ಮೃತದೇಹಗಳನ್ನು ಹೂತಿಟ್ಟ ಆರೋಪದ ಪ್ರಕರಣ.ಎಸ್‍ಐಟಿ ತನಿಖೆಯಲ್ಲಿ ಎಡಪಂಥೀಯರ ಒತ್ತಡ, ಕ್ಷೇತ್ರದ ವಿರುದ್ಧ ಷಡ್ಯಂತ್ರ: ಕುಂಪಲ

119.7K Views 12 Aug 2025

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತಿರುವುದಾಗಿ ಅನಾಮಿಕ ದೂರುದಾರನ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಎಸ್‍ಐಟಿ ಮೇಲೆ ಎಡಪಂಥೀಯರ ಒತ್ತಡವಿದ್ದು ಯಾವುದೋ ಷಡ್ಯಂತ್ರ ನಡೆಯುತ್ತಿರುವ ಸಂಶಯ ಬಲವಾಗಿದ್ದು, ಅನಾಮಿಕ ದೂರುದಾರನ ಮಂಪರು ಪರೀಕ್ಷೆ ನಡೆಸಬೇಕು ಎಂದು ದ,ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.
ಶುಕ್ರವಾರದಂದು ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಎಸ್‍ಐಟಿ ತನಿಖೆಗೆ ಸಂಪೂರ್ಣ ಬೆಂಬಲವಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಆದರೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಸಾರ್ವಜನಿಕರಲ್ಲಿ ಸಂಶಯಕ್ಕೆ ಕಾರಣವಾಗಿದೆ. ಇದರಲ್ಲಿ ಎಡಪಂಥೀಯರ ಒತ್ತಡ ಮತ್ತು ಷಡ್ಯಂತ್ರದ ಸಂಚಿದೆ ಎಂದರು.
‘ಎಡಪಂಥೀಯರ ಒತ್ತಡದಿಂದಾಗಿ ಎಸ್‍ಐಟಿ ತನಿಖೆಗೆ ಆದೇಶಿಸಲಾಗಿದೆ’ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿರುವುದು, ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಇದೀಗ ತಮಿಳುನಾಡಿನಲ್ಲಿ ಕಾಂಗ್ರೆಸ್ ಸಂಸದರಾದ ಸಸಿಕಾಂತ ಸೆಂಥಿಲ್ ಇದರ ಹಿಂದೆ ಬಲವಾದ ಒತ್ತಡ ಹಾಕಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನೊಂದೆಡೆ ಎಸ್‍ಡಿಪಿಐನವರೂ ಆಸಕ್ತಿ ವಹಿಸಿದ್ದಾರೆ. ಹಾಗಾಗಿ ಎಡಪಂಥೀಯರ ಒತ್ತಡ, ಯಾವುದೋ ಷಡ್ಯಂತ್ರದಿಂದ ಕ್ಷೇತ್ರದ ತೇಜೋವಧೆಗೆ ಪ್ರಯತ್ನಿಸಿರುವುದು ಕಂಡುಬರುತ್ತಿದೆ ಎಂದು ಹೇಳಿದರು.
ಮಂಪರು ಪರೀಕ್ಷೆಯಾಗಲಿ: ಅನಾಮಿಕ ದೂರುದಾರನ ದೂರಿನ ಮೇಲೆ ಎಸ್‍ಐಟಿ ರಚನೆಯಾಗಿದೆ. ಆತ ಎಲ್ಲಿ ಎಷ್ಟು ಶವ ಹೂತಿಟ್ಟಿರುವುದಾಗಿ ಹೇಳಿದ್ದ. ಆದರೆ ಯಾವ ಕುರುಹೂ ಸಿಕ್ಕಿಲ್ಲ, ಆತನ ಮೇಲೂ ಸಂಶಯ ಮೂಡಿದ್ದು ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ ಅವರು, ಎಸ್‍ಐಟಿ ಯಾವುದೋ ಒತ್ತಡಕ್ಕೆ ಒಳಗಾದಂತೆ ತೋರುತ್ತಿದೆ. ಹಾಗಾಗಿ ಕೇಂದ್ರ ಸರಕಾರದಿಂದಲೂ ಧಾರ್ಮಿಕ ಸ್ಥಳಕ್ಕೆ ಧಕ್ಕೆ ಮಾಡುವ ಷಡ್ಯಂತ್ರದ ಬಗ್ಗೆ ತನಿಖೆಯಾಗಬೇಕು. ದೇವಸ್ಥಾನ, ಧಾರ್ಮಿಕ ಭಾವನೆಗಳ ನಂಬಿಕೆಗೆ ಘಾಸಿಯಾಗಲು, ಹಿಂದೂ ಸಮಾಜವನ್ನು ಒಡೆಯುವ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ತನಿಖೆ ಸರಿಯಾಗಿ ನಡೆಯಲಿ. ಆದರೆ ಧಾರ್ಮಿಕ ನಂಬಿಕೆಗೆ ತೊಂದರೆ ಉಂಟು ಮಾಡುವಂತಹ ಷಡ್ಯಂತ್ರಗಳನ್ನು ಒಪ್ಪಲಾಗದು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಡಾ| ವೈ. ಭರತ್ ಶೆಟ್ಟಿ, ಧರ್ಮಸ್ಥಳಕ್ಕೆ ಹೋಗಬಾರದು ಎಂದು ಕೆಲವರು ಕೆಲವು ಮಾಧ್ಯಮಗಳಲ್ಲಿ ಹಾಕಿಸುತ್ತಿದ್ದಾರೆ. ಇದೂ ಷಡ್ಯಂತ್ರ ಎಸ್‍ಐಟಿ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಸತ್ಯ-ಸುಳ್ಳನ್ನು ಕಾನೂನು, ನ್ಯಾಯಾಂಗ ವ್ಯವಸ್ಥೆ ನಿರ್ಣಯಿಸಲಿ. ಆದರೆ ಕ್ಷೇತ್ರ, ದೇವರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಒಪ್ಪಲಾಗದು ಎಂದರು.
ಶಾಸಕ ರಾಜೇಶ್ ನಾೈಕ್, ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಪಕ್ಷದ ಮುಖಂಡರಾದ ಪ್ರೇಮಾನಂದ ಶೆಟ್ಟಿ, ಮಹೇಶ್, ವಿಕಾಸ್ ಪುತ್ತೂರು, ಅರುಣ್ ಶೇಟ್ ಉಪಸ್ಥಿತರಿದ್ದರು.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top