ಮಂಗಳೂರು: ನಮ್ಮ ಜಿಲ್ಲೆ ಸೌಹಾರ್ದತೆಗೆ ಹೆಸರಾಗಿದೆ .ಆದರೆ, ಇತ್ತೀಚಿನ ದಿನಗಳಲ್ಲಿ ಹೆಸರು ಕೆಡುತ್ತಿದ್ದು ಜಾತೀಯತೆ ಎನ್ನುವುದು ಕೇವಲ ಬಾಯಲ್ಲಿ ಇರಬಾರದು .ಅದು ಹುಟ್ಟುವಾಗಲೇ ಬರಬೇಕು .ಸೌಹಾರ್ದ ಸಂಗಮ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಎಂಪಿ ಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮ ಕಾರ್ಯಕ್ರಮವು ಯಶಸ್ವಿಯಾಗಿ ಜನರನ್ನು ತಲುಪಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರವರು ಹೇಳಿದರು
ಅವರು ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ನಡೆದ ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬಿ ರಮಾನಾಥ ರೈ ಅವರು, ವರ್ತಮಾನ ಕಾಲದಲ್ಲಿ ಇಡೀ ಜಗತ್ತಿಗೆ ಸೌಹಾರ್ದತೆಯ ಅಗತ್ಯವಿದೆ. ಮನುಷ್ಯ ಮನುಷ್ಯರ ನಡುವೆ ಸಂಬಂಧಗಳು ಹದಗೆಡುತ್ತಿರುವ ಇಂದಿನ ದಿನದಲ್ಲಿ ಸಾಮರಸ್ಯ ನಮ್ಮ ನಡುವಿನ ಸೇತುವೆಯಾಗಬೇಕು .ಈ ನಿಟ್ಟಿನಲ್ಲಿ ಸೌಹಾರ್ದ ಸಂಗಮ ವಿಶೇಷ ಕಾರ್ಯಕ್ರಮವಾಗಿ ನಮ್ಮೆದುರಿಗೆ ಇದೆ ಎಂದರು. ಇಡೀ ದೇಶದಲ್ಲಿ ಅಭಿವೃದ್ಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದೆ ಹಿರಿಯರಾದ ಶ್ರೀನಿವಾಸ್ ಮಲ್ಯ ಸೇರಿದಂತೆ ಅನೇಕ ಗಣ್ಯರು ಈ ಜಿಲ್ಲೆಯನ್ನು ಮುನ್ನಲೆಗೆ ತರುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಆದರೆ ,ಇಂದು ಸೌಹಾರ್ದತೆಯಲ್ಲಿ ಈ ಜಿಲ್ಲೆಯಲ್ಲಿ ಕೊರತೆ ಇದೆ .ನಮ್ಮ ನಡುವೆ ಸೌಹಾರ್ದತೆ ಸಹಬಾಳ್ವೆ ಮೆರೆದು ಹಿರಿಯರ ತ್ಯಾಗವನ್ನು ನಾವು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟರು.







ಈ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಉತ್ತರ ವಲಯದ ಮಾಜಿ ನಿರ್ದೇಶಕರಾದ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ ಅವರಿಗೆ ಸೌಹಾರ್ದರತ್ನ ಪ್ರಶಸ್ತಿ, ಪುಣೆಯ ಖ್ಯಾತ ಮಕ್ಕಳ ತಜ್ಞರಾದ ಡಾ. ಸುಧಾಕರ್ ಶೆಟ್ಟಿ ಪುಣೆ ಮೂಡಬಿದ್ರೆ ಇವರಿಗೆ ಸಮಾಜ ರತ್ನ ಪ್ರಶಸ್ತಿ, ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕರಾದ ಡಾ. ರೋಹನ್ ಮೊಂತೆರೋ ಅವರಿಗೆ ಉದ್ಯಮ ರತ್ನ ಪ್ರಶಸ್ತಿ, ಖ್ಯಾತ ಹಿರಿಯ ಶಸ್ತ್ರ ಚಿಕಿತ್ಸಾತಜ್ಞರಾದ ಡಾ. ಶ್ರೀರಾಮ್ ಭಟ್ ಎಂ ಅವರಿಗೆ ವೈದ್ಯರತ್ನ ಪ್ರಶಸ್ತಿ, ಕೆಎಂಸಿ ಆಸ್ಪತ್ರೆ, ಮಂಗಳೂರು ಇದರ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಗಾಸ್ಟ್ರೋ ಎಂಟರಲಾಜಿ ಡಾ ಅನುರಾಗ್ ಜೆ .ಶೆಟ್ಟಿ ಇವರಿಗೆ ಬೆಸ್ಟ್ ಡಾಕ್ಟರ್ಸ್ ಅವಾರ್ಡ್, ಜನಪ್ರಿಯ ನಾಟಿವೈದ್ಯ ಬಂಟ್ವಾಳ ಅನಂತಾಡಿಯ ಗಂಗಾಧರ ಕರಿಯ ಪಂಡಿತ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.












ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಮಾತನಾಡಿ
ಈ ಸಮಾಜಕ್ಕೆ ಸೌಹಾರ್ದತೆ ಎನ್ನುವುದು ಬೀಜ ಮಂತ್ರವಾಗಲಿ .ಶಾಂತಿ ಸಾಮರಸ್ಯದ ಸಂದೇಶವನ್ನು ಇಂತಹ ಸೌಹಾರ್ದ ಸಂಗಮ ಕಾರ್ಯಕ್ರಮದ ಮೂಲಕ ರಾಷ್ಟ್ರ ವ್ಯಾಪಿಸಲಿ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರಿನ ಹಿರಿಯ ನ್ಯಾಯವಾದಿ ಕೆ ದಯಾನಂದ ರೈ ಅವರು ಈ ದೇಶದ ಸಂವಿಧಾನದಲ್ಲಿ ನಾವೆಲ್ಲ ಒಂದಾಗಿ ಬ್ರಾತೃತ್ವದಿಂದ ಬದುಕಬೇಕು ಎಂದು ಬರೆದಿದೆ .ಈ ಸೌಹಾರ್ದತೆ ಎನ್ನುವುದು ಇಂತಹ ಕಾರ್ಯಕ್ರಮದ ಮೂಲಕ ಜಾತಿ ಮತ ಪಕ್ಷಗಳ ಭೇದವಿಲ್ಲದೆ ಪಸರಿಸಲಿ. ಜೊತೆಗೆ ವಿವಿಧ ಕ್ಷೇತ್ರದ ಸಾಧಕರುಗಳನ್ನು ಜಾತಿ ಮತ ಭೇದವಿಲ್ಲದೆ ಸಾಧನೆಯನ್ನು ಗುರುತಿಸಿ ಸನ್ಮಾನಿಸುವುದು ಅವರ ಮುಂದಿನ ನಡೆಗೆ ಪ್ರೇರಣೆಯಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಸಂಘಟಕರ ಪ್ರಯತ್ನ ಶ್ಲಾಘನೀಯವಾಗಿದೆ ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರನ್ನು ಮುನ್ನಲೆಗೆ ತಂದು ಗುರುತಿಸುವ ಜೊತೆಗೆ ಸೌಹಾರ್ದ ಸಂದೇಶವನ್ನು ನೀಡಿ ಶಾಂತಿ ಸಾಮರಸ್ಯಕ್ಕೆ ಕರೆ ನೀಡಿರುವುದು ಅಭಿನಂದನೀಯ ಕೆಲಸ.









ಕಾರ್ಯಕ್ರಮದಲ್ಲಿ ಯುವ ವಾಹಿನಿ. ರಿ. ಕೇಂದ್ರ ಸಮಿತಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ನಾಟಕ ಸಿನಿಮಾ ಕಲಾವಿದೆ ಉಷಾ ದೇವರಾಜ್ ಕುಲಾಲ್ ಇವರಿಗೆ ಸೌಹಾರ್ದ ಪುರಸ್ಕಾರ ನೀಡಿ ಗೌರವಿಸಲಾಯಿತು ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯಾ ಆರ್.ಶೆಟ್ಟಿ, ಯುವ ವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೇಶ್ ಬಿ ,ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯನ್ ಸಾಲ್ದಾನ, ಎಂಸಿಸಿ ಬ್ಯಾಂಕ್ ನ ಅಧ್ಯಕ್ಷ ಅನಿಲ್ ಲೋಬೋ, ವೆನ್ ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಮೂತ್ರ ರೋಗ ತಜ್ಞರಾದ ಡಾ. ಸದಾನಂದ ಪೂಜಾರಿ ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್, ಮಂಗಳೂರು ಪ್ರೆಸ್ ಅಧ್ಯಕ್ಷ ಪಿ. ಬಿ .ಹರೀಶ್ ರೈ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ,ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷ್ಯೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮುಂತಾದವರು ಉಪಸ್ಥಿತರಿದ್ದರು .ಎಂಪಿ ಎಂ ಎಲ್ ಎ ನ್ಯೂಸ್ ನ ಸಂಪಾದಕರಾದ ಡಾ.ಅಶೋಕ್ ಶೆಟ್ಟಿ ಬಿ.ಎನ್. ಪ್ರಸ್ತಾವನೆ ಮಾತುಗಳನ್ನಾಡಿದರು. ನರೇಶ್ ಕುಮಾರ್ ಸಸಿಹಿತ್ಲು ಸ್ವಾಗತಿಸಿ, ಎಸ್.ಆರ್ .ಪ್ರದೀಪ್ ಧನ್ಯವಾದ ಕಾರ್ಯಕ್ರಮ ನಿರೂಪಿಸಿದರು.

ನರೇಶ್ ಸಸಿಹಿತ್ಲು, ಮಲ್ಲಿಕಾಶೆಟ್ಟಿ, ದಿನಕರ ಡಿ.ಬಂಗೇರ,ಡಾ.ಅಶೋಕ್ ಶೆಟ್ಟಿ ಬಿ .ಎನ್. ಪ್ರಶಸ್ತಿ ಪುರಸ್ಕೃತರ ವಿವರವನ್ನು ವಾಚಿಸಿದರು .ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳು -,ಕನ್ನಡ ಚಲನ ಚಿತ್ರ ಹಿನ್ನೆಲೆ ಗಾಯಕರಾದ ರವೀಂದ್ರ ಪ್ರಭು ಮತ್ತು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸ ಮಂಜರಿ ಹಾಗೂ ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗಾಚಲನ. ರಿ. ಮಂಗಳೂರು ಕಲಾವಿದರಿಂದ ಯುವ ಜಾಗೃತಿ ಹಾಡುಗಳ ಮಿಶ್ರಣ ನಾಟಕ ಎನ್ನುವ ವಿನೂತನ ಕಾರ್ಯಕ್ರಮ ನಡೆಯಿತು. ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ರೆಡ್ಡಿ,ಡಿಸಿಪಿ ಸಿದ್ದಾರ್ಥ ಗೋಯಲ್,ಪಾಂಡೇಶ್ವರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ್ ,ಪಾಂಡೇಶ್ವರ ಠಾಣಾ ಎಎಸ್ಐ ಹರೀಶ್, ಸುನಿಲ್ ಅವರಿಗೆ ಕಾರ್ಯಕ್ರಮದ ಸಂಘಟಕ ಡಾ.ಅಶೋಕ್ ಶೆಟ್ಟಿ ಬಿ. ಎನ್.ಅವರು ಧನ್ಯವಾದ ಸಲ್ಲಿಸಿದರು. 13ನೇ ಸೌಹಾರ್ದ ಸಂಗಮವು ನಮ್ಮ ಕುಡ್ಲ ಟಿವಿ ಚಾನೆಲ್ ನಲ್ಲಿ ನೇರಪ್ರಸಾರ ಗೊಂಡು ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.























































































































































































