ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’. ನಾಡು – ನುಡಿ ಸೇವೆಯಲ್ಲಿ ಆಳ್ವಾಸ್ ಪಾತ್ರ ಹಿರಿದು: ಗುರ್ಮೆ ಸುರೇಶ್ ಶೆಟ್ಟಿ

115.7K Views 8 May 2025

ಮೂಡಬಿದ್ರಿ: ‘ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ನುಡಿಸಿರಿ ವಿರಾಸತ್ ಗಳಲ್ಲದೆ ಇತರ ಹಲವಾರು ರಾಜ್ಯ – ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು ಕರಾವಳಿ ಕರ್ನಾಟಕದ ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಜಗದಗಲ ಪಸರಿಸಿದೆ. ನಾಡು – ನುಡಿಯ ಸೇವೆಯಲ್ಲಿ ಆಳ್ವಾಸ್ ಸಮೂಹ ಸಂಸ್ಥೆಗಳ ಪಾತ್ರ ಹಿರಿದು. ಅದು ಇತರ ಹಲವಾರು ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ’ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಸ್ಥೆಯ ತುಳು ಸಂಘದ ಆಶ್ರಯದಲ್ಲಿ ಜರಗಿದ ‘ಸಿರಿಪರ್ಬ – 2025’ ತುಳು ಸಾಂಸ್ಕೃತಿಕ ಉತ್ಸವದಲ್ಲಿ ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾತ್ಮಕ ಟ್ರಸ್ಟಿ ವಿವೇಕ್ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ತುಳು ತಲೆಯೆತ್ತಿ ನಿಲ್ಲಲಿ:
‘ ಶಿಕ್ಷಣ ಸಂಸ್ಥೆಗಳಲ್ಲಿ ತುಳು ಮಾತನಾಡಲು ತೀವ್ರ ವಿರೋಧವಿದ್ದ ಕಾಲವಿತ್ತು; ಆದರೆ ಈಗ ಅದು ಬದಲಾಗಿದೆ. ಪ್ರಾಥಮಿಕ ಹಂತದಿಂದ ಕಾಲೇಜಿನವರೆಗೆ ತುಳುವನ್ನೊಂದು ಪಠ್ಯವಾಗಿ ಸರಕಾರ ಅನುಮೋದಿಸಿದೆ. ಶಿಕ್ಷಣ ಸಂಸ್ಥೆಗಳಲ್ಲಿ ತುಳು ಚಟುವಟಿಕೆಗಳಿಗೆ ವೇದಿಕೆಗಳು ಸಿದ್ಧವಾಗಿವೆ. ತುಳುವೇತರರೂ ತುಳು ಭಾಷೆ ಕಲಿತು ಅವುಗಳಲ್ಲಿ ಭಾಗವಹಿಸುವಂತಾಗಬೇಕು. ಎಲ್ಲಾ ಕಡೆ ತೌಳವ ಸಂಸ್ಕೃತಿಯನ್ನು ಪಸರಿಸುವ ಮೂಲಕ ತುಳು ತಲೆಯೆತ್ತಿ ನಿಲ್ಲಬೇಕು’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ಸಿರಿಪರ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ‘ತುಳು ಸಾಂಸ್ಕೃತಿಕ ವೈಭವ’ ಅಂತರ್ಕಾಲೇಜು ಸ್ಪರ್ಧೆಗೆ ವಿಧ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.


ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಸಂಸ್ಥೆಯ ವಿದ್ಯಾರ್ಥಿಗಳಾದ ಹಾರ್ದಿಕ್ ಎಚ್.ಶೆಟ್ಟಿ, ಜೆವಿತಾ ಪೆರ್ಲ್ ಕ್ರಾಸ್ಟಾ, ಪ್ರಶಸ್ತಿ ಎಂ.ಎಸ್. ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ತುಳು ಚಲನಚಿತ್ರ ನಟ ಮತ್ತು ನಿರ್ದೇಶಕ ಅನೀಶ್ ಪೂಜಾರಿ ವೇಣೂರು, ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಆಳ್ವಾಸ್ ಪದವಿ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ, ಶಿಕ್ಷಕ – ಕಲಾವಿದ ಬಾಲಕೃಷ್ಣ ರೇಖ್ಯ ಮುಖ್ಯ ಅತಿಥಿಗಳಾಗಿದ್ದರು. ಉಪನ್ಯಾಸಕ ಹೇಮಂತ್ ಸುವರ್ಣ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.


ಆಕರ್ಷಕ ಶೋಭಾಯಾತ್ರೆ – ವಸ್ತು ಪ್ರದರ್ಶನ:
ಸಮಾರಂಭದಲ್ಲಿ ತುಳುನಾಡಿನ ಜಾನಪದ ಸಂಸ್ಕೃತಿಗೆ ಪೂರಕವಾದ ಯಕ್ಷಗಾನ, ಚೆಂಡೆ ವಾದನ, ಕಂಬಳದ ಕೋಣಗಳು, ಕುಣಿತ ಭಜನೆ, ದಫ್ ಕುಣಿತಗಳನ್ನೊಳಗೊಂಡ ವರ್ಣರಂಜಿತ ಶೋಭಾಯಾತ್ರೆ ನಡೆಯಿತು. ಅಲ್ಲದೆ ತುಳು ಬದುಕಿನ ಭೌತಿಕ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿವಿಧ ಪಾರಂಪರಿಕ ವಸ್ತುಗಳು, ದಿನಬಳಕೆಯ ಸಾಮಾನು, ಕೃಷಿ ಉಪಕರಣಗಳು, ಆಭರಣ, ಹಸ್ತ ಕಲಾಕೃತಿ, ಶಿಲ್ಪ ವೈವಿಧ್ಯ ,ಭೂತಕೋಲ, ನಾಗಾರಾಧನೆ, ಸಂಗೀತ ವಾದ್ಯ, ಯಂತ್ರೋಪಕರಣಗಳು ಸೇರಿದಂತೆ ವೈವಿಧ್ಯಮಯ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಸ್ಪರ್ಧಾ ವಿಜೇತರು:
ದಿನವಿಡೀ ನಡೆದ ಸ್ಪರ್ಧೆಯಲ್ಲಿ ಜಿ.ಎಫ್.ಜಿ.ಸಿ. ವಾಮದಪದವು, ಮಹಾವೀರ ಕಾಲೇಜು ಮೂಡಬಿದಿರೆ, ಎಸ್‌.ಡಿ.ಎಂ. ಪಿಜಿ ಸೆಂಟರ್, ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಶ್ರೀ ಧವಳ ಕಾಲೇಜು, ಆಳ್ವಾಸ್ ಪದವಿ ಕಾಲೇಜು ಮುಂತಾದ ತಂಡಗಳು ಭಾಗವಹಿಸಿದ್ದವು. ಪ್ರತೀ ತಂಡವೂ ತುಳುನಾಡಿನ ಪುರಾತನ ಆಚರಣೆಗಳು, ಜಾನಪದ ಚರಿತ್ರೆ, ಆರಾಧನಾ ಪರಂಪರೆ, ಹಾಡು – ಕುಣಿತಗಳನ್ನೊಳಗೊಂಡ ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಕಲಾತ್ಮಕವಾಗಿ ರೂಪಿಸಿ ಪ್ರಸ್ತುತಪಡಿಸಿದವು. ಅಂತಿಮ ಹಂತದಲ್ಲಿ ವಿಜೇತರಾದ ಶ್ರೀ ಧವಳ ಕಾಲೇಜು ಮೂಡಬಿದಿರೆ (ಪ್ರಥಮ ), ಆಳ್ವಾಸ್ ಪದವಿ ಕಾಲೇಜು (ದ್ವಿತೀಯ) ಇವರಿಗೆ ಸ್ಮರಣಿಕೆಯೊಂದಿಗೆ ನಗದು ಬಹುಮಾನಗಳನ್ನು ವಿತರಿಸಲಾಯಿತು.
ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಬಾಲಕೃಷ್ಣ ರೇಖ್ಯ ತೀರ್ಪುಗಾರರಾಗಿ ಸಹಕರಿಸಿದರು. ವಿದ್ಯಾರ್ಥಿ ನಾಯಕ ದೀಕ್ಷಿತ್ ಡಿ. ಶೆಟ್ಟಿ ಸ್ವಾಗತಿಸಿ, ನಿರೀಕ್ಷಾ ರೈ ವಂದಿಸಿದರು. ರಿಶಾಂಕ್ ತೋಡಾರ್ ಮತ್ತು ಅಜೇಯ್ ಕಾರ್ಯಕ್ರಮ ನಿರೂಪಿಸಿದರು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top