‘ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬಂತೆ ಮಾನವನು ತನ್ನ ಉದರ ಪೋಷಣೆಗಾಗಿ ನಿಂತಲ್ಲಿ ನಿಲ್ಲದೆ ಜಂಗಮನಾಗಿ ಊರೂರು ಸುತ್ತಿ ಆವಿಷ್ಕಾರ ಮಾಡಿ ಹೊಸ ಜೀವನವನ್ನು ಅಳವಡಿಸಿಕೊಂಡು ಅಲ್ಲಿಯೇ ನೆಲೆಸಿ ಉದರ ಪೋಷಣೆಯೊಂದಿಗೆ ಇತರ ಪೋಷಣೆಗಳನ್ನು ಮಾಡಿ ತನ್ನ ಹೊಟ್ಟೆಪಾಡು ಮಾತ್ರವಲ್ಲದೆ ಇತರರ ಅಂದರೆ ಸಮಾಜಕ್ಕೂ ಉಣಬಡಿಸಿ ಪರೋಪಕಾರದ ಕೃತ್ಯಗಳನ್ನು ಮಾಡಿ ಸಮಾಜ ಜೀವಿ ಎನಿಸಿಕೊಳ್ಳುತ್ತಾನೆ.
ಅಸನ ವಸನ ವಸತಿಗಳು ತನ್ನ ಮತ್ತು ತನ್ನ ಕುಟುಂಬದ ಪೋಷಣೆಗಳಿಗಾದರೆ ಕಲೆ, ಸಂಗೀತ, ನಾಟ್ಯ, ಪ್ರವಚನ ಮುಂತಾದ ಸಾಮಾಜಿಕ ಸೇವೆಗಳು ಸಮಾಜ ಸುಧಾರಣೆಯ ಏಳಿಗೆಯ ಪ್ರತೀಕಗಳು. ತಾನು ಉಂಡು ಇತರರಿಗೂ ಉಣಿಸಿ ಸಂತಸಪಡುವ ಪ್ರವೃತ್ತಿಯೇ ಸಾರ್ಥಕ ಜೀವನ. ಅಂಥಾ ಉದಾರ ಜೀವಿಗಳೇ ಸಮಾಜ ಸೇವಕರು.


ಅಜೆಕಾರು ಶ್ರೀ ಬಾಲಕೃಷ್ಣ ಶೆಟ್ಟಿಯವರು ಅಜೆಕಾರು ಕಲಾಭಿಮಾನಿಗಳ ಬಳಗವನ್ನು 2002ರಲ್ಲಿ ಮುಂಬೈ ಮಹಾನಗರಿಯಲ್ಲಿ ಕಟ್ಟಿ ಬೆಳೆಸಿದ ರೋಚಕ ಬೆಳವಣಿಗೆಯು ರೋಮಾಂಚನವೇ ಸರಿ. ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಗೆಜ್ಜೆ ಕಟ್ಟಿ ಕುಣಿದ ಬಾಲಕೃಷ್ಣ ಶೆಟ್ಟಿಯವರು ಹಂತ ಹಂತವಾಗಿ ವಿವಿಧ ಸಂಘಟನೆಗಳನ್ನು ಮಾಡಿ ಮುಂಬೈಯಲ್ಲಿ 2002ರಲ್ಲಿ ಅಜೆಕಾರು ಕಲಾಭಿಮಾನಿಗಳ ಬಳಗವನ್ನು ಸ್ಥಾಪಿಸಿ ಪುಣೆ ಮತ್ತು ಮುಂಬೈಯಲ್ಲಿ ಕರಾವಳಿಯ ಗಂಡುಕಲೆಯಾಟ ಯಕ್ಷಗಾನವನ್ನು ವಿವಿಧ ಸಂಘ ಸಂಸ್ಥೆಗಳ ಮೂಲಕ ತರಿಸಿ ಮುಂಬೈಯಲ್ಲಿ ವಿವಿಧೆಡೆ ಪ್ರದರ್ಶಿಸಿ ಅಜೆಕಾರು ಯಕ್ಷಗಾನ ಬಳಗವನ್ನು ಪ್ರಸಿದ್ದಿಗೆ ತಂದರು. ಸುಮಾರು ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಮತ್ತು 24 ಸಂಘ- ಸಂಸ್ಥೆಗಳಲ್ಲಿ ಯಕ್ಷಗಾನದ ತರಬೇತಿಯನ್ನು ನಡೆಸಿ ಯಕ್ಷಗಾನ ಪ್ರದರ್ಶಿಸಲಾಗಿರುವುದು. ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ 10 ಯಕ್ಷಗಾನ ಅರ್ಥ ಸಹಿತ ಪುಸ್ತಕವನ್ನು ಪ್ರಕಟಿಸಿದೆ.


ಅಜೆಕಾರು ಕಲಾರಂಗವು ಪ್ರತಿವರ್ಷ ‘ಯಕ್ಷರಕ್ಷಾ ಪ್ರಶಸ್ತಿ’ -50,000/-, 25,000/-, 10,000/- ನಗದು ಪ್ರಶಸ್ತಿ ಹೀಗೆ ಒಟ್ಟು ವರ್ಷಕ್ಕೆ 20 ಲಕ್ಷಗಳಷ್ಟು ಸಮಾಜ ಸೇವೆಯ ರೂಪದಲ್ಲಿ ಸಂಘದ ವತಿಯಿಂದ ದಾನ ಮಾಡುತ್ತಾರೆ. ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕಾಟಿಪಳ್ಳ, ಸುರತ್ಕಲ್ ಇವರು ‘ಯಕ್ಷ ರಕ್ಷಕ’ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ.
ಯಕ್ಷಗಾನ ಕಲಾವಿದ, ಕಲಾಪೋಷಕ, ಸಂಘಟಕ, ಯಕ್ಷ ನಾಟ್ಯ ಗುರು ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಅಜೆಕಾರು ಕಲ್ಕುಡಮಾರ್ ಮನೆಯ ದಿ. ಸುಬ್ಬಯ್ಯ ಶೆಟ್ಟಿ ಮತ್ತು ಸಂಪಾ ಶೆಟ್ಟಿ ದಂಪತಿಯ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಅಜೆಕಾರು ಇಲ್ಲಿ ಮುಗಿಸಿ, 1977ರಲ್ಲಿ ಮುಂಬಯಿ ಸೇರಿ ಕ್ಯಾಂಟೀನ್, ಹೊಟೇಲುಗಳಲ್ಲಿ ದುಡಿದು ರಾತ್ರಿ ಹೊತ್ತು ಬಂಟರ ಸಂಘ ಸಂಚಾಲಿತ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸದೊಂದಿಗೆ ಯಕ್ಷಗಾನ ತರಬೇತಿಯನ್ನು ಯಕ್ಷಗುರು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಇವರಿಂದ ಪಡೆದುಕೊಂಡರು. ಶ್ರೀ ಗೀತಾಂಬಿಕಾ ಕೃಪಾ ಪೋಷಿತ ಯಕ್ಷಗಾನ ಕಲಾಮಂಡಳಿಯಲ್ಲಿ ಮೊದಲ ಗೆಜ್ಜೆ ಕಟ್ಟಿದರು. ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟರ ಪ್ರೋತ್ಸಾಹದೊಂದಿಗೆ ವಿವಿಧ ಪಾತ್ರಗಳನ್ನು ಯಕ್ಷಗಾನದಲ್ಲಿ ಅಭಿನಯಿಸಿ ಪರಿಣತಿ ಪಡೆದರು. ಸದ್ಯ ಮಂಡಳಿಯ ಗೌರವ ಸದಸ್ಯರಾಗಿದ್ದಾರೆ.


2001ರಲ್ಲಿ ಪುರುಷೋತ್ತಮ ಪೂಂಜರು ಯಕ್ಷಗಾನ ತಾಳಮದ್ದಳೆ ಕಾರ್ಯವನ್ನು ಆರಂಭ ಮಾಡಿದಾಗ ಬಾಲಕೃಷ್ಣ ಶೆಟ್ಟಿ ಅವರು ಅವರೊಂದಿಗೆ ಕಾರ್ಯಕ್ರಮ ಸಂಯೋಜಿಸಿದ್ದರು. ಈ ಅನುಭವಗಳಿಂದ 2002ರಲ್ಲಿ ತಾನೇ ಅಭಿಮಾನಿಗಳನ್ನು ಒಟ್ಟುಗೂಡಿಸಿ ಅಜೆಕಾರು ಕಲಾಭಿಮಾನಿ ಬಳಗ ಹೆಸರಲ್ಲಿ ಯಕ್ಷಗಾನ ಸಂಯೋಜಿಸಿ, ಇಂದಿಗೂ ಹದಿನೇಳು ವರ್ಷಗಳಿಂದ ಸತತ ವಿವಿಧ ಸಂಘ ಸಂಸ್ಥೆಗಳಿಂದ ಕಾರ್ಯಕ್ರಮಗಳು ಜರಗುತ್ತಿವೆ. ಯಕ್ಷಗಾನದೊಂದಿಗೆ ಊರಿನಿಂದ ಪ್ರಸಿದ್ಧ ಅರ್ಥಧಾರಿಗಳನ್ನು ಮುಂಬೈಗೆ ಕರೆಸಿ ತಾಳಮದ್ದಳೆಗಳನ್ನು ಸಂಯೋಜಿಸಿ ತಾಳಮದ್ದಳೆಯ ಅಭಿರುಚಿಯನ್ನು ಮುಂಬೈಗರಿಗೆ ಹುಟ್ಟಿಸಿದರು. ‘ನಾದಲೋಲ’ ಅಭಿನಂದನ ಗ್ರಂಥಗಳ ಬಿಡುಗಡೆ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಚೆನ್ನಪ್ಪ ಶೆಟ್ಟಿ, ಉಜಿರೆ ಅಶೋಕ್ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಮುಂತಾದ ಅನೇಕ ಗಣ್ಯ ಯಕ್ಷಗಾನ ಕಲಾವಿದರನ್ನು ರೂ. 1,00,000/- ಹಾಗೂ 50,000/- ನಗದುವಿನೊಂದಿಗೆ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಸನ್ಮಾನಿಸುವ ಕೆಲಸ ಮಾಡಿದವರು. ಇದು ಬಾಲಕೃಷ್ಣ ಶೆಟ್ಟಿಯವರ ಅವಿರತ ಶ್ರಮ ಹಾಗೂ ಸಂಯೋಜನಾ ಶಕ್ತಿಯ ಫಲ.

ಜನಪ್ರಿಯ ಯಕ್ಷಗಾನ ಗುರುಗಳಾದ ಇವರಲ್ಲಿ ತರಬೇತಿ ಪಡೆದು ಪಳಗಿದ ಶಿಷ್ಯದಿಂದಿರು ಹೆಸರುವಾಸಿ. ಇದಕ್ಕೆ ಸಂಘಗಳ ಸಂಖ್ಯೆಯೇ ಸಾಕ್ಷಿ. ಮುಂಬಯಿ ಬಂಟರ ಸಂಘ ಕುರ್ಲಾ, ಬೋಂಬೆ ಬಂಟ್ಸ್ ಎಸೋಸಿಯೇಶನ್, ದತ್ತಾತ್ರೇಯ ದುರ್ಗಾಂಬಿಕಾ ಮಂದಿರ ಫಾಸ್ಕೋಪರ್, ವಿ. ಪಿ. ಎಂ. ಕಾಲೇಜು ಮುಲುಂಡು, ಕನ್ನಡ ಸಂಘ ಥಾಣೆ ಕಿಸನ್ ನಗರ, ವಿ. ಪಿ. ಎಂ. ಕಾಲೇಜು ಮತ್ತು ಅನೇಕ ಸಂಘ ಸಂಸ್ಥೆಗಳಿಗೆ ಶಿಕ್ಷಣವಿತ್ತಿದ್ದಾರೆ. ಒಟ್ಟು ಎರಡು ಸಾವಿರ ಮಕ್ಕಳಿಗೆ ತರಬೇತಿ ಕೊಟ್ಟು ಪಳಗಿಸಿದರು. ಶಿಷ್ಯ ವರ್ಗದಲ್ಲಿ ಚಿಣ್ಣರ ಬಿಂಬದ ಬಯಲಾಟ ಪ್ರದರ್ಶನ, ಪತ್ತನಾಜೆ ಸಿನೇಮಾದ ನಾಯಕಿ ನಟಿ ರೇಷ್ಮಾ ಶೆಟ್ಟಿ ಬಾಲಕೃಷ್ಣ ಶೆಟ್ಟಿಯವರಿಂದ ತರಬೇತಿ ಪಡೆದು ಪ್ರಸಿದ್ದಿ ಪಡೆದಿದ್ದಾರೆ.
ಊರಿಂಗೆ ದಾರಿಯನು ಆರು ತೋರಿದಡೇನು । ಸಾರಾಯದ ನಿಜವ ತೋರುವವನೇ ನಿಜಗುರು’ ಎಂಬಂತೆ ಯಕ್ಷ ವಿದ್ಯೆಯಲ್ಲಿ ಮೋಕ್ಷದ ತನಕ ಅಂದರೆ ಪರಿಪೂರ್ಣ ವಿದ್ಯೆಯನ್ನು ಕಲಿಸಿ ಪರಿಪೂರ್ಣ ಗುರು ಎಂದೆನಿಸಿಕೊಂಡವರು ಅಜೆಕಾರು ಬಾಲಕೃಷ್ಣ ಶೆಟ್ಟಿಯವರು. ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಯಕ್ಷಲೋಕಕ್ಕೆ ಸಮರ್ಪಿಸಿದ ಧನ್ಯರು ಗುರುಗಳಾದ ಅಜೆಕಾರರು.

ಬೆಂಕಿಯಲ್ಲಿ ಬೆಂದ ಚಿನ್ನದಂತೆ ಅಜೆಕಾರು ಬಾಲ್ಯದಲ್ಲಿ ಕಷ್ಟಪಟ್ಟು ಕಲಾರಂಗದ ಸ್ವಾನುಭವದಲ್ಲಿ ಬೆಂದು ಪಳಗಿದವರು. ಚಿನ್ನಕ್ಕೆ ಪುಟವಿಟ್ಟಂತೆ ಅವರ ಅನುಭವವು ಅವರನ್ನು ಪರಿಪೂರ್ಣ ಯಕ್ಷಗಾನ ಕಲಾವಿದ ಹಾಗೂ ಸಂಯೋಜಕನಾಗಿ ಮಾಡಿ ಅವರ ಅನುಭವವು ನೀರಿನಲ್ಲಿ ಎಣ್ಣೆ ಪಸರಿಸಿದಂತೆ ಯಕ್ಷಗಾನ ಕಲೆಯು ಕಲಾಭಿಮಾನಿಗಳಿಗೆ ಅವರ ಅನುಭವದ ಉತ್ತಮ ಕಲಾರಸವು ದೊರೆಯುವಂತೆ ಮಾಡಿದ್ದಾರೆ.
ಹಾಲು- ಮೊಸರು- ಬೆಣ್ಣೆಗಳಿಂದ ಬಂದ ತುಪ್ಪವು ಅವುಗಳಿಗಿಂತ ಹೆಚ್ಚು ಪರಿಮಳಯುಕ್ತವಾಗಿ ಬರುವಂತೆ ಯಕ್ಷ ಕಲೆಯು ಅನುಭವದ ಮಥನದ ಕತೆಯಾದುದರಿಂದ ಅವರ ಯಕ್ಷಕಲೆಯು ಸಮುದ್ರ ಮಥನದಿಂದ ಎದ್ದು ಬಂದ ಅಮೃತದಂತೆ ಅವರು ಯಕ್ಷಕಲೆಯನ್ನು ಕರಗತ ಮಾಡಿಕೊಂಡು ತಾನು ಸಂಭ್ರಮಿಸಿ ಇತರರನ್ನು ಸಂಭ್ರಮಿಸಿ ಸಾರ್ಥಕತೆಯ ಜೀವನ ನಡೆಸಿ ಉತ್ತಮ ಯಕ್ಷಗುರು, ಕಲಾ ಸಂಘಟಕ ಎನಿಸಿಕೊಂಡರು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಯಂತೆ ತನ್ನ ವೃತ್ತಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ಧನ್ಯತಾ ಭಾವನೆಯಿಂದ ತಾನೂ ಸಂತೃಪ್ತರಾಗಿ ಶಿಷ್ಯವರ್ಗ, ಶೋತೃವರ್ಗಗಳನ್ನು ಸಂತೃಪ್ತರಾಗುವಂತೆ ಮಾಡಿ ಆದರ್ಶ ಗುರು ಎನಿಸಿ ಸಾರ್ಥಕ ಜೀವನ ನಡೆಸಿದರು. ಅವರ ಸಾರ್ಥಕ ಜೀವನ ಎಲ್ಲರಿಗೂ ಆದರ್ಶ. ಅವರಿಗೆ ಇನ್ನೂ ಪ್ರೋತ್ಸಾಹ ದೊರೆತು ಯಕ್ಷ ಕಲೆಯು ಉನ್ನತಕ್ಕೇರಲಿ. ಅವರ ಜೀವನವು ಬರುವ ಪೀಳಿಗೆಗೆ ಆದರ್ಶವಾಗಿ ಅಜೆಕಾರು ಅವರ ಯಕ್ಷಕಲೆಯ ಶ್ರೇಯೋಭಿವೃದ್ಧಿ ಹೊಂದಲಿ, ದೇವರು ಅವರಿಗೆ ಆಯುರಾರೋಗ್ಯವನ್ನಿತ್ತು ಯಕ್ಷ ವಿದ್ಯೆಯು ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಪ್ರಾರ್ಥಿಸಿ ‘ಯಕ್ಷಗಾನಂ ಗೆಲ್ಗೆ ಎನ್ನೋಣ. ಜೈಹಿಂದ್, ಜೈ ಭಾರತ್ ಮಾತೆ.
— ಕೃಷ್ಣ ಎ. ಶೆಟ್ಟಿ ವಿಶ್ರಾಂತ ಸೀನಿಯರ್ ಬ್ಯಾಂಕ್ ಮ್ಯಾನೇಜರ್ ಉಪಾಧ್ಯಕ್ಷರು, ಯಕ್ಷಕಲಾರಂಗ ಕಾರ್ಕಳ ಸಂತೃಪ್ತಿ, ತೆಳ್ಳಾರು ರಸ್ತೆ, ಕಾರ್ಕಳ : 9611474445





















































































































































































