ವಿಟ್ಲ ಪೆರುವಾಯಿ: ರೈತರು ಕೇವಲ ಅಡಿಕೆ ಬೆಳೆಯನ್ನು ಮಾತ್ರ ಅವಲಂಬಿಸದೆ ಮಿಶ್ರ ಕೃಷಿ ಪದ್ಧತಿಯನ್ನು ಅನುಸರಿಸಿದಾಗ ಮಾತ್ರ ಕೃಷಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಜೋ ಪ್ರದೀಪ್ ಡಿಸೋಜಾ ಹೇಳಿದರು.



ಪೆರುವಾಯಿ ಫಾತಿಮಾ ಮಾತೆಯ ಚರ್ಚ್‌ನಲ್ಲಿ ಕೆಥೋಲಿಕ್ ಸಭಾ ಆಯೋಜಿಸಿದ್ದ ಕೃಷಿ ಮಾಹಿತಿ ಮತ್ತು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.




ಅಡಿಕೆಯೊಂದಿಗೆ ಉಪಬೆಳೆಗಳಾಗಿ ಕೊಕ್ಕೊ, ಬಾಳೆ, ಕಾಳುಮೆಣಸು ಹಾಗೂ ಆದಾಯದ ಪ್ರಮುಖ ಮೂಲವಾಗಿ ಮಲ್ಲಿಗೆ ಕೃಷಿಯನ್ನು ಕೈಗೊಳ್ಳುವುದರಿಂದ ರೈತರ ಆದಾಯ ಹೆಚ್ಚಿಸಿಕೊಳ್ಳಬಹುದು. ಅಡಿಕೆಗೆ ಬಾಧಿಸುವ ಕೊಳೆ ರೋಗ, ಹಳದಿ ಎಲೆ ರೋಗ ಹಾಗೂ ಸುಳಿ ಕೊಳೆ ರೋಗಗಳ ನಿಯಂತ್ರಣಕ್ಕೆ ಸಕಾಲದಲ್ಲಿ ಬೋರ್ಡೋ ದ್ರಾವಣ ಅಥವಾ ಶಿಲೀಂಧ್ರನಾಶಕ ಸಿಂಪಡಿಸಬೇಕು. ಮಣ್ಣು ಪರೀಕ್ಷೆ ನಡೆಸಿ, ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಮತ್ತು ಎನ್‌ಪಿಕೆ (NPK) ರಾಸಾಯನಿಕ ಗೊಬ್ಬರಗಳನ್ನು ಯೋಗ್ಯ ಪ್ರಮಾಣದಲ್ಲಿ ನೀಡಬೇಕು. ಇದರೊಂದಿಗೆ ಬೆಳೆ ವಿಮೆ ಮಾಡಿಸುವುದು ಅತ್ಯಗತ್ಯ ಎಂದು ಅವರು ರೈತರಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವನಮಹೋತ್ಸವದ ಅಂಗವಾಗಿ ಚರ್ಚ್ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು ಹಾಗೂ ವಲಯದ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಸಸಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪೆರುವಾಯಿ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿಸೋಜ, ವಲಯ ಅಧ್ಯಕ್ಷ ಲೂವಿಸ್ ಮಸ್ಕರೇನಸ್, ಕಾರ್ಯದರ್ಶಿ ತೋಮಸ್ ಮಸ್ಕರೇನಸ್, ಪೆರುವಾಯಿ ಘಟಕದ ಅಧ್ಯಕ್ಷ ಹಾಗೂ ವಲಯ ಖಜಾಂಚಿ ರಾಲ್ಫ್ ಡಿಸೋಜ, ಪರಿಸರ ಆಯೋಗದ ಸಂಚಾಲಕ ಕೆ. ವಿಲ್ಫ್ರೆಡ್ ಡಿಸೋಜ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕೃಷಿಕರು ಉಪಸ್ಥಿತರಿದ್ದರು. ಮನೋಹರ್ ಕಾರ್ಯಕ್ರಮ ನಿರೂಪಿಸಿದರು.

























































































































































































