ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ “ಆಟಿದ ಪೊರ್ಲು” ಮತ್ತು ಅಭಿನಂದನಾ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಆಟಿ ತಿಂಗಳಲ್ಲಿ ಮನೆ ಮನೆಗೆ ತಿರುಗಾಟ ನಡೆಸುವ “ಚಿಕ್ಕಮೇಳ” ಗುತ್ತಿನ ಮನೆಯ ಚಾವಡಿಗೆ ಆಗಮಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು, “ಸುರತ್ಕಲ್ ಬಂಟರ ಸಂಘದ ಒಗ್ಗಟ್ಟು ಇತರರಿಗೆ ಮಾದರಿಯಾಗಿದೆ. ಯಾಕೆಂದರೆ “ಆಟಿದ ಪೊರ್ಲು” ಕಾರ್ಯಕ್ರಮದಲ್ಲೂ ಗಡಿ ಪ್ರಧಾನರನ್ನು, ಹಿರಿಯರನ್ನು ಗುರುತಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಹಿರಿಯರನ್ನು ಮುಂದಿಟ್ಟು ಕಿರಿಯರ ಒಗ್ಗೂಡುವಿಕೆಯಿಂದ ಜರುಗುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಖುಷಿಯ ವಿಚಾರ” ಎಂದರು.



ಮುಖ್ಯ ಅತಿಥಿಯಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಮಾತಾಡಿ, “ಬಂಟರ ವೇದಿಕೆಯಲ್ಲಿ ಪಕ್ಷಬೇಧವಿಲ್ಲ. ಬಂಟ ಸಮಾಜದ ಎಲ್ಲರೂ ಜೊತೆಯಾಗಿ ಸಮಾಜಕ್ಕೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬಂಟ ಸಮಾಜದ ಯಾವುದೇ ಕಾರ್ಯಕ್ರಮವಿರಲಿ ಅದರಲ್ಲಿ ನಾನು ನಿಮ್ಮ ಜೊತೆಯಿದ್ದೇನೆ” ಸುರತ್ಕಲ್ ಬಂಟರ ಸಂಘ ಹೊಸ ಕಟ್ಟಡ ನಿರ್ಮಾಣದ ಉದ್ದೇಶವನ್ನು ಇಟ್ಟುಕೊಂಡಿದೆ. ಅದಕ್ಕೆ ನಾವೆಲ್ಲರೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.


ಪಾದುವಾ ಕಾಲೇಜ್ ಇದರ ಪ್ರೊಫೆಸರ್ ಅಕ್ಷಯ ಆರ್. ಶೆಟ್ಟಿ ಅವರು ದಿಕ್ಸೂಚಿ ಭಾಷಣದಲ್ಲಿ “ಆಟಿ ತಿಂಗಳು ಇಂದು ಸೆಲೆಬ್ರೇಷನ್ ಆಗ್ತಾ ಇದೆ. ಹಿಂದೆ ನಮ್ಮ ಹಿರಿಯರು ಅನುಭವಿಸಿದ ಆಟಿ ತಿಂಗಳ ಕಷ್ಟ ಇಂದು ಉಳಿದಿಲ್ಲ. ಧಾರಾಕಾರವಾಗಿ ಸುರಿಯುವ ಮಳೆಯೂ ಇಲ್ಲ. ನಮ್ಮ ಹಿರಿಯರು ಆಟಿ ತಿಂಗಳಲ್ಲಿ ಪ್ರಕೃತಿದತ್ತವಾಗಿ ಸಿಗುವ ಆಹಾರವನ್ನು ಸೇವಿಸಿ ತಮ್ಮ ಅರೋಗ್ಯವನ್ನು ತಾವೇ ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಆಟಿ ತಿಂಗಳು ಇಂದು ಆಚರಣೆಗಷ್ಟೇ ಸೀಮಿತವಾಗಿದೆ. ಆಟಿ ತಿಂಗಳ ಮಹತ್ವವನ್ನು ಅರಿತು ಆಚರಣೆ ಮಾಡಿದಲ್ಲಿ ಹಿರಿಯರ ಶ್ರಮ ಸಾರ್ಥಕ“ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಬಾಳ ಜಗನ್ನಾಥ ಶೆಟ್ಟಿ ಅವರು, ”ಆಟಿದ ಪೊರ್ಲು ಕಾರ್ಯಕ್ರಮದಲ್ಲಿ ಸಂಘದ ಎಲ್ಲರ ಶ್ರಮವಿದೆ. ಒಂದು ತಿಂಗಳು ತಯಾರಿ ನಡೆಸಿ ಕಾರ್ಯಕ್ರಮ ಯಶಸ್ಸುಗೊಳಿಸಲು ಶ್ರಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಂಟ ಸಮಾಜ ಮಾತ್ರವಲ್ಲದೆ ಇತರ ಸಮಾಜದವರನ್ನು ಗುರುತಿಸಲಾಗಿದೆ. ಇದಕ್ಕಾಗಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳು“ ಎಂದರು.
ವೇದಿಕೆಯಲ್ಲಿ ಮಂಗಳೂರು ಉತ್ತರ ಶಾಸಕ ಡಾ| ವೈ. ಭರತ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಬಂಟವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಕಟೀಲು ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಬಂಟರ ಸಂಘ ಸುರತ್ಕಲ್ ಮಾಜಿ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಪಿ. ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ ಮಹಿಳಾ ಘಟಕದ ಕಾರ್ಯದರ್ಶಿ ರಾಜೇಶ್ವರಿ ಡಿ. ಶೆಟ್ಟಿ, ಕೋಶಾಧಿಕಾರಿ ಮಾಲತಿ ಜೆ. ಶೆಟ್ಟಿ, ಉಪಾಧ್ಯೆಕ್ಷೆ ಜಯಂತಿ ಪಿ.ಟಿ. ರೈ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ವಾಮನ ಶೆಟ್ಟಿ ಸೂರಿಂಜೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಗೀತಾ ಸುರತ್ಕಲ್, ಭರತನಾಟ್ಯ ಕ್ಷೇತ್ರದಲ್ಲಿ ಚಂದ್ರಶೇಖರ ನಾವಡ ಚೇಳಾಯರು, ಲಲಿತಕಲೆ ಕ್ಷೇತ್ರದಲ್ಲಿ ಧನಪಾಲ್ ಶೆಟ್ಟಿಗಾರ್ ತಡಂಬೈಲ್, ಗುಡಿ ಕೈಗಾರಿಕೆಯಲ್ಲಿ ವಾರಿಜ ಡಿ.ಬಂಗೇರ ಕುಳಾಯಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಾಲ್ಗೊಂಡ ಎನ್ ಎಸ್ಎಸ್ ಅತ್ಯುತ್ತಮ ಸ್ವಯಂ ಸೇವಕಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಯುಕ್ತಿ ಶೆಟ್ಟಿ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಡಾ ಸುಧಾಚಂದ್ರಶೇಖರ ಶೆಟ್ಟಿ ಮತ್ತು ಸೌಮ್ಯ ಭಂಡಾರಿ ಹೊಸಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಮಹಿಳೆಯರಿಂದ ರಾಜೇಶ್ವರಿ ಡಿ ಶೆಟ್ಟಿ ಅವರ ನಿರ್ದೇಶನದಲ್ಲಿ ಸುಮಾರು 50 ಮಂದಿ ಮಹಿಳೆಯರು ಭಾಗವಹಿಸಿದ್ದ “ಸೆರಗು” ಎಂಬ ಕಿರು ಪ್ರಹಸನ ನಡೆಯಿತು. ಮಕ್ಕಳಿಂದ ಹಾಡು, ನೃತ್ಯ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.







































































































































































































