LATEST NEWS. ನಟ ದಿಲೀಪ್ ರಾಜ್ ಹೃದಯಾಘಾತದಿಂದ ಸಾವು

117.8K Views 13 May 2026

ಬೆಂಗಳೂರು-ಮೇ.13,ಇಂದು ನಸುಕಿನ ಜಾವ ನಟ ದಿಲೀಪ್ ರಾಜ್ ಅವರು ಬೆಂಗಳೂರಿನಲ್ಲಿರುವ ಉತ್ತರಹಳ್ಳಿಯ ತನ್ನ ಮನೆಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದರು. ಕೂಡಲೇ ಅವರ ಪತ್ನಿ ಶ್ರೀವಿದ್ಯಾ ಅವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ. ನಟ ದಿಲೀಪ್ ರಾಜ್ ಹೃದಯಾಘಾತದಿಂದ ಮೃತ ಪಟ್ಟಿರುವುದಾಗಿ ಅಪೋಲೋ ಆಸ್ಪತ್ರೆ ಮೂಲಗಳು ದೃಢ ಪಡಿಸಿವೆ.


2009ರಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ಮಿಲನ ಕನ್ನಡ ಸಿನಿಮಾದಲ್ಲಿ ಖಳನಾಯಕನಾಗಿ ಸಾಕಷ್ಟು ಮಿಂಚಿದ್ದ ದಿಲೀಪ್ ರಾಜ್ ಅವರು 2018ರಲ್ಲಿ ಅಂಬಿ ನಿನಗೆ ವಯಸ್ಸಾಯಿತು ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗನಾಗಿ ನಟಿಸಿದ್ದರು. ಪತ್ನಿ ಶ್ರೀವಿದ್ಯಾ ಅವರ ಜೊತೆಗೆ ಕೆಲವು ಕಿರುತೆರೆ ಧಾರಾವಾಹಿಗಳನ್ನು ನಿರ್ಮಿಸಿದ್ದ ದಿಲೀಪ್ ರಾಜ್ ಅವರು 2005 ರಲ್ಲಿ ಬಾಯ್ ಫ್ರೆಂಡ್ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದ್ದರು. ಟಿವಿ ನಿರೂಪಕನಾಗಿಯೂ ಸೈ ಎನಿಸಿದ್ದ ದಿಲೀಪ್ ರಾಜ್ ಸ್ಟೈಲಿಸ್ಟ್ ನಟರೆಂದೇ ಜನಪ್ರಿಯರಾಗಿದ್ದರು. ಜನನಿ ,ಅರ್ಧ ಸತ್ಯ,ರಂಗೋಲಿ, ವಿದ್ಯಾ ವಿನಾಯಕ,ಕುಂಕುಮ ಭಾಗ್ಯ,ರಥ ಸಪ್ತಮಿ,ಪಾರು,ಮಾಂಗಲ್ಯ, ಮಳೆಬಿಲ್ಲು,ಲವ್ ಮಾಕ್ಟೇಲ್ 3, ಹಿಟ್ಲರ್ ಕಲ್ಯಾಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಳೆದ 20 ವರ್ಷಗಳಲ್ಲಿ ನಾಯಕನಟನಾಗಿ ಅಭಿನಯಿಸಿ ಯಶಸ್ವಿ ನಟರಾಗಿ ಜನ ಮೆಚ್ಚುಗೆ ಗಳಿಸಿದ್ದರು.ಅವರಿಗೆ 47ವರ್ಷ ವಯಸ್ಸಾಗಿತ್ತು. ದಿಲೀಪ್ ರಾಜ್ ಅವರು ಪತ್ನಿ ಶ್ರೀವಿದ್ಯಾ ಮತ್ತು ಸುಪುತ್ರಿಯರಾದ ಧೃತಿ ಮತ್ತು ಅದಿತಿ ಅವರನ್ನು ಆಗಲಿದ್ದಾರೆ.ದಿಲೀಪ್ ರಾಜ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ. ದಿಲೀಪ್ ರಾಜ್ ನಿಧನಕ್ಕೆ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.

Read More News

Scroll to Top