ಮಂಗಳೂರು- ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಸುಲಭದಲ್ಲಿ ತಂತ್ರಜ್ಞಾನ ಕೈಗೆ ಎಟಕುತ್ತಿದ್ದು, ಡಿಜಿಟಲ್ ಸುರಕ್ಷತೆ ಕಡೆಗೆ ಗಂಭೀರವಾಗಿ ಮುತುವರ್ಜಿ ವಹಿಸಬೇಕು ಎಂದು ಯುನಿಸೆಫ್ ಸಂವಹನ ವಕಾಲತ್ತು ಮತ್ತು ಪಾಲುದಾರಿಕೆ ತಜ್ಞ ಪ್ರೊಸೂನ್ ಸೇನ್ ಹೇಳಿದರು.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಾರ್ಚ್ 27ರ ಗುರುವಾರ ಮೈಸೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಯುನಿಸೆಫ್ ಹೈದ್ರಾಬಾದ್ ಹಾಗೂ ಸಂತ ಅಲೋಶಿಯಸ್ ಡೀಮ್ಡ್ ವಿ.ವಿ .ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ ಸಾಂಕ್ರಮಿಕವಲ್ಲದ ರೋಗಗಳು, ಮಾನಸಿಕ ಆರೋಗ್ಯ ಮತ್ತು ಡಿಜಿಟಲ್ ಸುರಕ್ಷತೆ ವಿಷಯದಲ್ಲಿ ಹಮ್ಮಿಕೊಂಡ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಹರೆಯದಲ್ಲಿ ಮಕ್ಕಳಲ್ಲಿ ದೈಹಿಕ ಬದಲಾವಣೆ ಸಹಜ .ಈ ವೇಳೆ ಅವರ ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು .ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಒಳಿತು -ಕೆಡುಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದವರು ಹೇಳಿದರು.
ಸಂತ ಅಲೋಶಿಯಸ್ ಡೀಮ್ಡ್ ವಿವಿ ರಿಜಿಸ್ಟರ್ ಡಾ .ರೊನಾಲ್ಡ್ ನಜಾರತ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗೆ ಸಮಾಜದ ನೈಜತೆ ಅರಿಯುವ ಶಿಕ್ಷಣ ನೀಡಬೇಕಾಗಿದೆ. ವ್ಯಕ್ತಿತ್ವ ನಿರ್ಮಾಣದ ಕಡೆಗೆ ಅವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯ ಎಂದರು.
ಮೈಸೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಪ್ರೊ.ಸಪ್ನಾ ಎಂ.ಎಸ್ ಪ್ರಸ್ತಾವನೆಗೈದರು. ಸಂತ ಅಲೋಶಿಯಸ್ ಡೀಮ್ಡ್ ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಶೆಟ್ಟಿ ವಂದಿಸಿದರು. ಮಂಜುನಾಥ್ ಸುಬೇದಾರ್ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳ ರಕ್ಷಣೆ ಮನೆಯಿಂದ ಆರಂಭವಾಗಲಿ.
ಮಕ್ಕಳ ರಕ್ಷಣೆಗೆ ದೇಶದಲ್ಲಿ ಹಲವಾರು ಕಾನೂನು, ಕಾಯಿದೆಗಳಿವೆ .ಆದರೆ, ಇದು ಮೊದಲು ಮನೆಯವರಿಂದ ರಕ್ಷಣೆ ಆಗಬೇಕು .ಮಕ್ಕಳ ಹಕ್ಕುಗಳನ್ನು ಅರ್ಥ ಮಾಡಿಕೊಂಡು ಅದರ ಪಾಲನೆ ಮಾಡಬೇಕು. ಯಾರಿಗೂ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ತಡೆ ಹಿಡಿಯುವ ಅಧಿಕಾರ ಇಲ್ಲ. ಮಾಧ್ಯಮ ವರದಿಗಾರರು ಸುದ್ದಿ ಬರವಣಿಗೆಯಲ್ಲಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಾರದಂತೆ ಎಚ್ಚರ ವಹಿಸುವ ಅಗತ್ಯ ಇದೆ. ಘಟನೆಯ ವರದಿ ಜತೆ ಕಾನೂನು ಮಾಹಿತಿಯೂ ಸೇರಿಸಿಕೊಂಡರೆ ಉತ್ತಮ ಎಂದು ಪಡಿ ಸಂಸ್ಥೆಯ ಸಿಇಒ ರೆನ್ನಿ ಡಿಸೋಜ ಹೇಳಿದರು.
ಯುನಿಸೆಫ್ ಕಚೇರಿಯ ಆರೋಗ್ಯ ತಜ್ಞ ಡಾ.ಶ್ರೀಧರ್ ಪ್ರಹ್ಲಾದ್ ರಾಯವಾಂಕಿ ಅವರು ಮಕ್ಕಳ ಆರೋಗ್ಯ ಸಮಸ್ಯೆ ಹೆಚ್ಚಳ ವಿಷಯದಲ್ಲಿ ವಿಚಾರ ಮಂಡಿಸಿದರು.


















































































































































































