ನಾ ಕಂಡ ಉಪೇಂದ್ರ. ‘ಎ’ಯಿಂದ U. I. ತನಕ

113.7K Views 4 Dec 2024

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.
ಮಂಗಳೂರು:1998ರಲ್ಲಿ ಉಪೇಂದ್ರ ಚಿತ್ರದ ಚಿತ್ರೀಕರಣ ಬ್ರಹ್ಮರಕೂಟ್ಲು ಸಮೀಪದ ತುಂಬೆ ರಾಮಲ್‌ಕಟ್ಟೆ ಆಲದ ಮರದ ಸುತ್ತ ನಡೆಯುತ್ತಿತ್ತು. ಆಗ ನಾನು ಉಪೇಂದ್ರರವರನ್ನು ಭೇಟಿಯಾಗಿ ಈ ಚಿತ್ರದ ಹೀರೋ ಯಾರು ಎಂದು ಕೇಳಿದೆ.  ಉಪೇಂದ್ರರವರು ‘ನಾನು’ ಅಂತ ಹೇಳಿದರು. ಆದರ ನಂತರ ವಿಲನ್ ಯಾರು ಎಂದು ಕೇಳಿದೆ. ಆಗ ಉಪೇಂದ್ರರವರು ‘ನಾನು’ ಎಂದು ಹೇಳಿದರು.  ಯಾವುದೇ ಪ್ರಶ್ನೆಯನ್ನು ಕೇಳಿದರೂ ಉಪೇಂದ್ರರವರು ನಾನು, ನಾನು ಎನ್ನುತ್ತಲೇ ಇದ್ದರು. ನನಗೆ ಏನೆಂದೇ ಅರ್ಥವಾಗಲಿಲ್ಲ. ಉಪೇಂದ್ರ ಚಿತ್ರ ನೋಡಿದ ಮೇಲೆ ಉಪೇಂದ್ರರವರು ಮನುಷ್ಯನ ಒಳಗಿರುವ ‘ನಾನು ‘ಎಂಬ ಅಹಂಕಾರದ ಬಗ್ಗೆ ಕಥೆ ಹೆಣೆದು ಚಿತ್ರ ಸಂದೇಶ ನೀಡಿದ್ದರು.


ಉಪೇಂದ್ರರವರ ಎಲ್ಲಾ ಚಿತ್ರಗಳು ‘ಎ ’ ಯಿಂದ ಆರಂಭಿಸಿ ವಿಶಿಷ್ಟ ಡೈಲಾಗ್ ಮತ್ತು ಮ್ಯಾನರೀಸಂನಿಂದ ಪ್ರೇಕ್ಷಕರನ್ನು ತಲುಪುತ್ತವೆ.
ಪ್ರಸ್ತುತ ಉಪೇಂದ್ರರವರ ‘U.I’ ಐದು ಭಾಷೆಗಳಲ್ಲಿ ತಯಾರಾಗಿದ್ದು,ಡಿಸೆಂಬರ್ 20ರಂದು ರಾಜ್ಯಾದಾದ್ಯಂತ ಬಿಡುಗಡೆಗೊಳ್ಳಲಿದೆ.
ಉಪೇಂದ್ರರವರು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದಾಗ ಭಾಗವಹಿಸಿ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದೆ.
ಮೊದಲನೆಯದು, ‘U.I’ ಚಿತ್ರ ಡಿಸೆಂಬರ್ 20ಕ್ಕೆ ಬಿಡುಗಡೆಯಾಗುತ್ತದೆ. ಇದರ ಬೆನ್ನಲ್ಲೇ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಡಿಸೆಂಬರ್ 25ಕ್ಕೆ ಬಿಡುಗಡೆಯಾಗುತ್ತದೆ. ಬೆನ್ನು ಬೆನ್ನಿಗೆ ದೊಡ್ಡ ಬಜೆಟ್‌ನ ಚಿತ್ರಗಳು ಬಿಡುಗಡೆಗೊಂಡರೆ ಸಮಸ್ಯೆಯಾಗುವುದಿಲ್ಲವೇ ಎಂದು ಕೇಳಿದಾಗ, ಉಪೇಂದ್ರರವರು ನನ್ನ ಚಿತ್ರದ ಪ್ರೇಕ್ಷಕರು ನನ್ನ ಚಿತ್ರವನ್ನು ನೋಡುತ್ತಾರೆ. ಇದರಿಂದ ನಮಗೇನೂ ಸಮಸ್ಯೆ ಇಲ್ಲ ಎಂದರು.


ಎರಡನೆಯದಾಗಿ, ‘ಎ ’ ಚಿತ್ರದ ಉಪೇಂದ್ರನಿಗೂ ‘U.I’ ಚಿತ್ರದ ಉಪೇಂದ್ರನಿಗೂ ಇರುವ ವ್ಯತ್ಯಾಸ ಏನೆಂದು ಕೇಳಿದೆ. ಆಗ ಅವರು ನೀವು ‘U.I’ ಚಿತ್ರವನ್ನು ನೋಡಿ ಗೊತ್ತಾಗುತ್ತದೆ ಎಂದರು.
ಮೂರನೆಯದಾಗಿ, ಈಗ ಥಿಯೇಟರುಗಳಿಗೆ ಬಂದು ಚಿತ್ರ ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆಯಲ್ಲವೇ ಎಂದು ಕೇಳಿದೆ. ಆಗ ಉಪೇಂದ್ರರವರು ಉತ್ತಮ ಗುಣಮಟ್ಟದ ಸ್ವಾರಸ್ಯಕರ ಕಥೆಯಿರುವ ಚಿತ್ರವನ್ನು ಪ್ರೇಕ್ಷಕರು ಖಂಡಿತಾ ಥಿಯೇಟರಿಗೆ ಬಂದು ನೋಡುತ್ತಾರೆ. ಕನ್ನಡ ಚಿತ್ರ ಪ್ರೇಮಿಗಳು ಎಂದಿಗೂ ಕನ್ನಡ ಚಿತ್ರವನ್ನು ಸೋಲಲು ಬಿಡುವುದಿಲ್ಲವೆಂದರು.
ನಾಲ್ಕನೇಯದಾಗಿ, ನೀವು ಪ್ರಜಾಕೀಯ ರಾಜಕೀಯದ ಮೂಲಕ ರಾಜಕೀಯ ಪಕ್ಷ ಕಟ್ಟಿದವರು. ಅದು ಈಗ ಯಾವ ಹಂತದಲ್ಲಿದೆ. ಎಂದು ಕೇಳಿದೆ. ಆಗ ಉಪೇಂದ್ರರವರು ನಾನು ಯಾವುದೇ ರಾಜಕೀಯ ಪಕ್ಷ ಕಟ್ಟಿಲ್ಲ. ಅದು ನನ್ನ ರಾಜಕೀಯ ಚಿಂತನೆ ಸಿದ್ಧಾಂತಗಳಷ್ಟೇ. ಯಾವುದಕ್ಕೂ ‘U.I’ ಪಿಕ್ಚರ್ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.
ಉಪೇಂದ್ರರವರ ‘U.I’ ಬಹು ಭಾಷಾ ಚಿತ್ರ ಯಶಸ್ವಿಯಾಗಲೆಂದು Mp mla’s ನ್ಯೂಸ್ ಶುಭ ಹಾರೈಸುತ್ತದೆ.
ಚಿತ್ರಗಳು: ಸತೀಶ್ ಕಾಪಿಕಾಡ್, ಸುರೇಶ್ ಪಂಡಿತ್ ಮತ್ತು ರಾಜೇಶ್ ಅಮೀನ್ ಮುಲ್ಕಿ

Read More News

Scroll to Top