ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಮೂಡಬಿದ್ರೆ ಅವರಿಗೆ ‘ಸಮಾಜ ರತ್ನ’ ಪ್ರಶಸ್ತಿ ಪ್ರದಾನ

112.7K Views 5 Jul 2025

ಮಂಗಳೂರು: ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮವು ಜೂನ್ 24ರ ಮಂಗಳವಾರ ಸಂಜೆ ಗಂಟೆ 4.00ರಿಂದ 9.00ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ (ಟೌನ್‍ಹಾಲ್)ನಲ್ಲಿ ನಡೆಯಿತು.
ಸೌಹಾರ್ದ ಸಂಗಮವನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿ, ನಮ್ಮ ಜಿಲ್ಲೆಗೆ ಸೌಹಾರ್ದತೆಯ ಕೊರತೆ ಇದ್ದು ಇಂತಹ ಸೌಹಾರ್ದ ಸಂಗಮಗಳು ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣವಾಗಿ ಸಮಾಜವನ್ನು ತಲುಪುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈಯವರು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಕೊರತೆಯಿರುವುದು ಸೌಹಾರ್ದತೆಯಲ್ಲಿ ಎಂದರು. ಇಂತಹ ಕೊರತೆಯನ್ನು ಸೌಹಾರ್ದ ಸಂಗಮದಂತಹ ಜನಪರ ಕಾರ್ಯಕ್ರಮಗಳು ನೀಗಿಸಬಲ್ಲದು ಎಂದು ಸೌಹಾರ್ದ ಸಂಗಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸೌಹಾರ್ದತೆ ಎನ್ನುವುದು ಈ ಸಮಾಜಕ್ಕೆ ಬೀಜಮಂತ್ರವಾಗಲಿ. ಶಾಂತಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಸಂಗಮದ ಮೂಲಕ ರಾಷ್ಟ್ರವ್ಯಾಪ್ತಿ ಪಸರಿಸಲಿ ಎಂದು ದೇವರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್‍ರವರು ಹೇಳಿದರು. ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯಾನ ಸಲ್ಡಾನ ಅವರು ಸೌಹಾರ್ದ ಸಂಗಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಮನುಷ್ಯ-ಮನುಷ್ಯರ ನಡುವೆ ಸೌಹಾರ್ದತೆ, ಭಾೃತತ್ವ ಅತ್ಯಗತ್ಯವಾಗಿದ್ದು ಜಾತಿ, ಮತ, ಪಕ್ಷ-ಭೇದವಿಲ್ಲದೆ ಸಾಧಕರುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೌಹಾರ್ದ ಸಂಗಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಲ್ಲಿ ಸಂಘಟಕರ ಪ್ರಯತ್ನ ಮೆಚ್ಚತಕ್ಕದ್ದು ಎಂದು ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈಯವರು ತಿಳಿಸಿದರು.
ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯ ಆರ್. ಶೆಟ್ಟಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ., ಎಂ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷ ಅನಿಲ್ ಲೋಬೊ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.
ನರೇಶ್‍ಕುಮಾರ್ ಸಸಿಹಿತ್ಲು ಇವರು ಸ್ವಾಗತಿಸಿ, ಎಸ್.ಆರ್. ಪ್ರದೀಪ್ ವಂದಿಸಿದರು, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ್ ಶೆಟ್ಟಿ ಬಿ.ಎನ್.ರವರು ಪ್ರಸ್ತಾವನೆಗೈದರು. ದಿನಕರ ಡಿ. ಬಂಗೇರ, ಸನ್ಮಾನ ಪತ್ರ ವಾಚಿಸಿದರು. ಕನ್ನಡ-ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸಮಂಜರಿ ಮತ್ತು ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗ ಚಲನ ಕಲಾವಿದರು ಮಂಗಳೂರು ಇವರಿಂದ ಯುವಜಾಗೃತಿ ಹಾಡುಗಳ ಮಿಶ್ರಣ ನಾಟಕ ವಿನೂತನ ಕಾರ್ಯಕ್ರಮ ನಡೆಯಿತು.
ಈ ಸೌಹಾರ್ದ ಸಂಗಮದಲ್ಲಿ ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಪುಣೆ-ಮೂಡಬಿದ್ರೆ ಅವರಿಗೆ ‘ಸಮಾಜ ರತ್ನ’ ಪ್ರಶಸ್ತಿ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಕಾರಣಾಂತರದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಲು ಬರಲಾಗುವುದಿಲ್ಲವೆಂದು ಹೇಳಿರುವ ಸನ್ಮಾನಿತರು ತನ್ನ ಪರವಾಗಿ ಪ್ರಶಸ್ತಿಯನ್ನು ತನ್ನ ಸಹೋದರ ರಾಜೇಶ್ ಹೆಗ್ಡೆ ಮೂಡಬಿದಿರೆ ಅವರ ಮೂಲಕ ಹಸ್ತಾಂತರಿಸಬೇಕು ಎಂದು ವಿನಂತಿಸಿದ್ದರು.
ಅದರಂತೆ ಡಾ. ಸುಧಾಕರ ಶೆಟ್ಟಿ ಪುಣೆ, ಮೂಡಬಿದ್ರೆಯವರಿಗೆ ‘ಸಮಾಜ ರತ್ನ’ ಪ್ರಶಸ್ತಿಯನ್ನು ರಾಜೇಶ್ ಹೆಗ್ಡೆಯವರ ಮೂಲಕ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಗಿದೆ.
ಡಾ. ಸುಧಾಕರ ಶೆಟ್ಟಿ *
ಇಡೀ ಜಗತ್ತನ್ನು ಮಾರಕ ಕೊರೋನಾ ಕಾಡಿದಾಗ ಪುಣೆಯಲ್ಲಿ 10 ಸಾವಿರಕ್ಕೂ ಮಿಕ್ಕಿ ರೋಗಿಗಳಿಗೆ ಅದರಲ್ಲೂ 1,500ಕ್ಕೂ ಮಿಕ್ಕಿ ಕರ್ನಾಟಕದವರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಿದ ಡಾ. ಸುಧಾಕರ ಶೆಟ್ಟಿಯವರು ಇದಕ್ಕಾಗಿ ಸತತ 4 ಬಾರಿ ಕೇಂದ್ರ ಸರಕಾರದ ಪ್ರತಿಷ್ಠಿತ ರಕ್ಷಾ ಮಂತ್ರಿ ಅವಾರ್ಡ್ ಪಡೆದ ತಂಡದ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ.
ಮೂಡಬಿದ್ರೆಯ ಪ್ರತಿಷ್ಠಿತ ಬಂಟ ಮನೆತನದಲ್ಲಿ ಜನಿಸಿದ ಡಾ. ಸುಧಾಕರ ಶೆಟ್ಟಿಯವರು ಕಳೆದ 37 ವರ್ಷಗಳಿಂದ ಪುಣೆಯಲ್ಲಿ ಮಕ್ಕಳ ತಜ್ಞರಾಗಿ ಲಕ್ಷಕ್ಕೂ ಮಿಕ್ಕಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಿದ ಕೀರ್ತಿ ಹೊಂದಿದ್ದಾರೆ.
ಕಳೆದ 31 ವರ್ಷಗಳಿಂದ ಪುಣೆಯಲ್ಲಿ ಪ್ರತಿಷ್ಠಿತ ಬೇಬಿ ಫ್ರೆಂಡ್ ಮಕ್ಕಳ ಕ್ಲಿನಿಕ್‍ನ್ನು ಹೊಂದಿರುವ ಸನ್ಮಾನ್ಯರು ಪುಣೆ ಪೊಲೀಸ್ ಹಾಸ್ಪಿಟಲ್, ಪುಣೆ ಕಂಟೋನ್ಮೆಂಟ್ ಹಾಸ್ಪಿಟಲ್, SRP ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಭಾರತೀಯ ವಿದ್ಯಾಪೀಠ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವ ಸನ್ಮಾನಿತರು ಮೂಡಬಿದ್ರೆಯ ಡಾ. ಎಂ. ಮೋಹನ್ ಆಳ್ವರ ವಿದ್ಯಾಸಂಸ್ಥೆಯಲ್ಲಿ ವಿಶೇಷ ಉಪನ್ಯಾಸಕರಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ್ದಾರೆ.
ಸಾವಿರಕ್ಕೂ ಮಿಕ್ಕಿ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಭಾಗವಹಿಸಿರುವ ಸನ್ಮಾನ್ಯರು ಮೂಡಬಿದ್ರೆಯ ಡಾ. ಎಂ. ಮೋಹನ್ ಆಳ್ವರ ಸಹಕಾರದೊಂದಿಗೆ ಕಟೀಲು ಮಕ್ಕಳ ಸಂಚಾರಿ ಕ್ಲಿನಿಕನ್ನು ಉಚಿತವಾಗಿ ಆರಂಭಿಸಿರುವ ಜನಮೆಚ್ಚಿದ ವೈದ್ಯಕೀಯ ಸಮಾಜಸೇವಕರಾಗಿ ಗುರುತಿಸಿದ್ದಾರೆ.
25 ಶಾಲೆಗಳಲ್ಲಿ ಸ್ಕೂಲ್ ಹೆಲ್ತ್ ಪ್ರೋಗ್ರಾಂ, ಪುಣೆ ರೆಡ್‍ಲೈಟ್ ಏರಿಯಾದಲ್ಲಿ ಅಲ್ಲಿನ ಮಹಿಳೆಯರ ಮಕ್ಕಳ ಆರೋಗ್ಯ ರಕ್ಷಣೆ, ಈ ಬಗ್ಗೆ ಜಾಗೃತಿ. ಉಚಿತ ಆರೋಗ್ಯ ತಪಾಸಣೆ ನಡೆಸಿದ ದೇಶದ ಪ್ರಪ್ರಥಮ ವೈದ್ಯರಾಗಿ ಸನ್ಮಾನಿತರು ಗುರುತಿಸಿಕೊಂಡಿದ್ದಾರೆ.
ಪುಣೆ ಮಹಿಳಾ ಸೆಂಟ್ರಲ್ ಜೈಲಿನ ಖೈದಿಗಳ ಮಕ್ಕಳ ಆರೋಗ್ಯ ರಕ್ಷಣೆ ಬಗ್ಗೆ ಕೂಡಾ ವಿಶೇಷ ವೈದ್ಯಕೀಯ ತಪಾಸಣೆಯನ್ನು ನಡೆಸುತ್ತಾ ಬಂದಿರುವ ಡಾ. ಸುಧಾಕರ ಶೆಟ್ಟಿಯವರು ನೇರ ಮಾತಿನ, ನಿಷ್ಕಳಂಕ, ನಿಸ್ವಾರ್ಥ ವೈದ್ಯಕೀಯ ಸಮಾಜಸೇವಕರು. ಹಗಲಿರುಳು ವೈದ್ಯಕೀಯ ಜಗತ್ತಿನಲ್ಲಿ ಕಾಣಸಿಗುವ ವೈದ್ಯಕೀಯ ಲೋಕದ ಅಪೂರ್ವ ಸಾಧಕ, ಸಮಾಜಚಿಂತಕ ಇವರಿಗೆ 2022ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೋವಿಡ್ ಸಂದರ್ಭ ಸಲ್ಲಿಸಿದ ಅತ್ಯುತ್ತಮ ಸೇವಾಗಿ ಪುಣೆ ಕಂಟೋನ್ಮೆಂಟ್ ಬೋರ್ಡ್‍ನಿಂದ ಎಕ್ಸಲೆನ್ಸಿ ಸರ್ಟಿಫಿಕೇಟ್, ಸಿಖ್ ಸಮುದಾಯದಿಂದ ಚಾರ್ ಸಹಿಬಜಾದೆ ಅವಾರ್ಡ್ ದೊರಕಿರುತ್ತದೆ.

Scroll to Top