ಎಂಪಿ ಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ವೈದ್ಯರತ್ನಗಂಗಾಧರ ಕರಿಯ ಪಂಡಿತ್ ಅವರಿಗೆ ‘ಸೇವಾ ರತ್ನ ಪ್ರಶಸ್ತಿ’ ಪ್ರದಾನ

108.6K Views 1 Jul 2025

ಮಂಗಳೂರು: ಎಂಪಿ ಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮವು ಜೂನ್ 24ರ ಮಂಗಳವಾರ ಸಂಜೆ ಗಂಟೆ 4.00ರಿಂದ 9.00ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ (ಟೌನ್‌ಹಾಲ್)ನಲ್ಲಿ ನಡೆಯಿತು.
ಸೌಹಾರ್ದ ಸಂಗಮವನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿ, ನಮ್ಮ ಜಿಲ್ಲೆಗೆ ಸೌಹಾರ್ದತೆಯ ಕೊರತೆ ಇದ್ದು ಇಂತಹ ಸೌಹಾರ್ದ ಸಂಗಮಗಳು ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣವಾಗಿ ಸಮಾಜವನ್ನು ತಲುಪುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈಯವರು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಕೊರತೆಯಿರುವುದು ಸೌಹಾರ್ದತೆಯಲ್ಲಿ ಎಂದರು. ಇಂತಹ ಕೊರತೆಯನ್ನು ಸೌಹಾರ್ದ ಸಂಗಮದಂತಹ ಜನಪರ ಕಾರ್ಯಕ್ರಮಗಳು ನೀಗಿಸಬಲ್ಲದು ಎಂದು ಸೌಹಾರ್ದ ಸಂಗಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸೌಹಾರ್ದತೆ ಎನ್ನುವುದು ಈ ಸಮಾಜಕ್ಕೆ ಬೀಜಮಂತ್ರವಾಗಲಿ. ಶಾಂತಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಸಂಗಮದ ಮೂಲಕ ರಾಷ್ಟ್ರವ್ಯಾಪ್ತಿ ಪಸರಿಸಲಿ ಎಂದು ದೇವರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್‌ರವರು ಹೇಳಿದರು.ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯಾನ ಸಲ್ಡಾನ ಅವರು ಸೌಹಾರ್ದ ಸಂಗಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಮನುಷ್ಯ-ಮನುಷ್ಯರ ನಡುವೆ ಸೌಹಾರ್ದತೆ, ಭ್ರಾತೃತ್ವ ಅತ್ಯಗತ್ಯವಾಗಿದ್ದು ಜಾತಿ, ಮತ, ಪಕ್ಷ-ಭೇದವಿಲ್ಲದೆ ಸಾಧಕರುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೌಹಾರ್ದ ಸಂಗಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಲ್ಲಿ ಸಂಘಟಕರ ಪ್ರಯತ್ನ ಮೆಚ್ಚತಕ್ಕದ್ದು ಎಂದು ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈಯವರು ತಿಳಿಸಿದರು.
ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯ ಆರ್. ಶೆಟ್ಟಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ., ಎಂ.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.
ನರೇಶ್‌ಕುಮಾರ್ ಸಸಿಹಿತ್ಲು ಇವರು ಸ್ವಾಗತಿಸಿ, ಎಸ್.ಆರ್. ಪ್ರದೀಪ್ ವಂದಿಸಿದರು, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ್ ಶೆಟ್ಟಿ ಬಿ.ಎನ್.ರವರು ಪ್ರಸ್ತಾವನೆಗೈದರು. ದಿನಕರ ಡಿ. ಬಂಗೇರ ಸನ್ಮಾನ ಪತ್ರ ವಾಚಿಸಿದರು. ಕನ್ನಡ-ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸಮಂಜರಿ ಮತ್ತು ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗ ಚಲನ ಕಲಾವಿದರು ಮಂಗಳೂರು ಇವರಿಂದ ಯುವಜಾಗೃತಿ ಹಾಡುಗಳ ಮಿಶ್ರಣ ನಾಟಕ ವಿನೂತನ ಕಾರ್ಯಕ್ರಮ ನಡೆಯಿತು.
ಈ ಸೌಹಾರ್ದ ಸಂಗಮದಲ್ಲಿ ಬಂಟ್ವಾಳ ಅನಂತಾಡಿಯ ವೈದ್ಯರತ್ನ ನಾಟಿ ವೈದ್ಯ ಗಂಗಾಧರ ಕರಿಯ ಪಂಡಿತ ಅವರಿಗೆ ‘ಸೇವಾ ರತ್ನ’ ಪ್ರಶಸ್ತಿ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.


ಗಂಗಾಧರ ಕರಿಯ ಪಂಡಿತ:
ಭಾರತೀಯ ವೈದ್ಯ ಪದ್ಧತಿಯ ಮೂಲವೆಂದೇ ಪರಿಗಣಿತವಾದ ಸಾಂಪ್ರದಾಯಿಕ ಅಥವಾ ಜನಪದೀಯ ಮೂಲಿಕಾ ಚಿಕಿತ್ಸಾ ವಿಧಾನವಾದ ನಾಟಿವೈದ್ಯ ಪದ್ಧತಿಯ ಮೇರು ಚಿಕಿತ್ಸಕ ಕೀರ್ತಿ ಶೇಷ ಅನಂತಾಡಿ ಶ್ರೀ ಕುಂಡ ಪಂಡಿತರ ಹಿರಿಯ ಮಗ ಕೀರ್ತಿಶೇಷ ಶ್ರೀ ಕರಿಯ ಪಂಡಿತರು ಮತ್ತು ಶ್ರೀಮತಿ ಮಾನಕ್ಕ ದಂಪತಿಗಳ ತೃತೀಯ ಪುತ್ರರಾಗಿ ಸನ್ಮಾನ್ಯ ಶ್ರೀ ನಾಟಿ ವೈದ್ಯ ವೈದ್ಯ ರತ್ನ ಗಂಗಾಧರ ಕರಿಯ ಪಂಡಿತ ಅವರು ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ದಾಸಕೋಡಿ (ಗೋಳಿಕಟ್ಟೆ)ಯಲ್ಲಿ ದಿನಾಂಕ 1.6.1971ರಲ್ಲಿ ಜನಿಸಿದರು.


ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಕ್ರಮವಾಗಿ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಅನಂತಾಡಿಯಲ್ಲಿ ಮತ್ತು ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲಿ, ಪದವಿಪೂರ್ವ ವಿದ್ಯಾಲಯ ಕೊಂಬೆಟ್ಟು ಪುತ್ತೂರಿನಲ್ಲಿ ಪೂರೈಸಿ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಯೆಯ್ಯಾಡಿ ಮಂಗಳೂರಿನಲ್ಲಿ 2 ವರ್ಷಗಳ ಎಲೆಕ್ಟ್ರೀಶಿಯನ್ ಡಿಪ್ಲೊಮಾ ಮತ್ತು ಕ.ರಾ.ರ.ಸಾರಿಗೆ ಸಂಸ್ಥೆಯಲ್ಲಿ 2 ವರ್ಷಗಳ ಮೆಕಾನಿಕ್ ತರಬೇತಿಯನ್ನು ಪಡೆದಿರುವರು. ನಾಟಿವಿದ್ಯೆಯನ್ನು ಕೀರ್ತಿಶೇಷ ಕುಂಡ ಪಂಡಿತರು ಹಾಗೂ ತಂದೆ ಕೀರ್ತಿಶೇಷ ಕರಿಯ ಪಂಡಿತರ ಆಶೀರ್ವಾದ ಪಡೆದು ದೈವಾನುಗ್ರಹದ ಜೊತೆಗೆ ತಮ್ಮ ತಂದೆಯವರಿಂದ ಕರಗತ ಮಾಡಿಕೊಂಡು, ಉಡುಪಿ ಪೇಜಾವರ ಮಠದ ಹಿಂದಿನ ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥರ ಆಶೀವಾರ್ದದೊಂದಿಗೆ ನಾಟಿವೈದ್ಯಕೀಯ ಲೋಕದಲ್ಲಿ ಯಶಸ್ವಿ ನಾಟಿ ವೈದ್ಯರಾಗಿ ಜನಮನ್ನಣೆ ಗಳಿಸಿದರು.
2002-05ರ ತನಕ ಉಳ್ಳಾಲದಲ್ಲಿ, 2006-14ರ ತನಕ ಬೆಂಗಳೂರಿನಲ್ಲಿ, 2014ರಿಂದ ತಮ್ಮ ಸ್ವಗೃಹದಲ್ಲಿ ನಾಟಿವೈದ್ಯಾಲಯ ತೆರೆದು ಪಕ್ಷವಾತ, ವಾತಕ್ಕೆ ಸಂಬಂಧಿಸಿದ ಕಾಯಲೆಗಳು, ಮಹಿಳೆಯರು ಮತ್ತು ಮಕ್ಕಳ ಕಾಯಿಲೆಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ನೀಡಿ, ತಮ್ಮ ಸೇವಾವೃತ್ತಿಯಲ್ಲಿ ಅಸಂಖ್ಯಾತ ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಉಡುಪಿ ಪೇಜಾವರ ಅಧೋಕ್ಷಜ ವಂಶದ ಸ್ವರ್ಗೀಯ ಶ್ರೀ ಶ್ರೀ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರಿಗೆ ಚಿಕಿತ್ಸೆ ನೀಡಿ ಶ್ರೀಪಾದರಿಂದ ಆಶೀರ್ವಾದ ಪ್ರಸಾದ ಪಡೆದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
ಅನಂತಾಡಿಯ ಕೊರಗ ಬಡಕುಟುಂಬವೊಂದರ ಮನೆ ನಿರ್ಮಾಣಕ್ಕೆ ಗರಿಷ್ಠ ಸಹಕಾರ ನೀಡಿ ಸಮಾಜದಲ್ಲಿ ನಿಸ್ವಾರ್ಥ ಸೇವಕನಾಗಿ ಧಾರ್ಮಿಕ, ಸಾಮಾಜಿಕ ಸೇವಾಕರ್ತರಾಗಿ, ಕೃಷಿಕರಾಗಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿ, ಕ್ರೀಡಾ ಪೋಷಕರಾಗಿ ಸಮಾಜಕ್ಕೆ ನೀಡಿದ ಬಹುಮುಖ ಸೇವೆ ಮತ್ತು ಸಾಧನೆಯನ್ನು ಗುರುತಿಸಿ 2018ರಲ್ಲಿ ಶಾಸ್ತ್ರಿ ವೈಂಡಿಂಗ್ ರವರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ, 2019ರಲ್ಲಿ ಯಕ್ಷ ಮಂಜುಳ ಕದ್ರಿ ಇವರ ದಶಮಾನೋತ್ಸವ ಸಂಭ್ರಮದಲ್ಲಿ ಸನ್ಮಾನ.
ದಿನಾಂಕ 02-02-2020ರಂದು ಕಾಸರಗೋಡು ಕರ್ನಾಟಕ ಸ್ವಜಾತಿ ಬಾಂಧವರ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 21-01-2022ರಂದು ಪಡುಬಿದ್ರೆ ಎರ್ಮಾಳ್ ನಲ್ಲಿ ದೈವಗಳ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 26-02-2022ರಲ್ಲಿ ‘ಒಪ್ಪಿಕೋ ಪಚ್ಚೆವನಸಿರಿ ಅಭಿಯಾನ’ ನಿರಂತರ ಕಾರ್ಯಕ್ರಮದಲ್ಲಿ ಪೇಜಾವರ ಅದೋಕ್ಷಜ ಮಠ ಉಡುಪಿ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರಿಂದ ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 06-11-2022ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮಾಣಿ ಇದರ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 28-01-2023ರಂದು ನೇರಳಕಟ್ಟೆ ಗಣೇಶನಗರದಲ್ಲಿ ನೇತಾಜಿ ಸುಭಾಸ್‌ಚಂದ್ರ ಬೋಸ್‌ರ ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 18-07-2024ರಂದು ಧವಳತ್ರಯ ಜೈನಕಾಶಿ ಟ್ರಸ್ಟ್ (ರಿ) ಮೂಡಬಿದಿರೆ ಮತ್ತು ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ ಅಂಗಸಂಸ್ಥೆ (NTC-AOM) ಇದರ ಸಹಯೋಗದ ಶ್ರೀ ರಮಾರಾಣಿ ಜೈನ ಸಂಶೋಧನಾ ಸಂಸ್ಥಾನದಲ್ಲಿ ಜರುಗಿದ ‘ಒಪ್ಪಿಕೋ ಪಚ್ಚೆವನಸಿರಿ’ ಜಾಗೃತಿ ಅಭಿಯಾನ ಜೈನ ಮಹಿಳೆ ಸಿರಿದೇವಿ (ವನಸಿರಿ) ಹೆಸರಿನಲ್ಲಿ ಕೊಡಮಾಡಲ್ಪಟ್ಟ “ಪ್ರಾಚ್ಯ ಪಚ್ಚೆ ವನಸಿರಿ ವೈದ್ಯರತ್ನ’ ಪ್ರಶಸ್ತಿ,ದಿನಾಂಕ 22-09-2024ರಂದು ನವಭಾರತ್ ಯುವಕ ಸಂಘ ಅನಂತಾಡಿಯಲ್ಲಿ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕ್ರೀಡಾಕೂಟ ಕಾರ್ಯಕ್ರಮದಲ್ಲಿ ‘ನವ ನಕ್ಷತ್ರ’ 2024 ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 12-10-2024ರಂದು ಶ್ರೀದೇವಿ ಸೇವಾ ಟ್ರಸ್ಟ್ (ರಿ) ದೇವಿನಗರ ಅನಂತಾಡಿ ಇದರ ಆಶ್ರಯದಲ್ಲಿ ನಡೆದ ದಸರಾ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಸನ್ಮಾನ ಪತ್ರ,ಸರಳ ಸಜ್ಜನಿಕೆಯ ಸಂವೇದನಾಶೀಲ ವ್ಯಕ್ತಿತ್ವದ ಶ್ರೀ ಗಂಗಾಧರ ಪಂಡಿತರು ಪತ್ನಿ ಶ್ರೀಮತಿ ಸುನೀತಾ ಮಕ್ಕಳಾದ ಶ್ರವಣ್ ಮತ್ತು ಕುಮಾರಿ ವರ್ಷಾರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ಸರಳ ಸಜ್ಜನಿಕೆಯ ಸಂವೇದನಾಶೀಲ ವ್ಯಕ್ತಿತ್ವದ ಜನಪ್ರಿಯ ನಾಟಿ ವೈದ್ಯರಾದ ಶ್ರೀ ಗಂಗಾಧರ ಪಂಡಿತರವರು ಸಲ್ಲಿಸಿದ ಅನನ್ಯ ಕೊಡುಗೆಯನ್ನು ಪರಿಗಣಿಸಿ Mp mla*s ನ್ಯೂಸ್ ತನ್ನ 13ನೇ ಸೌಹಾರ್ದ ಸಂಗಮದಲ್ಲಿ ವೈದ್ಯರತ್ನ ಶ್ರೀ ಗಂಗಾಧರ ಕರಿಯ ಪಂಡಿತರವರಿಗೆ ‘ಸೇವಾ ರತ್ನ’ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಿದೆ.

Read More News

Scroll to Top