ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ಡಾ. ರೋಹನ್ ಮೊಂತೆರೋ ಅವರಿಗೆ ‘ಉದ್ಯಮ ರತ್ನ’ ಪ್ರಶಸ್ತಿ ಪ್ರದಾನ

96K Views 4 Jul 2025

ಮಂಗಳೂರು: ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮವು ಜೂನ್ 24ರ ಮಂಗಳವಾರ ಸಂಜೆ ಗಂಟೆ 4.00ರಿಂದ 9.00ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ (ಟೌನ್‍ಹಾಲ್)ನಲ್ಲಿ ನಡೆಯಿತು.
ಸೌಹಾರ್ದ ಸಂಗಮವನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿ, ನಮ್ಮ ಜಿಲ್ಲೆಗೆ ಸೌಹಾರ್ದತೆಯ ಕೊರತೆ ಇದ್ದು ಇಂತಹ ಸೌಹಾರ್ದ ಸಂಗಮಗಳು ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣವಾಗಿ ಸಮಾಜವನ್ನು ತಲುಪುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈಯವರು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಕೊರತೆಯಿರುವುದು ಸೌಹಾರ್ದತೆಯಲ್ಲಿ ಎಂದರು. ಇಂತಹ ಕೊರತೆಯನ್ನು ಸೌಹಾರ್ದ ಸಂಗಮದಂತಹ ಜನಪರ ಕಾರ್ಯಕ್ರಮಗಳು ನೀಗಿಸಬಲ್ಲದು ಎಂದು ಸೌಹಾರ್ದ ಸಂಗಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸೌಹಾರ್ದತೆ ಎನ್ನುವುದು ಈ ಸಮಾಜಕ್ಕೆ ಬೀಜಮಂತ್ರವಾಗಲಿ. ಶಾಂತಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಸಂಗಮದ ಮೂಲಕ ರಾಷ್ಟ್ರವ್ಯಾಪ್ತಿ ಪಸರಿಸಲಿ ಎಂದು ದೇವರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್‍ರವರು ಹೇಳಿದರು. ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯಾನ ಸಲ್ಡಾನ ಅವರು ಸೌಹಾರ್ದ ಸಂಗಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಮನುಷ್ಯ-ಮನುಷ್ಯರ ನಡುವೆ ಸೌಹಾರ್ದತೆ, ಭಾೃತತ್ವ ಅತ್ಯಗತ್ಯವಾಗಿದ್ದು ಜಾತಿ, ಮತ, ಪಕ್ಷ-ಭೇದವಿಲ್ಲದೆ ಸಾಧಕರುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೌಹಾರ್ದ ಸಂಗಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಲ್ಲಿ ಸಂಘಟಕರ ಪ್ರಯತ್ನ ಮೆಚ್ಚತಕ್ಕದ್ದು ಎಂದು ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈಯವರು ತಿಳಿಸಿದರು.
ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯ ಆರ್. ಶೆಟ್ಟಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ., ಎಂ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷ ಅನಿಲ್ ಲೋಬೊ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.
ನರೇಶ್‍ಕುಮಾರ್ ಸಸಿಹಿತ್ಲು ಇವರು ಸ್ವಾಗತಿಸಿ, ಎಸ್.ಆರ್. ಪ್ರದೀಪ್ ವಂದಿಸಿದರು, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ್ ಶೆಟ್ಟಿ ಬಿ.ಎನ್.ರವರು ಪ್ರಸ್ತಾವನೆಗೈದರು. ದಿನಕರ ಡಿ. ಬಂಗೇರ, ಸನ್ಮಾನ ಪತ್ರ ವಾಚಿಸಿದರು. ಕನ್ನಡ-ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸಮಂಜರಿ ಮತ್ತು ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗ ಚಲನ ಕಲಾವಿದರು ಮಂಗಳೂರು ಇವರಿಂದ ಯುವಜಾಗೃತಿ ಹಾಡುಗಳ ಮಿಶ್ರಣ ನಾಟಕ ವಿನೂತನ ಕಾರ್ಯಕ್ರಮ ನಡೆಯಿತು.
ಈ ಸೌಹಾರ್ದ ಸಂಗಮದಲ್ಲಿ ರೋಹನ್ ಕಾರ್ಪೊರೇಶನ್ ಮಂಗಳೂರಿನ ಆಡಳಿತ ನಿರ್ದೇಶಕರಾಗಿರುವ ಡಾ. ಮೋಹನ್ ಮೊಂತೆರೋ ಅವರಿಗೆ ‘ಉದ್ಯಮ ರತ್ನ’ ಪ್ರಶಸ್ತಿ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ರೋಹನ್ ಮೊಂತೆರೋ*
ಡಾ. ರೋಹನ್ ಮೊಂತೆರೋ ಅವರು ಶಿಸ್ತು, ಶ್ರದ್ದೆ, ಸಮಯ ಪಾಲನೆ, ಕಠಿಣ ಪರಿಶ್ರಮದಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಂತ ಹಂತವಾಗಿ ಮೇಲೇರಿ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಹೆಸರಾಂತ ಬಿಲ್ಡರ್ ಆಗಿ, ಉದ್ಯಮಿಗಳ ಸಾಲಿನಲ್ಲಿ ಮಿಂಚುತ್ತಿರುವ, ಸಾಧನೆಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿದ್ದಾರೆ.
ಬಾಲ್ಯದಲ್ಲಿ ಬಡತನವನ್ನು ಸ್ವತಃ ಅನುಭವಿಸಿ ರಿಯಲ್ ಎಸ್ಟೇಟ್ ಮೂಲಕ ಹಂತ ಹಂತವಾಗಿ ಮೇಲೇರಿದ ಡಾ. ರೋಹನ್ ಮೊಂತೆರೋ ಅವರು 1994ರಲ್ಲಿ ಪ್ರಾಪರ್ಟಿ ರಿಯಲ್ ಎಸ್ಟೇಟ್ ಮೂಲಕ ಉದ್ಯಮರಂಗಕ್ಕೆ ಹೆಜ್ಜೆಯಿರಿಸಿ ಕಠಿಣ ಪರಿಶ್ರಮದಿಂದ ಸಾಗಿ ಜನರ ಪ್ರೀತಿ ವಿಶ್ವಾಸ ಗಳಿಸಿ ರೋಹನ್ ಕಾರ್ಪೊರೇಶನ್ ಎಂಬ ಬೃಹತ್ ಸಂಸ್ಥೆಗೆ ಆಡಳಿತ ನಿರ್ದೇಶಕರಾಗಿ ಬೆಳೆದವರು.
ಇವರ ಮಾಲಕತ್ವದಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಸದಾ ಜನಪರ ಚಿಂತನೆ, ಸೌಹಾರ್ದತೆ, ಕಲೆಗೆ ಪ್ರೋತ್ಸಾಹ, ನಾಡಿನ ಸಂಸ್ಕೃತಿಗೆ ಸಹಕಾರ, ಹೀಗೇ ಡಾ. ರೋಹನ್ ಮೊಂತೆರೋ ಅವರು ‘ಬಡವರ ಬಂಧು’ ಆಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಸಮಾಜ ಸೇವೆಯನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ನೇರ ಮಾತು, ನಿರ್ಮಲ ಚಿತ್ತದ ನಿಷ್ಕಳಂಕ ವ್ಯಕ್ತಿತ್ವದ ಸನ್ಮಾನ್ಯ ಡಾ. ರೋಹನ್ ಮೊಂತೆರೋ ಅವರು ಯುವಪೀಳಿಗೆಗೆ ಮಾದರಿಯಾಗಿದ್ದಾರೆ. ಅವರು ಸಮಾಜಕ್ಕೆ, ಉದ್ಯಮರಂಗಕ್ಕೆ ಸಲ್ಲಿಸಿದ ಅನನ್ಯ ಕೊಡುಗೆಯನ್ನು ಪರಿಗಣಿಸಿ ಎಂಪಿ ಎಂಎಲ್ಎ ನ್ಯೂಸ್ ಡಾ. ರೋಹನ್ ಮೊಂತೆರೋ ಅವರಿಗೆ ‘ಉದ್ಯಮ ರತ್ನ’ ಪ್ರಶಸ್ತಿಯನ್ನು ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಗಳಿಂದ ಬರಲಾಗದಿದ್ಧದ್ದಕ್ಕೆ ಗಣ್ಯರ ಸಮ್ಮುಖದಲ್ಲಿ ಅವರ ಪರ್ಸನಲ್ ಸೆಕ್ರೆಟರಿ ಕೀರ್ತನ ಗೌಡ ಕೊಡಪಾಲ ಮೂಲಕ ಹಸ್ತಾಂತರಿಸಿ ,ಗೌರವಿಸಿದೆ.

Read More News

Scroll to Top