ನಿಸ್ವಾರ್ಥ ಸೇವೆಗೆ ಯೂತ್ ರೆಡ್ ಕ್ರಾಸ್ ಪ್ರೇರಣೆ -ಪ್ರೊ.ಜಯಂತ ನಾಯಕ್

10.8K Views 1h ago

ಮಂಗಳೂರು : ಮಾನವೀಯ ಸೇವೆಯೇ ರೆಡ್‌ಕ್ರಾಸ್ ಸಂಘಟನೆಯ ಧ್ಯೇಯವಾಗಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಪ್ರಥಮ ಚಿಕಿತ್ಸೆ, ಆಪತ್ಕಾಲದಲ್ಲಿ ಸಹಾಯ, ವಿಪತ್ತು ನಿರ್ವಹಣೆ, ರಕ್ತದಾನದಂತಹ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಯೂತ್ ರೆಡ್‌ಕ್ರಾಸ್ ಪ್ರೇರಣೆ ನೀಡುತ್ತಿದೆ ಎಂದು ನಗರದ ವಿ.ವಿ.ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯಂತ ನಾಯಕ್ ಹೇಳಿದರು.


ಯೂತ್ ರೆಡ್ ಕ್ರಾಸ್ ಮಂಗಳೂರು ವಿ.ವಿ. ಇದರ ವತಿಯಿಂದ ನಗರದ ವಿ.ವಿ.ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ವಿಶ್ವ ಜಿನೀವಾ ಒಪ್ಪಂದ ದಿನಾಚರಣೆ ಅಂಗವಾಗಿ ವಿ.ವಿ.ಕಾಲೇಜಿನ ಶಿವರಾಮ ಕಾರಂತ ಸಭಾ ಭವನದಲ್ಲಿ ಶನಿವಾರ ನಡೆದ ರಸಪ್ರಶ್ನೆ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ನಿರ್ದೇಶಕ ಪಿ.ಬಿ.ಹರೀಶ್ ರೈ ಮಾತನಾಡಿ ” ವಿದ್ಯಾರ್ಥಿಗಳು ಕೇವಲ ಪಠ್ಯ ಕಲಿಕೆಗೆ ಸೀಮಿತರಾಗದೆ ಯೂತ್ ರೆಡ್‌ಕ್ರಾಸ್ ,ಎನ್‌ಸಿಸಿ, ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗಿಯಾದರೆ ಬದುಕಿನ ಸವಾಲುಗಳನ್ನು ಎದುರಿಸಲು ಶಕ್ತರಾಗುತ್ತಾರೆ’ ಎಂದರು.
ಮಂಗಳೂರು ವಿ.ವಿ. ಯೂತ್ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ.ಗಾಯತ್ರಿ.ಎನ್. ಮಾತನಾಡಿ “ಯುದ್ಧದ ಸಮಯದಲ್ಲಿ ಮಾನವೀಯತೆ ಕಾಪಾಡಲು ನೆರವಾಗುವ ಜಿನೀವಾ ಒಪ್ಪಂದದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಲು ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ’ ಎಂದರು.
ವಿ.ವಿ.ಕಾಲೇಜಿನ ಯೂತ್ ರೆಡ್‌ಕ್ರಾಸ್ ಯೋಜನಾಧಿಕಾರಿ ಡಾ.ಭಾರತಿ ಪಿಲಾರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಯಶಸ್ವಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

ರಸಪ್ರಶ್ನೆ ಸ್ಪರ್ಧೆ ವಿಜೇತರು
ವಿಶ್ವ ಜಿನೀವಾ ಒಪ್ಪಂದ ದಿನಾಚರಣೆ ಅಂಗವಾಗಿ ಏರ್ಪಡಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ತಂಡ ಪ್ರಥಮ, ಹಿರಾ ಮಹಿಳಾ ಕಾಲೇಜು ತಂಡ ಮಂಗಳೂರು ದ್ವಿತೀಯ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು “ಬಿ”ತಂಡ ತೃತೀಯ ಸ್ಥಾನ ಪಡೆದವು. ವಿವಿಧ ಕಾಲೇಜುಗಳ ಒಟ್ಟು 18 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

Read More News

Scroll to Top