ಮಂಗಳೂರು: ಸಾಹಿತಿ ನಳಿನಾಕ್ಷಿ ಉದಯರಾಜ್ ಅವರ ‘ಬದುಕಿನ ಸತ್ಯಗಳು’ ಸಮಕಾಲೀನ ಚಿಂತನೆಗಳ ಸಂಕಲನ ಮತ್ತು ‘ಸ್ವಾತಿಮುತ್ತು ’ಚುಟುಕು ಸಂಕಲನ ಶನಿವಾರ ನಗರದ ಮಹಿಳಾ ಸಭಾದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು.
ಕರಾವಳಿ ಲೇಖಕಿಯರ – ವಾಚಕೀಯರ ಸಂಘ ಹಾಗೂ ಸುಶಾಂತ ಪ್ರಕಾಶನ ವಸಂತಪುರ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ ಮಾತನಾಡಿ ‘ಲೇಖಕಿ ನಳಿನಾಕ್ಷಿ ಉದಯರಾಜ್ ಅವರು ಎರಡೂ ಕೃತಿಗಳು ಬದುಕಿನ ಸತ್ಯಗಳೊಂದಿಗೆ ಸಾರ್ವಕಾಲಿಕ ಸತ್ಯಗಳನ್ನು ಅನಾವರಣಗೊಳಿಸಿವೆ. ಅಂಕಣ ಬರಹಗಳನ್ನು ಈ ರೀತಿಯಾಗಿ ಕೃತಿ ರೂಪದಲ್ಲಿ ಕಟ್ಟಿಕೊಟ್ಟಾಗ ಅದು ಎಲ್ಲರಿಗೂ ಓದುವ ಆಸಕ್ತಿಯನ್ನು ಮೂಡಿಸುವುದರೊಂದಿಗೆ ಜೀವನಾನುಭವಗಳನ್ನು ನೀಡುವ ಸಂದೇಶಗಳಾಗಿ ಜನಸಾಮಾನ್ಯರಿಗೆ ತಲುಪಲು ಸಾಧ್ಯ ಎಂದರು.
ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನಳಿನಾಕ್ಷಿ ಉದಯರಾಜ್ ಅವರ ‘ಬದುಕಿನ ಸತ್ಯಗಳು’ ಕೃತಿಯನ್ನು ಹಿರಿಯ ಲೇಖಕಿ ಬಿ.ಎಂ ರೋಹಿಣಿ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನ
ವನ್ನು ಹಿರಿಯ ಲೇಖಕ ಸದಾನಂದ ನಾರಾವಿ ಅನಾವರಣಗೊಳಿಸಿದರು. ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ. ಸುಧಾರಾಣಿ ಮತ್ತು ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕೃತಿಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಸೈನ್ಯಾಧಿಕಾರಿ ಹಾಗೂ ಕೆನರಾ ಬ್ಯಾಂಕಿನ ಪ್ರಬಂಧಕ ಸುಕುಮಾರ್ ಕುಂಬಳೆ , ಸುಶಾಂತ ಪ್ರಕಾಶನದ ಪ್ರಕಾಶಕ ಹಾಗೂ ಇನ್ಫೋಸಿಸ್ ಸಂಸ್ಥೆಯಲ್ಲಿ ಸಂಶೋಧಕರಾಗಿರುವ ಸುಶಾಂತ್ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಳಿನಾಕ್ಷಿ ಉದಯರಾಜ್ ಸ್ವಾಗತಿಸಿದರು. ಶಿಕ್ಷಕಿ ರತ್ನಾವತಿ ಜೆ. ಬೈಕಾಡಿ ಆಶಯ ಗೀತೆಯನ್ನು ಹಾಡಿದರು. ವಿಜಯ ಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಅನಿಕೇತ್ ವಂದಿಸಿದರು.





















































































































































































