ಮಂಗಳೂರು: ಕಾನೂನು ಸಂಬಂಧಿತ ವೃತ್ತಿಗಳಲ್ಲಿ ನಿರತರಾಗಿರುವ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ಜನರಿಗಾಗಿ ನಡೆಸುವ ವಾರ್ಷಿಕ ವಿಶೇಷ ಬಲಿ ಪೂಜೆ – ರೆಡ್ ಮಾಸ್ ಮಂಗಳೂರಿನ ಜಪ್ಪು ಸಂತ ಅಂತೋನಿ ಚಾಪೆಲ್ ನಲ್ಲಿ ಸಪ್ಟೆಂಬರ್ 5 ರಂದು ಬೆಳಗ್ಗೆ 10.30 ಕ್ಕೆ ಜರಗಲಿದೆ. ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಬಲಿ ಪೂಜೆಯನ್ನು ನೆರವೇರಿಸಲಿದ್ದಾರೆ.
ಬಲಿ ಪೂಜೆಯ ಬಳಿಕ 11.45 ಕ್ಕೆ ಸಂತ ಅಂತೋನಿ ಆಶ್ರಮದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಂಕಣಿ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್ ನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಲಿದೆ. ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಲೇ ಫೈತ್ ಫುಲ್ ಕಮಿಶನ್ ಕಾರ್ಯದರ್ಶಿ ವಂದನೀಯ ಫಾ. ಜೆ.ಬಿ. ಕ್ರಾಸ್ತಾ, ಕೊಂಕಣಿ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್ ನ ಸ್ಥಾಪಕ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಸರಕಾರಿ ವಕೀಲ ಎಂ. ಪಿ. ನೊರೊನ್ಹಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.





















































































































































































