ನೀವರಿಯದ ನಾನಾ…!ನಾನಾ ವೈಶಿಷ್ಟ ನಟನೆಯ ಪಾಟೇಕರ್ ಅನನ್ಯ ವ್ಯಕ್ತಿತ್ವ

94.3K Views 3d ago

-ಇಕ್ಬಾಲ್ ಕುತ್ತಾರ್.
ನಾನಾ ಪಾಟೇಕರ್ ಎಂಬ ವಿಶ್ವನಾಥ್ ಪಾಟೇಕರ್, ಭಾರತೀಯ ಚಲನಚಿತ್ರ ರಂಗದಲ್ಲಿ ಬೇರೆ ಯಾರೂ ಅನುಕರಿಸಲಾಗದಂತಹ, ಅನನ್ಯ ಮತ್ತು ಅಪರೂಪದ ವ್ಯಕ್ತಿತ್ವ ಹಾಗೂ ಅಪೂರ್ವ ನಟನಾ ಶೈಲಿಯ ಸ್ವಂತ ಮಾಲೀಕರು. ಅವರನ್ನು ‘ಆಂಗ್ರಿ ಮ್ಯಾನ್’ ಎಂದು ಮಾತ್ರ ಕರೆಯುವುದು ಅಪೂರ್ಣ. ಅವರು ಕೋಪ, ಕ್ರೌರ್ಯ, ನಿಗ್ರಹ, ದುರ್ಬಲತೆ, ಹಾಸ್ಯ ಮತ್ತು ಮಾನವೀಯತೆಯನ್ನು ಒಂದೇ ಪಾತ್ರದಲ್ಲಿ, ಕೆಲವೊಮ್ಮೆ ಒಂದೇ ಸೀನ್‌ನಲ್ಲಿ ಬೆರೆಸಬಲ್ಲ ಕೆಲವೇ ಅಪರೂಪದ ನಟರಲ್ಲಿ ಒಬ್ಬರಾಗಿದ್ದರು.

ನಾನಾ ಪಾಟೇಕರ್ ಅವರ ನಟನೆಯ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ, ಅವರು ಪಾತ್ರವನ್ನು ಬರೇ ಅಭಿನಯಿಸುತ್ತಿರಲಿಲ್ಲ. ಅದರ ಮನೋವಿಜ್ಞಾನವನ್ನು ಅರ್ಥಮಾಡಿಕೊಂಡು ಅದರೊಳಗೆ ಆವಾಹಿಸುತ್ತಿದ್ದರು. ಅವರ ಒರಟುಧ್ವನಿ, ಕತ್ತರಿಸಿದಂತಹ ಸ್ಟಕ್ಯಾಟೋ ಶೈಲಿಯನ್ನು ತನ್ನದೇ ಆದ ಭಾಷೆಯಾಗಿಸಿತ್ತು. ಅವರು ದೊಡ್ಡದಾಗಿ ಕೂಗುವುದಕ್ಕಿಂತ, ನಿಶ್ಶಬ್ದವಾಗಿ ಮಾತನಾಡಿ, ಹಠಾತ್ ವಿರಾಮ ತೆಗೆದುಕೊಂಡು, ನಂತರ ಸ್ಫೋಟಗೊಳ್ಳುವ ರೀತಿ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸುತ್ತಿತ್ತು.
ಅವರ ಕಣ್ಣಿನ ನೋಟ,
ತೀವ್ರ ಶಕ್ತಿಶಾಲಿ ಮತ್ತು ವಾಸ್ತವಿಕ ಅಭಿನಯ, ವಿಶಿಷ್ಟ ಸಂಭಾಷಣೆ ಅಭಿವ್ಯಕ್ತಿ (ಸ್ಟ್ಯಾಕ್ಯಾಟೋ ಶೈಲಿ, ವ್ಯಂಗ್ಯ, ವಿಡಂಬನೆ ಮತ್ತು ತೀಕ್ಷ್ಣ ಹಾಸ್ಯ), ಭಾವಪೂರ್ಣ ಮತ್ತು ಆಕರ್ಷಕ ಮೋನೋಲಾಗ್‌ಗಳು,
ದೇಹ ಭಾಷೆ ಮತ್ತು ಮುಖಭಾವಗಳ ಮೂಲಕ ಪಾತ್ರವನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಸಾಮರ್ಥ್ಯ ಅವರನ್ನು ಭಾರತೀಯ ಚಿತ್ರರಂಗದ ಮೇರುನಟರನ್ನಾಗಿ ರೂಪಿಸಿತು.
ಅವರು ಹೀರೋ ಆಗಲಿ, ವಿಲನ್ ಆಗಲಿ, ಕಾಮಿಡಿ ಅಥವಾ ಸಪೋರ್ಟಿಂಗ್ ಆಗಲಿ—ಯಾವುದೇ ರೋಲ್ ಗಳಲ್ಲೂ ಪ್ರತಿ ಸೀನ್ ಅನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು.

ಕೆಲವು ಮಹತ್ವದ ಪಾತ್ರಗಳು:
ಪರಿಂದಾ (1989) – ಅನ್ನಾ ಸೇಠ್ ಎಂಬ ಮಾನವೀಯತೆಯಿರುವ ಗ್ಯಾಂಗ್‌ಸ್ಟರ್. ಈ ಪಾತ್ರಕ್ಕಾಗಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟ) ಸಿಕ್ಕಿತು. ಬೆಂಕಿಯ ಭಯವಿರುವ ಈ ಗ್ಯಾಂಗ್‌ಸ್ಟರ್ ಪಾತ್ರವು ಹಿಂದಿ ಸಿನಿಮಾದ ಅತ್ಯಂತ ಭಯಾನಕ ಖಳನಾಯಕ ಪಾತ್ರಗಳಲ್ಲಿ ಒಂದು.
ಕ್ರಾಂತಿವೀರ್ (1994) – ಪ್ರತಾಪ್ ನಾರಾಯಣ್ ತಿಲಕ್. ಸಮಾಜದ ಅನ್ಯಾಯದ ವಿರುದ್ಧ ಪ್ರತಿರೋಧದ ಕೋಪ. ಅವರ ಡೈಲಾಗ್ ಗಳು ಜನರ ಬಾಯಲ್ಲಿ ಹಾಡುಗಳಂತೆ ಉಳಿದವು. ಈ ಪಾತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತ (ಅತ್ಯುತ್ತಮ ನಟ) ಮತ್ತು ಫಿಲ್ಮ್‌ಫೇರ್ ಅವರ ಪಾಲಾಯಿತು.
ಅಗ್ನಿ ಸಾಕ್ಷಿ (1996) – ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಮಾನಸಿಕವಾಗಿ ಅಸ್ಥಿರ, ನಿಯಂತ್ರಣಾಧೀನ ಪತಿಯ ಪಾತ್ರ.
ಖಾಮೋಶಿ: ದಿ ಮ್ಯೂಸಿಕಲ್ – ಕಿವುಡ-ಮೂಕ ತಂದ ಜೋಸೆಫ್ ಬ್ರಗಾಂಜಾ. ಸಂಪೂರ್ಣವಾಗಿ ವಿಭಿನ್ನ, ಸೌಮ್ಯ ಮತ್ತು ಭಾವನಾತ್ಮಕ ಪಾತ್ರ.
ವೆಲ್‌ಕಮ್ (2007) – ಉದಯ್ ಶೆಟ್ಟಿ. ಗಂಭೀರ ಗ್ಯಾಂಗ್‌ಸ್ಟರ್ ಪಾತ್ರವನ್ನು ಹಾಸ್ಯದಲ್ಲಿ ಪರಿವರ್ತಿಸಿ, ‘ಕಂಟ್ರೋಲ್ ಉದಯ್, ಕಂಟ್ರೋಲ್’ ಎಂಬ ಸಾಲನ್ನು ಅಮರಗೊಳಿಸಿದರು.
ಅಂಕುಶ್, ಸಲಾಂ ಬಾಂಬೆ, ಅಬ್ ತಕ್ ಛಪ್ಪನ್, ಪ್ರಹಾರ್, ನಟಸಾಮ್ರಾಟ್ (ಮರಾಠಿ) – ಪೊಲೀಸ್, ಸೈನಿಕ, ಹಿರಿಯ ರಂಗಕಲಾವಿದ—ಎಲ್ಲಾ ಪಾತ್ರಗಳಲ್ಲೂ ಅವರು ತಮ್ಮದೇ ಆದ ಮುದ್ರೆಯನ್ನು ಛಾಪಿಸಿಬಿಟ್ಟರು.

ಆರಂಭ ಮತ್ತು ರಂಗಭೂಮಿ
ವಿಶ್ವನಾಥ್ ಪಾಟೇಕರ್ ಎಂಬ ಮೂಲ ಹೆಸರಿನೊಂದಿಗೆ 1951ರ ಜನವರಿ 1ರಂದು ಮಹಾರಾಷ್ಟ್ರದ ಮುರುದ್-ಜಂಜೀರಾದಲ್ಲಿ ಜನಿಸಿದ ನಾನಾ, ಕಲಾಭ್ಯಾಸಕ್ಕಾಗಿ ಮುಂಬೈನ ಸರ್ ಜೆ.ಜೆ. ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಆರ್ಟ್‌ಗೆ ಬಂದರು. ಆರಂಭದಲ್ಲಿ ಸಿನಿಮಾ ಪೋಸ್ಟರ್ ಬಣ್ಣಿಸುವ ಕೆಲಸ ಮಾಡುತ್ತಿದ್ದ ಅವರು, ನಂತರ ರಂಗಭೂಮಿಗೆ ಆಕರ್ಷಿತರಾದರು. ವಿಜಯಾ ಮೆಹ್ತಾ ಅವರಂತಹ ಗುರುಗಳೊಂದಿಗೆ ಕೆಲಸ ಮಾಡಿದ ಅನುಭವವೇ ಅವರ ನಟನೆಯನ್ನು ರೂಪಿಸಿತು. ರಂಗಭೂಮಿಯಲ್ಲಿ ಕಲಿತ ಧ್ವನಿ ನಿಯಂತ್ರಣ, ದೈಹಿಕ ಭಾಷೆ, ವಿರಾಮಗಳು ಮತ್ತು ಪ್ರೇಕ್ಷಕರನ್ನು ಹಿಡಿದಿಡುವ ಕಲೆ ಅವರ ಸಿನಿಮಾ ವೃತ್ತಿಜೀವನದುದ್ದಕ್ಕೂ ಕಾಣಸಿಗುತ್ತದೆ.
1978ರಲ್ಲಿ ಮುಜಫರ್ ಅಲಿ ನಿರ್ದೇಶನದ ‘ಗಮನ್’ ಚಿತ್ರದ ಮೂಲಕ ಹಿಂದಿ ಸಿನಿಮಾಗೆ ಪ್ರವೇಶಿಸಿದ ಅವರು, ನಂತರ ಮರಾಠಿ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಸಕ್ರಿಯರಾದರು.

ಅನನ್ಯ ವ್ಯಕ್ತಿತ್ವ
ಬಾಲಿವುಡ್‌ನ ಸಾಂಪ್ರದಾಯಿಕ ನಾಯಕನ ಮಾದರಿಯನ್ನು ಅವರು ಎಂದಿಗೂ ಅನುಸರಿಸಲಿಲ್ಲ. ಗ್ಲಾಮರ್ ಇಲ್ಲದೆ, ಕುರ್ತಾ-ಗಂಚಾ ಧರಿಸಿ, ‘ಸನ್ ಆಫ್ ದಿ ಸಾಯಿಲ್’ ಆಗಿ ಉಳಿದುಕೊಂಡರು.
ನಾನಾ ಪಾಟೇಕರ್ ಅವರ ವ್ಯಕ್ತಿತ್ವವೂ ಅವರ ನಟನೆಯಷ್ಟೇ ಸಂಕೀರ್ಣವಾಗಿತ್ತು. ಅವರು ನೇರ ನಿಷ್ಠುರ ಮಾತುಗಳಿಗೆ, ಕಠಿಣ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರು. ಅದೇ ಸಮಯದಲ್ಲಿ ಕೃಷಿಕರಿಗಾಗಿ, ಬರಪೀಡಿತರಿಗಾಗಿ ನಾಮ್ ಫೌಂಡೇಶನ್ ಮೂಲಕ ಬೃಹತ್ ಸೇವೆಯನ್ನೇ ಮಾಡಿದರು. ಮಕರಂದ್ ಅನಸ್‌ಪುರೆ ಜೊತೆ ಸೇರಿ ಮಹಾರಾಷ್ಟ್ರದ ರೈತರಿಗೆ ಸಹಾಯ ಮಾಡಿದ ಅವರ ಸೇವೆ ಮಾನವೀಯ ಮುಖವನ್ನು ತೋರಿಸುತ್ತದೆ.
ಅವರು ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೇನೆಯೊಂದಿಗೆ ಇರಲು ಇಚ್ಛಿಸಿದ್ದರು. ಸರಳ ಜೀವನ, ಗ್ರಾಮೀಣ ಜೀವನ ಪ್ರೀತಿ, ರಾಜಕೀಯವಾಗಿ ಸ್ವತಂತ್ರ ಅಭಿಪ್ರಾಯಗಳು—ಇವೆಲ್ಲವೂ ಅವರನ್ನು ‘ಸಾಮಾನ್ಯ’ ಸ್ಟಾರ್‌ಗಳಿಂದ ಬೇರ್ಪಡಿಸುತ್ತಿದ್ದವು.
ಅದೇ ವೇಳೆ, ಅವರ ಸ್ವಭಾವದಲ್ಲಿ ಕಠಿಣತೆ, ಕೋಪ ಮತ್ತು ವಿವಾದಗಳೂ ಇದ್ದವು.
ಅವರ ವೈಯಕ್ತಿಕ ಜೀವನವೂ ಸಂಕೀರ್ಣವಾಗಿತ್ತು—ಪತ್ನಿ ನೀಲಕಾಂತಿ ಅವರೊಂದಿಗೆ ವಿವಾಹಿತರಾಗಿದ್ದರೂ ಬೇರೆಯಾಗಿ ವಾಸಿಸುತ್ತಿದ್ದರು. ಮಗ ಮಲ್ಹರ್ ಜೊತೆಗೆ, ಬಾಲ್ಯದಲ್ಲಿ ಕಳೆದುಕೊಂಡ ಇನ್ನೊಬ್ಬ ಮಗನ ನೆನಪು ಅವರನ್ನು ಕಾಡುತ್ತಿತ್ತು.
ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಕೆಲವೇ ನಟರ ಸಾಲಿನಲ್ಲಿ ನಾನಾ ಪ್ರಮುಖರು. ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿಗಳು, 2013ರಲ್ಲಿ ಪದ್ಮಶ್ರೀ—ಇವು ಅವರ ಸಾಧನೆಗೆ ಸಂದ ಅತ್ಯಲ್ಪ ಗೌರವ ಮಾತ್ರ. ನಿಜವಾದ ಪರಂಪರೆ ಅವರು ಸೃಷ್ಟಿಸಿದ ಪಾತ್ರಗಳಲ್ಲಿದೆ. ಅವರನ್ನು ಅನುಕರಿಸುವ ಹಲವಾರು ನಟರುಗಳು ಇದ್ದಾರೆ, ಆದರೆ ನಕಲು ಮಾಡುವುದು ಸುಲಭ, ಅವರಂತೆ ಆಗುವುದು ಅಸಾಧ್ಯ.
ಇಂದು (ಅಕ್ಟೋಬರ್ 8) ಗೋವಾದಲ್ಲಿ ಹೃದಯಾಘಾತದಿಂದ ನಾನಾ ಪಾಟೇಕರ್ ನಿಧನರಾದರು. 75 ವರ್ಷಗಳ ಅವರ ಜೀವನ, ಸುಮಾರು ಐದು ದಶಕಗಳ ನಟನೆ—ಇಂದು ನೆನಪಿನಲ್ಲಿ ಉಳಿಯುತ್ತದೆ. ಅವರ ತೀಕ್ಷ್ಣ ಧ್ವನಿ, ಅವರ ನೋಟ, ಅವರ ‘ಕಂಟ್ರೋಲ್’ ಇನ್ನೂ ಪ್ರೇಕ್ಷಕರ ಮನಸ್ಸಿನಲ್ಲಿ ಮೊಳಗುತ್ತಿರುತ್ತದೆ.
ನಾನಾ ಪಾಟೇಕರ್ ಕೇವಲ ನಟರಾಗಿರಲಿಲ್ಲ. ಅವರು ಒಂದು ಅನುಭವವಾಗಿದ್ದರು.

ನಾನಾ ಚಿಂತನೆ -ನಿಲುವು
ನಾನಾ ಚಿಂತನೆ ಯಾವುದೇ ರಾಜಕೀಯ ಪಕ್ಷದ ಚೌಕಟ್ಟಿಗೆ ಸೀಮಿತವಾಗಿರಲಿಲ್ಲ. ಅವರು ಸ್ವತಂತ್ರ, ನೇರ ಮತ್ತು ಜನಪರ ಚಿಂತನೆಯ ವ್ಯಕ್ತಿಯಾಗಿದ್ದರು. ಗ್ರಾಮೀಣ ಸಮಸ್ಯೆಗಳ ಜೊತೆ ಅವರ ಅತ್ಯಂತ ಪ್ರಬಲ ನಿಲುವು ರೈತರ ಪರವಾಗಿತ್ತು. 2015ರಲ್ಲಿ ನಾಮ್ ಫೌಂಡೇಶನ್ ಸ್ಥಾಪಿಸಿ, ಮಹಾರಾಷ್ಟ್ರದ ಬರಪೀಡಿತ ಪ್ರದೇಶಗಳಲ್ಲಿ (ವಿದರ್ಭ, ಮರಾಠವಾಡಾ) ನೀರಿನ ಸಂರಕ್ಷಣೆ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಹಾಯ, ಶಿಕ್ಷಣ ಮತ್ತು ಜೀವನೋಪಾಯಕ್ಕಾಗಿ ಕೆಲಸ ಮಾಡಿದರು.
“ರೈತರು ‘ಅಚ್ಛೆ ದಿನ’ ಕಾಯಬೇಡಿ. ನೀವೇ ಸರ್ಕಾರವನ್ನು ನಿರ್ಧರಿಸಿ”. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಬದಲಿಗೆ ರಾಜಕೀಯ ಶಕ್ತಿಯಾಗಿ ಎದ್ದು ನಿಲ್ಲಬೇಕು ಎಂಬುದು ಅವರ ನಿಲುವಾಗಿತ್ತು.
ಯಾವುದೇ ಪಕ್ಷಕ್ಕೆ ಸೇರಲಿಲ್ಲ (ಕಾಂಗ್ರೆಸ್, ಬಿಜೆಪಿ, ಶಿವಸೇನೆ ಎಲ್ಲರೂ ಕರೆದರೂ ನಿರಾಕರಿಸಿದರು). ಕಾರಣ: “ನಾನು ತುಂಬಾ ನೇರವಾಗಿ ಮಾತನಾಡುತ್ತೇನೆ. ಹೊಟ್ಟೆಯಲ್ಲಿ ಇರುವುದು ಬಾಯಿಗೆ ಬಂದುಬಿಡುತ್ತದೆ. ಒಂದು ತಿಂಗಳಲ್ಲಿ ನನ್ನನ್ನು ಹೊರಹಾಕಿಬಿಡುತ್ತಾರೆ”.
ಅವರು ಎಲ್ಲಾ ಪಕ್ಷಗಳನ್ನು ರೈತರ ಸಮಸ್ಯೆಗಳನ್ನು ಪರಿಹರಿಸದಿದ್ದಕ್ಕಾಗಿ ಟೀಕಿಸುತ್ತಿದ್ದರು.

ನಗರದ ಗ್ಲಾಮರ್‌ಗಿಂತ ಗ್ರಾಮೀಣ ಜೀವನಕ್ಕೆ ಆದ್ಯತೆ ನೀಡುತ್ತಿದ್ದರು. “ನಗರದ ಗೋಡೆಗಳು ನನಗೆ ಶವಪೆಟ್ಟಿಗೆಯಂತೆ ಕಾಣುತ್ತವೆ” ಎಂದು ಹೇಳಿದ್ದರು. ಸರಳ ಜೀವನಕ್ಕೆ ಆಧ್ಯತೆ ನೀಡುತ್ತಿದ್ದ ಅವರು ಭ್ರಷ್ಟಾಚಾರ, ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧ ತೀವ್ರವಾಗಿ ಮಾತನಾಡುತ್ತಿದ್ದರು.
ನಾನಾ ಪಾಟೇಕರ್ ಅವರು ಕೊನೆಯವರೆಗೂ ಯಾವುದೇ ಐಡಿಯಾಲಜಿಗೆ ಅಂಟಿಸಿಕೊಳ್ಳದೆ, ಸಮಸ್ಯೆಯನ್ನು ನೋಡಿ ಪ್ರತಿಕ್ರಿಯಿಸುತ್ತಿದ್ದರು.

Read More News

ಸರಕಾರಿ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸಂಪಾದಕರಾಗಿ ಹೊಸ ಅಂಗಣ ಪತ್ರಿಕೆಯನ್ನು ನಿರಂತರವಾಗಿ ಹೊರ ತಂದು ದಶಮಾನೋತ್ಸವದ ಸಂಭ್ರಮ ಕಂಡ ಡಾ.ಪಿ.ಹರಿಶ್ಚಂದ್ರ ಸಾಲ್ಯಾನ್ ಅವರ ಸಾಧನೆ ಜನ ಶ್ಲಾಘನೀಯವಾದದ್ದು. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಪ್ರಶಂಸನೀಯ ವಾದದ್ದು- ‘ಹೊಸ ಅಂಗಣ’ ದಶಮಾನೋತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಶ್ಲಾಘನೆ.

Scroll to Top