8ನೇ ತರಗತಿ ಫೇಲಾದ ಹುಡುಗ ಇವತ್ತು 1೦೦೦ ಉದ್ಯೋಗಿಗಳ ಅನ್ನದಾತ. ಇದು ರಾಜೇಂದ್ರ ವಿ. ಶೆಟ್ಟಿ ಯಶಸ್ವಿ ಹೊಟೇಲ್ ಉದ್ಯಮಿಯಾದ ಸಾಹಸಗಾಥೆ. ಇವರು ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ ಮತ್ತು ಹೊಟೇಲ್ ಲೀಲಾವತಿ ಪ್ಯಾಲೇಸ್‌ನ ಸಂಸ್ಥಾಪಕ. ಇವರಿಗೆ ಮೇ.19 ರಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆಯಿಂದ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಮಂಗಳೂರು ಪುರಭವನದಲ್ಲಿ ನಡೆಯುವ ತ್ರಿಪಂಚಕ ಸಂಭ್ರಮದಲ್ಲಿ ‘ಬಂಟ ವಿಭೂಷಣ ಪ್ರಶಸ್ತಿ’ ಘೋಷಣೆ.

110K Views 15 Mar 2024

ಹುಬ್ಬಳ್ಳಿ :ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ರಾಜೇಂದ್ರ ಶೆಟ್ಟಿ ಬಾಲ್ಯದಲ್ಲೇ ಬಡತನದ ಬೇಗೆ ಅನುಭವಿಸಿದವರು.


ಅವರ ತಂದೆ ತಾಯಿ ಕುಟುಂಬದೊಂದಿಗೆ ಉಡುಪಿಯಿಂದ ಹುಬ್ಬಳ್ಳಿಗೆ ವಲಸೆ ಬಂದಾಗ ರಾಜೇಂದ್ರ ಶೆಟ್ಟಿಯವರು ಬಾಲಕನಾಗಿದ್ದರು. ಹೇಗೋ ಕಷ್ಟಪಟ್ಟು 8ನೇ ತರಗತಿಯವರೆಗೆ ಓದಿದರು. ಆದರೆ, ಫೇಲ್ ಆದರು. ಮುಂದೆ,ಅವರು ಉದ್ಯೋಗಕ್ಕಾಗಿ ಮನೆಯಲ್ಲಿ ಯಾರಿಗೂ ಹೇಳದೆ ರೈಲು ಹತ್ತಿದರು.


ಅದು ಹೋಗಿ ನಿಂತದ್ದು ಮುಂಬೈಯಲ್ಲಿ, ಅಲ್ಲಿ ರೈಲ್ವೇ ಸ್ಟೇಷನ್ ಅಕ್ಕಪಕ್ಕದಲ್ಲಿ ಚಹಾ ಮಾರುವ ಕೆಲಸ ಮಾಡಿದರು. ಆರಂಭದಲ್ಲಿ ಬೀದಿ ಬದಿಯಲ್ಲಿ ಮಲಗಿ ಕೆಲಸ ಹುಡುಕುತ್ತಾ ಅಲ್ಲಿನ ಹೊಟೇಲ್‌ಗಳಿಗೆ ಕೆಲಸಕ್ಕಾಗಿ ಅಲೆದಾಡಿದರು.


ಮುಂದೆ, ಅವರಿಗೆ ಹೊಟೇಲ್‌ನಲ್ಲಿ ಕ್ಲೀನರ್ ಕೆಲಸ ಸಿಗುತ್ತದೆ. ವಿವಿಧ ಹೋಟೆಲ್‌ಗಳಲ್ಲಿ ಅಡುಗೆ ಮನೆಯ ಕೆಲಸ, ಕ್ಲೀನರ್, ವೇಟರ್, ಕ್ಯಾಪ್ಟನ್ ನಂತಹ ನಾನಾ ತರಹದ ಕೆಲಸಗಳನ್ನು ಮಾಡಿದರು. ಆ ಬಳಿಕ ದೇವತಾ ಮನುಷ್ಯರಂಥ ಮಾಲಕರೊಬ್ಬರು ಸಿಕ್ಕಿದ್ದರಿಂದ ಅವರ ಹೊಟೇಲ್‌ನಲ್ಲಿ 12 ವರ್ಷಗಳ ಕಾಲ ಮೆನೇಜರ್ ಆಗಿ ದುಡಿದರು.


ಮುಂಬೈಗೆ ಬಂದಾಗ ಅವರಿಗೆ 13 ರಿಂದ 14 ವರ್ಷ ಆಗಿತ್ತು. ಅಲ್ಲಿ 18 ವರ್ಷಗಳ ತನಕ ಒಟ್ಟು 45 ಹೊಟೇಲ್‌ಗಳಲ್ಲಿ ದುಡಿದರು. ಅಪಾರ ಅನುಭವ ಗಳಿಸಿದರು.
ತದನಂತರ, ಅವರು ತಾಯಿಯವರಿಗೆ ಫೋನ್ ಮಾಡಿ ಮುಂಬೈಯಲ್ಲಿ ಮನೆ ಮಾಡುತ್ತೇನೆ. ಬಂದು ನೆಲೆಸಿ ಎಂದಾಗ ಅವರ ತಾಯಿಯವರು ತಾನು ಸತ್ತರೂ ಬರೋಲ್ಲ ಎಂದರು. ತಾಯಿ ಲೀಲಾವತಿ ಅವರ ಮೇಲೆ ರಾಜೇಂದ್ರ ಶೆಟ್ಟಿಯವರಿಗೆ ಅತೀವ ಪ್ರೀತಿ. ತಾಯಿಯೆಂದರೆ ಪಂಚಪ್ರಾಣ. ಅವರ ಪಾಲಿಗೆ ಪ್ರತ್ಯಕ್ಷ ದೇವರು. ಈ ಕಾರಣಕ್ಕಾಗಿಯೇ ತನ್ನ ತಾಯಿಗಾಗಿ ಮುಂಬೈ ಬಿಟ್ಟು ಅಲ್ಲಿನ ಅಸಂಖ್ಯಾತ ಸ್ನೇಹಿತರ ಫ್ರೆಂಡ್ಸ್ ಸರ್ಕಲ್ ತೊರೆದರು.

ಹುಬ್ಬಳ್ಳಿಯಲ್ಲಿಯೇ ಹೊಟೇಲ್ ಉದ್ಯಮ ಆರಂಭಿಸಿದ ಅವರು ನವೀನ್ ಕಾಮತ್ ಅವರು ಕೊಟ್ಟ 5೦ ಸಾವಿರ ರೂಪಾಯಿ ಹಣವನ್ನು ಹೊಟೇಲ್ ಉದ್ಯಮಕ್ಕೆ ತೊಡಗಿಸಿಕೊಂಡರು. ಇಂದು ಅದು ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ.


ಮನೆ ದೇವರ ಹೆಸರಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾಂ, ದಾವಣಗೆರೆ ಯಲ್ಲಿ ಶ್ರೀಪಂಜುರ್ಲಿ ಗ್ರೂಪ್ ಆಪ್ ಹೊಟೇಲ್' ಮತ್ತು ತಾಯಿ ಲೀಲಾವತಿ ಯವರ ಹೆಸರಲ್ಲಿಹೊಟೇಲ್ ಲೀಲಾವತಿ ಪ್ಯಾಲೇಸ್’ ಮತ್ತು ಪೂಜ್ಯ ತಂದೆಯವರ ಹೆಸರಲ್ಲಿ ಪುಣೆಯಲ್ಲಿ ವಿಶ್ವನಾಥ್ ಪ್ಯಾಲೇಸ್ ಸೇರಿದಂತೆ ಒಟ್ಟು 9 ಹೊಟೇಲ್‌ಗಳನ್ನು ಆರಂಭಿಸಿದರು. ದಾವಣಗೆರೆಯಲ್ಲಿ ಒಂದು ಸುಸಜ್ಜಿತ ಕಲ್ಯಾಣ ಮಂಟಪವನ್ನು ಸ್ಥಾಪಿಸಿದರು.
ಇಂದು ಅದು ರಾಜ್ಯ, ರಾಷ್ಟ್ರ,ಅಂತರಾಷ್ಟೀಯ ಮಟ್ಟದಲ್ಲಿಯೇ ಖ್ಯಾತಿ ಯನ್ನು ಪಡೆದು ಗ್ರಾಹಕರ ಶ್ಲಾಘನೆಗೆ ಪಾತ್ರವಾಗಿದೆ. ತಾನೊಬ್ಬನೇ ಬೆಳೆಯ ಬೇಕು, ತಾನೊಬ್ಬನೇ ದುಡ್ಡು ಗಳಿಸಬೇಕೆಂಬ ದುರಾಸೆಗೆ ಬೀಳದೆ 2೦ ವರ್ಷಗಳ ಕಾಲ ವಿವಿಧ ಹೊಟೇಲ್‌ಗಳಲ್ಲಿ ಕೆಲಸ ಮಾಡುವಾಗ ತನ್ನ ಜೊತೆಯಲ್ಲಿ ಕೆಲಸ ಮಾಡಿದ, ಸಹಾಯ, ಸಹಕಾರ ನೀಡಿದ, ಅರ್ಹ ಹಾಗೂ ಪ್ರಾಮಾಣಿಕ, ಆತ್ಮೀಯ ಗೆಳೆಯರನ್ನು ಕರೆದು ತನ್ನ ಹೊಟೇಲ್‌ಗಳ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಟ್ಟರು. ಅವರು ಕೂಡಾ ತನ್ನೊಟ್ಟಿಗೆ ಬೆಳೆದು ತಮ್ಮ ಸುಂದರ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಹೀಗೇ ತನ್ನ ಹೊಟೇಲ್‌ನ ಕಾರ್ಮಿಕರನ್ನೇ ಮಾಲಕರಾಗಿಸಿ ಹಿರಿತನ ಮೆರೆದರು.


ಇಂದು ಪಂಜುರ್ಲಿ ಗ್ರೂಪ್ ಆಪ್ ಹೊಟೇಲ್ ಮೂಲಕ ನಾನಾ ಸಂಸ್ಥೆಗಳನ್ನು ಆರಂಭಿಸಿ ಉದ್ಯಮದಲ್ಲಿ ಬಂದ ಹಣದಲ್ಲಿ ಸಮಾಜಸೇವೆಯನ್ನು ಮಾಡುತ್ತಿದ್ದಾರೆ. ಅವರ ತಂದೆಯವರು ತನ್ನ ಮಗ ದಾನಶೂರ ಕರ್ಣನಾಗುತ್ತಾನೆ ಎನ್ನುತ್ತಿದ್ದರು. ಕೊಡುವುದೆಂದರೆ ರಾಜೇಂದ್ರ ಶೆಟ್ಟಿಯವರಿಗೆ ಎಲ್ಲಿಲ್ಲದ ಪ್ರೀತಿ, ಅವರು ಕೊಡುಗೈದಾನಿ, ಬಡವರ ಬಂಧು. ತಾಳ್ಮೆ ಮತ್ತು ಶ್ರದ್ಧೆಯೊಂದಿದ್ದರೆ ಯಶಸ್ಸು ಸಾಧಿಸಬಹುದೆಂಬುವುದಕ್ಕೆ ರಾಜೇಂದ್ರ ಶೆಟ್ಟಿಯವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.


ಯಾವುದೇ ದುರಾಭ್ಯಾಸಗಳಿಲ್ಲದ ರಾಜೇಂದ್ರ ಶೆಟ್ಟಿಯವರು ಸದ್ಗುಣಗಳ ಸಂಪನ್ನ. ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಅಪೂರ್ವ ಸಾಧಕ. ಅವರ ಸಾಧನೆಯ ಹಿಂದೆ ಕಷ್ಟಗಳ ನೆರಳಿದೆ. ಹಠ, ಛಲ, ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠುರತೆ, ಅನುಭವ, ಮಾತೃ ವಾತ್ಸಲ್ಯ ಸೇರಿದಂತೆ ನಂಬಿಕೆ, ವಿಶ್ವಾಸದ ಗುಣವಿದೆ. ಅದೇ ಅವರನ್ನು ಹೊಟೇಲ್ ಉದ್ಯಮದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆಸಿದೆ. ತಾಯಿ, ಮಗಳು, ಹೆಂಡತಿ, ಪ್ರಾಮಾಣಿಕತೆ ಎಂಬ ನಾಲ್ಕು ಸಿದ್ಧಾಂತಗಳೇ ಅವರ ಯಶಸ್ಸಿನ ಬೆನ್ನೆಲುಬುಗಳು.


ಹುಬ್ಬಳ್ಳಿ-ಧಾರವಾಡದಲ್ಲಿ ಹೊಟೇಲ್ ಎಂದರೆ ಹಸಿದವನಿಗೆ ಅನ್ನ ಹಾಕುವ ಮನೆಯಿದ್ದಂತೆ. ರಾಜೇಂದ್ರ ಶೆಟ್ಟಿಯವರು ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್, ಹೊಟೇಲ್, ಲೀಲಾವತಿ ಪ್ಯಾಲೇಸ್ ಮೂಲಕ ಹೊಟೇಲ್ ಉದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಬಡವರ ಬಂಧುವಾಗಿ ಸಾವಿರಾರು ಜನರ ಹಸಿವು ನೀಗಿಸಿದ್ದಾರೆ. 37 ವರ್ಷಗಳ ಹೊಟೇಲ್ ಉದ್ಯಮದ ಅನುಭವವಿರುವ ಅವರು ಇಂದು ಸಾವಿರಾರು ಉದ್ಯೋಗಿಗಳಿಗೆ ಅನ್ನದಾತ. ಅವರ ಸಾಧನೆ, ಜೀವನ ಶೈಲಿ ಯುವಜನತೆಗೆ ಸ್ಪೂರ್ತಿ. ಅವರು ಕರ್ನಾಟಕದ ಹೆಮ್ಮೆಯ ಸುಪುತ್ರರಾಗಿದ್ದಾರೆ.


ಸಾಧನೆಗಳ ಸರದಾರ ರಾಜೇಂದ್ರ ಶೆಟ್ಟಿ:
ರಾಜೇಂದ್ರ ಶೆಟ್ಟಿಯವರು ನವೆಂಬರ್ 2೦, 1973 ರಂದು ಉಡುಪಿ ಜಿಲ್ಲೆಯ ಮೂಡುಬೆಟ್ಟು ಮಣಿಪುರ ಗ್ರಾಮದ ದೆಂದೂರುನಲ್ಲಿ ಜನಿಸಿದರು. ಅವರ ತಂದೆ ದಿ. ವಿಶ್ವನಾಥ ಶೆಟ್ಟಿ ಮತ್ತು ತಾಯಿ ಲೀಲಾವತಿ. ಹರೀಶ್ ಮತ್ತು ಅಜಯ್ ಅವರು ರಾಜೇಂದ್ರ ಶೆಟ್ಟಿಯವರ ಸಹೋದರರಾಗಿದ್ದು, ದೀಪಾ ಮತ್ತು ವಿದ್ಯಾ ಸಹೋದರಿಯರು.
ರಾಜೇಂದ್ರ ಶೆಟ್ಟಿಯವರ ಧರ್ಮಪತ್ನಿ ಹರಿಣಿ. ಕುಮಾರಿ ವೈಷ್ಣವಿ ಮತ್ತು ಕುಮಾರಿ ವೈಭವಿ ಇವರ ಸುಪುತ್ರಿಯರು.
ಹುಬ್ಬಳ್ಳಿ-ಧಾರವಾಡ-ಬೆಳಗಾವಿ-ದಾವಣಗೆರೆ, ಪುಣೆ ಗಳಲ್ಲಿ ಒಟ್ಟು 9 ಹೊಟೇಲ್‌ಗಳನ್ನು ಹೊಂದಿರುವ ಅವರು ದಾವಣಗೆರೆಯಲ್ಲಿ ಸುಸಜ್ಜಿತ ಕಲ್ಯಾಣ ಮಂಟಪವನ್ನು ಹೊಂದಿದ್ದಾರೆ. ಒಟ್ಟು 1೦೦೦ ಮಂದಿ ಉದ್ಯೊಗಿಗಳಿಗೆ ಇವರು ಅನ್ನದಾತರಾಗಿದ್ದಾರೆ.


2005 ರಲ್ಲಿ ಧಾರವಾಡದ ಟೋಲ್ ನಾಕಾದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2009ರಲ್ಲಿ ಹುಬ್ಬಳ್ಳಿ ಕೋರ್ಟು ಸರ್ಕಲ್‌ನ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ, 2011ರಲ್ಲಿ ಹುಬ್ಬಳ್ಳಿ ವಿದ್ಯಾನಗರದ ಬಿ.ವಿ.ಬಿ. ಎದುರು ಹೊಟೇಲ್ ಶ್ರೀ ಪಂಜುರ್ಲಿ, 2012ರಲ್ಲಿ ಧಾರವಾಡ ಕೆ.ಸಿ. ಪಾರ್ಕು ಎದುರು ಹೊಟೇಲ್ ಶ್ರೀ ಪಂಜುರ್ಲಿ, 2015 ರಲ್ಲಿ ಹುಬ್ಬಳ್ಳಿ ಗೋಕುಲ್ ರಸ್ತೆಯ ನೆಹರು ನಗರದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2015 ರಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆ ಓಯಾಸಿಸ್ ಮಾಲ್ ಎದುರು ಹೊಟೇಲ್ ಲೀಲಾವತಿ ಪ್ಯಾಲೇಸ್, 2020 ರಲ್ಲಿ ಬೆಳಗಾವಿಯ ಖಾನಾಪುರ ರಸ್ತೆಯ 3ನೇ ರೈಲ್ವೇ ಗೇಟ್ ಬಳಿ ಶ್ರೀ ಪಂಜುರ್ಲಿ ಫೈನ್ ಡೈನ್, 2022 ರಲ್ಲಿ ದಾವಣಗೆರೆ ಹಳೇ ಬಸ್ ನಿಲ್ದಾಣದ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ ಪ್ಯಾಲೇಸ್, ದಾವಣಗೆರೆ ಹಳೇ ಬಸ್ ನಿಲ್ದಾಣದ ಹತ್ತಿರ 2022 ರಲ್ಲಿ ಲೀಲಾವತಿ ಕಲ್ಯಾಣ ಮಂಟಪವನ್ನು ಸ್ಥಾಪಿಸಿದ್ದಾರೆ.2023 ರಲ್ಲಿ ಪುಣೆಯಲ್ಲಿ ಹೋಟೆಲ್ ವಿಶ್ವನಾಥ್ ಪ್ಯಾಲೇಸ್ ನ್ನು ಆರಂಭಿಸಿದ್ದಾರೆ.


ಹುಬ್ಬಳ್ಳಿ ಹೊಟೇಲ್ ಸಂಘದ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಹಾರ ಮಂದಿರಗಳ ಸಂಘ, ಬೆಂಗಳೂರು ಇದರ ಧಾರವಾಡ ಜಿಲ್ಲಾ ಪ್ರತಿನಿಧಿ ಸದಸ್ಯ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘ, ಹುಬ್ಬಳ್ಳಿ ಇದರ ಸಹ ಕಾರ್ಯದರ್ಶಿ, ವಿಶ್ವ ಬಂಟರ ಸಂಘ ಮುಂಬಯಿ ಇದರ ನಿರ್ದೇಶಕರು, ಧಾರವಾಡ ಹೋಟೆಲ್ ಸಂಘ, ಬೆಳಗಾವಿ ಹೋಟೆಲ್ ಸಂಘ, ದಾವಣಗೆರೆ ಹೋಟೆಲ್ ಸಂಘ, ಪುಣೆ ಹೋಟೆಲ್ ಸಂಘ, ಹುಬ್ಬಳ್ಳಿ ರೋಟರಿ ಕ್ಲಬ್, ಹುಬ್ಬಳ್ಳಿ ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಕಮಿಟಿ ಇವುಗಳಲ್ಲಿ ಸಮಿತಿ ಸದಸ್ಯರಾಗಿ ಗುರುತಿಸಿದ್ದಾರೆ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಹುಬ್ಬಳ್ಳಿ ಇದರ ಗೌರವ ಅಧ್ಯಕ್ಷರಾಗಿದ್ದಾರೆ. ಧಾರವಾಡ ಜಿಲ್ಲಾ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಹುಬ್ಬಳ್ಳಿ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಸಾಧಿಸಿದ ಸಾಧನೆಗೆ ಮತ್ತು ಇವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಮಾಧ್ಯಮಗಳು ಇವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಿವೆ. ಬೆಂಗಳೂರಿನ ಕರ್ನಾಟಕ ಸಿರಿ ಸಂಘಟನೆಯು ಕರ್ನಾಟಕ ಉದ್ಯಮ ರತ್ನ ಪ್ರಶಸ್ತಿ ನೀಡಿದೆ.
2015 ರಲ್ಲಿ ಹೊನ್ನಾವರದ ಹೊನ್ನಾವರ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, 2016 ರಲ್ಲಿ ಹುಬ್ಬಳ್ಳಿಯ ಹುಬ್ಬಳ್ಳಿ ಹೊಟೇಲ್ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಪ್ರಶಸ್ತಿ, 2018 ರಲ್ಲಿ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಆವೃತ್ತಿಯಿಂದ 2018ರಲ್ಲಿ ಅಚೀವರ್ಸ್ ಆಫ್ ಕರ್ನಾಟಕ ಪ್ರಶಸ್ತಿ, 2018 ರಲ್ಲಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಟಾನ ಟ್ರಸ್ಟ್ ನಿಂದ ವಿಶ್ವೇಶ್ವರಯ್ಯ ರಾಷ್ಟೀಯ ಸದ್ಭಾವನಾ ಪ್ರಶಸ್ತಿ, 2021 ರಲ್ಲಿ ಮದರ್ ಥೆರೇಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್ ನ್ನು ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಬೆಂಗಳೂರು ಇವರಿಂದ ಪಡೆದಿದ್ದಾರೆ. 2021ರಲ್ಲಿ ಕರ್ನಾಟಕ ಮಾದ್ಯಮ ಸಹಕಾರ ಮತ್ತು ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. 2021ರಲ್ಲಿ ರೆಡ್ ಎಫ್.ಎಂ. ರೇಡಿಯೋದಿಂದ ಬಿಸಿನೆಸ್ ಬ್ರಿಲಿಯನ್ಸ್ ಅವಾರ್ಡ್, 2022 ರಲ್ಲಿ ಸುವರ್ಣ ನ್ಯೂಸ್ ಟಿ.ವಿ. ಚಾನೆಲ್ ಮತ್ತು ಕನ್ನಡ ಪ್ರಭ ದಿನಪತ್ರಿಕೆಯಿಂದ ಉತ್ತರ ಕರ್ನಾಟಕ ಸಾಧಕರು ಪ್ರಶಸ್ತಿ, 2022 ರಲ್ಲಿ ಇಂದು ಸಂಜೆ ಪತ್ರಿಕೆಯಿಂದ ಉದ್ಯೋಗ ರತ್ನ ಪ್ರಶಸ್ತಿ, 2022 ರಲ್ಲಿ ರಾಜ್ ನ್ಯೂಸ್ ಟಿ.ವಿ.ಯಿಂದ ಗುರು ಅನುಗ್ರಹ ಪುರಸ್ಕಾರ, 2022 ರಲ್ಲಿ ಸರ್ಕಾಳ ಮರಾಠಿ ದಿನಪತ್ರಿಕೆಯಿಂದ ಐಡಲ್ಸ್ ಆಫ್ ಬೆಳಗಾವ, 2022 ರಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಇವರಿಂದ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, 2023 ರಲ್ಲಿ ವಿಸ್ತಾರ ಟಿವಿಯಿಂದ ಬಿಜಿನೆಸ್ ಎಕ್ಸಲೆನ್ಸ್ ಅವಾರ್ಡ್,
2023 ರಲ್ಲಿ ಪಬ್ಲಿಕ್ ನೆಸ್ಟ್ ಇಂಟರ್‌ನ್ಯಾಷನಲ್ ನ್ಯೂಸ್‌ನಿಂದ ಪಂಚರತ್ನ ಪ್ರಶಸ್ತಿ, 2023 ರಲ್ಲಿ ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್ ನ್ಯೂಸ್ ಫಸ್ಟ್ ಟಿವಿ ಮೊದಲಾದ ಹಲವಾರು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ದೊರೆಕಿವೆ.
ಇವರು ಹೊಟೇಲ್ ಉದ್ಯಮದಲ್ಲಿ ಸಾಧಿಸಿದ ಸಾಧನೆಯ ಬಗ್ಗೆ 2021ರಲ್ಲಿ ಪವರ್ ಟಿವಿಯ ‘ಹೊಟೇಲ್ ಹೀರೋ’ ಕಾರ್ಯಕ್ರಮ, 2022 ರಲ್ಲಿ ನ್ಯೂಸ್ ಫಸ್ಟ್ ಟಿವಿಯಿಂದ ‘ನಾನು ನನ್ನ ಸಾಧನೆ ಕಾರ್ಯಕ್ರಮ’, 2023 ರಲ್ಲಿ ಟಿವಿ 5 ‘ನಮ್ಮ ಬಾಹುಬಲಿ’ ಕಾರ್ಯಕ್ರಮ ಮೂಲಕ ಸುದ್ಧಿ ಬಿತ್ತರಗೊಂಡಿವೆ.


ಸಮಾಜ ಕಂಡ ಸರ್ವಶ್ರೇಷ್ಠ ಸಾಧಕ ರಾಜೇಂದ್ರ ವಿಶ್ವನಾಥ ಶೆಟ್ಟಿಯವರ ವೃತ್ತಿ ಬದುಕು ಆರಂಭದಲ್ಲಿ ಕಷ್ಟಕರವಾಗಿದ್ದರೂ, ಕಠಿಣ ಪರಿಶ್ರಮ ಹಾಗೂ ನಿರಂತರ ದುಡಿಮೆ,ಪ್ರಾಮಾಣಿಕ ಪ್ರಯತ್ನಗಳಿಂದ ಹಂತ ಹಂತವಾಗಿ ಮೇಲೇರಿ ಯಶಸ್ವಿ ಸಾಧಿಸಲು ಸಾಧ್ಯ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.
ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವ ಇವರ ನಿಸ್ವಾರ್ಥ ಸೇವಾ ಮನೋಭಾವವನ್ನು ಪರಿಗಣಿಸಿ ರಂಜಿತ್ ಶೆಟ್ಟಿ ಸಾರಥ್ಯದ ಪ್ರತಿಷ್ಠಿತ ಬಂಟ್ಸ್ ನೌ ಮಾದ್ಯಮ ಸಂಸ್ಥೆಯು ಮೇ 19, 2024 ರ ಸಂಜೆ 4ಕ್ಕೆ ಮಂಗಳೂರು ಪುರಭವನದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ತ್ರಿಪಂಚಕ ಸಂಭ್ರಮದಲ್ಲಿ ಇವರಿಗೆ ‘ಬಂಟ ವಿಭೂಷಣ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದೆಂದು ಘೋಷಣೆ ಮಾಡಿದೆ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top