ಮಂಗಳೂರು: ನಗರದ ಲೇಡಿಗೋಶನ್ ಆಸ್ಪತ್ರೆ ಆವರಣದಲ್ಲಿರುವ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ರಕ್ತನಿಧಿ ಕೇಂದ್ರದಲ್ಲಿ ಒಂದು ತಿಂಗಳು ಪ್ರಾಯೋಗಿಕ ತರಬೇತಿ ಪಡೆದ ದ್ವಿತೀಯ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಶನಿವಾರ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಮಾಣ ಪತ್ರ ವಿತರಿಸಿದ ಉಪನ್ಯಾಸಕಿ, ರೆಡ್‌ಕ್ರಾಸ್ ಸೊಸೈಟಿಯ ಜಿಲ್ಲಾ ಘಟಕದ ಆಡಳಿತ ಮಂಡಳಿ ಸದಸ್ಯೆ ಡಾ.ಸುಮನ.ಬಿ. ಮಾತನಾಡಿ ” ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರು ನೀಡುವ ಸೇವೆಯೊಂದಿಗೆ ದಾದಿಯರು ಹಾಗೂ ಸಹಾಯಕ ಸಿಬ್ಬಂದಿ ನೀಡುವ ಸೇವೆಯೂ ಅತ್ಯಮೂಲ್ಯವಾಗಿದೆ. ಅರೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಸಂಬAಧಿಸಿ ಪಡೆಯುವ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಭವಿಷ್ಯದಲ್ಲಿ ವೃತ್ತಿ ಜೀವನಕ್ಕೆ ನೆರವಾಗುತ್ತದೆ ‘ ಎಂದರು.
ರಕ್ತನಿಧಿ ಕೇಂದ್ರದ ತಾಂತ್ರಿಕ ಮೇಲ್ವಿಚಾರಕಿ ಮರಿಯಾ ಆರತಿ ಸೋನ್ಸ್ ಮಾತನಾಡಿ ” ವಿದ್ಯಾರ್ಥಿಗಳು ರಕ್ತ ಸಂಗ್ರಹ, ವರ್ಗೀಕರಣ, ರಕ್ತ ಹೊಂದಾಣಿಕೆ ಪರೀಕ್ಷೆ, ರಕ್ತದ ಘಟಕಗಳ ವರ್ಗೀಕರಣ ಸಹಿತ ಬ್ಲಡ್‌ಬ್ಯಾಂಕ್‌ಗೆ ಪೂರಕವಾದ ಪ್ರಾಯೋಗಿಕ ತರಬೇತಿ ಪಡೆದಿದ್ದು ಉದ್ಯೋಗಕ್ಕೆ ನೆರವಾಗಲು ಪ್ರಮಾಣ ಪತ್ರ ನೀಡಲಾಗಿದೆ ‘ಎಂದರು.
ರೆಡ್‌ಕ್ರಾಸ್ ಜಿಲ್ಲಾ ಘಟಕದ ಆಡಳಿತ ಮಂಡಳಿ ಸದಸ್ಯರಾದ ಗುರುದತ್ ನಾಯಕ್, ಪಿ.ಬಿ.ಹರೀಶ್ ರೈ, ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ರಕ್ತನಿಧಿ ಕೇಂದ್ರದ ತಂತ್ರಜ್ಞರಾದ
ಪ್ರಿಯಾ, ಪ್ರತ್ಯಕ್ಷಿ, ನಾಗಭೂಷಣ್, ಪ್ರಿಯದರ್ಶಿನಿ, ವತ್ಸಲಾ ಉಪಸ್ಥಿತರಿದ್ದರು.





















































































































































































