ಮಂಗಳೂರು * ಎಸ್ ಸಿಡಿಸಿಸಿ ಬ್ಯಾಂಕ್ ಇದರ ಅಧ್ಯಕ್ಷರಾಗಿ 7ನೇ ಬಾರಿ ಅಧಿಕಾರ ಸ್ವೀಕರಿಸಿರುವ “ಸಹಕಾರ ರತ್ನ” ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಈಚೆಗೆ ಬುಧವಾರ ಮಧ್ಯಾಹ್ನ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.
ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿ, “ರಾಜೇಂದ್ರ ಕುಮಾರ್ ಅವಧಿಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಯಶಸ್ಸಿನ ತುತ್ತತುದಿಯನ್ನು ಏರಿದೆ. ವರಂಗದಲ್ಲಿ ಹುಟ್ಟಿ ಬೆಳೆದ ಓರ್ವ ಸಾಮಾನ್ಯ ಸಹಕಾರಿ ಬ್ಯಾಂಕ್ ಸಿಬ್ಬಂದಿಯಾಗಿದ್ದ ರಾಜೇಂದ್ರ ಕುಮಾರ್ ಅವರು ಎಸ್ ಸಿಡಿಸಿಸಿ ಬ್ಯಾಂಕ್ ಚುಕ್ಕಾಣಿಯನ್ನು ಹಿಡಿದು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ. ಅವರ ಕಾರ್ಯ ದಕ್ಷತೆಯಿಂದ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ” ಎಂದರು.
ಎಂಎನ್ ಆರ್ ದಕ್ಷ ಆಡಳಿತಗಾರ – ಯು. ಟಿ. ಖಾದರ್ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಮಾತನಾಡಿ, “ದೇವರ ಆಶೀರ್ವಾದ ಇರುವ ಕಾರಣಕ್ಕೆ ರಾಜೇಂದ್ರ ಕುಮಾರ್ ಅವರು ಸತತ ಏಳನೇ ಬಾರಿಗೆ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನನ್ನ ತಂದೆ ಕೂಡ ಈ ಬ್ಯಾಂಕಿನ ನಿರ್ದೆಶಕರಾಗಿದ್ದರು. ಹೀಗಾಗಿ ಚಿಕ್ಕಂದಿನಿಂದಲೇ ಬ್ಯಾಂಕ್ ಕಾರ್ಯವೈಖರಿ ಕುರಿತು ತಿಳಿದಿದ್ದೆ. ಇಂದು ಉತ್ತಮ ಕಾರ್ಯ ವೈಖರಿ ಹಾಗೂ ದಕ್ಷ ಆಡಳಿತದಿಂದಾಗಿ ರಾಜೇಂದ್ರ ಕುಮಾರ್ ಅವರು ಜನರಿಗೆ ಹತ್ತಿರವಾಗಿದ್ದಾರೆ. ಅವರು ಮುಂದೆಯೂ ಸಮಾಜಪರ ಕಾರ್ಯ ನಿರ್ವಹಿಸುವ ಮೂಲಕ ಬ್ಯಾಂಕ್ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿ” ಎಂದರು.
ರೈತರ ಪರ ಬ್ಯಾಂಕ್ : ಎಂಎನ್ ಆರ್ ಅಭಿನಂದನೆ ಸ್ವೀಕರಿಸಿ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು, “ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ರೈತರು ಸಾಲ ಸಿಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿಲ್ಲ. ರೈತರ ಶಕ್ತಿಗನುಸಾರವಾಗಿ ಸಾಲ ನೀಡಿ ಅವರನ್ನು ಸಮಾಜದಲ್ಲಿ ಸಶಕ್ತರಾಗಲು ನಾವು ಶ್ರಮಿಸಿದ್ದೇವೆ. ಸಹಕಾರಿ ಕ್ಷೇತ್ರ ಇನ್ನಷ್ಟು ಬೆಳೆಯಲಿ. ರೈತರು ಮಹಿಳೆಯರಿಗೆ ಶಕ್ತಿ ತುಂಬಲು ಬ್ಯಾಂಕ್ ಸದಾ ಸಿದ್ಧವಿದೆ. ಬ್ಯಾಂಕ್ ಅಭಿವೃದ್ಧಿಯಲ್ಲಿ ನಿಮ್ಮೆಲ್ಲರ ಪಾತ್ರವಿದೆ. ಮೊಳಹಳ್ಳಿ ಶಿವರಾಯರು ತೋರಿಸಿದ ದಾರಿಯಲ್ಲಿ ಮುನ್ನಡೆದು ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಮುನ್ನಡೆಸೋಣ” ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, “ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆದು ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಕನಿಷ್ಠ ದರದಲ್ಲಿ ಸಾಲ ಪಡೆದ ರೈತಾಪಿ ವರ್ಗದ ಜನರು ಆರ್ಥಿಕವಾಗಿ ಸಶಕ್ತರಾಗಿದ್ದಾರೆ. ಇದೆಲ್ಲವೂ ರಾಜೇಂದ್ರ ಕುಮಾರ್ ಅವರ ಸೇವಾ ದಕ್ಷತೆಯಿಂದ ಸಾಧ್ಯವಾಗಿದೆ” ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಬಂಟರ ಸಂಘಕ್ಕೂ ಎಸ್ ಸಿಡಿಸಿಸಿ ಬ್ಯಾಂಕ್ ಗೂ ಅವಿನಾಭಾವ ಸಂಬಂಧವಿದೆ. ರಾಜೇಂದ್ರ ಕುಮಾರ್ ಅವರ ಅವಧಿಯಲ್ಲಿ ಬ್ಯಾಂಕ್ ಇನ್ನಷ್ಟು ಎತ್ತರಕ್ಕೇರಲಿ” ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಶಾಸಕರುಗಳಾದ ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ , ಮಾಜಿ ಸಚಿವರಾದ ರಮಾನಾಥ ರೈ, ಮಾಜಿ ಶಾಸಕರುಗಳಾದ ಸುಕುಮಾರ್ ಶೆಟ್ಟಿ, ಪದ್ಮನಾಭ ಕೊಟ್ಟಾರಿ ಶುಭ ಹಾರೈಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಸಹಾಯಕ ಆಯುಕ್ತ ಹರ್ಷವರ್ಧನ್, ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಟಿ. ಜಿ. ರಾಜರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ, ಎಸ್. ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಕೆ. ಹರಿಶ್ಚಂದ್ರ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಜೈರಾಜ್ ಬಿ. ರೈ , ಎಸ್. ಬಿ. ಜಯರಾಮ್ ರೈ, ಎಸ್. ಎನ್. ಮನ್ಮಥ, ಕುಶಾಲಪ್ಪ ಗೌಡ ಪಿ. ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸಹಕಾರ ಸಂಘಗಳ ಉಪನಿಬಂಧಕರಾದ ಎನ್. ರಮೇಶ್ ಲಾವಣ್ಯ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್ ಹಾಗೂ ರಾಜೇಂದ್ರ ಕುಮಾರ್ ಪುತ್ರ ಮೇಘರಾಜ್ ಮತ್ತಿತರರು ಉಪಸ್ಥಿತರಿದ್ದರು.

















































































































































































