ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.
ಬೆಂಗಳೂರು: ಕ್ಷಣಕ್ಷಣಕ್ಕೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಕುತೂಹಲ ಕೆರಳಿಸುತ್ತಿದೆ. ತನ್ನ ವಿರುದ್ಧ ಮುಡಾ ಹಗರಣದ ತನಿಖೆಯ ಕುಣಿಕೆಯಿದ್ದರೂ ಸಿದ್ದರಾಮಯ್ಯನವರು ಸುತರಾಂ ರಾಜೀನಾಮೆ ನೀಡುವುದಿಲ್ಲ, ತನಿಖೆ ಎದುರಿಸುವೆ ಎನ್ನುತ್ತಿದ್ದಾರೆ.
ಸಿದ್ಧರಾಮಯ್ಯ ಅವರು ತನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ರಹಿತ ರಾಜಕಾರಣಿಯೆಂದು ಜನಜನಿತರಾದವರು. ಆದರೆ, 4೦ ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊತ್ತ ತನಿಖೆ ಎದುರಾಗಿದೆ.
ಈ ತನಿಖೆಯನ್ನು ಲೋಕಾಯುಕ್ತ ನಡೆಸಬೇಕಾಗಿದ್ದು, ಅದು ಕರ್ನಾಟಕ ಸರಕಾರದ ಅಧೀನದಲ್ಲಿದೆ. ಸಿದ್ದರಾಮಯ್ಯನವರು ರಾಜೀನಾಮೆ ನೀಡದೆ ಸಿಎಂ ಆಗಿಯೇ ತನಿಖೆ ಎದುರಿಸಿದರೆ ಇದು ಪಾರದರ್ಶಕವಾಗಿರುವುದಿಲ್ಲವೆಂದು ದೂರುದಾರ ಸ್ನೇಹಮಯಿ ಕೃಷ್ಣ ಅವರು ಮತ್ತೆ ಹೈಕೋರ್ಟು ಮೆಟ್ಟಿಲೇರಿದ್ದು, ಇದನ್ನು ಸಿಬಿಐಗೆ ನೀಡುವಂತೆ ಕೋರ್ಟಿಗೆ ಮನವಿ ಮಾಡಿದ್ದಾರೆ.

ಅಬಕಾರಿ ಹಗರಣದಲ್ಲಿ ಜೈಲು ಸೇರಿ ಬಿಡುಗಡೆಯಾದ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅವತ್ತು ದೆಹಲಿ ಪೊಲೀಸರು ಬಂಧಿಸಿದ್ದರು. ಆದರೆ, ಸಿದ್ದರಾಮಯ್ಯನವರ ಮೇಲೆ ಎಫ್‌ಐಆರ್ ದಾಖಲಾದರೂ ಕರ್ನಾಟಕ ಪೊಲೀಸರು ಬಂಧಿಸಲಾರರು.
ಯಾಕೆಂದರೆ, ದೆಹಲಿಯಲ್ಲಿ ಪೊಲೀಸ್ ವ್ಯವಸ್ಥೆ ಕೇಂದ್ರ ಸರಕಾರದ ಕೈಯಲ್ಲಿದೆ. ಆದರೆ, ಇಲ್ಲಿ ಪೊಲೀಸ್ ವ್ಯವಸ್ಥೆ ಕರ್ನಾಟಕ ಸರಕಾರದ ಅಧೀನದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿಯೇ ಮುಂದುವರಿದರೆ ಕರ್ನಾಟಕ ಪೊಲೀಸರು ಅವರನ್ನು ಹೇಗೇ ಬಂಧಿಸಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದೆ.
ಪ್ರಶ್ನೆಗಳು ಹಲವು ಇರಬಹುದು. ಆದರೆ, ಉತ್ತರ ಒಂದೇ, ಸಿದ್ಧರಾಮಯ್ಯನವರು ಮೂಡಾ ಕೇಸ್‌ನಿಂದ ಹೇಗೇ ನಿರಪರಾಧಿಯಾಗಿ ಹೊರ ಬರುತ್ತಾರೆಂಬ ಜನರ ಸಹಜ ಕುತೂಹಲದ ಕಾತರ. ಏನಿದ್ದರೂ, ಸಿದ್ಧರಾಮಯ್ಯನವರು ಪ್ರಸ್ತುತ ನಡೆ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಅದು ಸಿದ್ಧರಾಮಯ್ಯನವರು ಊಹಿಸಿದ್ದಷ್ಟು ಸುಲಭವಲ್ಲ ಎಂಬುವುದು ಸ್ಪಷ್ಟ ಸಂಗತಿ. ಒಂದು ವೇಳೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ವಿಪಕ್ಷಗಳ ಕೈ ಮೇಲಾಗುತ್ತದೆ. ಮುಂದೆ ಬರಲಿರುವ ಹೊರ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕೆ ಹೈಕಮಾಂಡ್ ನ ಬೆಂಬಲದೊಂದಿಗೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ತನಿಖೆಯನ್ನು ಎದುರಿಸುತ್ತೇನೆ ಎನ್ನುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವೇ? ಯಾವುದಕ್ಕೂ ಸ್ವಲ್ಪ ಕಾದು ನೋಡೋಣ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು. ಅಂತೂ ಇಂತೂ ಸಿಎಂ ಕುರ್ಚಿ ಅಲುಗಾಡುತ್ತಿದೆ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ.
























































































































































































