ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಬಂಟ ಭಗೀರಥ, ಸರ್ವ ಸಮಾಜದ ಸೌಹಾರ್ದ ನಾಯಕ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಬಾಳಿಕೆ.

ಕಠಿಣ ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮೇಲೇರಿ ಬಡವರ, ಆಶಕ್ತರ ಪಾಲಿಗೆ ‘ಪ್ರೀತಿಯ ಸಂತೋಷಣ್ಣ’ನಾಗಿ ಸಮಸ್ತ ಬಂಟ ಸಮುದಾಯಕ್ಕೆ ನೆಚ್ಚಿನ ನಾಯಕನಾಗಿ, ಸರ್ವ ಧರ್ಮ ಜಾತಿ ಬಾಂಧವರ ಪಾಲಿಗೆ ಸೌಹಾರ್ದ ನಾಯಕನಾಗಿ ಮನೆಮಾತಾಗಿರುವ ಪುಣೆ ಬಂಟರ ಸಂಘದ ಸಮರ್ಥ ಅಧ್ಯಕ್ಷ ಸಂತೋಷ್ ವಿ. ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರೊಂದಿಗೆ ಬಂಟ ಸಮುದಾಯದ ಏಳಿಗೆಗಾಗಿ ಅಹರ್ನಿಶಿಯಾಗಿ ದುಡಿದವರಲ್ಲಿ ಪ್ರಮುಖರು. ಸಂತೋಷ್ ಶೆಟ್ಟಿಯವರು ಅಜಾತಶತ್ರು, ಎಲ್ಲರಿಗೂ ಇಷ್ಟವಾಗುವ ನಾಯಕ. ನಿಷ್ಕಳಂಕ ವ್ಯಕ್ತಿತ್ವದ ಅವರು ಯಾವುದೇ ಸಮಾಜಪರ ಕೆಲಸವಿರಲಿ ಅದಕ್ಕೆ ಪ್ರಥಮ ಪ್ರಾಶಸ್ತ್ಯ ಕೊಟ್ಟು ಅದು ಸಂಪೂರ್ಣಗೊಳ್ಳುವವರೆಗೆ ಅದರಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡು ಸಮಾಜಕ್ಕೆ ತನ್ನ ಹೆಚ್ಚಿನ ಸಮಯವನ್ನು ಮೀಸಲಿರಿಸಿದ ಛಲವಾದಿ, ಭಗೀರಥ ಸಾಧನೆಯ ಯಶಸ್ವಿ ಸಂಘಟಕರೆಂದೇ ಪ್ರಖ್ಯಾತಿ ಹೊಂದಿದ್ದಾರೆ. ಉಡುಪಿ ಜಿಲ್ಲೆಯ ಹೆಜಮಾಡಿ ಪಟೇಲರ ಮನೆ ದಿ. ವಸಂತ ಶೆಟ್ಟಿ ಮತ್ತು ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆ ಶ್ರೀಮತಿ ವಿನೋದಾ ವಿ. ಶೆಟ್ಟಿ ದಂಪತಿಗಳ ಸುಪುತ್ರರಾಗಿ ಜನಿಸಿದ ಸಂತೋಷ್ ಶೆಟ್ಟಿಯವರು ಎಳವೆಯಲ್ಲೇ ಯಕ್ಷಗಾನ, ನಾಟಕ, ಏಕಪಾತ್ರಾಭಿನಯ ಮೊದಲಾದ ಕಲೆಯಲ್ಲಿ ಆಸಕ್ತಿ ಹೊಂದಿದ್ದರು. ತಂದೆಯವರ ಅಕಾಲಿಕ ಮರಣದ ನಂತರ ದೊಡ್ಡಮ್ಮನ ಪಾಲನೆ ಪೋಷಣೆಯಲ್ಲಿ ಬೆಳೆದರು. ಇನ್ನಾ ಮತ್ತು ಸುರತ್ಕಲ್ ಚೇಳಾರ್‌ನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಓದಿದರು. ಪ್ರೌಢಶಿಕ್ಷಣವನ್ನು ಸುರತ್ಕಲ್‌ನ ಕೆ.ಆರ್.ಇ.ಸಿ.ಯಲ್ಲಿ ಪಡೆದರು. ಆ ಸಂದರ್ಭದಲ್ಲಿ ಅವರ ನಾಯಕತ್ವ ಗುಣವು ಅಲ್ಲಿನ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ಹುಟ್ಟೂರು ಬಿಟ್ಟು ಮಹಾರಾಷ್ಟ್ರದ ಪುಣೆಗೆ ಉದ್ಯೋಗವನ್ನರಸಿ ಹೊರಟರು. ಅಲ್ಲಿ ಚಿಕ್ಕಪ್ಪನ ಹೊಟೇಲ್‌ನಲ್ಲಿ ದುಡಿಯುತ್ತಲೇ ಸ್ಥಾನೀಯ ವಾಡಿಯಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಕಲಿತು ಪ್ರತಿಷ್ಠಿತ ಫರ್ಗ್ಯುಸನ್ ಕಾಲೇಜಿನಲ್ಲಿ ಪದವೀಧರರಾದರು. ತದನಂತರ, ಮಿತ್ರರಿಂದ, ಹಿತೈಷಿಗಳಿಂದ, ಬಂಧುಗಳಿಂದ ಹಣವನ್ನು ಪಡೆದು ‘ಸುಧಾಮ’ ಹೆಸರಿನ ಹೊಟೇಲ್ ಆರಂಭಿಸಿದರು. ಅದರಲ್ಲಿ ಯಶ ಸಾಧಿಸಿ, ಕೊರೋನೆಟ್ ಎಂಬ ತ್ರಿಸ್ಟಾರ್ ಹೊಟೇಲ್ ಪ್ರಾರಂಭಿಸಿದರು. ಇದರ ಜೊತೆಗೆ, ಸುಧಾಮ ರೆಸಿಡೆನ್ಸಿ, ಕಲ್ಪನಾ,ಸ್ವಾಗತ್ ಎಂಬ ಹೊಟೇಲ್‌ಗಳನ್ನು ನಡೆಸತೊಡಗಿದರು.ಮಹಾಗಣಪತಿ ಡೆವಲಪರ್ಸ್ ಪಡುಬಿದ್ರಿ ಇದರ ಮಾಲೀಕರಾಗಿ ಅನೇಕ ಮಂದಿ ನಿರುದ್ಯೋಗಿಗಳಿಗೆ ಉದ್ಯೋಗದಾತರಾದರು. ಇದೇ ಹೊತ್ತಲ್ಲಿ ವಿಸ್ತಾರ ಸಮಾಜಸೇವೆಗಾಗಿ ಪುಣೆ ಬಂಟರ ಸಂಘ ಸೇರಿದರು. ಮೊದಲಿಗೆ ಜನಸಂಪರ್ಕ ಕಾರ‍್ಯದ ಜವಾಬ್ದಾರಿ ವಹಿಸಿ ಅದರಲ್ಲಿ ಸೈ ಎನಿಸಿಕೊಂಡು ಪುಣೆ ಬಂಟರ ಸಂಘದ ಕಾರ‍್ಯಾಧ್ಯಕ್ಷರಾದರು. ಬಳಿಕ ಅಧ್ಯಕ್ಷರಾದರು. ಸುಮಾರು 3೦ ಕೋಟಿ ರೂಪಾಯಿ ಖರ್ಚು ಮಾಡಿ ಪುಣೆಯಲ್ಲಿ ಸುಂದರ, ಮನಮೋಹಕ, ಸುಸಜ್ಜಿತವಾದ ಬಂಟ ಭವನ ನಿರ್ಮಿಸಿದರು. ಇದು ಊರ-ಪರವೂರ ಬಂಟ ದಾನಿಗಳ ಸಹಕಾರದಿಂದ ಸಾಧ್ಯವಾಯಿತು. ಇದರ ನಿರ್ಮಾಣಕ್ಕಾಗಿ ಹಗಲಿರುಳೆನ್ನದೆ ಕಷ್ಟಪಟ್ಟು ಭಗೀರಥ ಪ್ರಯತ್ನವನ್ನೇ ಸಂತೋಷ್ ಶೆಟ್ಟಿಯವರು ಮಾಡಿದ್ದಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ನುಡಿಯುತ್ತಾರೆ. ಪುಣೆ ಬಂಟರ ಭವನದ ನಿರ್ಮಾಣ ಸಂತೋಷ್ ಶೆಟ್ಟಿಯವರ ಕನಸಾಗಿತ್ತು. ಅವರ ಸಂಘರ್ಷ, ಛಲ, ಪರಿಶ್ರಮ, ಅರ್ಪಣಾ ಮನೋಭಾವದಿಂದ ಇದು ನನಸಾಗಿದೆ ಎಂದರೂ ತಪ್ಪಾಗಲಾರದು. ಅಂದಾಜು ಒಂದು ಸಾವಿರದ ನೂರು ಜನರು ಕುಳಿತುಕೊಳ್ಳ ಬಹುದಾದ ಆಸನ ವ್ಯವಸ್ಥೆ, ಪಾರ್ಟಿ ಹಾಲ್, ಕೇಟರಿಂಗ್ ಅವಕಾಶ, ಮೀಟಿಂಗ್ ಹಾಲ್, ಸುಸಜ್ಜಿತ ರಂಗ ವೇದಿಕೆ ಹೀಗೇ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಗಳೊಂದಿಗೆ ಸುಸಜ್ಜಿತವಾಗಿ ಪುಣೆ ಬಂಟರ ಭವನ ತಲೆಯೆತ್ತಿ ನಿಲ್ಲಲು ಸಂತೋಷ್ ಶೆಟ್ಟಿಯವರ ಭಗೀರಥ ಪ್ರಯತ್ನವೇ ಕಾರಣವಾಗಿದೆ. ಇಲ್ಲಿ ವಾಹನ ಪಾರ್ಕಿಂಗ್‌ಗೋಸ್ಕರವೇ ವಿಶಾಲ ಜಾಗದ ಸ್ಥಳಾವಕಾಶವಿದೆ. ಪುಣೆ ಬಂಟರ ಸಂಘದ ಕಟ್ಟಡ ಕೇವಲ ಕಲ್ಲು ಬಂಡೆಯ ಕಟ್ಟಡವಾಗಿರದೆ ಅಲ್ಲೊಂದು ಧನಾತ್ಮಕ ಸಂವೇದನಾಕರ್ಷಣೆಯಿದೆ ಎಂದು ಹಿರಿಯ ಸಮಾಜ ಬಾಂಧವರು ಹೇಳುತ್ತಾರೆ. ಒಳಗೆ ಪ್ರವೇಶಿಸುತ್ತಲೇ ರಜತ ಲೇಪನದ ದೇವರ ಬೆಳ್ಳಿ ವಿಗ್ರಹ, ಬಳಿಕ ತುಳುನಾಡಿನ ಸಂಸ್ಕೃತಿಗೆ ಅನುಗುಣವಾಗಿ ನಿರ್ಮಿಸಿದ ಒಳಾಂಗಣ ಸಭಾಭವನ, ಇನ್ನು ಬಂಟ ಸಮಾಜದ ಅಭ್ಯುದಯಕ್ಕೆ ಹೆಣಗಿ ಕೀರ್ತಿ ಶೇಷರಾದ ಗಣ್ಯರ ಭಾವಚಿತ್ರಗಳು, ಪುಣೆ ನಗರದ ಗತಿಸಿದ ಬಂಟ ನಾಯಕರ ಮಹಾದಾನಿಗಳ ಭಾವಚಿತ್ರಗಳಿವೆ. ಒಟ್ಟಿನಲ್ಲಿ ಪುಣೆ ಬಂಟರ ಭವನ ಹಲವು ಅದ್ಭುತಗಳ ಸಂಗಮ, ಮನಮೋಹಕ, ಸುಂದರ, ಆಕರ್ಷಣೀಯವಾಗಿದೆ. ಸಂತೋಷ್ ಶೆಟ್ಟಿಯವರು ಪುಣೆ ಬಂಟರ ಸಂಘದ ಅಧ್ಯಕ್ಷರಾಗಿ ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದಾದ ಸಾಧನೆಯನ್ನು, ಸಮಾಜಸೇವೆಯನ್ನು ಮಾಡಿದ್ದಾರೆ.ಹುಟ್ಟೂರಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯನ್ನು ಕೈಗೊಂಡು ಜನ ಪ್ರತಿನಿಧಿಗಳ ಸಹಕಾರದೊಂದಿಗೆ ಜನಪರವಾಗಿ ಸಾಗಿದ್ದಾರೆ. ಊರಿನಲ್ಲಿ ದೇವಾಲಯ, ಅಭಿವೃದ್ಧಿ ಶಾಲೆ, ರಸ್ತೆಗಳ ದುರಸ್ಥೀಕರಣ, ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೆರವು, ರೋಗಿಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ.ಹೊರನಾಡಿನ ಮರಾಠಿ ಬಾಂಧವರು ಮೂಲನಿವಾಸಿಗಳೊಂದಿಗೆ ಅತ್ಯುತ್ತಮ ಸೌಹಾರ್ದ ಭಾವ ಹೊಂದಿರುವ ಸಂತೋಷ್ ಶೆಟ್ಟಿಯವರು ದೈವ ದೇವರುಗಳ ಮೇಲೆ ಅತೀವ ಭಕ್ತಿ ಇರಿಸಿ ಆತ್ಮ ಸಾಕ್ಷಿಯಂತೆ ಸಮಾಜಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮರಾಠಿ ಕನ್ನಡ ಕವಿ ಸಮ್ಮೇಳನ, ವಿಚಾರಗೋಷ್ಠಿಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಯಕ್ಷಗಾನ, ತಾಳಮದ್ದಳೆ, ನೃತ್ಯ, ನಾಟಕ ಸಾಹಿತ್ಯ ಸಂಭ್ರಮ, ಕವಿಗೋಷ್ಠಿಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಇವರಿಗೆ ಬಂಟ ಭಗೀರಥ, ಬಂಟ ಸೇನಾನಿ, ಸಮಾಜಸೇವಾ ದುರಂಧರ ಹೀಗೇ ಅನೇಕ ಬಿರುದುಗಳು ದೊರಕಿವೆ.ಪುಣೆ ನಗರದ ಅನ್ಯ ಜಾತೀಯ ಸಂಸ್ಥೆಗಳು, ಸಾಂಸ್ಕೃತಿಕ ಕಲಾ ಸಾಮಾಜಿಕ ಸಂಸ್ಥೆಗಳು, ರಾಜಕೀಯ ಸಂಘಟನೆಗಳು ಇವರನ್ನು ಸನ್ಮಾನಿಸಿವೆ. ಹುಟ್ಟೂರಿನ ಹೆಮ್ಮೆಯ ಪುತ್ರ ಗೌರವವೂ ಇವರಿಗೆ ದೊರಕಿದೆ. ಇವರ ಧರ್ಮಪತ್ನಿ ದಿವ್ಯಾ ಶೆಟ್ಟಿ, ಮಕ್ಕಳಾದ ಶ್ರಾವ್ಯ, ಸೃಷ್ಟಿ ಇವರ ಸಮಾಜಸೇವೆಗೆ ಸ್ಪೂರ್ತಿಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಗೌರವಾಧ್ಯಕ್ಷತೆಯಲ್ಲಿ ಮೂಡೂರು-ಪಡೂರು ಜೋಡುಕರೆ ಕಂಬಳ ಸಮಿತಿ ಬಂಟ್ವಾಳದ ವತಿಯಿಂದ ಮಾರ್ಚ್ 2 ರ ಶನಿವಾರದಂದು 13 ನೇ ವರ್ಷದ ಹೊನಲು ಬೆಳಕಿನ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳ (ಬಂಟ್ವಾಳ ಕಂಬಳ)ಕ್ಕೆ ಅದ್ಧೂರಿ ಚಾಲನೆ

ಮಂಗಳೂರು: ತುಳುನಾಡಿನ ಪುರಾತನ ಜಾನಪದ ಕ್ರೀಡಾಲೋಕದಲ್ಲಿ ಹೊಸ ಚರಿತ್ರೆಯನ್ನು ಬರೆದ ಬಂಟ್ವಾಳದ 13 ನೇ ವರ್ಷದ ಹೊನಲು ಬೆಳಕಿನ ಮೂಡೂರು-ಪಡೂರು ಜೋಡುಕರೆ ಕಂಬಳ (ಬಂಟ್ವಾಳ ಕಂಬಳ)ವನ್ನು ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಅವರು ಉದ್ಘಾಟಿಸಿ,ಚಾಲನೆ ನೀಡಿದರು. ಈ ಸಂದರ್ಭ ಹೊಸ ಆವಿಷ್ಕಾರದ ಕಾವಳಕಟ್ಟೆ ಕಂಬಳ ವೈಭವವನ್ನು ನಾವೂರು ಕಂಬಳದ ಮೂಲಕ ಮತ್ತೆ ಕಾಣುವಂತಾಗಿದೆ. ಈ ಭಾಗದ ರೈತಾಪಿ ವರ್ಗದ ಸಹಕಾರದಿಂದ ಇದು ಸಾಧ್ಯವಾಯಿತ್ತು ಎoದು ಅವರು ನುಡಿದರು. ಅಲ್ಲಿಪಾದೆ ಸಂತ ಅಂತೋನಿ ಚರ್ಚ್ನ ಧರ್ಮಗುರು ರೆ| ಫಾ| ಫೆಡ್ರಿಕ್ ಮೊಂತೆರೊ ಅವರು ದೀಪ ಬೆಳಗಿಸಿದರು. ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಭಹಾರೈಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಂಬಳ ಕೋಣಗಳ ಯಜಮಾನರಾದ ಉಮೇಶ್ ಶೆಟ್ಟಿ ಮಾಣಿಸಾಗು, ಲಿಯೋ ಫೆರ್ನಾಂಡೀಸ್ ಸರಪಾಡಿ, ಪುರುಷೋತ್ತಮ ಶೆಟ್ಟಿ, ಐತಪ್ಪ ಆಳ್ವ, ಎಂಆರ್‌ಜಿ ಗ್ರೂಪ್‌ನ ಬಾಲಕೃಷ್ಣ ಶೆಟ್ಟಿ, ತಾ.ಪಂ.ಮಾಜಿ ಸದಸ್ಯ ಪ್ರವೀಣ್ ಆಳ್ವ, ಉದ್ಯಮಿಗಳಾದ ರಘುನಾಥ ಸೋಮಯಾಜಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮಾಜಿ ಮೇಯರ್ ಎಂ. ಶಶಿಧರ್ ಹೆಗ್ಡೆ, ನಮ್ಮ ಕುಡ್ಲದ ವ್ಯವಸ್ಥಾಪಕ ಲೀಲಾಕ್ಷ ಕರ್ಕೇರ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ಬಾಸ್ ಆಲಿ, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ನಾರಾಯಣ ನಾಯ್ಕ್, ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ ಪುತ್ತೂರು, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ರೈ, ಕಂಬಳ ಸಮಿತಿಯ ಸಂಚಾಲಕ ಬಿ. ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಪಿಲಿಫ್ ಫ್ರಾಂಕ್, ಉಪಾಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಅವಿಲ್ ಮಿನೇಜಸ್, ಬೇಬಿ ಕುಂದರ್, ಸುದೀಪ್‌ಕುಮಾರ್ ಶೆಟ್ಟಿ, ಎಂ.ಎಸ್. ಮಹಮ್ಮದ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ಅಪಾರ ಪ್ರೇಕ್ಷಕ ವರ್ಗ ಕಂಬಳಕ್ಕೆ ಆಗಮಿಸಿ ಇತಿಹಾಸ ಪ್ರಸಿದ್ಧ ಬಂಟ್ವಾಳ ಕಂಬಳವನ್ನು ವೀಕ್ಷಿಸಿದರು.

ಪ್ರಾದೇಶಿಕ ವಾರ್ತೆಗಳು

ಮಕ್ಕಳಿಗಾಗಿ ರಾಮಾಯಣ ಮಹಾಭಾರತದ ಅನಿಮೇಟೆಡ್ ಸೀರೀಸ್ – ವ್ಯಾಸ App ಬಿಡುಗಡೆ

ಮಕ್ಕಳಿಗಾಗಿ ಮಹಾಭಾರತ ರಾಮಾಯಣದ ಕಥೆಗಳನ್ನು ಅನಿಮೇಷನ್ ಮೂಲಕ ನೀಡುವ ಉದ್ದೇಶದಿಂದ “ವ್ಯಾಸ” ಎಂಬ ಕನ್ನಡದ App ಮಾರ್ಚ್ 8ರಂದು ಲೋಕಾರ್ಪಣೆಗೊಳ್ಳಲಿದೆ. ಪ್ರಥಮ ಸೀರೀಸ್ ನಲ್ಲಿ “ಸರ್ಪಮೇಧ” ಕಥೆ ಇದ್ದು, ಸುಮಾರು 8 ರಿಂದ 10 ಎಪಿಸೋಡ್ಸ್ ಪ್ರತಿ ಭಾನುವಾರ ಬೆಳಿಗ್ಗೆ 10 ಘಂಟೆಗೆ ಪ್ರಸಾರಗೊಳ್ಳಲಿದೆ. ಇದರ ಪ್ರೋಮೋ ಹಾಗೂ App ಚಾಲನೆ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ಮಾರ್ಚ್ 8ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಕನ್ನಡದ ಈ ವಿನೂತನ ಪ್ರಯೋಗಕ್ಕೆ ನಾಡಿನ ಗಣ್ಯರು ಅಂದು ಚಾಲನೆ ನೀಡಲಿದ್ದಾರೆ. ಇದು ಸಂಪೂರ್ಣ ಉಚಿತ ಓ ಟಿ ಟಿ ಯಾಗಿದ್ದು, ಜಗತ್ತಿನಲ್ಲೇಡೆ ವೀಕ್ಷಿಸಬಹುದಾಗಿದೆ ಎಂದು ವ್ಯಾಸ ನಿರ್ಮಾಪಕರಾದ ಬಿ. ಮೇಘನಾ ಶೆಣೈ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ಅಧ್ಯಕ್ಷರಾಗಿ ಸದಾಶಿವ ಉಳ್ಳಾಲ್ ಅಧಿಕಾರ

ಮಂಗಳೂರು :ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ (ಮೂಡಾ )ಅಧ್ಯಕ್ಷರಾಗಿ ಕಾಂಗ್ರೆಸ್ ನ ಹಿರಿಯ ರಾಜಕೀಯ ಮುಂದಾಳು ಸದಾಶಿವ ಉಳ್ಳಾಲ್ ಅವರು ಮಾರ್ಚ್ 1 ರಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಇರಾ ಚಂದ್ರಹಾಸ್ ಕರ್ಕೇರ, ಕಾರ್ಪೊರೇಟರ್ ನವೀನ್ ಆರ್. ಡಿ ‘ಸೋಜಾ ಸಹಿತ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಮಂಡಲೋತ್ಸವದಲ್ಲಿ ಸುಪುತ್ರ ದೇವಪ್ರಸಾದ್ ಜತೆ ಭಾಗವಹಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು.

ಅಯೋಧ್ಯೆ: ಧರ್ಮದರ್ಶಿ ಮತ್ತು ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ತನ್ನ ಸುಪುತ್ರ ದೇವಪ್ರಸಾದ್ ಪುನರೂರು ಅವರ ಜತೆಗೆ ಅಯೋಧ್ಯೆಗೆ ತೆರಳಿ, ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಮಂಡಲೋತ್ಸವದಲ್ಲಿ ರಾಮ ತಾರಕ ಯಜ್ಞ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು. ಈ ಹಿಂದೆ ಹರಿಕೃಷ್ಣ ಪುನರೂರು ಅವರು ನೇಪಾಳದ ಪಶುಪತಿ ದೇವಸ್ಥಾನ, ವಾರಣಾಸಿ, ಬದರಿನಾಥ, ಕೇದರನಾಥ, ಕೈಲಾಸ, ಮಾನಸ ಸರೋವರ ಮೊದಲಾದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.

ಪ್ರಾದೇಶಿಕ ವಾರ್ತೆಗಳು

ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಸಮಾಜಸೇವಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡುವ ಬಗ್ಗೆ ಜನಾಭಿಪ್ರಾಯ.

ಮಂಗಳೂರು: ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷರಾಗಿದ್ದು, ಕಳೆದ 5೦ ವರ್ಷಗಳಿಂದ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ.ಲಯನ್ಸ್ ಕ್ಲಬ್ ರಾಜ್ಯಪಾಲರಾಗಿದ್ದಾಗ 1೦ ಸಾವಿರ ಮಂದಿ ಅಂಧರಿಗೆ ಕನ್ನಡಕ ನೀಡಿ, ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲು ಸಹಕರಿಸಿದ ಅವರಿಗೆ ಅಮೇರಿಕಾ ಸರಕಾರವು ನೈಟ್ ಆಫ್ ದಿ ಬ್ಲೈಂಡ್ ಪ್ರಶಸ್ತಿ ನೀಡಿ ಗೌರವಿಸಿದೆ. ಬಡವರಿಗೆ 101 ಆರ್‌ಸಿಸಿ ಮನೆಗಳನ್ನು ಕಟ್ಟಿಸಿ ಧರ್ಮಾರ್ಥವಾಗಿ ನೀಡಿದ ಅವರು ಬಡವರಿಗೆ ಮನೆಕಟ್ಟಲು ಎಕ್ರೆಗಟ್ಟಲೆ ಭೂಮಿ ದಾನ ಮಾಡಿದ್ದಾರೆ.ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೆರವು ಒದಗಿಸಿದ್ದಾರೆ. ಪುನರೂರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಮೊದಲಿಗರೆಂಬ ಹಿರಿಮೆ ಅವರ ಮೇಲಿದೆ. ಮಂಗಳೂರು ವಿಶ್ವ ವಿದ್ಯಾನಿಲಯವು ಅವರ ಸಮಾಜ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.ಬಡರೋಗಿಗಳಿಗೆ ಅಸಹಾಯಕರಿಗೆ, ಅಂಗವಿಕಲರಿಗೆ ದಿನನಿತ್ಯ ಆರ್ಥಿಕ ಸಹಾಯ ಮಾಡುವ ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಜನಾಭಿಪ್ರಾಯ ವ್ಯಕ್ತ ವಾಗಿದೆ. ಈ ಬಗ್ಗೆ Mp mla’s ನ್ಯೂಸ್ ಎಂಪಿ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ನೀಡಿದೆ.

ಪ್ರಾದೇಶಿಕ ವಾರ್ತೆಗಳು

ಬಿ.ಸಿ.ರೋಡ್ -ಮುಕ್ಕ ಷಟ್ಪಥ ಹೆದ್ದಾರಿ ಬಗ್ಗೆ ಮಾಹಿತಿ ನೀಡಿದ ಎಂಪಿ ನಳಿನ್‌ಕುಮಾರ್ ಕಟೀಲು.

ಮಂಗಳೂರು: ಬಿ.ಸಿ.ರೋಡ್ ಹಾಗೂ ಮುಕ್ಕ ಮಧ್ಯೆ ಇರುವ ಚತುಷ್ಪಥ ಹೆದ್ದಾರಿಯನ್ನು ಷಟ್ಪಥಕ್ಕೆ ವಿಸ್ತರಿಸುವ ಯೋಜನೆ ಇದ್ದು, ಹಂತಹಂತವಾಗಿ ಅನುಷ್ಠಾನಗೊಳಿಸಲಾಗುವುದು. ಮೊದಲ ಹಂತವಾಗಿ ಬೈಕಂಪಾಡಿ-ಕೂಳೂರು ಮಧ್ಯೆ ಸುಮಾರು 4 ಕಿ.ಮೀ. ಉದ್ದ ಎಲಿವೇಟೆಡ್ ಹೈವೇ ನಿರ್ಮಾಣಗೊಳ್ಳಲಿದೆ ಎಂದು ನಳಿನ್‌ಕುಮಾರ್ ಕಟೀಲು ಅವರು ಹೇಳಿದರು.ಎಲಿವೇಟೆಡ್ ಹೈವೇಯ ವಿಸ್ತೃತ ಯೋಜನಾ ವರದಿ ಸಿದ್ಧಗೊಳ್ಳುತ್ತಿದೆ. ರಾ.ಹೆ. ಪ್ರಾಧಿಕಾರ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದವರು ಒಟ್ಟಾಗಿ ಇದನ್ನು ಕಾರ್ಯಗತಗೊಳಿಸಲಿದ್ದಾರೆ. ಮುಂದಿನ ಹಂತಗಳಲ್ಲಿ ಮುಕ್ಕ ಬಿ.ಸಿ. ರೋಡ್ ಮಧ್ಯೆ ಸಾಧ್ಯವಿರುವ ಕಡೆ ಭೂಸ್ವಾಧೀನ ಮಾಡುವುದು, ಇತರ ಕಡೆ ಎಲೆವೇಟೆಡ್ ಹೈವೇಯಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು.ಬಿ.ಸಿ.ರೋಡ್ ಪೆರಿಯ ಶಾಂತಿ ಮಧ್ಯೆಯ ೪೮ ಕಿ.ಮೀ. ಉದ್ದದ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಕಾಮಗಾರಿ ಶೇ. 4೦ರಷ್ಟು ಆಗಿದೆ. ಇದರಲ್ಲಿ ಕಲ್ಲಡ್ಕ ಮೇಲ್ಸೇತುವೆ ಪಾಣೆಮಂಗಳೂರು ಹಾಗೂ ಉಪ್ಪಿನಂಗಡಿ ಸೇತುವೆ ಕೂಡ ಸೇರುವುದರಿಂದ ಕಾಮಗಾರಿ ಸಮಯ ತೆಗೆದುಕೊಂಡಿದೆ. ಬಿಕರ್ನಕಟ್ಟೆ ಸಾಣೂರು ಹೆದ್ದಾರಿ ಚತುಷ್ಪಥ ಯೋಜನೆಯಲ್ಲೂ ಬಹುತೇಕ ಭೂಸ್ವಾಧೀನ ಪೂರ್ಣಗೊಂಡಿದೆ. ಕಾಮಗಾರಿ ಚುರುಕಾಗಿದೆ. ಬಿ.ಸಿ. ರೋಡ್ ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ಪೂಂಜಾಲಕಟ್ಟೆ-ಚಾರ್ಮಾಡಿ ನಡುವೆ ಪ್ರಗತಿಯಲ್ಲಿದ್ದು ಚಾರ್ಮಾಡಿ ಘಾಟಿ ರಸ್ತೆ ವಿಸ್ತರಣೆಗೆ ಶಿಲಾನ್ಯಾಸ ಆಗಿದೆ ಎಂದು ವಿವರಿಸಿದರು.ನಂತೂರು ಹಾಗೂ ಕೆಪಿಟಿ ಮೇಲ್ಸೇರುವೆ ಕಾಮಗಾರಿಗಳಿಗೆ ಟೆಂಡರ್ ಆಗಿದ್ದರೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ತೆರವಾದ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದರು.

ಪ್ರಾದೇಶಿಕ ವಾರ್ತೆಗಳು

ಎಂಪಿ ನಳಿನ್ ಕುಮಾರ್ ಕಟೀಲು ಅವರ ಸಾಧನೆ, ಬಿಡುಗಡೆಯಾದ ಅನುದಾನ ವಿವರಗಳ ಹೊತ್ತಗೆ ಬಿಡುಗಡೆ. ಜಿಲ್ಲೆಗೆ 1 ಲಕ್ಷ ಕೋಟಿ ರೂ. ಅನುದಾನದ ವಿತರಣೆ.

ಮಂಗಳೂರು: ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲ್ ಅವರ 2009 ರಿಂದ 2023 ರ ವರೆಗಿನ ಸತತ ಮೂರು ಅವಧಿಗಳಲ್ಲಿ ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಕಾರ್ಯ ಹಾಗೂ ಬಂದಿರುವ ಅನುದಾನ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಡಿದ ಸಾಧನೆ ಕುರಿತ ವಿವರಗಳಿರುವ ಪುಸ್ತಕವನ್ನು ಗುರುವಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಬಿಡುಗಡೆ ಮಾಡಿದರು.ಈ ವೇಳೆ ಮಾತನಾಡಿದ ಅವರು ನಳಿನ್ ಸತತ ಮೂರು ಅವಧಿಗಳಲ್ಲಿ ಜಿಲ್ಲೆಗೆ ಒಂದು ಲಕ್ಷ ಕೋಟಿ ರೂ. ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಈ ಸಾಧನೆಯನ್ನು ಅಂಕಿ ಅಂಶಗಳ ಸಹಿತ ಜನರ ಮುಂದೆ ಇರಿಸಲಾಗಿದೆ ಎಂದು ಹೇಳಿದರು. 1 ಲಕ್ಷ ಕೋಟಿ ರೂ.ಹಿಂದೆ ಯುಪಿಎ ಅವಧಿಯಲ್ಲಿ ಜಿಲ್ಲೆಗೆ 4.5 ಸಾವಿರ ಕೋಟಿ ಬಂದಿದ್ದರೆ ಬಳಿಕದ ಅವಧಿಗಳಲ್ಲಿ 95 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ತಂದಿದ್ದಾರೆ. ಅವರ ಅವಧಿಯಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯ ಕೆಲವು ಪೂರ್ಣಗೊಂಡಿದ್ದು, ಕೆಲವು ಪ್ರಗತಿಯಲ್ಲಿವೆ. ಸಾವಿರಾರು ಕೋಟಿ ರೂ. ಅನುದಾನ ತಂದು ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿದ್ದಾರೆ. ಬಂದರು ಇಲಾಖೆ ಅಪೂರ್ವ ಅಭಿವೃದ್ಧಿಯಾಗಿದೆ. ವಂದೇ ಭಾರತ್ ರೈಲನ್ನು ಜಿಲ್ಲೆಗೆ ತಂದು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.ಸಂಸದ ನಳಿನ್‌ಕುಮಾರ್ ಕಟೀಲು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್, ಕಿಶೋರ್ ಬೊಟ್ಯಾಡಿ ಇದ್ದರು.

ಪ್ರಾದೇಶಿಕ ವಾರ್ತೆಗಳು

17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ‘ವಿಶ್ವಮಾನ್ಯ ಪ್ರಶಸ್ತಿ’ಗೆ ಪಾತ್ರರಾದ ಅಪೂರ್ವ ಸಾಧಕ, ಸಮಾಜಸೇವಕ, ಸಂಘಟಕ, ಅಮೂಲ್ಯ ಬಂಟ ರತ್ನ ಮಿತ್ರಂಪಾಡಿ ಜಯರಾಮ ರೈ.

ದುಬೈನಲ್ಲಿ ಇಂಟರ್‌ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿರುವ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ‘ವಿಶ್ವಮಾನ್ಯ ಪ್ರಶಸ್ತಿ 2024’ಕ್ಕೆ ಭಾಜನರಾದ ಅಬುದಾಬಿಯ ಹೆಸರಾಂತ ಉದ್ಯಮಿ ಸಮಾಜಸೇವಕ ಮಿತ್ರಂಪಾಡಿ ಜಯರಾಮ ರೈ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು.ಇವರ ಅನನ್ಯ ಸಮಾಜಸೇವೆಯನ್ನು ಗುರುತಿಸಿ 2022ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗೌರವಿಸಿದೆ. ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ಚೆನ್ನಪ್ಪ ರೈ ಹಾಗೂ ದಿಂಬ್ರಿ ಗುತ್ತು ಸರಸ್ವತಿ ಸಿ. ರೈ ಅವರ ಸುಪುತ್ರರಾಗಿರುವ ಮಿತ್ರಂಪಾಡಿ ಜಯರಾಮ ರೈ ಅವರು ಬಿನ್ ಫರ್ದಾನ್ ಗ್ರೂಫ್ ಸಂಸ್ಥೆಯ ಸಿ.ಎಫ್.ಓ. ಆಗಿ ಯಶಸ್ವಿ ಉದ್ಯಮಿಯಾಗಿದ್ದಾರೆ.1999ರಲ್ಲಿ ಕೊಲ್ಲಿ ರಾಷ್ಟ್ರ ಯು.ಎ.ಇ. ಅಬುದಾಬಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಮಿತ್ರಂಪಾಡಿ ಜಯರಾಮ ರೈ ಅವರು ಆರಂಭದಲ್ಲಿ ಬಿನ್ ಫರ್ದಾನ್ ಗ್ರೂಫಿನ ಫೈನಾನ್ಸ್ ಮೆನೇಜರ್ ಆಗಿ ಬಳಿಕ, ಪದೋನ್ನತಿ ಹೊಂದಿ ಫೈನಾನ್ಸ್ ಎಂಡ್ ಎಡ್ಮಿನ್ ಮೆನೇಜರ್ ಆಗಿ ಕಾರ‍್ಯನಿರ್ವಹಿಸಿದರು. ಕೊಲ್ಲಿ ರಾಷ್ಟ್ರಕ್ಕೆ ಬರುವುದಕ್ಕೆ ಮುನ್ನ ಅವರು ಬೆಂಗಳೂರಿನ ಯುವ ಬಂಟ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ತುಳುವೆರೆಂಕುಲು ಸಂಘಟನೆ ಹಾಗೂ ಲಯನ್ಸ್ ಕ್ಲಬ್ ಪದಾಧಿಕಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ.ಯು.ಎ.ಇ. ಅಬುದಾಬಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರ ಪ್ರಾಮಾಣಿಕ ಸೇವೆ, ಕಾರ‍್ಯ ದಕ್ಷತೆ ಅವರಿಗೆ ಉನ್ನತ ಸ್ಥಾನಮಾನ ದೊರೆಯಲು ಕಾರಣವಾಯಿತು. ತನ್ನ ಬಿಡುವಿನ ವೇಳೆಯನ್ನು ಸಮಾಜಸೇವೆ, ಸಾಂಸ್ಕೃತಿಕ, ಕಲಾಸೇವೆ ಸಂಘಟನೆಗಳಿಗೆ ಮುಡಿಪಾಗಿಟ್ಟ ಅವರು ನಿಸ್ವಾರ್ಥ ಸಮಾಜ ಸೇವಕ, ಅಂತರಾಷ್ಟ್ರೀಯ ಸಂಘಟಕರಾಗಿ ಜನಮಾನಸ ಗೆದ್ದಿದ್ದಾರೆ.ಸಮಾಜಸೇವೆ, ಸಾಂಸ್ಕೃತಿಕ ಸಂಘಟನೆ, ಕಾರ‍್ಯಕ್ರಮ ಸಂಯೋಜನೆ, ಯಕ್ಷಗಾನ, ನಾಟಕ, ಸಂಗೀತ ಕಲೆಗಳಿಗೆ ಉತ್ತೇಜನ ನೀಡುವ ಮೂಲಕ ಪುತ್ತೂರಿನಿಂದ ಅಬುದಾಬಿ ತನಕದ ‘ಸಾಂಸ್ಕೃತಿಕ ಸೇತು’ ಎಂಬಂತೆ ಕಾರ‍್ಯಪ್ರವೃತ್ತರಾಗಿ ತುಳು ಕನ್ನಡಿಗರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಇಂಡಿಯನ್ ಸೋಶಿಯಲ್ ಸೆಂಟರ್ ಟೋಸ್ಟ್ ಮಾಸ್ಟರ್ ಎಂಬ ಸಂಘಟನೆಯನ್ನು ಸ್ಥಾಪಿಸಿ ಸಮಾಜಮುಖಿಯಾಗಿ ಸಾಗಿರುವ ಅವರು ಸಾಂಸ್ಕೃತಿಕ ಸಂಘಟನೆ ಮೂಲಕ ಅಬುದಾಬಿ ಕನ್ನಡಿಗರ ಪ್ರೀತಿ, ವಿಶ್ವಾಸ ಗಳಿಸಿ ಆಪತ್ತಿಗೆ ಸಿಕ್ಕಿಕೊಂಡ ಬಾಂಧವರಿಗೆ ಸಹಾಯ ಮಾಡಿ ಆಪದ್ಬಾಂಧವರೆನಿಸಿಕೊಂಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಪುತ್ತೂರಿನ ಜಾತ್ರೆ ಸಮಯದಲ್ಲಿ ದೂರದೂರಿನ ಡೆಕೋರೇಶನ್ ಹಾಗೂ ಪುರ ಶೃಂಗಾರಕ್ಕೆ ಗೊತ್ತು ಮಾಡಿದ ತಂಡವು ಸಂಕಷ್ಟದಲ್ಲಿದ್ದಾಗ ಆ ತಂಡಕ್ಕೆ ತಿಂಗಳುಗಳ ಕಾಲ ದೈನಂದಿನ ಆಹಾರ, ವಸತಿ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದ ಪುತ್ತೂರಿನ ಮುತ್ತು ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಮೆ ಇವರದು.ಸಾಮಾಜಿಕ ಕಳಕಳಿಯ ಬರಹಗಾರ, ನಾಟಕಕಾರರಾಗಿರುವ ಇವರು ಬರೆದ ಮಂತ್ರಿ ಮಂಡಲ ಮತ್ತು ಅಪ್ಪೆನ ತ್ಯಾಗ ನಾಟಕಗಳು ಜನಮೆಚ್ಚುಗೆ ಗಳಿಸಿವೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೈವ, ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ಗೌರವಾಧ್ಯಕ್ಷರಾಗಿ, ಜೀರ್ಣೋದ್ದಾರ ಸಮಿತಿ ಸದಸ್ಯರಾಗಿ ಮಹತ್ತರ ಪಾತ್ರ ವಹಿಸಿದ್ದಾರೆ.ನೂರಕ್ಕೂ ಅಧಿಕ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ಬಡ ಹೆಣ್ಣು ಮಕ್ಕಳ ಮದುವೆಗೆ ಧನಸಹಾಯವನ್ನು ನೀಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಸಾವಿರಕ್ಕೂ ಅಧಿಕ ಬಡ ಕುಟುಂಬಗಳಿಗೆ ಅಕ್ಕಿಯನ್ನು ವಿತರಿಸಿ ಮಾನವೀಯತೆಗೆ ಜೀವ ತುಂಬಿದ್ದಾರೆ.ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಹಾಗೂ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ನಡೆಸಲ್ಪಡುವ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷಣೆ ವಾಕ್ಯದಲ್ಲಿ ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್ ವ್ಯಾಪ್ತಿಯ 32 ಗ್ರಾಮದಲ್ಲಿ ಪ್ರತಿ ತಿಂಗಳು ನಡೆಯುವ ಸಾಹಿತ್ಯ ಸಂಭ್ರಮ ಕಾರ‍್ಯಕ್ರಮದ ಮಹಾಪೋಷಕರಾಗಿ ಸೇವೆ ಸಲ್ಲಿಸಿದ್ದಾರೆ.ಈ ಗ್ರಾಮದ ಸಾಹಿತ್ಯ ಸಂಭ್ರಮದಲ್ಲಿ ಕನ್ನಡದಲ್ಲೂ ಐಎಎಸ್ ಬರೆಯಿರಿ ಅಭಿಯಾನ, ಕವಿಗೋಷ್ಠಿ, ಕಥಾಗೋಷ್ಠಿ, ಸಾಂಸ್ಕೃತಿಕ ಕಾರ‍್ಯಕ್ರಮ ಹಾಗೂ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ನಡೆಯುತ್ತಿದ್ದು ಸುಮಾರು 5 ಸಾವಿರ ಪುಟಾಣಿ ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಗೌರವ ಮತ್ತು 50 ಸಾವಿರಕ್ಕೂ ಅಧಿಕ ಪ್ರೇಕ್ಷಕ ವರ್ಗ ಇದನ್ನು ನೋಡಿ ಆನಂದಿಸಿದ ಗೌರವ ಇವರಿಗೆ ಸಲ್ಲುತ್ತದೆ. ಈ ರೀತಿಯ ಕಾರ‍್ಯಕ್ರಮವನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಿರುವುದು ನಮ್ಮ ದೇಶದಲ್ಲೇ ಪ್ರಪ್ರಥಮವಾಗಿದೆ.ಇವರು ಕಳೆದ 25 ವರ್ಷಗಳಿಂದ ಅರಬ್ ರಾಷ್ಟ್ರದಲ್ಲಿದ್ದು ಕನ್ನಡ ಸೇವೆ ಹಾಗೂ ಕನ್ನಡಿಗರ ಪರ ನಿಂತು ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತನು-ಮನ-ಧನದಿಂದ ಸಹಕರಿಸುತ್ತಾ ಬಂದಿದ್ದಾರೆ.ಡಾ. ಹರ್ಷ ಕುಮಾರ್ ರೈ ಅವರ ನಿರ್ದೇಶನದ, ಪುತ್ತೂರು ಉಮೇಶ್ ನಾಯಕ್ ಅವರ ಸಾಹಿತ್ಯದ ‘ಅಷ್ಟ ಕ್ಷೇತ್ರ ಗಾನ ವೈಭವ’ ಎಂಬ ಕನ್ನಡ ಭಕ್ತಿಗೀತೆಯನ್ನು 8 ರಾಷ್ಟ್ರಗಳಲ್ಲಿ ಬಿಡುಗಡೆಗೊಳಿಸಿದ್ದು, ಇದು ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್ ನಲ್ಲಿ ವಿಶ್ವ ದಾಖಲೆಯಾಗಿರುತ್ತದೆ.2023ರ ‘ಗಡಿನಾಡ ಸದ್ಭಾವನ ಭೂಷಣ ಪ್ರಶಸ್ತಿ’, ಇಂಟರ್‌ನ್ಯಾಷನಲ್ ಐಕಾನ್ ಪ್ರಶಸ್ತಿ, ಟೋಸ್ಟ್ ಮಾಸ್ಟರ್ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ಡಿಟಿಎಂ ಮತ್ತು ಟ್ರಿಪಲ್ ಕ್ರೌನ್ ಪ್ರಶಸ್ತಿಗೂ ಪಾತ್ರರಾಗಿರುತ್ತಾರೆ.ವಿದೇಶದಲ್ಲಿದ್ದರೂ ಸದಾ ಭಾರತ ದೇಶ, ಕನ್ನಡ ನಾಡಿನ ಬಗ್ಗೆ, ತುಳುನಾಡಿನ ಬಗ್ಗೆ ಅತೀವ ಪ್ರೀತಿಯಿರಿಸಿ ಅಭಿಮಾನದಿಂದ ನಮ್ಮ ಸಂಸ್ಕೃತಿ, ನುಡಿ, ನೆಲ, ಜಲದ ಬಗ್ಗೆ ಗೌರವ ತೋರುತ್ತಾ ಬಂದಿರುವ ಬಂಟ ಸಮಾಜದ ಹೆಮ್ಮೆಯ ಸಮಾಜಸೇವಕ, ಸಾಧಕ, ಬಹುಮುಖ ಪ್ರತಿಭೆ ಮಿತ್ರಂಪಾಡಿ ಜಯರಾಮ ರೈಯವರು ತವರಿನಲ್ಲಿ ಕೃಷಿ ಪ್ರಧಾನ ಕುಟುಂಬದ ಹಿನ್ನಲೆ ಹೊಂದಿದವರು. ಯು.ಎ.ಇ.ಯಲ್ಲಿ ಭಾರತದ ಆದಿವಾಸಿ ಜನಾಂಗದವರನ್ನು ಗುರುತಿಸಿ ಅವರ ಅವಶ್ಯಕತೆಗಳಿಗೆ ಸ್ಪಂದಿಸಿರುವುದು ಮಾತ್ರವಲ್ಲದೆ,ಅವರ ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರೋತ್ಸಾಹಿಸುವ ಕಾರ‍್ಯಕ್ರಮಗಳನ್ನು ಸಂಘಟಿಸುತ್ತಾ ಆ ಜನಾಂಗದ ಗೌರವಾಭಿಮಾನಗಳಿಗೆ ಪಾತ್ರರಾಗಿದ್ದಾರೆ.ನಮ್ಮ ರಾಜ್ಯದ ಅಲ್ಪಸಂಖ್ಯಾತರ ಸಂಸ್ಕೃತಿ, ಸಂಪ್ರದಾಯಗಳನ್ನು ಅಧ್ಯಯನ ಮಾಡುವ ಮೂಲಕ ಅದರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿತ್ವ ಇವರದು.ಬ್ಯಾರಿ, ಕೊಡವ, ಕುಡುಬಿ ಭಾಷೆಗಳ ಪ್ರಚಾರ ಅಭಿವೃದ್ಧಿಗೆ ಕೂಡಾ ಶ್ರಮಿಸಿದ್ದಾರೆ. ಧರ್ಮಪತ್ನಿ ಶ್ರೀಮತಿ ಆಶಾ ಜೆ. ರೈ. ಪುತ್ರ ತಾರನಾಥ ಜೆ. ರೈ, ಸುಪುತ್ರಿ ಪ್ರಾಂಜಲಾ ರೈ ಅವರೊಂದಿಗೆ ಸಮಾಜಪರ ಸೇವಾ ಕಾರ‍್ಯಗಳಲ್ಲಿ ತೊಡಗಿಸಿಕೊಂಡು ತನ್ನ ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ಮೀಸಲಿರಿಸಿದ ಮಿತ್ರಂಪಾಡಿ ಜಯರಾಮ ರೈ ಅವರು ಉತ್ತಮ ಮಾತುಗಾರರಾಗಿದ್ದು, ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಅಮೂಲ್ಯ ‘ಬಂಟ ರತ್ನ’ವಾಗಿದ್ದಾರೆ.ಅವರಿಗೆ MPMLA’s ನ್ಯೂಸ್ ಶುಭ ಹಾರೈಸುತ್ತದೆ.

ಪ್ರಾದೇಶಿಕ ವಾರ್ತೆಗಳು

ಮಣಿಪಾಲದ ಭಾರತ್ ಮಾಲ್ ನಲ್ಲಿ ಗಬ್ಬರ್ ಸಿಂಗ್ ತುಳು ಸಿನೆಮಾದ ಪ್ರಿಮಿಯಾರ್ ಶೋ ಉದ್ಘಾಟನೆ.

ಮಣಿಪಾಲ ಭಾರತ್ ಮಾಲ್ ನಲ್ಲಿ ಗಬ್ಬರ್ ಸಿಂಗ್ ತುಳು ಫಿಲಂ ದ ಪ್ರಿಮಿಯೇರ್ ಶೋ ಉದ್ಘಾಟನೆಯನ್ನು ಇತ್ತೀಚೆಗೆ ಉಡುಪಿ ಶಾಸಕರಾದ ಶ್ರೀ ಯಶಪಾಲ್ ಸುವರ್ಣರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ತುಳುಕೂಟದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಅಬೂಬಕ್ಕರ್, ವೀಣಾ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ಬಿಲ್ಡರ್ ದಿನೇಶ್ ಪೂಜಾರಿ ಸಂತೆಕಟ್ಟೆ, ರಾಘವೇಂದ್ರ ಜೆ.ಬಿ. ಬ್ರಹ್ಮಾವರ, ಶೇಖರ್ ಹಾವಂಜೆ, ಎಸ್. ನಾರಾಯಣ ಬ್ರಹ್ಮಾವರ, ನಾಯಕ ಶರಣ್ ಶೆಟ್ಟಿ, ಹಾಗೂ ಸ್ಥಳೀಯ ಕಲಾವಿದರಾದ ಚಂದ್ರಹಾಸ್ ಶೆಟ್ಟಿ ಕಪ್ಪೆಟ್ಟು. ಪೂರ್ಣಿಮಾ ಶೆಟ್ಟಿ, ಫ್ರಾಂಕಿ ಡಿಸೋಜಾ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಪ್ರಚಾರ ಸಂಯೋಜಕರಾದ ಜಹೀರ್ ಅಹಮ್ಮದ್ ಬೆಳಪು, ಕೀರ್ತಿರಾಜ್ ಅಂಬಲ್ಪಾಡಿ, ನಿರ್ಮಾಪಕರು ಸತೀಶ್ ಪೂಜಾರಿ ಬಾರ್ಕೂರ್, ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ದಯಾನಂದ ಕಿದಿಯೂರ್ ನೆರವೇರಿಸಿದರು. ಸಿನಿಮಾ ವಿಭಿನ್ನ ರೀತಿಯ ಕಥೆಯನ್ನು ಹೊಂದಿದ್ದು: 1961-62 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಈ ಒಂದು ಸತ್ಯ ಕಥೆಯನ್ನು ಆಧರಿಸಿ ಸಿನಿಮಾ ರೀತಿಯಲ್ಲಿ ಚಿತ್ರಿಸಿ ನಿರ್ಮಾಣಗೊಂಡಿದೆ. ನವಿರಾದ ಹಾಸ್ಯ ಸಾಹಸ ದೃಶ್ಯಗಳು, ಇಂಪಾದ ಸಂಗೀತ ಹಾಡುಗಳು ಒಳಗೊಂಡಿದ್ದು ಹಾಗೂ ಸಾಮಾಜಿಕ ಕಳಕಳಿ ಮತ್ತು ರಾಜಕೀಯ ಮೇಲಾಟ ಈ ಚಿತ್ರದ ಪ್ಲಸ್ ಪಾಯಿಂಟ್. ಮುಖ್ಯ ಕಲಾವಿದರಾಗಿ ನವೀನ ಡಿ.ಪಡೀಲ್, ಭೋಜರಾಜ್ ವಾಮಂಜೂರ್ ಅರವಿಂದ್ ಬೋಳಾರ್, ಉಮೇಶ್ ಮಿಜಾರ್ ಸಾಯಿ ಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರ್, ಚಂದ್ರಹಾಸ ಮಾಣಿ, ರವಿರಾಮ್ ಕುಂಜ, ಗಿರೀಶ್ ಶೆಟ್ಟಿ ಕಟೀಲ್. ವೀಣಾ ಎಸ್. ಶೆಟ್ಟಿ, ಸಂದೀಪ್ ಭಕ್ತ ಹಾಗೆಯೇ ನಾಯಕನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನಿಸಿತಾ ಡಾಯಸ್, ಸ್ಥಳೀಯ ಉಡುಪಿ ಹಾಗೂ ಮಂಗಳೂರಿನ ಹಲವಾರು ಕಲಾವಿದರು ಕಾಣಿಸಿಕೊಂಡಿದ್ದಾರೆ . ತುಳು ಸಿನಿಮಾಕ್ಕೆ ಹೊಸ ಮೆರಗು ಕೊಡುವ ರೀತಿಯಲ್ಲಿ ‘ಗಬ್ಬರ್ ಸಿಂಗ್ “ತುಳು ಸಿನಿಮಾ ಮೂಡಿ ಬಂದಿದ್ದು, ಮಸ್ಕತ್, ಕುವೈಟ್, ಬಹರೈನ್, ಕತಾರ್, ದುಬೈ ಯು.ಎಸ್.ಎ., ಸೌತ್‌ ಆಫ್ರಿಕಾ, ಮುಂಬೈ, ಬೆಂಗಳೂರು ಈ ಎಲ್ಲ ಕಡೆಗಳಲ್ಲಿ ಬಿಡುಗಡೆಯಾಗಲಿರುವುದು. ಕರಾವಳಿ ಭಾಗಕ್ಕೆ ಏಪ್ರಿಲ್ 12ನೇ ತಾರೀಕಿನಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರಾದ ಸತೀಶ್ ಪೂಜಾರಿ ಬಾರ್ಕೂರ್ ಈ ಸಂಧರ್ಭದಲ್ಲಿ ತಮ್ಮ ಮಾತಿನಲ್ಲಿ ತಿಳಿಸಿದರು.

Scroll to Top