ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ ಅವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಪ್ರದಾನ

92.5K Views 28 Jun 2025

ಮಂಗಳೂರು: ಎಂಪಿ ಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮವು ಜೂನ್ 24ರ ಮಂಗಳವಾರ ಸಂಜೆ ಗಂಟೆ 4.00ರಿಂದ 9.00ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ (ಟೌನ್‍ಹಾಲ್) ದಲ್ಲಿ ನಡೆಯಿತು.
ಸೌಹಾರ್ದ ಸಂಗಮವನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿ, ನಮ್ಮ ಜಿಲ್ಲೆಗೆ ಸೌಹಾರ್ದತೆಯ ಕೊರತೆ ಇದ್ದು, ಇಂತಹ ಸೌಹಾರ್ದ ಸಂಗಮಗಳು ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣವಾಗಿ ಸಮಾಜವನ್ನು ತಲುಪುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈಯವರು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಕೊರತೆಯಿರುವುದು ಸೌಹಾರ್ದತೆಯಲ್ಲಿ ಎಂದರು. ಇಂತಹ ಕೊರತೆಯನ್ನು ಸೌಹಾರ್ದ ಸಂಗಮದಂತಹ ಜನಪರ ಕಾರ್ಯಕ್ರಮಗಳು ನೀಗಿಸಬಲ್ಲದು ಎಂದು 13ನೇ ಸೌಹಾರ್ದ ಸಂಗಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸೌಹಾರ್ದತೆ ಎನ್ನುವುದು ಈ ಸಮಾಜಕ್ಕೆ ಬೀಜಮಂತ್ರವಾಗಲಿ. ಶಾಂತಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಸಂಗಮದ ಮೂಲಕ ರಾಷ್ಟ್ರವ್ಯಾಪ್ತಿ ಪಸರಿಸಲಿ ಎಂದು ದೇವರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್‍ರವರು ಹೇಳಿದರು. ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯಾನ ಸಲ್ಡಾನ ಅವರು ಸೌಹಾರ್ದ ಸಂಗಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಮನುಷ್ಯ-ಮನುಷ್ಯರ ನಡುವೆ ಸೌಹಾರ್ದತೆ, ಭಾೃತತ್ವ ಅತ್ಯಗತ್ಯವಾಗಿದ್ದು ಜಾತಿ, ಮತ, ಪಕ್ಷ-ಭೇದವಿಲ್ಲದೆ ಸಾಧಕರುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೌಹಾರ್ದ ಸಂಗಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಲ್ಲಿ ಸಂಘಟಕರ ಪ್ರಯತ್ನ ಮೆಚ್ಚತಕ್ಕದ್ದು ಎಂದು ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈಯವರು ತಿಳಿಸಿದರು.
ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯ ಆರ್. ಶೆಟ್ಟಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ., ಎಂ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷ ಅನಿಲ್ ಲೋಬೊ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.
ನರೇಶ್‍ಕುಮಾರ್ ಸಸಿಹಿತ್ಲು ಇವರು ಸ್ವಾಗತಿಸಿ, ಎಸ್.ಆರ್. ಪ್ರದೀಪ್ ವಂದಿಸಿದರು, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ್ ಶೆಟ್ಟಿ ಬಿ.ಎನ್.ರವರು ಪ್ರಸ್ತಾವನೆಗೈದರು.ದಿನಕರ ಡಿ. ಬಂಗೇರ ಅವರು ಸನ್ಮಾನ ಪತ್ರ ವಾಚಿಸಿದರು. ಕನ್ನಡ-ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸಮಂಜರಿ ಮತ್ತು ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗ ಚಲನ ಕಲಾವಿದರು ಮಂಗಳೂರು ಇವರಿಂದ ಯುವಜಾಗೃತಿ ಹಾಡುಗಳ ಮಿಶ್ರಣ ನಾಟಕ ವಿನೂತನ ಕಾರ್ಯಕ್ರಮ ನಡೆಯಿತು.
ಈ ಸೌಹಾರ್ದ ಸಂಗಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರ ವಲಯದ ಮಾಜಿ ನಿರ್ದೇಶಕರು ಮತ್ತು ಮೂಲ್ಕಿ ಸುಂದರರಾಮ್ ಶೆಟ್ಟಿ ಸೌಹಾರ್ದ ಸಹಕಾರಿ ಲಿಮಿಟೆಡ್ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ ಅವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ *
ಅನುಪಮ ಜನಸೇವಕ, ಸಾಮಾಜಿಕ, ಸಹಕಾರಿ ರಂಗದ ಸಾಧಕ, ಅಪೂರ್ವ ಸಂಘಟಕ, ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರ ವಲಯದ ಮಾಜಿ ನಿರ್ದೇಶಕ, ಮೂಲ್ಕಿ ಸುಂದರರಾಮ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಲಿ. ಬೆಂಗಳೂರ ಇದರ ಅಧ್ಯಕ್ಷರಾಗಿರುವ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರು ಪ್ರತಿಷ್ಠಿತ ಬೆಳ್ಳಿಪ್ಪಾಡಿ, ಅಗರಿ ಮತ್ತು ಪಾವೂರು ಗುತ್ತು ಬಂಟ ಮನೆತನದ ಹಿರಿಯ ನಾಯಕರಾಗಿದ್ದಾರೆ.
ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಹಕಾರ ಕ್ಷೇತ್ರದಲ್ಲಿ ಅದ್ವಿತೀಯ, ಅನುಪಮ ನಿಸ್ವಾರ್ಥ ಸೇವೆ ಗೈದಿರುವ ಸನ್ಮಾನಿತರು ಪ್ರತಿಷ್ಠಿತ ಮಲೇಷಿಯಾದ ಇಂಟರ್‍ನ್ಯಾಷನಲ್ ಅವಾರ್ಡ್, ಇಂದಿರಾ ಗಾಂಧಿ ಸದ್ಭಾವನಾ ಅವಾರ್ಡ್, ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋಪರೇಟಿವ್ ಸೊಸೈಟಿಯ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ, ಕರ್ನಾಟಕ ಪದ್ಮಶ್ರೀ ಪ್ರಶಸ್ತಿ, ಸಮಾಜ ಸೇವಾರತ್ನ ಅವಾರ್ಡ್, ಡಾ. ರಾಜ್‍ಕುಮಾರ್ ಅವಾರ್ಡ್ ಸಹಿತ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿರುತ್ತಾರೆ.
ಆರ್ ಬಿ ಐ ನ ನಿರ್ದೇಶಕರಾಗಿ ಸುಂದರರಾಮ್ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಲಿ.ನ ಅಧ್ಯಕ್ಷರಾಗಿ, ಸುಂದರರಾಮ್ ಶೆಟ್ಟಿ ವೆಲ್ಫೇರ್ ಅಸೋಸಿಯೇಸನ್ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸನ್ಮಾನಿತರು ಬೆಂಗಳೂರಿನಲ್ಲಿ 535 ಮಾದರಿ ವಸತಿ ಸಂಕೀರ್ಣ ಸೊಸೈಟಿ ಮುಖಾಂತರ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಿರುತ್ತಾರೆ.
ವಿಜಯಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿ ಮುಖಾಂತರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಬಿಳೇಕ ಹಳ್ಳಿಯಲ್ಲಿ 111.31 ಗುಂಟ ವಿಸ್ತೀರ್ಣದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ನಿರ್ಮಾಣದಲ್ಲಿ ಸೊಸೈಟಿಯ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ,1991ರಿಂದ 2015ರವರೆಗೆ ಪ್ರಮುಖ ಪಾತ್ರ ವಹಿಸಿರುತ್ತಾರೆ.
ಬೆಂಗಳೂರಿನ ಸುಂದರರಾಮ ಶೆಟ್ಟಿ ನಗರದಲ್ಲಿ ಅಯ್ಯಪ್ಪ ದೇವಾಲಯ, ಶಿವನ ದೇವಾಲಯ ಮತ್ತು ಇತರ ಗುಡಿಗಳ ನಿರ್ಮಾಣ ಕಾರ್ಯ ಸೇರಿದಂತೆ ಸಾಮಾಜಿಕ, ಧಾರ್ಮಿಕ, ಸಹಕಾರ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಸುದೀರ್ಘ ಸೇವೆಗಾಗಿ ಸನ್ಮಾನಿತರಿಗೆ ಕರ್ನಾಟಕ ಸರಕಾರವು ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಕೊಡುಗೈದಾನಿ, ನಿಸ್ವಾರ್ಥ ಸಮಾಜಸೇವಕ, ನುಡಿದಂತೆ ನಡೆವ ಅಪರೂಪದ ಅದ್ವಿತೀಯ ಸಾಧಕ, ಸೌಹಾರ್ದ ನಾಟಕ ಸನ್ಮಾನ್ಯ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರಿಗೆ ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ಗಣ್ಯರ ಸಮ್ಮುಖದಲ್ಲಿ ‘ಸೌಹಾರ್ದ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

Read More News

Scroll to Top