ಮಂಗಳೂರು: ಸಹಕಾರ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ರಾಜ್ಯ ಸಹಕಾರ ರತ್ನ ಪುರಸ್ಕಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಮಾಜಿ ನಿರ್ದೇಶಕ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ಪುತ್ತೂರು ಮೂಲದ ಹಿರಿಯ ಸಮಾಜ ಸೇವಕ ಡಾ.ಅಗರಿ ನವೀನ್ ಭಂಡಾರಿರವರು ಆಯ್ಕೆಯಾಗಿದ್ದಾರೆ.
ಡಾ.ಅಗರಿ ನವೀನ್ ಭಂಡಾರಿಯವರು ಬೆಂಗಳೂರು ನಗರದ ಬೊಮ್ಮನಹಳ್ಳಿಯಲ್ಲಿ 111 ಎಕ್ರೆ ಪ್ರದೇಶದಲ್ಲಿ ಸುಸಜ್ಜಿತವಾದ ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇಲ್ಲಿ 535 ಅಪಾರ್ಟ್‌ಮೆಂಟ್‌ನ್ನು ಇವರ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಇದು ಬೆಂಗಳೂರಿನಲ್ಲೇ ಮಾದರಿ ಬಡಾವಣೆಯಾಗಿ ಬೆಳೆದಿದೆ. ಇದರ ಬೆಳವಣಿಗೆ, ಅಭಿವೃದ್ಧಿ ಹಿಂದೆ ಡಾ.ಅಗರಿ ನವೀನ್ ಭಂಡಾರಿಯವರ ಪರಿಶ್ರಮವಿದೆ. ಡಾ.ಅಗರಿ ನವೀನ್ ಭಂಡಾರಿಯವರು ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಸಂಘದಲ್ಲಿ ಕಳೆದ 19 ವರ್ಷಗಳಿಂದ ಅಧ್ಯಕ್ಷರಾಗಿ, ಸಹಕಾರ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿ, ಮಾದರಿಯಾಗಿ ಬೆಳೆಸಿದ್ದಾರೆ. ಸಹಕಾರ ಕ್ಷೇತ್ರಕ್ಕೆ ತನ್ನದೇ ಅದ ಕೊಡುಗೆಯನ್ನು ನೀಡಿರುವ ಅವರು ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ಕ್ಷೇಮಾಭಿವೃದ್ಧಿ ಸಂಘದ ಸ್ಥಾಪಕಾಧ್ಯಕ್ಷರಾಗಿರುತ್ತಾರೆ. ಪ್ರಸ್ತುತ ಸುಂದರರಾಮ್ ಶೆಟ್ಟಿ ನಗರ ಕ್ಲಬ್ ಸಮಿತಿಯ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಬೆಂಗಳೂರು ಬೊಮ್ಮನ ಹಳ್ಳಿಯಲ್ಲಿರುವ ಮೂಲ್ಕಿ ಸುಂದರರಾಮ್ ಶೆಟ್ಟಿ ನಗರದ ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಲೇಟೌಟ್‌ನಲ್ಲಿ ಇರುವ ಶ್ರೀ ಆಯ್ಯಪ್ಪ ದೇವಾಲಯದಲ್ಲಿ ಶಿವನ ಗುಡಿ ಸ್ಥಾಪನೆಯ ಕಾರ್ಯದಲ್ಲೂ ಇವರು ಬಹಳಷ್ಟು ಕೊಡುಗೆಯನ್ನು ನೀಡಿರುವ ಇವರು ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಜನ ಮನ್ನಣೆ ಗಳಿಸಿದ್ದಾರೆ.
ನ.17ರಂದು ಪ್ರಶಸ್ತಿ ಸ್ವೀಕಾರ:
ಡಾ.ಅಗರಿ ನವೀನ್ ಭಂಡಾರಿಯವರು ನ.17ರಂದು ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಂದ ಸಹಕಾರ ರತ್ನ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ. ಅವರಿಗೆ Mpmla’s ನ್ಯೂಸ್ ಶುಭ ಹಾರೈಸುತ್ತದೆ

























































































































































































