ಅಕ್ಟೋಬರ್ 2 – ಈ ದಿನ ಎರಡು ಮಹಾನುಭಾವರ ಜನ್ಮದಿನ. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ. ಒಬ್ಬರು ಸತ್ಯದ ಪ್ರತೀಕವಾದರೆ, ಇನ್ನೊಬ್ಬರು ಪ್ರಾಮಾಣಿಕತೆಯ ಪ್ರತೀಕ.
ಜನನ ಮತ್ತು ಹೋರಾಟ:
1904ರ ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮೊಘಲ್ಸರಾಯ್ ನಲ್ಲಿ ಜನಿಸಿದ ಬಾಲಕ ಮುಂದೆ ದೇಶದ ಪ್ರಧಾನಿಯಾದ ಕಥೆ ರೋಚಕ. 1921ರಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಕರೆ ಬಂದಾಗ, ತಮ್ಮ ಶಾಲಾ ಶಿಕ್ಷಣವನ್ನು ಅರ್ಧದಲ್ಲೇ ತ್ಯಜಿಸಿ ದೇಶಸೇವೆಗೆ ಧುಮುಕಿದರು. ನಂತರ ಕಾಶಿ ವಿದ್ಯಾಪೀಠದಲ್ಲಿ ವ್ಯಾಸಂಗ ಮಾಡಿ ‘ಶಾಸ್ತ್ರಿ’ ಎಂಬ ಬಿರುದನ್ನು ಪಡೆದರು. ಸ್ವಾತಂತ್ರ್ಯಕ್ಕಾಗಿ ಒಟ್ಟು 9 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ತ್ಯಾಗಮಯಿ ಅವರು.
ಅಧಿಕಾರದಲ್ಲೂ ಸರಳತೆ:
ಸ್ವಾತಂತ್ರ್ಯದ ನಂತರ ಗೋವಿಂದ ವಲ್ಲಭ ಪಂತ್ ಸರ್ಕಾರದಲ್ಲಿ ಪೊಲೀಸ್ ಖಾತೆ, ನಂತರ 1951ರಲ್ಲಿ ರೈಲ್ವೆ ಸಚಿವರಾದರು. ಅರಿಯಲೂರು ರೈಲ್ವೆ ದುರಂತ ನಡೆದಾಗ, ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಪರೂಪದ ರಾಜಕಾರಣಿ ಅವರು. ಮುಂದೆ ಸಾರಿಗೆ ಸಚಿವರಾಗಿ, 1961ರಲ್ಲಿ ಗೃಹ ಸಚಿವರಾಗಿ ದಕ್ಷ ಆಡಳಿತ ನೀಡಿದರು. 1964ರಲ್ಲಿ ನೆಹರುಜಿ ನಿಧನದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಹಲವು ಪ್ರಬಲ ಆಕಾಂಕ್ಷಿಗಳಿದ್ದರೂ, ಅತ್ಯಂತ ಸರಳ, ನಿರ್ಮಲ ಮನಸ್ಸಿನ ಶಾಸ್ತ್ರೀಜಿಯವರನ್ನು ಎಲ್ಲರೂ ಒಮ್ಮತದಿಂದ ಪ್ರಧಾನಿಯಾಗಿ ಆಯ್ಕೆ ಮಾಡಿದರು.
ಪ್ರಾಮಾಣಿಕತೆಯ ಎರಡು ಘಟನೆಗಳು:
- ಪ್ರಧಾನಿಯಾಗಿದ್ದಾಗ ಒಂದು ರಾಜ್ಯದ ಭೇಟಿ ರದ್ದಾಗಬೇಕಾಯಿತು. ಆ ರಾಜ್ಯದ ಮುಖ್ಯಮಂತ್ರಿ ದೂರವಾಣಿ ಕರೆ ಮಾಡಿ “ದಯವಿಟ್ಟು ರದ್ದು ಮಾಡಬೇಡಿ, I have made first class arrangements” ಎಂದರು. ಅದಕ್ಕೆ ಶಾಸ್ತ್ರೀಜಿ ನಸುನಗುತ್ತಾ ಹೇಳಿದರಂತೆ – “Why did you make first class arrangements for a third class man?” – ಇದು ಅವರ ಅಧಿಕಾರದ ಮೇಲಿನ ನಿರ್ಮೋಹಕ್ಕೆ ಸಾಕ್ಷಿ.
- ದೇಶದಲ್ಲಿ ಆಹಾರದ ಕೊರತೆ, ಬರಗಾಲ ಬಂದಾಗ ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳಬೇಕಾಯಿತು. ಆಗ ಶಾಸ್ತ್ರೀಜಿ ದೇಶದ ಜನತೆಗೆ “ವಾರದಲ್ಲಿ ಒಂದು ದಿನ ರಾತ್ರಿ ಊಟ ಬಿಡಿ” ಎಂದು ಮನವಿ ಮಾಡಿದರು. ಮೊದಲು ತಾವೇ ಸೋಮವಾರದ ಉಪವಾಸ ಆರಂಭಿಸಿದರು. ಇಂದಿಗೂ ‘ಶಾಸ್ತ್ರೀಜಿ ಸೋಮವಾರ’ ಎಂಬ ಪದ್ಧತಿ ಅವರ ತ್ಯಾಗಕ್ಕೆ ಸಾಕ್ಷಿಯಾಗಿದೆ.
ಅಂತಿಮ ಕ್ಷಣದ ಗೌರವ:
1966 ಜನವರಿ 11ರಂದು ತಾಷ್ಕೆಂಟ್ ನಲ್ಲಿ ಅವರು ಕೊನೆಯುಸಿರೆಳೆದಾಗ, ದೆಹಲಿಯ ಅವರ ನಿವಾಸದ ಮುಂದೆ ಲಕ್ಷಾಂತರ ಜನ ನೆರೆದಿದ್ದರು. ಜನಸಂದಣಿ ನಿಯಂತ್ರಿಸಲು ಆಗದಿದ್ದಾಗ, ಅವರ ಆಪ್ತ ಕಾರ್ಯದರ್ಶಿ ರಾಜೇಶ್ವರ್ ಪ್ರಸಾದ್ ಕಾವಲುಗಾರನಿಗೆ ಗದರಿದರಂತೆ. ಆಗ ಆ ಕಾವಲುಗಾರ ಹೇಳಿದನಂತೆ “ಸಾಹೇಬ್ರೆ ಕ್ಷಮಿಸಿ, ಒಳಗಡೆ ಮಲಗಿರುವ ಮಹಾನುಭಾವರು ನಾನು ಏನೇ ಹೇಳಿದರೂ ತಕ್ಷಣ ಪಾಲಿಸುತ್ತಿದ್ದರು, ಆದರೆ ಹೊರಗಿರುವ ಈ ಜನ ನನ್ನ ಮಾತು ಕೇಳುತ್ತಿಲ್ಲ” ಎಂದು. ಇದಕ್ಕಿಂತ ದೊಡ್ಡ ಗೌರವಪೂರ್ವಕ ಮಾತು ಇನ್ನೊಂದಿಲ್ಲ ಎಂದು ರಾಜೇಶ್ವರ್ ಪ್ರಸಾದ್ ಅವರು ಬರೆದಿದ್ದಾರೆ.
ಅವರು ನಿಧನರಾದಾಗ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ ಕೆಲವೇ ನೂರು ರೂಪಾಯಿಗಳಿದ್ದವು. ಸ್ವಂತ ಮನೆ, ಆಸ್ತಿ ಏನೂ ಇರಲಿಲ್ಲ.
ಶ್ರೇಷ್ಠ ಪ್ರಧಾನಿ ಎಂದರೆ ಜಿಡಿಪಿ ಎಷ್ಟು ಬೆಳೆಸಿದರು ಎಂಬುದಲ್ಲ, ಎಷ್ಟು ಪ್ರಾಮಾಣಿಕವಾಗಿ ಬದುಕಿದರು ಎಂಬುದು ಮುಖ್ಯ. ಆ ಅಳತೆಯಲ್ಲಿ ಶಾಸ್ತ್ರೀಜಿ ಅವರು ಅಜರಾಮರ.


















































































































































































