ಕಾಲ್ತುಳಿತ ಪ್ರಕರಣಕ್ಕೆ ನಿಜವಾದ ಕಾರಣೀಕರ್ತರು ಯಾರು? ಸಿದ್ಧರಾಮಯ್ಯರವರ ಕ್ರಮ ಎಷ್ಟು ಸರಿ?

109.4K Views 7 Jun 2025

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.
ಬೆಂಗಳೂರು: 11 ಮಂದಿ ಆರ್‌ಸಿಬಿ ಅಭಿಮಾನಿಗಳ ದುರಂತ ಸಾವಿಗೆ ಸಿದ್ಧರಾಮಯ್ಯನವರು ಐವರು ಪೊಲೀಸ್ ಅಧಿಕಾರಿಗಳ ಸಸ್ಪೆಂಡ್, ರಾಜ್ಯ ಗುಪ್ತಚರ ಇಲಾಖೆಯ ಎಡಿಜಿಪಿಯವರ ವರ್ಗಾವಣೆ, ಆರ್‌ಸಿಬಿ ಮಾರ್ಕೆಟಿಂಗ್ ಹೆಡ್, ಡಿಎನ್‌ಎ ಇವೆಂಟ್ ಮ್ಯಾನೇಜ್‌ಮೆಂಟ್ ಸೇರಿದಂತೆ ಐವರ ಮೇಲೆ ಎಫ್‌ಐಆರ್, ಕೆಎಸ್‌ಸಿಎ ಮೇಲೆ ಪ್ರಕರಣ ದಾಖಲು, ಸಿ.ಎಂ ಅವರ ಆಪ್ತ ಕಾರ್ಯದರ್ಶಿ ಗೋವಿಂದ ರಾಜು ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿ ಕ್ರಮದ ಮೇಲೆ ಕ್ರಮವನ್ನು ಜರಗಿಸುತ್ತಾ ಹೋದರೂ ಎಲ್ಲೂ ಕೂಡಾ ಆರ್‌ಸಿಬಿ ಸಂಭ್ರಮಾಚರಣೆಯನ್ನು ಅವಸರವಸರದಿಂದ ತರಾತುರಿಯಲ್ಲಿ ನಡೆಸಿದ್ದು ಏಕೆ ಎಂಬ ಬಗ್ಗೆ ಇನ್ನೂ ಉತ್ತರ ಕೊಟ್ಟಿಲ್ಲ.


ಮಾಜಿ ಡಿಜಿಪಿ ಶಂಕರ್ ಬಿದರಿಯವರು ಹೇಳುವಂತೆ, ಇಂಥದ್ದೊಂದು ಅದ್ಧೂರಿ ಕಾರ‍್ಯಕ್ರಮವನ್ನು ನಡೆಸಲು ಇದಕ್ಕೆ ಭದ್ರತೆ ಕೊಡಲು ಕನಿಷ್ಠ 2-3 ದಿನಗಳ ಕಾಲಾವಕಾಶವನ್ನಾದರೂ ಕೊಡಬೇಕಿತ್ತು. ಆದರೆ, ಮುಖ್ಯಮಂತ್ರಿಯವರು ಅದಕ್ಕಾವಕಾಶ ಕೊಡಲಿಲ್ಲ. ಪೊಲೀಸರ ಮೇಲೆ ಒತ್ತಡ ಹಾಕಿ ಕಾರ‍್ಯಕ್ರಮ ಈಗಲೇ ನಡೆಸಬೇಕೆಂದು ಆದೇಶಿಸಿದ್ದರು.
ಅಷ್ಟೇ ಅಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ‍್ಯಕ್ರಮವನ್ನು ಹಮ್ಮಿಕೊಂಡಾಗ ಅದಕ್ಕೆ ಮೊದಲು ವಿಧಾನಸೌಧದ ಆವರಣದಲ್ಲಿ ಆರ್‌ಸಿಬಿ
ಆಟಗಾರರ ಸನ್ಮಾನ, ವಿಜಯೋತ್ಸವ ಕಾರ‍್ಯಕ್ರಮ ಏರ್ಪಡಿಸಿದ್ದರು. ಇದರಿಂದ ಪೊಲೀಸರು ಎರಡೆರಡು ಕಡೆಗಳಲ್ಲಿ ಭದ್ರತೆ ಕೊಡಬೇಕಾದ
ಅನಿವಾರ‍್ಯತೆಗೆ, ಸಂಕಟಕ್ಕೆ ಸಿಲುಕಿದರು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪೊಲೀಸರ ತಪ್ಪು ಹೇಗಾಗುತ್ತದೆ?
ಎರಡೆರಡು ಕಡೆಗಳಲ್ಲಿ ಕಾರ‍್ಯಕ್ರಮ ನಡೆಸುವ ಅಗತ್ಯವೇನಿತ್ತು? ಸ್ವತಃ ಸಿದ್ಧರಾಮಯ್ಯನವರೇ ಹೇಳುವಂತೆ, ಈ ಕಾರ‍್ಯಕ್ರಮಕ್ಕೆ ತಾನು ಒಪ್ಪಿರಲಿಲ್ಲ.
ಖಾಸಗಿ ಕಾರ‍್ಯಕ್ರಮ ಎಂದಿದ್ದೆ. ಆದರೆ, ತನ್ನ ಆಪ್ತ ಕಾರ‍್ಯದರ್ಶಿಯೇ ಮನವೊಲಿಸಿದರು. ಮೈಲೇಜ್ ಸಿಗುತ್ತದೆಂದಿದ್ದರು. ಅದಕ್ಕಾಗಿಯೇ ಈಗ ಗೋವಿಂದ ರಾಜು ಅವರನ್ನು ಆಪ್ತ ಕಾರ‍್ಯದರ್ಶಿ ಸ್ಥಾನದಿಂದ ವಜಾಗೊಳಿಸಿದ್ದು ಎಂದು ಸಿ.ಎಂ. ಅವರ ಸಮಜಾಯಿಷಿ ಹೇಳಿಕೆ.
ಇನ್ನು ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆದ ವಿಜಯೋತ್ಸವದ ಬಗ್ಗೆ ಹೇಳುವುದಾದರೆ, ಮಧ್ಯಾಹ್ನ 1 ಗಂಟೆಗೆ ಜನ ಸ್ಟೇಡಿಯಂ ಹೊರಗಡೆ
ಗುಂಪು ಸೇರಿದ್ದರು. ಆರ್‌ಸಿಬಿ ಮಾರ್ಕೇಟಿಂಗ್ ಹೆಡ್ ನಿಖಿಲ್ ಸೋಸಲೆ ಉಚಿತ ಪಾಸು ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ
ಪೋಸ್ಟ್ ಹಾಕಿರುವುದ್ದರಿಂದ ಎರಡೂವರೆ ಲಕ್ಷಕ್ಕೂ ಮಿಕ್ಕಿ ಆರ್‌ಸಿಬಿ ಅಭಿಮಾನಿಗಳು ಅಲ್ಲಿ ನೆರೆದಿದ್ದರು.


ಆದರೆ, ಸ್ಟೇಡಿಯಂ ಗೇಟ್ ತೆರೆದದ್ದು ಸಂಜೆ 4 ಗಂಟೆಗೆ. ಎಲ್ಲಾ ಗೇಟ್ ತೆಗೆದಿರಲಿಲ್ಲ. ಕೇವಲ ಎರಡು ಗೇಟ್‌ಗಳನ್ನು ಮಾತ್ರ ತೆರೆದಿದ್ದು ಇದರಿಂದ ಆರ್ ಸಿಬಿ ಅಭಿಮಾನಿಗಳು ಒಳಪ್ರವೇಶಿಸಿದಾಗ ಅಡ್ಡಲಾಗಿಟ್ಟಿದ್ದ ಬ್ಯಾರಿಕೇಡ್‌ಗಳು, ಮ್ಯಾನ್‌ಹೋಲ್ ಸ್ಲಬ್ ಕಟ್ ಆಗಿ ಜನ ಕೆಳಗೆ ಬಿದ್ದರು. ಆಗ ಉಸಿರಾಟದ ಸಮಸ್ಯೆ ಎದುರಾಯಿತು. ಕೆಳಗೆ ಬಿದ್ದವರ ಮೇಲೆ ಜನ ನಡೆದು ಹೋದದ್ದರಿಂದ 11 ಮಂದಿ ಸಾವನ್ನಪ್ಪಿ ,47 ಮಂದಿ ಗಾಯಗೊಂಡರು.
ಬೇರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿಯಲ್ಲಿ 4, ಮಣಿಪಾಲ್ ಆಸ್ಪತ್ರೆಯಲ್ಲಿ ಒಬ್ಬರು ಹೀಗೇ 11 ಮಂದಿ ಮೃತಪಟ್ಟರು.
ಜನರನ್ನು ನಿಯಂತ್ರಿಸಲಾಗದಾಗ ಪೊಲೀಸರು ಸಹಜವಾಗಿಯೇ ಲಾಠಿ ಚಾರ್ಜ್ ಮಾಡಿದ್ದರು. ಜನರು ದುರಂತ ಸಾವಿಗೀಡಾದರೂ
ಆರ್‌ಸಿಬಿ ಸಂಭ್ರಮಾಚರಣೆಯನ್ನು ನಿಲ್ಲಿಸದೇ ಸಮಾರಂಭವನ್ನು ನಡೆಸಿದ್ದು ಸಂಘಟಕರ ಕಟುಕ, ಅಮಾನವೀಯ ನಿಲುವಿಗೆ ಸಾಕ್ಷಿಯಾಯಿತು.
ನಿಜ ಹೇಳಬೇಕಾದರೆ, ಇಷ್ಟು ದೊಡ್ಡ ಕಾರ‍್ಯಕ್ರಮವನ್ನು ಯಾವುದೇ ಪೂರ್ವ ತಯಾರಿ, ಸಿದ್ಧತೆಯಿಲ್ಲದೆ ನಡೆಸಿದ್ದು ಅನಾಹುತಕ್ಕೆ, 11 ಮಂದಿ ಆರ್ ಸಿಬಿ ಅಭಿಮಾನಿಗಳ ದುರಂತ ಸಾವಿಗೆ ಕಾರಣವಾಯಿತು.
ಈ ಅವಸರದ ಕಾರ‍್ಯಕ್ರಮದ ರೂವಾರಿ ಯಾರು? ಯಾಕೆ ಈ ಬಗ್ಗೆ ಸಿ.ಎಂ. ಮಾತಾಡುತ್ತಿಲ್ಲ? ಇಡೀ ಪ್ರಕರಣಕ್ಕೆ ಪೊಲೀಸ್ ವೈಫಲ್ಯವೇ
ಕಾರಣವೆಂದು ಹೇಳಿ ಐವರು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ ಮಾತ್ರಕ್ಕೆ ಜನ ಇದನ್ನು ನಂಬುತ್ತಾರಾ?
40 ವರ್ಷಗಳ ರಾಜಕೀಯ ವೃತ್ತಿ ಬದುಕಿನಲ್ಲಿ ಜನಪರವಾಗಿಯೇ ಸಾಗಿದ್ದ ಸಿದ್ಧರಾಮಯ್ಯನವರು ಇಲ್ಲೇಕೇ ಎಡವಿದರು?
ಕಾರ‍್ಯಕ್ರಮದ ಜವಾಬ್ದಾರಿ ವಹಿಸಿದ್ದವರ ಮೇಲೆ ಕ್ರಮ ಜರುಗಿಸಲಾಗಿದೆಂದ ಮಾತ್ರಕ್ಕೆ ಇದನ್ನು ಸಾರ್ವಜನಿಕರು ಒಪ್ಪುತ್ತಾರಾ? ಅಮಾನತಿಗೊಳಗಾದ ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ದಯಾನಂದ್ ಅವರು 1998ರಲ್ಲಿ ಪುತ್ತೂರು ಎಎಸ್ಪಿಯಾಗಿದ್ದರು. ತದನಂತರ, ದಕ್ಷಿಣ ಕನ್ನಡದ ಎಸ್ಪಿಯಾಗಿಯೂ ಸೇವೆ ಸಲ್ಲಿಸಿದರು. ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದು ಖಡಕ್ ಆಡಳಿತ ನೀಡಿದ ಅವರಿಗೆ ಇನ್ನು ಒಂದೆರಡು ತಿಂಗಳಲ್ಲಿ ಡಿಜಿಪಿಯಾಗುವ ಅವಕಾಶವಿತ್ತು.
ದಯಾನಂದ್‌ರವರ ಆಪ್ತರೊಬ್ಬರು ಕಾಂಗ್ರೆಸ್ ಹೈಮಾಂಡ್ ಸೋನಿಯಾ ಗಾಂಧಿಯವರ ಆತ್ಮೀಯರಾಗಿದ್ದು, ದಯಾನಂದ್ ಅವರು ಮನಸ್ಸು ಮಾಡಿದ್ದರೆ ಸಸ್ಪೆಂಡ್ ಆದೇಶವನ್ನು ತಕ್ಷಣ ರದ್ದುಗೊಳಿಸಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ದಯಾನಂದ್ ಪರ ಅಭಿಯಾನ ನಡೆಯುತ್ತಿದೆ. ಇದರ ಮಧ್ಯೆ ಐಪಿಎಸ್ ಅಧಿಕಾರಿಗಳೆಲ್ಲರೂ ಒಟ್ಟು ಸೇರಿ ಐವರು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ವಾಪಾಸ್ಸು ಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ.
ಅಧಿಕಾರಿಗಳೆಂದರೆ ಮೊದಲೇ ಸಿಎಂಗೆ ಅಲರ್ಜಿ ಎಂದು ಸಿದ್ಧರಾಮಯ್ಯನವರ ಮೇಲೆ ಈ ಹಿಂದೆಯೇ ಬಹಳಷ್ಟು ಟೀಕೆಗಳಿದ್ದವು. ಅದೀಗ ನಿಜವಾಗಿದೆ.
ಸಿದ್ಧರಾಮಯ್ಯನವರು ಮಾಡಿದ್ದು ಎಷ್ಟು ಸರಿ ಎಂಬುವುದು ಚರ್ಚೆಗೆ ಗ್ರಾಸವಾಗಿದೆ.ಇನ್ನೊಂದೆಡೆ, ಇಪ್ಪತ್ತೈದು ಲಕ್ಷ ಕೊಟ್ಟ ಕೂಡಲೇ ಹೋದ ಜೀವ ವಾಪಸ್ ಬರುತ್ತದಾ.ನಾನು ಐವತ್ತು ಲಕ್ಷ ಕೊಡುತ್ತೇನೆ.ನನ್ನ ಮಗನನ್ನು ಜೀವಂತವಾಗಿ ವಾಪಸ್ ಕೊಡುತ್ತೀರಾ ಎಂದು ಮೃತ ಯುವಕನ ಪೋಷಕರೊಬ್ಬರು ಕೇಳುತ್ತಿದ್ದಾರೆ. ಎಲ್ಲದಕ್ಕೂ ಉತ್ತರಿಸಬೇಕಾದ ಹೊಣೆಗಾರಿಕೆ ಸಿಎಂ ಸಿದ್ದರಾಮಯ್ಯ ನವರ ಮೇಲಿದೆ.ಇದಕ್ಕೆ ಆರ್ ಸಿಬಿ ಅಭಿಮಾನಿಗಳ ಅಂಧಾಭಿಮಾನ ಕೂಡಾ ಕಾರಣವಾಗಿದೆ. ಆರ್ ಸಿಬಿ ಕ್ರಿಕೆಟ್ ತಂಡವನ್ನು ಐದು ವರ್ಷಗಳ ಮಟ್ಟಿಗೆ ಬ್ಯಾನ್ ಮಾಡಬೇಕೆಂಬ ಕೂಗು ಕೂಡಾ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top