ಮಂಗಳೂರು,ಆ.24;ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ನನ್ನ ಇಳಿ ವಯಸ್ಸಿನವರೆಗೂ ನನ್ನಿಂದಾಗುವ ಸಹಾಯ ಮಾಡಿದ್ದೇನೆ ಎಂಬ ಆತ್ಮ ತೃಪ್ತಿ ನನಗಿದೆ.ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಮಾತಿನಂತೆ ನಾನು ಕಾರ್ಯ ನಿರ್ವಹಿಸುತ್ತಾ ಬಂದಿದ್ದೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾದ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.


ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವೆಬ್ ಸೈಟ್(dkwju.com)ನ್ನು ಅವರು ಸೋಮವಾರ ನಗರದ ಪತ್ರಿಕಾಭವನದಲ್ಲಿ ಅನಾವರಣಗೊಳಿಸಿ ಮಾತನಾಡುತ್ತಾ,ಕನ್ನಡ ಸಾಹಿತ್ಯ ಪರಿಷತ್ತಿನ
ಅಧ್ಯಕ್ಷನಾಗಿ ಕನ್ನಡದ ಕೆಲಸ ಮಾಡಿರುವುದರ ಜೊತೆಗೆ ಮನೆಯಿಲ್ಲದವರಿಗೆ ಸರಕಾರದ ನೆರವಿನಿಂದ ಮನೆ ನಿರ್ಮಿಸಲು ಸಹಾಯ ಮಾಡಿದ್ದೇನೆ ಮತ್ತು ಮನೆ ಇಲ್ಲದವರಿಗೆ 101 ಮನೆಯನ್ನು ನಾನೇ ಉಚಿತವಾಗಿ ನಿರ್ಮಿಸಿ ಕೊಟ್ಟಿದ್ದೇನೆ, ಖ್ಯಾತ ನೇತ್ರ ತಜ್ಞ ಡಾ.ಮೋದಿಯವರ ಮೂಲಕ ಸಾಕಷ್ಟು ಕಣ್ಣಿನ ತಪಾಸಣೆ ಶಿಬಿರಗಳನ್ನು ಮಾಡಿ ಅವರಿಗೆ ಆರ್ಥಿಕ ಸಹಾಯ ಮಾಡಲು ಸಾಧ್ಯ ವಾಗಿದೆ, ಊರಿನಲ್ಲಿ ಸರಕಾರಿ ಕನ್ನಡ ಶಾಲೆ
ನಿರ್ಮಿಸಿದ ತೃಪ್ತಿ ಇದೆ, ಈ ರೀತಿಯ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನನ್ನ ಪತ್ನಿಯ ಸಹಕಾರವು ದೊರೆತಿದೆ, ದೇವರು ಆರೋಗ್ಯ ನೀಡಿದ್ದಾರೆ. ಆರೋಗ್ಯ ಚೆನ್ನಾಗಿರುವವರೆಗೆ ಈ ರೀತಿಯ ಚಟುವಟಿಕೆಗಳನ್ನು ನಡೆಸುವ ಇಚ್ಛೆ ಇದೆ.ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ ಈಗಾಗಲೇ ನೀಡಿದ ಭರವಸೆಯಂತೆ ಸಹಕಾರ ನೀಡುವುದಾಗಿ ತಿಳಿಸಿ ಶುಭ ಹಾರೈಸಿದರು.ಮಂಗಳೂರು ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಪಿ.ಬಿ.ಹರೀಶ್ ರೈ ಮಾತನಾಡುತ್ತಾ,ಹರಿಕೃಷ್ಣ ಪುನರೂರು ಅವರು ಸುದೀರ್ಘ ಕಾಲ ಸಮಾಜದ ವಿವಿಧ ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು. ಅವರ ಬಗ್ಗೆ ಈಗಾಗಲೇ ಒಂದು ಕೃತಿ ಬಿಡುಗಡೆಯಾಗಿದೆ. ಅದರಲ್ಲಿ ಸಾಕಷ್ಟು ವಿವರಗಳಿವೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ವಹಿಸಿದ್ದರು.ದಕ್ಷಿಣ ಕನ್ನಡ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ವಿಜಯ ಕೋಟ್ಯಾನ್ ಪಡು ಮತ್ತು ಗೃಹ ನಿರ್ಮಾಣ ಸಹಕಾರಿ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಕೆ ವಂದಿಸಿದರು.







































































































































































































