ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಬ್ರಹ್ಮ ಕಲಶ ಮಹೋತ್ಸವ ಮತ್ತು ವರ್ಷಾವಧಿ ಮಹೋತ್ಸವ.

107.8K Views 21 Feb 2024

ಮಂಗಳೂರು : ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ದಲ್ಲಿ ಫೆ.13ರಂದು ಬ್ರಹ್ಮಶ್ರೀ ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿ-ವಿಧಾನಗಳು ನಡೆದವು. ಪ್ರಾತಃಕಾಲ ಪುಣ್ಯಾಹ, ಶ್ರೀದೇವರ ಪ್ರತಿಷ್ಠಾ ಕಲಶ, ಪ್ರಧಾನ ಹೋಮ, ಶಿಖರಪ್ರತಿಷ್ಠಾಂಗ ಶಿಖರ ಕಲಶ ಪ್ರತಿಷ್ಠಾ ಕಲಶಾಭಿಷೇಕ, ಗೋಪೂಜಾ ಪೂರ್ವಕ ಶ್ರೀ ಮಾರಿಯಮ್ಮ ದೇವರ ಪುನರ್ ಪ್ರತಿಷ್ಠೆ ಪಂಚಾಮೃತಾಪೂರ್ವಕ ಕಲಶಾಭಿಷೇಕ, ಪಂಚಬ್ರಹ್ಮ ಮಹಾಮಂತ್ರ ಹೋಮ, ಶ್ರೀ ಮಹಾಗಣಪತಿ ದೇವರಿಗೆ, ಶ್ರೀ ಸುಬ್ರಹ್ಮಣ್ಯ ದೇವರಿಗೆ, ಶ್ರೀ ನಾಗ ದೇವರಿಗೆ ವಿಶೇಷ ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಸಂಜೆ 4.30 ರಿಂದ ಸಾಮೂಹಿಕ ಕುಂಕು ಮಾರ್ಚನೆ, ಸಂಜೆ 5ರಿಂದ ಲಲಿತಸಹಸ್ರನಾಮ ಹೋಮ, ಶ್ರೀ ಕ್ಷೇತ್ರ ದೈವಗಳಿಗೆ ಸಾನಿಧ್ಯ, ಕಲಶಾಭಿಷೇಕಗಳು, ಪರ್ವಗಳು, ಮಹಾಪೂಜೆ ಜರಗಿದವು. ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ವಿವಿಧ ಭಜನ ತಂಡಗಳಿAದ ಭಜನೆ, ಮಧ್ಯಾಹ್ನ ಗಾನ ಮಾಧುರ್ಯ, ಸಂಜೆ ಧಾರ್ಮಿಕ ಸಭೆ, ಸಂಜೆ ಬಳಿಕ ಗ್ರಾಮ ಸಭೆಯ ಮಹಿಳಾ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ, ನೃತ್ಯ ವೈಭವ, ‘ಶಿವದೂತೆ ಗುಳಿಗೆ’ ತುಳು ನಾಟಕ ನಡೆದವು.

ಫೆ.14 ರಂದು ಬೆಳಗ್ಗೆ 7.30ರಿಂದ ಪುಣ್ಯಾಹ, ನವಶಕ್ತಿ ಹೋಮ, ತತ್ವಕಲಶಪ್ರತಿಷ್ಠಾ ತತ್ವಹೋಮ, ಶ್ರೀ ದೇವಿಗೆ ತತ್ವಕಲಶಾಭಿಷೇಕ, ಮಹಾಪೂಜೆ, ಬ್ರಹ್ಮಕಲಶ ಮಂಡಲ ರಚನೆ, ಬೆಳಗ್ಗೆ 11 ರಿಂದ ಭಜನಾ ಕಾರ್ಯಕ್ರಮ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 1 ಗಂಟೆಯಿಂದ 3 ರ ವರೆಗೆ ಮೇಘನಾ ಸಾಲಿಗ್ರಾಮ ಅವರಿಂದ ಸ್ಯಾಕ್ಸೊಫೋನ್ ಪ್ಯೂಷನ್, ಸಂಜೆ 4.30 ರಿಂದ 5.30ರ ವರೆಗೆ ಸಾಮೂಹಿಕ ಕುಂಕುಮಾರ್ಚನೆ, 5ರಿಂದ ಬ್ರಹ್ಮಕಲಶ ಮಂಡಲ ಪೂಜಾ, ಕಲಶಾಧಿವಾಸಗಳು, 5.30 ರಿಂದ 6.30ರ ವರೆಗೆ ಧಾರ್ಮಿಕ ಸಭೆ, 6.30 ರಿಂದ 7.30ರ ವರೆಗೆ ವೀಣಾ ವಾದನ, 7.30ರಿಂದ 9ರ ವರೆಗೆ ನ್ಯಾಟ್ಯ ನಿಲಯ ಉಳ್ಳಾಲದಿಂದ ನೃತ್ಯ ವೈಭವ, ರಾತ್ರಿ 7.39ಕ್ಕೆ ಮಹಾಪೂಜೆ, 9 ರಿಂದ 10ರ ವರೆಗೆ ಮಹಿಳಾ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ, 10 ರಿಂದ ತುಳು ನಾಟಕ ಜರಗಿತು.

ಮಂಗಳೂರು ನಗರದ ಬೋಳೂರು ಗ್ರಾಮದಲ್ಲಿ ನೆಲೆ ನಿಂತ ಪುರಾಣ ಪ್ರಸಿದ್ದ ಉರ್ವ ಶ್ರೀ ಮಾರಿಯಮ್ಮ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಭಕ್ತಿ ಸಡಗರದ ಪವಿತ್ರ ಕಾರ್ಯವಾದ ಬ್ರಹ್ಮಕಲಶೋತ್ಸವ ಸಡಗರವನ್ನು ಸಹಸ್ರಾರು ಭಕ್ತ ಸಮೂಹವು ಕಣ್ತುಂಬಿಕೊಂಡು ಕೃತಾರ್ಥರಾದರು.

ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಅಪರೂಪದ ಹಾಗೂ ದಿವ್ಯ ಅನುಭೂತಿ ಕಲ್ಪಿಸುವ ಉರ್ವದ ಮಹಾಮಾತೆಯ ಬ್ರಹ್ಮಕಲಶ ಸಡಗರವನ್ನು ಕಣ್ಣು ತುಂಬಿಕೊಂಡು ಸಂಭ್ರಮಿಸಿದರು.

ಫೆ. 11ರಿಂದ ಮೊದಲ್ಗೊಂಡು ಫೆ.15ರ ಗುರುವಾರದವರೆಗೆ ಕ್ಷೇತ್ರದ ನವೀಕರಿಸಲಾದ ಗರ್ಭಗೃಹದಲ್ಲಿ ಬ್ರಹ್ಮಶ್ರೀ ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನಗಳು ನಡೆದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಮೊಗವೀರ ಬಂಧುಗಳ ಪ್ರಧಾನ ಆರಾಧನ ಕ್ಷೇತ್ರವಾದ ಉರ್ವ ಶ್ರೀ ಮಾರಿಯಮ್ಮ ಸನ್ನಿಧಿಯಲ್ಲಿ ನಡೆದ ಬ್ರಹ್ಮಕಲಶ ಸಂಭ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಗುರುವಾರ ಸಹಿತ ಇತರ ದಿನಗಳಲ್ಲಿಯೂ ಭಕ್ತರು ಸೇರಿದ್ದರು. ಪವಿತ್ರ ರತ್ನ ದರ್ಭೆ, ಅಕ್ಷತೆ, ತುಳಸಿ ಸಹಿತ ಪ್ರಧಾನ ಸುವಸ್ತುಗಳ ಜತೆಗೆ ಬ್ರಹ್ಮಕಲಶೋತ್ಸವದ ವಿಧಿವಿಧಾನಗಳು ಗುರುವಾರ ನೆರವೇರಿದವು. ಮುಂಜಾನೆಯಿಂದ ಮಧ್ಯಾಹ್ನದವರೆಗೆ ನಡೆದ ಧಾರ್ಮಿಕ ಕಾರ್ಯಕಲಾಪಗಳು ನೆರವೇರಿತು.
ಮಧ್ಯಾಹ್ನ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಗಿರೀಶ್ ರೈ ಕಕ್ಕೆಪದವು ಅವರ ಭಾಗವತಿಕೆಯಲ್ಲಿ ಯಕ್ಷಗಾನ ವೈಭವ, ಸಂಜೆ ಸುಮಂಗಲೆಯರಿಸಿದ ಸಾಮೂಹಿಕ ಕುಂಕುಮಾರ್ಚನೆ, ಕಲಾಸಿಂಧು ಕಲಾವತಿ ದಯಾನಂದ ಬಳಗದಿಂದ ಸಂಗೀತ ಸಂಜೆ ನಡೆಯಿತು.

ಬ್ರಹ್ಮಕಲಶೋತ್ಸವ ದಿನವಾದ ಗುರುವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪಲ್ಲಪೂಜೆ ನಡೆಯಿತು. ಬಳಿಕ ಅನ್ನಪ್ರಸಾದ ವಿತರಣೆ ಆರಂಭವಾಗಿ ರಾತ್ರಿಯವರೆಗೂ ಮುಂದುವರಿಯಿತು. ಸಂಜೆ 7.30ಕ್ಕೆ ಶ್ರೀ ದೇವಿಗೆ ಸಾಮೂಹಿಕ ಮಹಾರಂಗಪೂಜೆ, ಮಹಾಪೂಜೆ, ದರ್ಶನ ಬಲಿ ಪೂಜೆ, ರಥೋತ್ಸವ ನಡೆಯಿತು. ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ನಂತರ ಮಾರಿಯಮ್ಮ ದೇವರ ಪುನರ್ ಪ್ರತಿಷ್ಠೆ ನಡೆಯಿತು.

ಫೆ. 23ನೇ ಶುಕ್ರವಾರ ಶ್ರೀ ಚಂಡಿಕಾಯಾಗ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಫೆ. 26ನೇ ಸೋಮವಾರ ಮತ್ತು ಫೆ. 27ನೇ ಮಂಗಳವಾರದAದು ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಸಹಿತ ವರ್ಷಾವಧಿ ಮಹಾಪೂಜೆ ನಡೆಯಲಿದೆ.

ಮಾರ್ಚ್ 2ನೇ ಶನಿವಾರ ಶ್ರೀ ಮಲರಾಯ ಧೂಮಾವತಿ ದೈವಗಳ ನೇಮೋತ್ಸವವು ವಿಜೃಂಭಣೆಯಿAದ ಜರಗಲಿದೆ.
ಭಕ್ತಾಧಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಮಾರಿಯಮ್ಮ ದೇವರ ಮತ್ತು ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

Read More News

Scroll to Top