17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ‘ವಿಶ್ವಮಾನ್ಯ ಪ್ರಶಸ್ತಿ’ಗೆ ಪಾತ್ರರಾದ ಅಪೂರ್ವ ಸಾಧಕ, ಸಮಾಜಸೇವಕ, ಸಂಘಟಕ, ಅಮೂಲ್ಯ ಬಂಟ ರತ್ನ ಮಿತ್ರಂಪಾಡಿ ಜಯರಾಮ ರೈ.

95.2K Views 1 Mar 2024

ದುಬೈನಲ್ಲಿ ಇಂಟರ್‌ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿರುವ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ‘ವಿಶ್ವಮಾನ್ಯ ಪ್ರಶಸ್ತಿ 2024’ಕ್ಕೆ ಭಾಜನರಾದ ಅಬುದಾಬಿಯ ಹೆಸರಾಂತ ಉದ್ಯಮಿ ಸಮಾಜಸೇವಕ ಮಿತ್ರಂಪಾಡಿ ಜಯರಾಮ ರೈ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು.
ಇವರ ಅನನ್ಯ ಸಮಾಜಸೇವೆಯನ್ನು ಗುರುತಿಸಿ 2022ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗೌರವಿಸಿದೆ.


ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ಚೆನ್ನಪ್ಪ ರೈ ಹಾಗೂ ದಿಂಬ್ರಿ ಗುತ್ತು ಸರಸ್ವತಿ ಸಿ. ರೈ ಅವರ ಸುಪುತ್ರರಾಗಿರುವ ಮಿತ್ರಂಪಾಡಿ ಜಯರಾಮ ರೈ ಅವರು ಬಿನ್ ಫರ್ದಾನ್ ಗ್ರೂಫ್ ಸಂಸ್ಥೆಯ ಸಿ.ಎಫ್.ಓ. ಆಗಿ ಯಶಸ್ವಿ ಉದ್ಯಮಿಯಾಗಿದ್ದಾರೆ.
1999ರಲ್ಲಿ ಕೊಲ್ಲಿ ರಾಷ್ಟ್ರ ಯು.ಎ.ಇ. ಅಬುದಾಬಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಮಿತ್ರಂಪಾಡಿ ಜಯರಾಮ ರೈ ಅವರು ಆರಂಭದಲ್ಲಿ ಬಿನ್ ಫರ್ದಾನ್ ಗ್ರೂಫಿನ ಫೈನಾನ್ಸ್ ಮೆನೇಜರ್ ಆಗಿ ಬಳಿಕ, ಪದೋನ್ನತಿ ಹೊಂದಿ ಫೈನಾನ್ಸ್ ಎಂಡ್ ಎಡ್ಮಿನ್ ಮೆನೇಜರ್ ಆಗಿ ಕಾರ‍್ಯನಿರ್ವಹಿಸಿದರು.


ಕೊಲ್ಲಿ ರಾಷ್ಟ್ರಕ್ಕೆ ಬರುವುದಕ್ಕೆ ಮುನ್ನ ಅವರು ಬೆಂಗಳೂರಿನ ಯುವ ಬಂಟ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ತುಳುವೆರೆಂಕುಲು ಸಂಘಟನೆ ಹಾಗೂ ಲಯನ್ಸ್ ಕ್ಲಬ್ ಪದಾಧಿಕಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಯು.ಎ.ಇ. ಅಬುದಾಬಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರ ಪ್ರಾಮಾಣಿಕ ಸೇವೆ, ಕಾರ‍್ಯ ದಕ್ಷತೆ ಅವರಿಗೆ ಉನ್ನತ ಸ್ಥಾನಮಾನ ದೊರೆಯಲು ಕಾರಣವಾಯಿತು.


ತನ್ನ ಬಿಡುವಿನ ವೇಳೆಯನ್ನು ಸಮಾಜಸೇವೆ, ಸಾಂಸ್ಕೃತಿಕ, ಕಲಾಸೇವೆ ಸಂಘಟನೆಗಳಿಗೆ ಮುಡಿಪಾಗಿಟ್ಟ ಅವರು ನಿಸ್ವಾರ್ಥ ಸಮಾಜ ಸೇವಕ, ಅಂತರಾಷ್ಟ್ರೀಯ ಸಂಘಟಕರಾಗಿ ಜನಮಾನಸ ಗೆದ್ದಿದ್ದಾರೆ.
ಸಮಾಜಸೇವೆ, ಸಾಂಸ್ಕೃತಿಕ ಸಂಘಟನೆ, ಕಾರ‍್ಯಕ್ರಮ ಸಂಯೋಜನೆ, ಯಕ್ಷಗಾನ, ನಾಟಕ, ಸಂಗೀತ ಕಲೆಗಳಿಗೆ ಉತ್ತೇಜನ ನೀಡುವ ಮೂಲಕ ಪುತ್ತೂರಿನಿಂದ ಅಬುದಾಬಿ ತನಕದ ‘ಸಾಂಸ್ಕೃತಿಕ ಸೇತು’ ಎಂಬಂತೆ ಕಾರ‍್ಯಪ್ರವೃತ್ತರಾಗಿ ತುಳು ಕನ್ನಡಿಗರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.


ಇಂಡಿಯನ್ ಸೋಶಿಯಲ್ ಸೆಂಟರ್ ಟೋಸ್ಟ್ ಮಾಸ್ಟರ್ ಎಂಬ ಸಂಘಟನೆಯನ್ನು ಸ್ಥಾಪಿಸಿ ಸಮಾಜಮುಖಿಯಾಗಿ ಸಾಗಿರುವ ಅವರು ಸಾಂಸ್ಕೃತಿಕ ಸಂಘಟನೆ ಮೂಲಕ ಅಬುದಾಬಿ ಕನ್ನಡಿಗರ ಪ್ರೀತಿ, ವಿಶ್ವಾಸ ಗಳಿಸಿ ಆಪತ್ತಿಗೆ ಸಿಕ್ಕಿಕೊಂಡ ಬಾಂಧವರಿಗೆ ಸಹಾಯ ಮಾಡಿ ಆಪದ್ಬಾಂಧವರೆನಿಸಿಕೊಂಡಿದ್ದಾರೆ.


ಲಾಕ್‌ಡೌನ್ ಸಂದರ್ಭದಲ್ಲಿ ಪುತ್ತೂರಿನ ಜಾತ್ರೆ ಸಮಯದಲ್ಲಿ ದೂರದೂರಿನ ಡೆಕೋರೇಶನ್ ಹಾಗೂ ಪುರ ಶೃಂಗಾರಕ್ಕೆ ಗೊತ್ತು ಮಾಡಿದ ತಂಡವು ಸಂಕಷ್ಟದಲ್ಲಿದ್ದಾಗ ಆ ತಂಡಕ್ಕೆ ತಿಂಗಳುಗಳ ಕಾಲ ದೈನಂದಿನ ಆಹಾರ, ವಸತಿ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದ ಪುತ್ತೂರಿನ ಮುತ್ತು ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಮೆ ಇವರದು.
ಸಾಮಾಜಿಕ ಕಳಕಳಿಯ ಬರಹಗಾರ, ನಾಟಕಕಾರರಾಗಿರುವ ಇವರು ಬರೆದ ಮಂತ್ರಿ ಮಂಡಲ ಮತ್ತು ಅಪ್ಪೆನ ತ್ಯಾಗ ನಾಟಕಗಳು ಜನಮೆಚ್ಚುಗೆ ಗಳಿಸಿವೆ.


ಇವರು ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೈವ, ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ಗೌರವಾಧ್ಯಕ್ಷರಾಗಿ, ಜೀರ್ಣೋದ್ದಾರ ಸಮಿತಿ ಸದಸ್ಯರಾಗಿ ಮಹತ್ತರ ಪಾತ್ರ ವಹಿಸಿದ್ದಾರೆ.
ನೂರಕ್ಕೂ ಅಧಿಕ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ಬಡ ಹೆಣ್ಣು ಮಕ್ಕಳ ಮದುವೆಗೆ ಧನಸಹಾಯವನ್ನು ನೀಡಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಸಾವಿರಕ್ಕೂ ಅಧಿಕ ಬಡ ಕುಟುಂಬಗಳಿಗೆ ಅಕ್ಕಿಯನ್ನು ವಿತರಿಸಿ ಮಾನವೀಯತೆಗೆ ಜೀವ ತುಂಬಿದ್ದಾರೆ.
ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಹಾಗೂ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ನಡೆಸಲ್ಪಡುವ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷಣೆ ವಾಕ್ಯದಲ್ಲಿ ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್ ವ್ಯಾಪ್ತಿಯ 32 ಗ್ರಾಮದಲ್ಲಿ ಪ್ರತಿ ತಿಂಗಳು ನಡೆಯುವ ಸಾಹಿತ್ಯ ಸಂಭ್ರಮ ಕಾರ‍್ಯಕ್ರಮದ ಮಹಾಪೋಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಗ್ರಾಮದ ಸಾಹಿತ್ಯ ಸಂಭ್ರಮದಲ್ಲಿ ಕನ್ನಡದಲ್ಲೂ ಐಎಎಸ್ ಬರೆಯಿರಿ ಅಭಿಯಾನ, ಕವಿಗೋಷ್ಠಿ, ಕಥಾಗೋಷ್ಠಿ, ಸಾಂಸ್ಕೃತಿಕ ಕಾರ‍್ಯಕ್ರಮ ಹಾಗೂ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ನಡೆಯುತ್ತಿದ್ದು ಸುಮಾರು 5 ಸಾವಿರ ಪುಟಾಣಿ ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಗೌರವ ಮತ್ತು 50 ಸಾವಿರಕ್ಕೂ ಅಧಿಕ ಪ್ರೇಕ್ಷಕ ವರ್ಗ ಇದನ್ನು ನೋಡಿ ಆನಂದಿಸಿದ ಗೌರವ ಇವರಿಗೆ ಸಲ್ಲುತ್ತದೆ.


ಈ ರೀತಿಯ ಕಾರ‍್ಯಕ್ರಮವನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಿರುವುದು ನಮ್ಮ ದೇಶದಲ್ಲೇ ಪ್ರಪ್ರಥಮವಾಗಿದೆ.
ಇವರು ಕಳೆದ 25 ವರ್ಷಗಳಿಂದ ಅರಬ್ ರಾಷ್ಟ್ರದಲ್ಲಿದ್ದು ಕನ್ನಡ ಸೇವೆ ಹಾಗೂ ಕನ್ನಡಿಗರ ಪರ ನಿಂತು ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತನು-ಮನ-ಧನದಿಂದ ಸಹಕರಿಸುತ್ತಾ ಬಂದಿದ್ದಾರೆ.
ಡಾ. ಹರ್ಷ ಕುಮಾರ್ ರೈ ಅವರ ನಿರ್ದೇಶನದ, ಪುತ್ತೂರು ಉಮೇಶ್ ನಾಯಕ್ ಅವರ ಸಾಹಿತ್ಯದ ‘ಅಷ್ಟ ಕ್ಷೇತ್ರ ಗಾನ ವೈಭವ’ ಎಂಬ ಕನ್ನಡ ಭಕ್ತಿಗೀತೆಯನ್ನು 8 ರಾಷ್ಟ್ರಗಳಲ್ಲಿ ಬಿಡುಗಡೆಗೊಳಿಸಿದ್ದು, ಇದು ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್ ನಲ್ಲಿ ವಿಶ್ವ ದಾಖಲೆಯಾಗಿರುತ್ತದೆ.
2023ರ ‘ಗಡಿನಾಡ ಸದ್ಭಾವನ ಭೂಷಣ ಪ್ರಶಸ್ತಿ’, ಇಂಟರ್‌ನ್ಯಾಷನಲ್ ಐಕಾನ್ ಪ್ರಶಸ್ತಿ, ಟೋಸ್ಟ್ ಮಾಸ್ಟರ್ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ಡಿಟಿಎಂ ಮತ್ತು ಟ್ರಿಪಲ್ ಕ್ರೌನ್ ಪ್ರಶಸ್ತಿಗೂ ಪಾತ್ರರಾಗಿರುತ್ತಾರೆ.
ವಿದೇಶದಲ್ಲಿದ್ದರೂ ಸದಾ ಭಾರತ ದೇಶ, ಕನ್ನಡ ನಾಡಿನ ಬಗ್ಗೆ, ತುಳುನಾಡಿನ ಬಗ್ಗೆ ಅತೀವ ಪ್ರೀತಿಯಿರಿಸಿ ಅಭಿಮಾನದಿಂದ ನಮ್ಮ ಸಂಸ್ಕೃತಿ, ನುಡಿ, ನೆಲ, ಜಲದ ಬಗ್ಗೆ ಗೌರವ ತೋರುತ್ತಾ ಬಂದಿರುವ ಬಂಟ ಸಮಾಜದ ಹೆಮ್ಮೆಯ ಸಮಾಜಸೇವಕ, ಸಾಧಕ, ಬಹುಮುಖ ಪ್ರತಿಭೆ ಮಿತ್ರಂಪಾಡಿ ಜಯರಾಮ ರೈಯವರು ತವರಿನಲ್ಲಿ ಕೃಷಿ ಪ್ರಧಾನ ಕುಟುಂಬದ ಹಿನ್ನಲೆ ಹೊಂದಿದವರು.

ಯು.ಎ.ಇ.ಯಲ್ಲಿ ಭಾರತದ ಆದಿವಾಸಿ ಜನಾಂಗದವರನ್ನು ಗುರುತಿಸಿ ಅವರ ಅವಶ್ಯಕತೆಗಳಿಗೆ ಸ್ಪಂದಿಸಿರುವುದು ಮಾತ್ರವಲ್ಲದೆ,ಅವರ ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರೋತ್ಸಾಹಿಸುವ ಕಾರ‍್ಯಕ್ರಮಗಳನ್ನು ಸಂಘಟಿಸುತ್ತಾ ಆ ಜನಾಂಗದ ಗೌರವಾಭಿಮಾನಗಳಿಗೆ ಪಾತ್ರರಾಗಿದ್ದಾರೆ.
ನಮ್ಮ ರಾಜ್ಯದ ಅಲ್ಪಸಂಖ್ಯಾತರ ಸಂಸ್ಕೃತಿ, ಸಂಪ್ರದಾಯಗಳನ್ನು ಅಧ್ಯಯನ ಮಾಡುವ ಮೂಲಕ ಅದರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿತ್ವ ಇವರದು.
ಬ್ಯಾರಿ, ಕೊಡವ, ಕುಡುಬಿ ಭಾಷೆಗಳ ಪ್ರಚಾರ ಅಭಿವೃದ್ಧಿಗೆ ಕೂಡಾ ಶ್ರಮಿಸಿದ್ದಾರೆ.


ಧರ್ಮಪತ್ನಿ ಶ್ರೀಮತಿ ಆಶಾ ಜೆ. ರೈ. ಪುತ್ರ ತಾರನಾಥ ಜೆ. ರೈ, ಸುಪುತ್ರಿ ಪ್ರಾಂಜಲಾ ರೈ ಅವರೊಂದಿಗೆ ಸಮಾಜಪರ ಸೇವಾ ಕಾರ‍್ಯಗಳಲ್ಲಿ ತೊಡಗಿಸಿಕೊಂಡು ತನ್ನ ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ಮೀಸಲಿರಿಸಿದ ಮಿತ್ರಂಪಾಡಿ ಜಯರಾಮ ರೈ ಅವರು ಉತ್ತಮ ಮಾತುಗಾರರಾಗಿದ್ದು, ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಅಮೂಲ್ಯ ‘ಬಂಟ ರತ್ನ’ವಾಗಿದ್ದಾರೆ.
ಅವರಿಗೆ MPMLA’s ನ್ಯೂಸ್ ಶುಭ ಹಾರೈಸುತ್ತದೆ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top