ಎಲ್ಲರಂಥಲ್ಲ ನಮ್ಮ ನಳಿನಣ್ಣ

103.8K Views 16 Mar 2024

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.

ಮಂಗಳೂರು: ಮೂರು ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಎಂಪಿಯಾಗಿ ಒಂದು ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ಅನುದಾನವನ್ನು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ತಂದು ಕೊಟ್ಟ ನಳಿನ್‌ಕುಮಾರ್ ಕಟೀಲು ಅವರನ್ನು ಎಲ್ಲರೂ ಆತ್ಮೀಯತೆಯಿಂದ ಕರೆಯುವುದು ನಳಿನಣ್ಣರೆಂದೇ.
ದಣಿವರಿಯದ ನಾಯಕ, ನಿಷ್ಕಳಂಕ, ಹಗರಣ ರಹಿತ ಭ್ರಷ್ಟಾಚಾರ ವಿರೋಧಿ, ಹಿಂದೂತ್ವದ ಜೊತೆಗೆ ಸೌಹಾರ್ದತೆಗೆ ಒತ್ತು ಕೊಟ್ಟ ನಳಿನಣ್ಣ ತನ್ನ ಬಳಿಗೆ ಸಹಾಯ ಕೇಳಿ ಬಂದ ಜನರಿಗೆ ಬರಿಗೈಲಿಯಲ್ಲಿ ವಾಪಾಸ್ಸು ಕಳುಹಿಸಿದವರಲ್ಲ.
ನುಡಿದಂತೆ ನಡೆದ ನೇರ ನಡೆನುಡಿಯ ನಿರಾಡಂಬರ ನಾಯಕ ನಳಿನಣ್ಣ ರಾಜ್ಯಾಧ್ಯಕ್ಷರಾಗಿದ್ದಾಗ ಅತೀ ಹೆಚ್ಚು ಬಾರಿ ರಾಜ್ಯ ಸುತ್ತಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಅಂದರೆ ಬೇರುಮಟ್ಟದಿಂದ ಭದ್ರಗೊಳಿಸಿ ಹೆಮ್ಮರವಾಗಿಸಿದವರು.
ಅತ್ಯುತ್ತಮ ಭಾಷಣಗಾರ, ವಾಗ್ಮಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂತೆ ನೇರ ಮಾತುಗಳಿಂದ ಅನ್ಯಾಯದ ಎದುರು ಸಮರ ಸಾರುತ್ತಾ ಬಂದಿರುವ ನಳಿನಣ್ಣ ಒಬ್ಬ ಸಾಮಾನ್ಯ ಕಾರ‍್ಯಕರ್ತನಾಗಿದ್ದವರು ಆರ್‌ಎಸ್‌ಎಸ್ ಸಂಘಟನೆಯಿಂದ ಬಿಜೆಪಿ ಪಕ್ಷಕ್ಕೆ ಬಂದು ಬಿಜೆಪಿ ಹೈಕಮಾಂಡ್‌ನ ಒತ್ತಾಯದ ಮೇರೆಗೆ ಎಂಪಿ ಅಭ್ಯರ್ಥಿಯಾಗಿ 2009 ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಭರ್ಜರಿ ಜಯಭೇರಿ ಬಾರಿಸಿ ಸಂಸದರಾಗಿ ನಂತರ ಮತ್ತೆ 2 ಅವಧಿಗೆ ಒಟ್ಟು ಮೂರು ಬಾರಿ ಲಕ್ಷ ಲಕ್ಷ ಅತ್ಯಧಿಕ ಬಹುಮತಗಳಿಂದ ಗೆದ್ದು ಬಂದಿದ್ದರು. ಅವರು ಎರಡನೇ ಬಾರಿಗೆ ಮತ್ತು ಮೂರನೇ ಬಾರಿಗೆ ಸ್ಪರ್ಧಿಸಿದಾಗ ಕೆಲ ಟಿಕೇಟ್ ಆಕಾಂಕ್ಷಿಗಳು ಅಪಪ್ರಚಾರ ನಡೆಸಿದರು. ಅಪಹಾಸ್ಯಕಾರಿಯಾಗಿ ಟ್ರೋಲ್ ಮಾಡಿಸಿದರು.
ಆದರೆ, ಸತ್ಯ ಸ್ಪಷ್ಟವಾಗಿತ್ತು. ಯಾರಿಗೂ ಅನ್ಯಾಯ ಮಾಡದ ನಳಿನಣ್ಣ ಸತತ 3 ಬಾರಿ ಎಂಪಿಯಾದರು. ಜನ ಬಯಸಿದ ಉತ್ತಮ ಸಂಸದರಾಗಿ ಗುರುತಿಸಿಕೊಂಡರು.
ಆದರೂ, ಅವರ ಏಳ್ಗೆಯನ್ನು ಸಹಿಸದ ಮಂದಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಾದ್ಯಂತ ಅಪಸ್ವರ ಎಬ್ಬಿಸಿ ಟ್ರೋಲ್ ಮಾಡಿಸಿ ನಳಿನಣ್ಣನ ಇಮೇಜನ್ನು ಹಾಳು ಮಾಡಲು ನೋಡಿದರು.
ಈ ನಡುವೆ ಜಾತ್ಯಾತೀತ ಶಕ್ತಿಗಳು ಕೂಡಾ ಉಳಿದವರಿಗಿಂತ ನಳಿನಣ್ಣ ಪರವಾಗಿಲ್ಲ ಎಂದಿದ್ದವು.
ಆದರೆ, ಬಿಜೆಪಿ ಪಕ್ಷದ ಹೈಕಮಾಂಡ್ ನಳಿನಣ್ಣನ ಒಳ್ಳೆಯ ಗುಣವನ್ನು ಅವರು ಪಕ್ಷಕ್ಕಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಲೇ ಇಲ್ಲ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಳಿನಣ್ಣ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾಗ ತನ್ನನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಲು ನಳಿನಣ್ಣ ಅವರೇ ಕಾರಣ ಎಂದು ಯಡಿಯೂರಪ್ಪ ಭಾವಿಸಿದ್ದರು. ಅವರ ಗುರು ಬಿ.ಎಲ್. ಸಂತೋಷ್ ಯಡಿಯೂರಪ್ಪರ ಬದ್ಧ ವೈರಿ.
ಈ ಸೇಡಿನಿಂದ ಯಡಿಯೂರಪ್ಪನವರು ನಳಿನಣ್ಣನಿಗೆ ಈ ಸಲ ಎಂಪಿ ಟಿಕೇಟ್ ದೊರಕದಂತೆ ಅಡ್ಡ ಬಂದು ಅದರಲ್ಲಿ ಯಶಸ್ವಿಯಾದರು.ಸೇಡು ತೀರಿಸಿಕೊಂಡರು.
ಇದೇ ಯಡಿಯೂರಪ್ಪನವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೇಟ್ ಕೊಡಬಾರದು ಎಂಬ ವಿರೋಧ ಬಂದಾಗ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರದಲ್ಲಿ ಟಿಕೇಟ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು..
ತನಗೆ ಟಿಕೇಟ್ ದೊರಕದಾಗ ನಳಿನಣ್ಣ ಯಾವುದೇ ರೀತಿಯ ವಿರೋಧ ಮಾಡಲಿಲ್ಲ. ಆಕ್ಷೇಪ ಮಾಡದೆ ಪಕ್ಷ ನಿಂತ ನೀರಾಗಬಾರದು. ಹೊಸಬರಿಗೆ ಅವಕಾಶ ನೀಡುತ್ತಿರುವುದು ಸ್ವಾಗತಾರ್ಹ ಎಂದಿದ್ದರು.
ಇಲ್ಲಿ ಗಮನಿಸತಕ್ಕ ವಿಷಯವೊಂದಿದೆ. ನಳಿನಣ್ಣರನ್ನು ಬೆಂಬಲಿಸುವ ಲಕ್ಷಗಟ್ಟಲೆ ಅಭಿಮಾನಿ ವರ್ಗವಿದೆ. ನಳಿನಣ್ಣರ ಬ್ರಿಗೇಡ್‌ವಿದೆ. ನಳಿನಣ್ಣ ಯಾವತ್ತೂ ಅಧಿಕಾರ ಬಯಸಿದವರಲ್ಲ. 15 ವರ್ಷಗಳ ಹಿಂದೆ ಅಂದರೆ 2009 ರಲ್ಲಿ ಪಕ್ಷ ಅವರಿಗೆ ಅಧಿಕಾರಕ್ಕೆ ಒತ್ತಾಯಪೂರ್ವಕ ಕರೆ ತಂದಿತ್ತು. ಇದೀಗ ಅವರಿಗೆ ಟಿಕೇಟ್ ನೀಡದೆ ಮೆತ್ತಗೆ ಕೂರಿಸಿದೆ. ಈ ಬಗ್ಗೆ ನಳಿನಣ್ಣ ಯಾವುದನ್ನು ಮನಸ್ಸಿಗೆ ಹಚ್ಚಿ ಕೊಳ್ಳದೆ ಬಿಜೆಪಿ ಪರ, ಮೋದಿ ಪರ ತಾನು ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿದರು. ಇಲ್ಲಿ ನಳಿನಣ್ಣರ ಬದಲು ಬಿಜೆಪಿ ಹೈಕಮಾಂಡ್ ಕ್ಯಾಪ್ಟನ್ ಬೃಜೇಶ್ ಚೌಟ ಎಂಬ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ.
ಸುಮಾರು 4 ತಿಂಗಳ ಹಿಂದೆ ಕ್ಯಾಪ್ಟನ್ ಬೃಜೇಶ್ ಚೌಟರಲ್ಲಿ Mp mla’s ನ್ಯೂಸ್ ನೀವು ಎಂಪಿ ಟಿಕೆಟ್ ಆಕಾಂಕ್ಷಿಯೇ ಎಂದು ಕೇಳಿತ್ತು. ಆವಾಗ ಅವರು “ನಳಿನಣ್ಣ ಇದ್ದಾರಲ್ಲಾ ಅವರಿಗೆ ಟಿಕೇಟು ಸಿಕ್ಕರೆ ನನ್ನದೇನೂ ವಿರೋಧವಿಲ್ಲ. ಒಂದು ವೇಳೆ ನನಗೆ ಪಕ್ಷ ಎಂಪಿ ಟಿಕೇಟ್ ಕೊಟ್ಟರೆ ಸ್ಪರ್ಧಿಸುತ್ತೇನೆ” ಎಂದಿದ್ದರು.
ಕ್ಯಾಪ್ಟನ್ ಬೃಜೇಶ್ ಚೌಟ ಅವರು ಮಂಗಳೂರು ಕಂಬಳದ ರೂವಾರಿ. ನಿವೃತ್ತ ಸೇನಾನಿ. ಉತ್ತಮ ಯುವ ನಾಯಕ. ಅವರು ಯಾವತ್ತೂ ಎಂಪಿ ಟಿಕೇಟ್‌ಗಾಗಿ ಲಾಬಿ ನಡೆಸಿದವರಲ್ಲ. ಕಳೆದ ಬಾರಿಯೂ ಅವರಿಗೆ ಟಿಕೆಟ್ ಸಿಗುವುದರಲ್ಲಿತ್ತು. ಆದರೆ,ಈ ಬಾರಿ ಸಿಕ್ಕಿದೆ.
ನಳಿನಣ್ಣ ಅವರು ಬೃಜೇಶ್ ಚೌಟರಿಗೆ ಸಿಹಿ ತಿನಿಸಿ ಅವರನ್ನು ಎಂಪಿಯಾಗಿ ಗೆಲ್ಲಿಸುವುದಾಗಿ ಮಾತು ಕೊಟ್ಟಿದ್ದಾರೆ. ಅವರೀಗ ಬೃಜೇಶ್ ಚೌಟರನ್ನು ಮಾತ್ರವಲ್ಲದೆ ರಾಜ್ಯದಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಶಕ್ತಿ ಮೀರಿ ದುಡಿದು ಕಿಂಗ್ ಮೇಕರ್ ಆಗಬೇಕಾಗಿದೆ.
ಎಲ್ಲರಂಥಲ್ಲ ನಮ್ಮ ನಳಿನಣ್ಣ. ಅಧಿಕಾರವಿರಲಿ, ಇಲ್ಲದಿರಲಿ ನಮ್ಮ ನಳಿನಣ್ಣ ಅದ್ವಿತೀಯ ಸಂಘಟಕ. ಜನಸೇವಕ, ಜನನಾಯಕ. ಅವರ ಮುಂದಿನ ರಾಜಕೀಯ ಭವಿಷ್ಯವು ಇನ್ನಷ್ಟು ಉಜ್ವಲವಾಗಿ ಪ್ರಜ್ವಲಿಸಲಿ ಎಂದು ನಳಿನಣ್ಣರ ಅಸಂಖ್ಯಾತ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top