ಆಳ್ವಾಸ್ ವಿರಾಸತ್ ನಲ್ಲಿ ನೃತ್ಯ ವರ್ಷಧಾರೆ, ರಾಮ- ಕೃಷ್ಣರ ನೃತ್ಯಾರಾಧನೆ

103.7K Views 14 Dec 2024

ವಿದ್ಯಾಗಿರಿ (ಮೂಡುಬಿದಿರೆ): ಆಗಸದಲ್ಲಿ ಆಗಾಗ್ಗೆ ಮೋಡ ಕವಿದ ವಾತಾವರಣ ಕಂಡರೆ, ಇತ್ತ ‘ಆಳ್ವಾಸ್ ವಿರಾಸತ್’ನ ವೇದಿಕೆಯಲ್ಲಿ ಕಥಕ್ ನೃತ್ಯ ವರ್ಷಧಾರೆ. ಪ್ರೇಕ್ಷಕರೆಲ್ಲ ನೃತ್ಯ ರೂಪಕದ ಸಿಂಚನದಲ್ಲಿ ಮಿಂದೆದ್ದರು.
ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮAದಿರದಲ್ಲಿ 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಮೂರನೇ ದಿನದ ಗಾಯನದ ಬಳಿಕ ಮೂಡಿ ಬಂದ ಸಾಂಸ್ಕೃತಿಕ ವೈಭವ.
ಆಶಿಂಬAಧು ಚಟರ್ಜಿ ನಿರ್ದೇಶನದಲ್ಲಿ ಪ್ರಸ್ತುಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ಕಥಕ್ ‘ವರ್ಷಧಾರೆ’ಯನ್ನೇ ಸುರಿಸಿತು. ತುಂತುರು ಮಳೆಯನ್ನು ಸಂಭ್ರಮಿಸುವ ಋತುವಿನ ದರ್ಶನ ನೀಡಿತು.


ಉತ್ತರದ ಕಥಕ್ ಬಳಿಕ ನೃತ್ಯ ಲೋಕವು ದ್ವೀಪ ರಾಷ್ಟ್ರ ಶ್ರೀಲಂಕಾ ಸಂಸ್ಕೃತಿಗೆ ಹೆಜ್ಜೆ ಇಟ್ಟಿತು.
ಅಖಿಲ ಪರಿಮಳನ್ ನಿರ್ದೇಶನದ ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ‘ಭೂಮಿ’ ದ್ವೀಪ ದೇಶದ ಚಮತ್ಕಾರದ ಶಕ್ತಿಯೆಡೆಗೆ ಕೊಂಡೊಯ್ಯಿತು. ತಿರುಗುವ ಚಕ್ರ, ಹಾರುವ ಬೆಂಕಿ ಉಂಡೆ ಇತ್ಯಾದಿಗಳು ಸೊಬಗೇರಿಸಿದವು.
ವಿಷ್ಣು, ಸಮನ್, ಕಾತರಂಗA, ಪಟ್ಟಿನಿ, ಕಾಳಿ ಮತ್ತು ಸುನಿಯಂ ಶ್ರೀಲಂಕಾದ ಪ್ರಮುಖ ದೇವ-ದೈವಗಳಾಗಿವೆ. ಅವರ ಆರಾಧನಾ ವಿಧಾನವಾಗಿ ನೃತ್ಯ ಬೆಳೆದು ಬಂದಿದೆ. ಶ್ರೀಲಂಕಾದ ಪ್ರಮುಖ ಪಟ್ಟಣವಾಗಿದ್ದ ‘ಕ್ಯಾಂಡಿ’ಯಲ್ಲಿ ಬೆಳೆದು ಬಂದ ನೃತ್ಯ ಪ್ರಕಾರವೇ ಶ್ರೀಲಂಕಾದ ನೃತ್ಯಪ್ರಕಾರವಾಗಿ ರೂಪುಗೊಂಡಿದೆ.


ಶ್ರೀಲಂಕಾ ಭೂಮಿ ನೃತ್ಯ ರೂಪಕವು ಉದರಾಟ ನಾಟ್ಯ , ಪಹದಾ ರತ ನಾಟ್ಯ , ಸಬರಗಮುವಂ ನಾಟ್ಯಗಳನ್ನು ಒಳಗೊಂಡಿದೆ.
ಬಳಿಕ ಯುವಜನತೆಯ ಮನಸೂರೆಗೊಳಿಸಿದ ಸೃಜನಶೀಲ ರೂಪಕ ನೃತ್ಯ. ‘ಘೂಮರ್ ಘೂಮರ್ ಘೂಮೇ…’ ಹಾಗೂ ‘ಚುಪಪೇ ಘೋರಿ ಚಿಂಗಾರಿ’ ಹಾಡಿಗೆ ಕುಣಿತದ ಆರ್ಭಟ. ಗುಜರಾತಿ, ರಾಜಸ್ತಾನಿ ಸೇರಿದಂತೆ ಉತ್ತರದ ಕುಣಿತಗಳ ಮಿಶ್ರಣದ ಜೊತೆ ಮಣಿಪುರದ ಕಸರತ್ತು ಸಾಥ್ ನೀಡಿತು.
ಪಾಶ್ಚಾತ್ಯ, ಭಾರತೀಯ, ಕಸರತ್ತುಗಳ ಮಿಶ್ರಣದಂತೆ ಸಂಕಲಿಸಿದ ಸೃಜನಾತ್ಮಕ ನೃತ್ಯ ಹೊಸ ಲೋಕಕ್ಕೆ ಕೊಂಡೊಯ್ಯಿತು.


ಆಳ್ವಾಸ್ ಸಾಂಸ್ಕೃತಿಕ ತಂಡದ ಕಲಾ ವೈಭವದ ಅನಂತರ ಉಡುಪಿಯ ಕೊಡವೂರು ನೃತ್ಯ ನಿಕೇತನ ತಂಡವು ‘ಕಾಂತಾರ’ ಖ್ಯಾತಿಯ ಮಾನಸಿ ಸುಧೀರ್ ನೇತೃತ್ವದಲ್ಲಿ ‘ಪುಷ್ಪಾಂಜಲಿ’ ನೃತ್ಯ ಪ್ರಸ್ತುತ ಪಡಿಸಿತು.
ವಿದ್ವಾನ್ ಸುಧೀರ್ ರಾವ್ ಹಾಗೂ ಮಾನಸಿ ಸುಧೀರ್ ಸಂಯೋಜನೆಯಲ್ಲಿ ನೃತ್ಯ ಮೂಡಿಬಂತು. ಬಳಿಕ ಸುರಭಿ ಕೃಷ್ಣನಾಗಿ ‘ಕಾಳಿಂಗ ಮರ್ಧನ’ ಪ್ರಸ್ತುತ ಪಡಿಸಿದರು.
ಬೆಂಗಳೂರಿನ ಚಿಗುರು ನೃತ್ಯಾಲಯ ಸರಿತಾ ಕೊಠಾರಿ ನಿರ್ದೇಶನದಲ್ಲಿ ‘ಗಣಪತಿ ತಾಳಂ’ ಹಾಗೂ ‘ ಅಭಂಗ’ಭರತನಾಟ್ಯ ರೂಪಕ ಪ್ರಸ್ತುತ ಪಡಿಸಿದರು. ಮನಮೋಹನ ರಾಧಾರಮಣನ ಆರಾಧನೆ ನಡೆಯಿತು. ನಾಟ್ಯ ಪಾಂಡುರAಗ ನರ್ತನ ಮನಸೆಳೆಯಿತು.
ಮಂಗಳೂರಿನ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ವಿದ್ವಾನ್ ಶಾರದಾ ಮಣಿಶೇಖರ್ ಹಾಗೂ ಶ್ರೀಲತಾ ನಾಗರಾಜ್ ನಿರ್ದೇಶನದಲ್ಲಿ ‘ ಶ್ರೀ ರಾಮ ತೋಡಯ್ಯ ಮಂಗಳA’ ಪ್ರಸ್ತುತ ಪಡಿಸಿದರು.
ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಪ್ರವಿತಾ ಅಶೋಕ್ ನಿರ್ದೇಶನದಲ್ಲಿ ರಾಧಾಕೃಷ್ಣ, ಗೀತೋಪದೇಶ ಬಿಂಬಿಸುವ ‘ಗೋಕುಲ ವೃಂದಾವನ’ ಪ್ರಸ್ತುತ ಪಡಿಸಿದರು. ‘ಗೋಕುಲ ಬೃಂದಾವನ ಸುಂದರA ಗೋಪಾಲಕೃಷ್ಣಂ ಭಜೆ’ ಸ್ತುತಿಗೆ ನೃತ್ಯ ಮಾಡಿದರು.
ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ವಿದ್ಯಾಶ್ರೀ ರಾಧಾಕೃಷ್ಣ ನಿರ್ದೇಶನದಲ್ಲಿ ‘ ಭಜನ್ ನಾಟ್ಯ ಸೌರಭ’ ಪ್ರಸ್ತುತ ಪಡಿಸಿದರು. ರಾಮ – ಕೃಷ್ಣ ರ ಭಜನೆ ‘ಜಯ ಜಯ ರಾಮ ಹರೇ ಕೃಷ್ಣ ಹರೇ…’ ಮೊಳಗಿತು.
ನಿತೀಶ್ ಮಾರ್ನಾಡು ಕಾರ್ಯಕ್ರಮ ನಿರೂಫಿಸಿದರು.
ಇದಕ್ಕೂ ಮೊದಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ನೇತೃತ್ವದಲ್ಲಿ ಅತಿಥಿಗಳಾದ ಮಂಗಳೂರು ಭಾರತ್ ಇನ್‌ಫ್ರಾಟೆಕ್‌ನ ಮುಸ್ತಾಫ ಎಸ್.ಎಂ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಉದ್ಯಮಿ ಶ್ರೀಪತಿ ಭಟ್ ದೀಪ ಪ್ರಜ್ವಲನ ಮಾಡಿದರು.
ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ, ಮೂಡುಬಿದಿರೆ ಜೈನಮಠದ ಭಟ್ಟಾರಕ ಪಂಡಿತಾಚಾರ್ಯವರ್ಯ ಉಪಸ್ಥಿತರಿದ್ದರು.

Read More News

ಆರೋಗ್ಯ ಸಚಿವರ ತವರೂರು ಮಂಗಳೂರಿನ ವೆನ್ ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್. ರೇಬಿಸ್ ತಡೆಗಟ್ಟುವ ಈ ಇಂಜೆಕ್ಷನ್ ಚುಚ್ಚಿದರೆ ಅಂಥ ಮಕ್ಕಳು 24 ಗಂಟೆ ಐಸಿಯುನಲ್ಲಿ ಇರಬೇಕು. ತುಂಬಾ ರಿಸ್ಕ್. ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಆರೋಗ್ಯ ಸಚಿವರೇ ಉತ್ತರ ನೀಡಬೇಕು. ಖಾದರ್ ಸಾಹೇಬ್ರೆ, ಬಡ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೇಕೆ ಇಂಥ ಕಳಪೆ ಇಂಜೆಕ್ಷನ್?

Scroll to Top