ನಿಟ್ಟೆ ವಿನಯ ಹೆಗ್ಡೆ ನಿಧನ

101.8K Views 2 Jan 2026

ಮಂಗಳೂರು: ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ, ಶಿಕ್ಷಣ ತಜ್ಞ ಕೆ.ಎಸ್. ಹೆಗ್ಡೆ ಚಾರಿಟೆಬಲ್ ಹಾಸ್ಪಿಟಲ್‍ನ ವ್ಯವಸ್ಥಾಪಕ ನಿರ್ದೇಶಕ ಎನ್. ವಿನಯ ಹೆಗ್ಡೆ (86) ಗುರುವಾರ ನಸುಕಿನ 2 ಗಂಟೆ ಸುಮಾರಿಗೆ ಕದ್ರಿ ಶಿವಬಾಗ್‍ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಸುಜಾತಾ ಹೆಗ್ಡೆ, ಪುತ್ರ ನಿಟ್ಟೆ ವಿ.ವಿ.ಯ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ, ಪುತ್ರಿ ಬೆಂಗಳೂರಿನ ನಿಟ್ಟೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥೆ ಅಶ್ವಿತಾ ಪೂಂಜ, ಸಹೋದರ ನಿವೃತ್ತ ಕರ್ನಾಟಕ ಲೋಕಾಯುಕ್ತ ನ್ಯಾ| ಎನ್. ಸಂತೋಷ್ ಹೆಗ್ಡೆ ಸಹಿತ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್ ಆಗಿದ್ದ ಕೆ.ಎಸ್. ಹೆಗ್ಡೆ (ಕೌಡೂರು ಸದಾನಂದ ಹೆಗ್ಡೆ) ಅವರ ದ್ವಿತೀಯ ಪುತ್ರರಾದ ವಿನಯ ಹೆಗ್ಡೆ ಅವರು ಕರಾವಳಿ ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದರು. ಗ್ರಾಮೀಣ ಪ್ರದೇಶವಾಗಿದ್ದ ನಿಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಶಿಕ್ಷಣ ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದವರು ಧಾರ್ಮಿಕ, ಸಾಮಾಜಿಕ ಸೇವೆಯ ಮೂಲಕವೂ ಅಪಾರ ಖ್ಯಾತಿ ಗಳಿಸಿದ್ದರು. ಇವರ ಸೇವೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.
*ಎರಡು ದಿನ ಹಿಂದೆ ಅಯೋಧ್ಯೆ ರಾಮನ ದರ್ಶನ*
ವಿನಯ ಹೆಗ್ಡೆ ಕುಟುಂಬ ಸಹಿತ ಡಿ. 28ರಂದು ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಭೇಟಿ ನೀಡಿ, ಶ್ರೀರಾಮಚಂದ್ರನ ದರ್ಶನ ಪಡೆದು ಬಂದಿದ್ದರು. ಅಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಜತೆಯಲ್ಲೇ ಶ್ರೀರಾಮನ ದರ್ಶನ ಮಾಡಿದ್ದರು. ಈ ವೇಳೆ ಅವರು, ಜೀವನದ ಆಸೆ ಈಡೇರಿದೆ ನನಗೆ ಇನ್ನೇನು ಬೇಕು’ ಎನ್ನುವ ಮಾತನ್ನು ಹೇಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಯೋಧ್ಯೆಯಿಂದ ಬಂದವರಿಗೆ ಸ್ವಲ್ಪ ಅನಾರೋಗ್ಯ ಕಾಡಿತ್ತು. ಡಿ. 30ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು. ಡಿ. 31ರಂದು ಮನೆಯಲ್ಲೇ ಇದ್ದು, ರಾತ್ರಿ ಮಲಗಿದವರು ಎದ್ದು ಶೌಚಾಲಯಕ್ಕೆ ಹೋಗಿ ಮರಳಿ ಬಂದು ಹಾಸಿಗೆಯಲ್ಲಿ ಕುಳಿತವರು ಅಲ್ಲೇ ಮಲಗಿ ನಿಧನ ಹೊಂದಿದರು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top