ಅಥರ್ವ ಪ್ರಕಾಶ್… ಈ ಹೆಸರು ಈಗಾಗಲೇ ತುಳು- ಕನ್ನಡ ಚಿತ್ರರಂಗದಲ್ಲಿ ಪರಿಚಿತವಾಗಿದೆ. ತುಳುವಿನಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಇವರು ಸ್ಯಾಂಡಲ್‌ವುಡ್‌ನಲ್ಲೂ ತನ್ನ ಆಕರ್ಷಕ ರೂಪ ಹಾಗೂ ಅದ್ಭುತ ನಟನೆಯಿಂದ ಚಿತ್ರೋದ್ಯಮಿಗಳು ಹಾಗೂ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇವರು ಕನ್ನಡಕ್ಕೊಬ್ಬ ಪ್ರತಿಭಾನ್ವಿತ ನಟರಾಗಿದ್ದು, ಇವರ ನಟನೆಯ ಎಕ್ಸ್ ಆ್ಯಂಡ್ ವೈ ಜೂನ್ 26 ರಂದು ಬಿಡುಗಡೆಗೊಂಡಿದೆ.
ಅತ್ಯಂತ ಪ್ರತಿಭಾನ್ವಿತ ಹಾಗೂ ಹೊಸತನದ ನಿರ್ದೇಶಕ ಎಂದೇ ಗುರುತಿಸಿಕೊಂಡಿರುವ, ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳಿಗೆ ಭಾಜನರಾಗಿರುವ ನಿರ್ದೇಶಕ ಸತ್ಯಪ್ರಕಾಶ್ ಅವರು ಅಥರ್ವ ಪ್ರಕಾಶ್‌ನಲ್ಲಿರುವ ನಟನನ್ನು ಹೆಚ್ಚು ಹೊಳಪಾಗಿಸಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಬಳಿಕ ಅಥರ್ವ ಪ್ರಕಾಶ್ ಏರುತ್ತಿರುವ ಎತ್ತರ, ಸಾಗುತ್ತಿರುವ ದಾರಿ ವಿಶೇಷವಾದುದು. ಈಗಾಗಲೇ ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ, ಮ್ಯಾನ್ ಆಫ್ ದಿ ಮ್ಯಾಚ್ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಸತ್ಯ ಪ್ರಕಾಶ್ ಪ್ರಸಿದ್ದಿ ಪಡೆದಿದ್ದಾರೆ. ಸತ್ಯ ಪ್ರಕಾಶ್ ರ ಮ್ಯಾನ್ ಆಫ್ ದಿ ಮ್ಯಾಚ್ ನಲ್ಲಿ ಅಥರ್ವ ಪ್ರಕಾಶ್ ಅವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಸತ್ಯ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಎಕ್ಸ್ ಆ್ಯಂಡ್ ವೈ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಥರ್ವ ಪ್ರಕಾಶ್ ಈಗ ಬೇಡಿಕೆಯ ನಟನಾಗಿ ರೂಪುಗೊಳ್ಳುತ್ತಿದ್ದಾರೆ.
ಅಥರ್ವ ನಟನೆಯ ಎಕ್ಸ್ ಆ್ಯಂಡ್ ವೈ ಯಶಸ್ವಿ ಪ್ರದರ್ಶನ ಗೊಳ್ಳುತ್ತಿದೆ.ಅದಾಗಿ ಸರಿಸುಮಾರು ಮತ್ತೊಂದು ತಿಂಗಳಲ್ಲಿ ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ತಯಾರಾದ ಕೆ ಸೂರಜ್ ಶೆಟ್ಟಿ ನಿರ್ದೇಶನದ ನಾನ್‌ವೆಜ್ ಆಗೋಸ್ಟ್ 1 ರಂದು ಬಿಡುಗಡೆಯಾಗಲಿದೆ. ಹೆಚ್ಚುಕಡಿಮೆ ಒಂದು ತಿಂಗಳಲ್ಲಿ ಇವರ ಎರಡು ಸಿನಿಮಾಗಳು ತೆರೆ ಬಿಡುಗಡೆಯಾಗುವ ಮೂಲಕ ಕರ್ನಾಟಕದಲ್ಲಿ ಇವರು ಪ್ರೇಕ್ಷಕರ ಮನ ಗೆಲ್ಲಲಿದ್ದಾರೆ. ಆಕರ್ಷಕ ರೂಪ, ಅದಕ್ಕೆ ತಕ್ಕಂಥ ದೇಹ, ಎಲ್ಲರಲ್ಲೂ ಗೌರವಿಸುವ ಗುಣ, ಶಿಸ್ತು, ಸಮಯಪಾಲನೆ ಮುಂತಾದವುಗಳಿಂದ ನಿರ್ದೇಶಕರ ಅಚ್ಚುಮೆಚ್ಚಿನ ನಟನಾಗಿ ರೂಪುಗೊಂಡಿರುವ ಅಥರ್ವ ಪ್ರಕಾಶ್‌ಗೆ ಕನ್ನಡ ಹೊರತಾದ ಬೇರೆ ಭಾಷೆಗಳಿಂದಲೂ ಬೇಡಿಕೆ ಬರುತ್ತಿದೆ ಎಂಬುದು ಹೆಮ್ಮೆಯ ಸಂಗತಿ.
ಭೂಮಿಯಲ್ಲಿ ಜನ್ಮ ತಾಳದೇ ಇರುವಂಥ ಆತ್ಮದ ಕಥೆಯನ್ನು ಹೇಳುವ ಎಕ್ಸ್ ಆ್ಯಂಡ್ ವೈ ಈ ಕಾರಣದಿಂದಲೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ನಾನ್‌ವೆಜ್ ಕೂಡ ಹೊಸ ತಲೆಮಾರಿನ ಯುವಜನತೆಯನ್ನು ಸೆಳೆಯುವ ನಿರೀಕ್ಷೆ ಇದೆ. ಯುವ ಮನಸ್ಸುಗಳ ತಲ್ಲಣಗಳನ್ನು ಹಾಸ್ಯಪ್ರಧಾನವಾಗಿ ಹಾಗೂ ಮನಸ್ಪರ್ಶಿಯಾಗಿ ಪ್ರೇಕ್ಷಕರಿಗೆ ಕಟ್ಟಿ ಕೊಡುವ ನಾನ್‌ವೆಜ್ ಒಂದು ಭಿನ್ನ ಸಿನಿಮಾ. ಈ ಎರಡೂ ಸಿನಿಮಾಗಳು ಅಥರ್ವನಿಗೆ ಹೊಸ ಅವಕಾಶಗಳ ಹೆಬ್ಟಾಗಿಲನ್ನೇ ತೆರೆದಿಡಲಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಚಿತ್ರರಂಗ ಹೊಸ ನಾಯಕ ನಟರಿಗಾಗಿ ಎದುರುನೋಡುವ ಕಾಲವಿದು. ಅಂಥ ಹೊತ್ತಿನಲ್ಲಿ ಮಿಂಚುತ್ತಿರುವ ಅಥರ್ವ ಪ್ರಕಾಶ್ ಈಗ ಎಲ್ಲರ ಭರವಸೆಯಾಗಿ ಕಂಡುಬರುತ್ತಿದ್ದಾರೆ. ಎಕ್ಸ್ ಆ್ಯಂಡ್ ವೈ ಮತ್ತು ನಾನ್‌ವೆಜ್ ಸಿನಿಮಾಗಳ ಮೂಲಕ ಅಥರ್ವ ಪ್ರಕಾಶ್‌ನ ನಿಜವಾದ ಪ್ರತಿಭೆಯನ್ನು ಕಾಣಬಹುದಾಗಿದೆ.








































































































































































































