ಮಸ್ಕತ್ ನಲ್ಲಿ ತುಳುನಾಡನ್ನು ಮರು ಸೃಷ್ಟಿಸಿದ ಬಾಸ್

100.4K Views 29 Oct 2024

ಮಸ್ಕತ್: ಬಂಟ್ಸ್ ಓಮಾನ್ ಸಾಂಸ್ಕೃತಿಕ ಸಂಘದ (BOSS)ನೆರಳಲ್ಲಿ “ಸಾಂಸ್ಕೃತಿಕ ಸಮ್ಮಿಲನ ” ಕೆಸರು ಗದ್ದೆ ಗೋಲ್ಡ್ ಫೀಲ್ಡ್ (KGF) – ಗ್ರಾಮೀಣ ಕ್ರಿಡೋತ್ಸವವು ಕಳೆದ ಶುಕ್ರವಾರ ಮಸ್ಕತ್ ನ “ಬರ್ಕ ಗುತ್ತಿ ” ನ ಅಗೋಳಿ ಮಂಜಣ್ಣ ಅಂಗಣದಲ್ಲಿ ಜರಗಿತು. ತುಳುನಾಡಿನ ಬಂಟರ ಸಂಸ್ಕೃತಿ,ನಂಬಿಕೆ,ಆಚರಣೆಗಳ, ನಡವಳಿಕೆಗಳ ನೆನಪಿನ ಮೆಲುಕು ಹಾಕಲು “ತುಳುನಾಡಿನ ಪ್ರತಿಕೃತಿ ” ಸೃಷ್ಟಿ ಸಲಾಗಿತ್ತು.
ಮಸ್ಕತ್ ಹೊರವಲಯದಲ್ಲಿ ರುವ ಉದ್ಯಮಿ ಅಶ್ವಿನಿ ದರಂಸಿ ಭಾಯ್ ಅವರ ಫಾರ್ಮ್ ಹೌಸ್ ನಲ್ಲಿ ದಿವಾಕರ ಶೆಟ್ಟಿ ಮಲ್ಲಾರ್ ಅವರ ಪರಿಕಲ್ಪನೆಯಲ್ಲಿ “ಬರ್ಕ ಗುತ್ತು ಮನೆ ” , ಸಾವಿರ ಮಂದಿ ಕುಳಿತು ಕೊಳ್ಳ ಬಹುದಾದ “ಬಂಟರ ಭವನ” ನಿರ್ಮಿಸಲಾಗಿತ್ತು.
ಗುತ್ತಿನ ಪಡಸಾಲೆ, ರಾಟೆ ಅಳವಡಿಸಿದ ಭಾವಿ, ಸಿರಿ ತುಪ್ಪೆ -ಭತ್ತದ ಕಣಜ, ಪಡಿ ಮಂಚ, ಭತ್ತ ಕುಟ್ಟುವ “ಬಾರ ಕಲ” ದಲ್ಲಿರಿಸಿದ ಒನಕೆಗಳು, ಮಡಲು ತಟ್ಟಿಯ ಹಳ್ಳಿ ಯ ಬಚ್ಚಲು ಮನೆ,ಉತ್ತು ಹದಗೊಳಿಸಿದ ಸುಮಾರು 60 ಮೀಟರ್ ಉದ್ದ ದ ಕೆಸರು ನೀರು ತುಂಬಿದ ವಿಶಾಲವಾದ ಕಂಬಳ ಗದ್ದೆ, ಸೆಗಣಿ ಸಾರಿಸಿದ ವಿಸ್ತರವಾದ ಅಂಗಳ, ತೆಂಗಿನ ಸೋಗೆ ಹೆಣೆದು ಮಾಡಿದ ವಿಶಾಲವಾದ ಚಪ್ಪರ(ಶಾಮಿಯಾನ ದ ಬಳಕೆ ಮಾಡಲಿಲ್ಲ ), ಏಕ ಕಾಲದಲ್ಲಿ 200 ಮಂದಿ ಕುಳಿತು ಊಟ ಮಾಡುವ ವ್ಯವಸ್ಥೆಯ ಭೋಜನ ಶಾಲೆ, ಖರ್ಜೂರದ ಮರಕ್ಕೆ ಎಳನೀರು ಗೊಂಚಲುಗಳನ್ನು ಕಸಿಕಟ್ಟಿ ಅಳವಡಿಸಿದ ಶೇಂದಿ ಮೂರ್ತೆಯ ಮಡಿಕೆ, ಸಂತೆಯ ಗದ್ದೆ ಯಲ್ಲಿ ಎಲೆ ಮಡಲು ಕಟ್ಟಿ ನಿರ್ಮಿಸಿದ ಗೂಡಂಗಡಿಗಳು…. ಸಮ್ಮಿಲನ ಕ್ಕಾಗಿ ಅಣಿಗೊಳಿಸ ಲಾಗಿತ್ತು.


ಕೊಡೆತ್ತೂರಿನಿಂದ ತರಿಸಿದ್ದ ಭತ್ತ ದ ತೆನೆಗಳನ್ನು ಗುತ್ತಿನ ಯಜಮಾನ ಶಶಿಧರ ಶೆಟ್ಟಿ ಮಲ್ಲಾರ್ ಅವರು ತೊಳಸಿ ಕಟ್ಟೆ ಯ ಬಳಿಯಿಂದ ಹೊತ್ತುಕೊಂಡು ಪರಿವಾರದೊಂದಿಗೆ ಗುತ್ತಿನ ಚಾವಡಿ ಪ್ರವೇಶಿಸಿದರು. ದೀಪ ಬೆಳಗಿಸಿ,ಪ್ರಾರ್ಥನೆ ಮಾಡಿ ಕೊರಲ್ ಪರ್ಬ (ಕದಿರು ಹಬ್ಬ) ಆಚರಿಸಲಾಯಿತು.
ಬೆಳಗ್ಗಿನ ಉಪಹಾರ ಕ್ಕೆ ತುಳುನಾಡಿನ ಸಾಂಪ್ರದಾಯಿಕ ಪದೆಂಗಿ , ಸಜ್ಜಿಗೆ ಬಜಿಲ್, ಮೂಡೆ ಚಟ್ನಿ, ಶೀರ… ಮತ್ತು ಗೂಡoಗಡಿಗಳಲ್ಲಿ ನಿರಂತರ ವಾಗಿ ಎಳನೀರು, ಬಚ್ಚಗಾoಯಿ, ಕಬ್ಬಿನ ರಸ, ಮಜ್ಜಿಗೆ, ಪಾನಕ, ಚರುoಬುರಿ, ಬಾಳೆ ಹಣ್ಣು,ಐಸ್ ಕ್ಯಾಂಡಿ,ಸಬಿ ತಿಂಡಿ ಗಳ ವಿತರಣೆ ಮಾಡಲಾಗಿತ್ತು.
ಸಂಜೆ ಮೊಟ್ಟೆ ಆಮ್ಲೆಟ್, ಪೋಡಿ, ಗೋಳಿಬಜೆ ಯ ವ್ಯವಸ್ಥೆ ಇತ್ತು.
ಬಂಟ ಪರಿವಾರದವರೇ ಸಿದ್ದ ಪಡಿಸಿದ ಶುಚಿ ರುಚಿಯಾದ ತುಳುನಾಡಿನ ಕೋಳಿ ತಮ್ಮನ ದ ಊಟವನ್ನು ತುದಿ ಬಾಳೆಎಲೆ ಯಲ್ಲಿ ಬಡಿಸಲಾಯಿತು.
ಮಸ್ಕತ್ ನ ಬರ್ಕಗುತ್ತು ಕಂಬಳ:
ಶಿಬಿರಗಳಲ್ಲಿ ಕೋಣ ಗಳನ್ನು ಸಜ್ಜು ಗೊಳಿಸಿ ಕೊಂಬು, ಡೋಲು ವಾದ್ಯ, ಕೀಲು ಕುದುರೆ, ಗೊಂಬೆ ಕುಣಿತ ದೊಂದಿಗೆ ಬರ್ಕ ಗುತ್ತಿನ ಅಂಗಳಕ್ಕೆ ಉತ್ಸಾಹ ದಿಂದ ಆಗಮಿಸುವ ನೊಗ ಕಟ್ಟಿದ ಓಟದ ಕೋಣಗಳ ಅಬ್ಬರ,ಯಜಮಾನ ಪರಿವಾರ ವನ್ನು ಬರ್ಕ ಗುತ್ತಿನ ಏಳು ಪ್ರಮುಖರು ಜೋಡು ಬೊಂಡ ಕೊಟ್ಟು ಸ್ವಾಗತ ನೀಡಿ ಬರಮಾಡಿ ಕೊಳ್ಳುವ,
ಕೋಣಗಳು ಸಾಲಾಗಿ ಗದ್ದೆಗೆ ಇಳಿಯುವ, ಗಂತಿನಲ್ಲಿ ಪುoಡಾಟ ಮಾಡುವ, ಕೋಣಗಳನ್ನು ಓಡಿಸುವ ದೃಶ್ಯ ಗಳು ರಂಜನೀಯವಾಗಿತ್ತು.
ಕೋಣಗಳ ಪ್ರತಿಕೃತಿಗಳನ್ನು ರಚಿಸಿ, ಅದರೊಳಗೆ ಸೇರಿ ನಿಜ ಕೋಣಗಳ ಹಾವಭಾವ ಗಳನ್ನು ಪ್ರದರ್ಶನ ಮಾಡುವಾಗ ಸಂಪ್ರದಾಯಿಕ ಕಂಬಳದ ಉಡುಗೆ ಉಟ್ಟು, ಮುಂಡಾಸು ಕಟ್ಟಿ, ಬೆತ್ತ ಹಿಡಿದು ಅಣಕು ಕಂಬಳ ದೃಶ್ಯ ನಿರ್ಮಿಸಿ ಸಂಭ್ರಮಿಸುವ ಬಳಗದ ಸದಸ್ಯರ ಉತ್ಸಾಹವು ಮಸ್ಕತ್ ನಲ್ಲಿ ತುಳುನಾಡಿನ ಕಂಬಳದ ಮರು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಯಿತು.

  1. ಕಾಪು ಮಲ್ಲಾರ್ ಸಹೋದರರ ಮಾಲಕತ್ವದ, ಕಿನ್ನಿಗೋಳಿ ಮುಕ್ಕಮನೆಯ ಚೆನ್ನೆ ಮತ್ತು ಪಾಂಡು ಕೋಣಗಳು.
  2. ಗೋಬ್ರ ಗುತ್ತು ಸುರೇಂದ್ರ ಶೆಟ್ಟಿ ಮತ್ತು ರುವಿ ಗುತ್ತು ಜಯರಾಜ್ ಶೆಟ್ಟಿ ಯವರ ಚಾಂಪಿಯನ್ ದೋಣಿ ಮತ್ತು ರಾಕೆಟ್ ಬೊಲ್ಲೇ ಕೋಣಗಳು.
  3. ಸೋಹರ್ ಗುತ್ತಿನವರ ಬರ್ಗಿ ಮತ್ತು ಲಕ್ಕಿ ಕೋಣಗಳು.
  4. ಮಸ್ಕತ್ ಗುತ್ತು ಕಿಶನ್ ಶೆಟ್ಟಿ ಕಿನ್ನಿಗೋಳಿಯವರ ಕಾಲೆ ಮತ್ತು ದೂಜೆ ಕೋಣಗಳು
  5. ಅಭಿಮನ್ಯು ಗೆಳೆಯರ ಬಳಗ ಮಸ್ಕತ್ ರವರ ಕರಿಯೆ ಮತ್ತು ತಾಟೆ ಕೋಣಗಳು
    ಒಟ್ಟು ಐದು ಜೊತೆ ಕೋಣಗಳು ಭಾಗವಹಿಸಿದ್ದವು.
    ಗದ್ದೆ ಹುಣಿಯಲ್ಲಿ ಐಸಿರದ ಜೋಕುಲು (ಚಿಯರ್ ಗರ್ಲ್ಸ್ ) ಹುಲ್ಲು ಸೂಡಿ ಹಿಡಿದು ನಲಿದು ಹುರಿದುಂಬಿಸಿದರು.
    ಕೆಸರು ಗದ್ದೆಯಲ್ಲಿ ಗ್ರಾಮೀಣ ಕ್ರೀಡೋತ್ಸವ*
    ಬಂಗಾರದ ನರ್ತೆ ಹೆಕ್ಕುವ ನಿಧಿ ಶೋಧ,ಹಗ್ಗ ಜಗ್ಗಾಟ, ಕೈಚೆಂಡು, ಮೊಸರು ಕುಡಿಕೆ ಗೋಪುರ ರಚನೆ, ಬೊಂಡ ಗುಂಡು ಎಸತ, ಕೆಸರು ಗದ್ದೆ ಓಟ -ಮಕ್ಕಳಾಟ ದಲ್ಲಿ ನೂರಾರು ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಪಾಲ್ಗೊಂಡು ಸಂಭ್ರಮಿಸಿದರು.ಬಾಳ್ ಕಟ್ಟದೆ, ಜೂಜು ಇಲ್ಲದ ಕೋಳಿ ಅಂಕದಲ್ಲಿ ಹತ್ತಾರು ಕಟ್ಟದ ಹುಂಜಗಳ ಕೋಳಿ ಕಾಳಗ ನಡೆಸಲಾಯಿತು.
    ಕೆಸರು ಗದ್ದೆಯಲ್ಲಿ ಜಾನಪದ ಕುಣಿತ, ಗುತ್ತಿನ ಅಂಗಳದಲ್ಲಿ ಕಂಗಿಲು ಕುಣಿತ, ನೃತ್ಯ ಭಜನೆ ನಡೆಯಿತು. ಗೂಡು ದೀಪ ಸ್ಪರ್ಧೆ ಯಲ್ಲಿ ಸಾಂಪ್ರದಾಯಕ ಹಾಗೂ ಆಧುನಿಕ ಗೂಡು ದೀಪ ಗಳು ಇದ್ದವು. ರಂಗೋಲಿ, ಮಡಲು ಹೆಣೆಯುವ, ಭತ್ತ ಕುಟ್ಟುವ ಸ್ಪರ್ಧೆಗಳಲ್ಲಿ ಯೂ ತುರುಸಿನ ಸ್ಪರ್ಧೆ ಇತ್ತು.
    ಕದ್ರಿ ನವನೀತ ಶೆಟ್ಟಿ ಅವರು ವಿಶೇಷ ಅತಿಥಿಯಾಗಿ ಆಗಮಿಸಿ ನಿರಂತರ 16ಗಂಟೆಗಳ ಕಾಲ ಕಾರ್ಯಕ್ರಮ ನಿರ್ವಹಣೆ ಮಾಡಿದರು.
    ಸರೋಜ ಶಶಿಧರ ಶೆಟ್ಟಿ ಮಲ್ಲಾರ್, ಸುಧೀರಾ ದಿವಾಕರ್ ಶೆಟ್ಟಿ ಮಲ್ಲಾರ್,ಶೈನಾ ಗಣೇಶ್ ಶೆಟ್ಟಿ,ವಾಣಿಶ್ರೀ ನಾಗೇಶ್ ಶೆಟ್ಟಿ,ಶ್ರೇಯ ಮನೋಜ್ ಜಯರಾಮ್ ಶೆಟ್ಟಿ,ಅನುಷಾ ಶಿಶಿರ್ ರೈ,ಸುರಕ್ಷಾ ಹರ್ಷಿತ್ ರೈ ದಂಪತಿಗಳ ತಂಡವು ಸಾವಿರಾರು ಬಂಟರನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿದ ಈ ಚಾರಿತ್ರಿಕ ಸಮ್ಮೇಳನವನ್ನು ಸಂಘಟಿಸಿತು.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top