ಕ್ಯಾಥೊಲಿಕ್ ಸಭಾ ಕೂಳೂರು ಘಟಕದ ವತಿಯಿಂದ ನಿವೇಶನ ರಹಿತರಿಗೆ ಉಚಿತ ಮನೆ ನಿರ್ಮಾಣ

119.6K Views 27 May 2025

ಕೂಳೂರು, ಮೇ ೨೬: ಕಷ್ಟದಲ್ಲಿದ್ದವರಿಗೆ ನೆರವಾಗುವುದು ದೇವರ ಸೇವೆ ಮಾಡಿದಂತೆ. ಕೆಥೋಲಿಕ್ ಸಭಾ ಕೂಳೂರು ಘಟಕದ ವತಿಯಿಂದ ನಿವೇಶನ ರಹಿತರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಟ್ಟಿರುವ ಕಾರ್ಯ ಶ್ಲಾಘನೀಯ. ಇಂತಹ ಮಾನವೀಯ ಕಾರ್ಯಗಳು ನಿರಂತರವಾಗಿ ಮುಂದುವರೆಯಲಿ. ಇದು ಇತರರಿಗೂ ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರಣೆಯಾಗಲಿ ಎಂದು ಮಂಗಳೂರು ಧರ್ಮಕ್ಷೇತ್ರದ ವಿಶ್ರಾಂತ ಧರ್ಮಾಧ್ಯಕ್ಷ ಅ|ವಂ|ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಹೇಳಿದರು.
ಕೂಳೂರು ಸಂತ ಅಂತೋನಿ ಚರ್ಚ್‌ನ ಕೆಥೋಲಿಕ್ ಸಭಾ ಘಟಕದ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಹಮ್ಮಿಕೊಳ್ಳಲಾದ ಸಮಾಜಮುಖಿ ಕಾರ್ಯಗಳ ಪೈಕಿ ಒಂದಾಗಿರುವ ಬಡಕುಟುಂಬಕ್ಕೆ ಬಂಗ್ರಕೂಳೂರಿನಲ್ಲಿ ಸುಮಾರು ೧೫ ಲ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಮನೆ ಹಸ್ತಾಂತರ ಹಾಗೂ ಆಶೀರ್ವಚನ ನೆರವೇರಿಸಿ ಅವರು ಮಾತನಾಡಿದರು.
ದೈಜಿವರ್ಲ್ಡ್ ಸಂಸ್ಥೆಯ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರು ಮಾತನಾಡಿ, ಕೂಳೂರು ಘಟಕದ ಏಕತೆ ಮತ್ತು ಸಮರ್ಪಣೆ ಶ್ಲಾಘನೀಯ. ಇದು ಕೇವಲ ಮನೆಯಲ್ಲ ಬದಲಾಗಿ, ಸಾಮೂಹಿಕ ಸಹಾನುಭೂತಿಯ ಸಂಕೇತವಾಗಿದೆ. ನಮ್ಮಲ್ಲಿ ಒಳ್ಳೆಯ ಮನಸ್ಸು ಇದ್ದಾಗ ಮಾತ್ರವೇ ಕಷ್ಟದಲ್ಲಿದ್ದವರಿಗೆ ನೆರವಾಗಲು ಸಾಧ್ಯ. ಕೂಳೂರು ಕ್ಯಾಥೊಲಿಕ್ ಸಭಾ ಘಟಕದ ಮನಸ್ಥಿತಿ ಅಗತ್ಯವಿರುವವರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧ ಎಂಬಂತಿದೆ. ಘಟಕದಲ್ಲಿರುವ ಏಕತೆಯಿಂದ ಇದು ಸಾಧ್ಯವಾಗಿದೆ. ಇತರ ಘಟಕಗಳಿಂದಲೂ ಇಂತಹ ಮಾನವೀಯ ಕಾರ್ಯಗಳು ನಡೆಯಬೇಕಿದೆ ಎಂದರು.
ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ಸಮುದಾಯದಲ್ಲಿ ನಡೆಯುವ ಉದಾರ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಿದಾಗ ಹೆಚ್ಚಿನ ನೆರವು ಕಾರ್ಯವಾಗಲಿದೆ ಎಂದರು.
ಕೆಥೋಲಿಕ್ ಸಭಾ ಕೂಳೂರು ಘಟಕದ ಆಧ್ಯಾತ್ಮಿಕ ನಿರ್ದೇಶಕ ಹಾಗೂ ಕೂಳೂರು ಸಂತ ಅಂತೋನಿ ಚರ್ಚ್‌ನ ಧರ್ಮಗುರು ವಂ| ವಿಕ್ಟರ್ ವಿಜಯ್ ಲೋಬೊ ಅಧ್ಯಕ್ಷತೆ ವಹಿದ್ದರು.
ಕೆಥೋಲಿಕ್ ಸಭಾ ಕೂಳೂರು ಘಟಕದ ಅಧ್ಯಕ್ಷ ರೋವಿನ್ ಡಿ’ಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಸವಿತಾ ವೇಗಸ್ ವಂದಿಸಿದರು. ಕ್ಲೆವಿಟಾ ಡಿ’ಸೋಜಾ ನಿರೂಪಿಸಿದರು.
ಎಪಿಸ್ಕೋಪಲ್ ಸಿಟಿ ವಲಯದ ಕೆಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕ ವಂ| ಜಾನ್ ವಾಸ್, ಕೆಥೋಲಿಕ್ ಸಭಾದ ವಲಯ ಅಧ್ಯಕ್ಷರಾದ ಐಡಾ ಫುರ್ಟಾಡೊ ಉಪಸ್ಥಿತರಿದ್ದರು. ಗುತ್ತಿಗೆದಾರ ದೀಪಕ್ ಡಿ’ಸೋಜಾ ಅವರನ್ನು ಸಮ್ಮಾನಿಸಲಾಯಿತು.

Read More News

Scroll to Top