ಬಂಟರ ಮಾತೃ ಸಂಘದಿಂದ ರವೀಂದ್ರನಾಥ ಶೆಟ್ಟಿ ಅವರಿಗೆ ಶ್ರದ್ದಾಂಜಲಿ

115.8K Views 6 Apr 2026

ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ ಅಧಿಕಾರಿ ಮುಂಡ್ಕೂರು ದೊಡ್ಡಮನೆ ರವೀಂದ್ರನಾಥ ಶೆಟ್ಟಿ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಬಂಟ್ಸ್ ಹಾಸ್ಟೇಲ್ ಶ್ರೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಂಗಣದಲ್ಲಿ ಶೃದ್ದಾಂಜಲಿ ಸಭೆ ಜರಗಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ.ಅಜಿತ್ ಕುಮಾರ್ ರೈ ಮಾಲಾಡಿ ಅವರು ಮಾತನಾಡಿ, ರವೀಂದ್ರನಾಥ ಶೆಟ್ಟಿ ಅವರ ಅಗಲುವಿಕೆ ಸಮಾಜಕ್ಕೆ ಆದ ಬಲು ದೊಡ್ಡ ನಷ್ಟವಾಗಿದೆ. ಯೂನಿಯನ್ ಬ್ಯಾಂಕಿನ ಅಧ್ಯಕ್ಷರಿಂದ ಹಿಡಿದು ಸಾಮಾನ್ಯ ಸಿಬ್ಬಂದಿಗಳೊಂದಿಗೆ ಅನ್ಯೋನ್ಯ ಒಡನಾಟ ಹೊಂದಿದ್ದ ಅವರು ಬಂಟರ ಮಾತೃ ಸಂಘದಲ್ಲಿ ಪದಾಧಿಕಾರಿಯಾಗಿ ಸಲ್ಲಿಸಿರುವ ಸೇವೆ ಎಂದೂ ಮರೆಯಲಾಗದು ಎಂದರು. ಮಾತೃ ಸಂಘದ ತಾಲೂಕು ಸಮಿತಿಯ ಮಾಜಿ ಸಂಚಾಲಕ ಜಯರಾಮ ಸಾಂತ ಮಾತನಾಡಿ, ರವೀಂದ್ರನಾಥ ಶೆಟ್ಟಿ ಅವರ ಪರೋಪಕಾರಿ ಮನೋಭಾವ ಸರ್ವರಿಗೂ ಮಾದರಿಯಾಗಿದೆ ಎಂದರು.
ಬಂಟರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ವಸಂತ ಶೆಟ್ಟಿ ಅವರು ಮಾತನಾಡಿ, ಸಂಘದ ಕೋಶಾಧಿಕಾರಿಯಾಗಿ ಅನುಪಮ ಸೇವೆ ಸಲ್ಲಿಸಿದ್ದ ರವೀಂದ್ರನಾಥ ಶೆಟ್ಟಿ ಅವರು ಅನೇಕ ಕ್ರೀಡಾಪಟುಗಳಿಗೆ ತಮ್ಮ ಬ್ಯಾಂಕಿನಲ್ಲಿ ಉದ್ಯೋಗ ನೀಡಿ ಸಹೃದಯತೆ ಮೆರೆದವರು. ರಾಮಕೃಷ್ಣ ವಿದ್ಯಾ ಸಂಸ್ಥೆಗೆ ಅವರು ತಮ್ಮ ಬ್ಯಾಂಕ್ ವತಿಯಿಂದ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಡಾ.ಆಶಾ ಜ್ಯೋತಿ ರೈ ಅವರು ಮಾತನಾಡಿ, ನಗುಮುಖದ ನಿಷ್ಕಳಂಕ ವ್ಯಕ್ತಿತ್ವದ ರವೀಂದ್ರನಾಥ ಶೆಟ್ಟಿ ಅವರು ಎಲ್ಲರೊಂದಿಗೆ ಬೆರೆಯುವ ಉದಾತ್ತ ಮನೋಭಾವ ಹೊಂದಿದ್ದರು ಎಂದು ಹೇಳಿದರು.
ದಿವಾಕರ ಸಾಮಾನಿ ಚೇಳಾರ್ ಗುತ್ತು ಅವರು ಮಾತನಾಡಿ, ಸಕಾರಾತ್ಮಕ ವ್ಯಕ್ತಿತ್ವಹೊಂದಿದ್ದ ರವೀಂದ್ರನಾಥ ಶೆಟ್ಟಿ ಅವರು ಬಂಟರ ಮಾತೃ ಸಂಘ ಆಯೋಜನೆಯ ಶ್ರೀ ಗಣೇಶೋತ್ಸವದ ಯಶಸ್ಸಿಗೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿ.ಎ.ರಾಮಮೋಹನ ರೈ, ಮಾಜಿ ಕಾರ್ಯದರ್ಶಿ ಎಂ.ಸುಂದರ ಶೆಟ್ಟಿ, ಹಿರಿಯ ಮುಂದಾಳು ಶೆಡ್ಡೆ ಮಂಜುನಾಥ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಉಲ್ಲಾಸ್ ಶೆಟ್ಟಿ ಪೆರ್ಮುದೆ ಕಾರ್ಯಕ್ರಮ ನಿರ್ವಹಿಸಿದರು.

Read More News

Scroll to Top