ಆರೋಗ್ಯವು ಒಂದು ಹೂಡಿಕೆ, ಅದೊಂದು ವೆಚ್ಚವಲ್ಲ: ಫಾ. ಕ್ಲಿಫರ್ಡ್ ಫೆರ್ನಾಂಡಿಸ್‌

99.7K Views 6 May 2025

ಮಂಗಳೂರು: ಕುಲಶೇಖರದ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ನಲ್ಲಿ ಬೆಥನಿ ಜೀವನ್‌ಧಾರಾ ಆರೋಗ್ಯ ಆಯೋಗ, ಮಹಿಳಾ ಆಯೋಗ, ಕುಟುಂಬ ಆಯೋಗ ಮತ್ತು ಬೆಥನಿ ಲೇ ಅಸೋಸಿಯೇಶನ್‌ ನ ಸಹಯೋಗದಲ್ಲಿ ವಿಶಿಷ್ಟ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮೇ 4 ರಂದು ನಡೆಯಿತು. ಸ್ಥಳೀಯ ಜನ ಸಮುದಾಯಕ್ಕೆ ಮೂಲಭೂತ ವೈದ್ಯಕೀಯ ಸೇವೆಗಳನ್ನು ಒದಗಿಸುವುದು ಹಾಗೂ ಆರೋಗ್ಯ ಜಾಗೃತಿ ಮೂಡಿಸುವುದು ಮತ್ತು ಸಾಮಾನ್ಯ ಕಾಯಿಲೆಗಳ ಆರಂಭಿಕ ರೋಗ ನಿರ್ಣಯವನ್ನು ಮಾಡುವುದು ಈ ಶಿಬಿರದ ಉದ್ದೇಶವಾಗಿತ್ತು.
ಫಾದರ್ ಮುಲ್ಲರ್ ಮೆಡಿಕಲ್‌ ಕಾಲೇಜು ಮತ್ತು ಚಾರಿಟೆಬಲ್ ಆಸ್ಪತ್ರೆಯ 15 ತಜ್ಞ ವೈದ್ಯರು ಮತ್ತು ಸಿಬಂದಿ ಶಿಬಿರವನ್ನು ನಡೆಸಿಕೊಟ್ಟರು. ಸಾಮಾನ್ಯ ಆರೋಗ್ಯ ತಪಾಸಣೆ (ಬಿಪಿ ಮತ್ತು ಶುಗರ್), ಕಣ್ಣು ತಪಾಸಣೆ, ಮಕ್ಕಳ ರೋಗಗಳು, ಚರ್ಮರೋಗ, ಒಬಿಜಿ, ಇಸಿಜಿ, ಮೂಳೆ ಚಿಕಿತ್ಸೆಗೆ ಸಂಬಂಧಿಸಿ ತಪಾಸಣೆ ನಡೆಸಲಾಯಿತು.
ಫಾದರ್ ಮುಲ್ಲರ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಕೆಲ್ವಿನ್ ಪಾಯ್ಸ್‌ ಮತ್ತು ಶಿಬಿರ ಸಂಯೋಜಕಿ ಡಾ. ಕ್ಯಾರೋಲಿನ್ ಪಾಯ್ಸ್‌ ಅವರ ನೇತೃತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಕೋರ್ಡೆಲ್‌ ಚರ್ಚ್ ನ ಧರ್ಮಗುರು ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ಆಶೀರ್ವದಿಸಿದರು ಹಾಗೂ ಚರ್ಚ್ ಉಪಾಧ್ಯಕ್ಷೆ ರೂತ್ ಕ್ಯಾಸ್ಟೆಲಿನೊ, 21 ಆಯೋಗಗಳ ಸಂಯೋಜಕ ಡಾಲ್ಫಿ ಡಿ’ಸೋಜಾ ಮತ್ತು ಆಯೋಗಗಳ ಪ್ರಮುಖರು ಮತ್ತು ಸ್ವಯಂಸೇವಕರ ಸಮ್ಮುಖದಲ್ಲಿ ಶಿಬಿರವನ್ನ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಆರೋಗ್ಯವು ಒಂದು ಹೂಡಿಕೆ, ಅದೊಂದು ವೆಚ್ಚವಲ್ಲ ಎಂದು ಹೇಳಿದರು. ಜೀವನ್‌ ಧಾರಾ ಕೇಂದ್ರದ ನಿರ್ದೇಶಕಿ ಸಿಸ್ಟರ್‌ ರೀನಾ ಜೂಲಿಯೆಟ್ ಉಪಸ್ಥಿತರಿದ್ದರು. 300 ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು. ಹಲವರಿಗೆ ಸಣ್ಣಪುಟ್ಟ ಕಾಯಿಲೆಗಳು ಇರುವುದು ಪತ್ತೆಯಾಗಿದ್ದು, ಅಗತ್ಯ ಔಷಧಿಗಳನ್ನು ನೀಡಲಾಯಿತು. ಉಚಿತ ವೈದ್ಯಕೀಯ ಸೇವೆಗಳಿಗೆ ಫಲಾನುಭವಿಗಳು ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಭವಿಷ್ಯದಲ್ಲಿ ನಿಯಮಿತ ಶಿಬಿರಗಳನ್ನು ನಡೆಸ ಬೇಕೆಂದು ವಿನಂತಿಸಿದರು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top