ಮಂಗಳೂರು: ಮಂಗಳೂರಿನ ಪ್ರಖ್ಯಾತ 30 ಮಾರ್ಕಿನ ಬೀಡಿ ತಯಾರಕರಾದ ಭಾರತ್ ಬೀಡಿ ವರ್ಕ್ಸ್ ಪ್ರೈ ಲಿಮಿಟೆಡ್ ಇದರ ಸ್ಥಾಪಕರಾದ ಬಿ. ಮಂಜುನಾಥ ಪೈಯವರ 111 ನೇ ಜನ್ಮ ದಿನವನ್ನು ಸಂಸ್ಥಾಪಕರ ದಿನವನ್ನಾಗಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಎಸ್. ಪೈ ಯವರು ಸ್ವಾಗತಿಸಿ ಪ್ರಸ್ತಾವನೆಗೈದರು.
ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಸುಭ್ರಾಯ ಎಂ. ಪೈ ಯವರು ಮಾತನಾಡಿ ಸಂಸ್ಥೆಗೆ ಸ್ಥಾಪಕರು ನೀಡಿದ ಕೊಡುಗೆ, ಅವರ ದೂರ ದೃಷ್ಟಿ ಹಾಗೂ ಅವರಿಗೆ ಸಮಾಜದ ಬಗ್ಗೆ ಇದ್ದ ಕಾಳಜಿಯನ್ನು ವಿವರಿಸಿದರು.
ಲೆಕ್ಕ ಪರಿಶೋಧಕರಾದ ಸಿಎ ಶಿವಾನಂದ ಪೈಯವರು ಸಂಸ್ಥೆಯ ಬಗ್ಗೆ ಸವಿಸ್ತಾರವಾದ ವಿವರಗಳನ್ನು ನೀಡಿದರು. ಸಂಸ್ಥಾಪಕರು ಹಾಕಿ ಕೊಟ್ಟ ಮೌಲ್ಯಗಳನ್ನು ಅನುಚಾನವಾಗಿ ಸಂಸ್ಥೆಯು ಅನುಸರಿಸುತ್ತಾ ಬಂದಿದ್ದು, ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯು ಸಾಂಸ್ಥಿಕ ಸಮಾಜಿಕ ಕಳಕಳಿಗಳನ್ನು ತನ್ನ ಆರಂಭದ ದಿನಗಳಿಂದಲೂ ಅನುಸರಿಸುತ್ತಾ ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ನಾಗೇಂದ್ರ ಡಿ. ಪೈ ಯವರು ಸಂಸ್ಥೆಯ ಹೊಸ ಉತ್ಪನ್ನವಾದ ಮೂವತ್ತು ಮಾರ್ಕಿನ “ಕಡಕ್ ಪ್ಯಾಲಿ” ಚಹಾ ಪುಡಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಹೊಸ ಉತ್ಪನ್ನದ ಬಗ್ಗೆ ಸಂಸ್ಥೆಯ ಹಿರಿಯ ಅಧಿಕಾರಿ ಎಚ್. ರಮೇಶ್ ಶೆಣೈಯವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಬ್ಯಾಂಕುಗಳ ಅಧಿಕಾರಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಸಂಸ್ಥೆಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಗೆ 55 ವರ್ಷಗಳ ಸೇವೆ ಸಲ್ಲಿಸಿರುವ ಸುರೇಶ್ ಶೆಣೈಯವರನ್ನು ಆಡಳಿತ ಮಂಡಳಿಯು ಅಭಿನಂದಿಸಿ ಪುರಸ್ಕರಿಸಿತು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ವೆಂಕಟೇಶ್ ಎಂ. ಪೈ, ಉಪಸ್ಥಿತರಿದ್ದರು. ಸಂಸ್ಥೆಯ ಇನ್ನೊರ್ವ ಕಾರ್ಯಕಾರಿ ನಿರ್ದೇಶಕರಾದ ಆನಂದ್ ಜಿ. ಪೈ ಬಂದ ಎಲ್ಲಾ ಅತಿಥಿಗಳಿಗೆ ಧನ್ಯವಾದವಿತ್ತರು.





















































































































































































