ರಾಮಾಶ್ರಮ ವಿದ್ಯಾಸಂಸ್ಥೆಯಲ್ಲಿ ಎನ್ .ವಿನಯ ಹೆಗ್ಡೆಯವರಿಗೆ ನುಡಿ ನಮನ

96.7K Views 10 Jan 2026

Qನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಎನ್ ವಿನಯ್ ಹೆಗ್ಡೆಯವರ ಶ್ರದ್ಧಾಂಜಲಿ ಸಭೆಯು ಕೊಂಚಾಡಿಯ ಶ್ರೀ ರಾಮಾಶ್ರಮ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಕೊಂಚಾಡಿ ಎಜ್ಯುಕೇಶನಲ್ ಟ್ರಸ್ಟ್ ಬೋರ್ಡಿನ ಪದಾಧಿಕಾರಿಗಳ ಸಮೇತ ವಿವಿಧ ಗಣ್ಯರು ಅಗಲಿದ ಶಿಕ್ಷಣ ತಜ್ಞ ಎನ್.ವಿನಯ ಹೆಗ್ಡೆಯವರಿಗೆ ನುಡಿನಮನ ಸಲ್ಲಿಸಿದರು.
ಎನ್ ವಿನಯ ಹೆಗ್ಡೆ ಅವರಿಗೆ ಸುಮಾರು 25 ವರ್ಷಗಳಿಂದ ಯೋಗ ಗುರುಗಳಾಗಿದ್ದ ಶ್ರೀ ರಾಧಾಕೃಷ್ಣರವರು ಮಾತನಾಡಿ ಶ್ರದ್ಧೆ ಮತ್ತು ನಿಷ್ಠೆಯ ಪ್ರತಿರೂಪದಂತಿದ್ದ ವಿನಯ ಹೆಗ್ಡೆಯವರು ತನ್ನ ಬಿಡುವಿಲ್ಲದ ಕೆಲಸ ಕಾರ್ಯದ ಮಧ್ಯೆ ಬಿಡುವು ಮಾಡಿಕೊಂಡು ಕದ್ರಿ ಕೈ ಬಟ್ಟಲಿನಲ್ಲಿರುವ ನನ್ನ ಯೋಗ ಕೇಂದ್ರದಲ್ಲಿ ಯೋಗ ತರಗತಿಗೆ ಹಾಜರಾಗುತ್ತಿದ್ದರು.


ಸರಳ ವ್ಯಕ್ತಿತ್ವದ ಅವರು ನನ್ನ ಇಷ್ಟಮಿತ್ರರಾಗಿದ್ದರು ಎಂದು ಮಾತಿನಲ್ಲಿ ನೆನಪಿಸಿಕೊಂಡರು.
ಕೊಂಚಾಡಿ ಎಜುಕೇಶನಲ್ ಟ್ರಸ್ಟ್ ಬೋರ್ಡಿನ ಅಧ್ಯಕ್ಷರಾಗಿರುವ ಡಾ ಸುಕುಮಾರ್ ದಂಡೆಕೇರಿಯವರು ಮಾತನಾಡಿ ಆದರ್ಶ ಮತ್ತು ಮೌಲ್ಯಾಧಾರಿತ ಜೀವನ ನಡೆಸುವ ಮೂಲಕ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ ಅಸಾಮಾನ್ಯ ಸಾಧಕರಾಗಿ ಗಮನ ಸೆಳೆದ ಎನ್. ವಿನಯ ಹೆಗ್ಡೆಯವರು ನಡೆದು ಬಂದ ಹಾದಿ ಇತರರಿಗೂ ಮಾದರಿ ಎಂದರು.
ಮತ್ತೊಬ್ಬ ಅತಿಥಿ ಸೀತಾರಾಮ ಎಂಬವರು ಮಾತನಾಡಿ ಶ್ರೀರಾಮಾಶ್ರಮ ವಿದ್ಯಾಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವಂತ ಕೊಂಚಾಡಿ ಎಜುಕೇಶನಲ್ ಟ್ರಸ್ಟ್ ಬೋರ್ಡಿನ ಹಿರಿಯ ಸದಸ್ಯರಾಗಿರುವ ಧೂಮಪ್ಪ ಮೇಸ್ತ್ರಿ ದಂಡಕೇರಿ ಮತ್ತು ಎನ್ ವಿನಯ ಹೆಗ್ಡೆಯವರು ಆತ್ಮೀಯರಾಗಿದ್ದು, ನಿಟ್ಟೆ ವಿದ್ಯಾ ಸಂಸ್ಥೆಯ ಕಟ್ಟಡವನ್ನು ವಿನಯ ಹೆಗ್ಡೆಯವರ ಕೋರಿಕೆಯಂತೆ ಧೂಮಪ್ಪಮೇಸ್ತ್ರಿ ಅವರು ನಿರ್ಮಿಸಿ ಕೊಟ್ಟದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಖ್ಯಾತ ಉದ್ಯಮಿ ರಾಜೇಶ್ ದಂಡಕೇರಿಯವರು ಮಾತನಾಡಿ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಹೆಗ್ಡೆ ಅವರಿಗಿದ್ದ ಕಾಳಜಿ ಅಪಾರ ಎಂದರು.
ಈ ಸಂದರ್ಭದಲ್ಲಿ ಕೊಂಚಾಡಿ ಎಜ್ಯುಕೇಶನ್ ಟ್ರಸ್ಟ್ ಬೋರ್ಡ್ ಟ್ರಸ್ಟಿಗಳಾಗಿರುವ ಕೆ.ಲೋಕೇಶ್,ಸಂತೋಷ್ ದಂಡಕೇರಿ,ಕಿಶೋರ್ ದಂಡಕೇರಿ,ಕಮಲಾಕ್ಷ ಬಂಗೇರ ,ಪತ್ರಕರ್ತ ರಾಜೇಶ್ ಕದ್ರಿ, ನೋಟರಿ ವಕೀಲರಾಗಿರುವ ವರದರಾಜು,ಜಯಂತ್ ಕೊಪ್ಪಲಕಾಡ್ ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜಪ್ಪ ಜಿ.ಎಸ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಶ್ರೀರಾಮಾಶ್ರಮ ವಿದ್ಯಾಸಂಸ್ಥೆಯ ಸಂಚಾಲಕರಾಗಿರುವ ಡಾ. ಎನ್. ವಿ .ಕಿಶೋರ್ ಸ್ವಾಗತಿಸಿದರು. ಸಹ ಶಿಕ್ಷಕಿ ಸುಷ್ಮಾ ಸುಬ್ರಹ್ಮಣ್ಯ ನಿರೂಪಿಸಿ ಮುಖ್ಯ ಶಿಕ್ಷಕ ಬಾಲಚಂದ್ರ ವಂದಿಸಿದರು.

Scroll to Top