕಪಾಟುಗಳಲ್ಲಿ ಕೆಲ ವರ್ಷ ಕೊಳೆಯುತ್ತದೆ !
ಹಿಂದುಳಿದ ವರ್ಗಗಳ ಆಯೋಗ ಜಾತಿ ವಿಚಾರಣೆ ನಡೆಸುತ್ತದೆ. ಸರಕಾರಕ್ಕೆ ವರದಿಯನ್ನೂ ಸಲ್ಲಿಸುತ್ತದೆ. ಆಯೋಗದ ವರದಿಗಳೂ ಸಹ ಸರಕಾರದ ಕಪಾಟುಗಳಲ್ಲಿ ಭದ್ರವಾಗಿ ಕೊಳೆಯುತ್ತಿರುತ್ತದೆ !
ರಾಜ್ಯದಲ್ಲಿ ದಲಿತ ಪರ (!?) ಮುಖ್ಯಮಂತಿಗಳೇ ಇದ್ದರೂ, ಪರಿಶಿಷ್ಟ ಜಾತಿ – ಪಂಗಡಗಳಿಗೆ ಸೇರಿದವರೇ ಉಪ ಮುಖ್ಯಮಂತ್ರಿಗಳಾಗಿದ್ದರೂ, ಗೃಹ ಸಚಿವರು, ಸಮಾಜ ಕಲ್ಯಾಣ ಸಚಿವರುಗಳಾಗಿದ್ದರೂ ಪರಿಶಿಷ್ಟರಿಗಾದ, ಆಗುತ್ತಲೇ ಇರುವ ಅನ್ಯಾಯಗಳಿಗೆ, ದೌರ್ಜನ್ಯಗಳಿಗೆ, ಶೋಷಣೆಗಳಿಗೆ ಕಡಿವಾಣ ಹಾಕಲು, ಪರಿಶಿಷ್ಟರಿಗೆ ಸಂಬಂಧಿಸಿದ ವಿಷಯಗಳಲ್ಲಿನ ಗೊಂದಲಗಳಿಗೆ ಅಂತಿಮ ಪರಿಹಾರ ಒದಗಿಸಲು ಸಾಧ್ಯವಾಗದಿರುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ನಿಜವಾದ ದೌರ್ಭಾಗ್ಯವೇ ಸರಿ.
ವರದಿ: ಶ್ರೀರಾಮ ದಿವಾಣ ಉಡುಪಿ
@ 8105749711.

Read More News

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top