ಬಂಟ ಭಗೀರಥ, ಸರ್ವ ಸಮಾಜದ ಸೌಹಾರ್ದ ನಾಯಕ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಬಾಳಿಕೆ.

108.1K Views 4 Mar 2024

ಕಠಿಣ ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮೇಲೇರಿ ಬಡವರ, ಆಶಕ್ತರ ಪಾಲಿಗೆ ‘ಪ್ರೀತಿಯ ಸಂತೋಷಣ್ಣ’ನಾಗಿ ಸಮಸ್ತ ಬಂಟ ಸಮುದಾಯಕ್ಕೆ ನೆಚ್ಚಿನ ನಾಯಕನಾಗಿ, ಸರ್ವ ಧರ್ಮ ಜಾತಿ ಬಾಂಧವರ ಪಾಲಿಗೆ ಸೌಹಾರ್ದ ನಾಯಕನಾಗಿ ಮನೆಮಾತಾಗಿರುವ ಪುಣೆ ಬಂಟರ ಸಂಘದ ಸಮರ್ಥ ಅಧ್ಯಕ್ಷ ಸಂತೋಷ್ ವಿ. ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರೊಂದಿಗೆ ಬಂಟ ಸಮುದಾಯದ ಏಳಿಗೆಗಾಗಿ ಅಹರ್ನಿಶಿಯಾಗಿ ದುಡಿದವರಲ್ಲಿ ಪ್ರಮುಖರು.

ಸಂತೋಷ್ ಶೆಟ್ಟಿಯವರು ಅಜಾತಶತ್ರು, ಎಲ್ಲರಿಗೂ ಇಷ್ಟವಾಗುವ ನಾಯಕ. ನಿಷ್ಕಳಂಕ ವ್ಯಕ್ತಿತ್ವದ ಅವರು ಯಾವುದೇ ಸಮಾಜಪರ ಕೆಲಸವಿರಲಿ ಅದಕ್ಕೆ ಪ್ರಥಮ ಪ್ರಾಶಸ್ತ್ಯ ಕೊಟ್ಟು ಅದು ಸಂಪೂರ್ಣಗೊಳ್ಳುವವರೆಗೆ ಅದರಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡು ಸಮಾಜಕ್ಕೆ ತನ್ನ ಹೆಚ್ಚಿನ ಸಮಯವನ್ನು ಮೀಸಲಿರಿಸಿದ ಛಲವಾದಿ, ಭಗೀರಥ ಸಾಧನೆಯ ಯಶಸ್ವಿ ಸಂಘಟಕರೆಂದೇ ಪ್ರಖ್ಯಾತಿ ಹೊಂದಿದ್ದಾರೆ.

ಉಡುಪಿ ಜಿಲ್ಲೆಯ ಹೆಜಮಾಡಿ ಪಟೇಲರ ಮನೆ ದಿ. ವಸಂತ ಶೆಟ್ಟಿ ಮತ್ತು ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆ ಶ್ರೀಮತಿ ವಿನೋದಾ ವಿ. ಶೆಟ್ಟಿ ದಂಪತಿಗಳ ಸುಪುತ್ರರಾಗಿ ಜನಿಸಿದ ಸಂತೋಷ್ ಶೆಟ್ಟಿಯವರು ಎಳವೆಯಲ್ಲೇ ಯಕ್ಷಗಾನ, ನಾಟಕ, ಏಕಪಾತ್ರಾಭಿನಯ ಮೊದಲಾದ ಕಲೆಯಲ್ಲಿ ಆಸಕ್ತಿ ಹೊಂದಿದ್ದರು.

ತಂದೆಯವರ ಅಕಾಲಿಕ ಮರಣದ ನಂತರ ದೊಡ್ಡಮ್ಮನ ಪಾಲನೆ ಪೋಷಣೆಯಲ್ಲಿ ಬೆಳೆದರು. ಇನ್ನಾ ಮತ್ತು ಸುರತ್ಕಲ್ ಚೇಳಾರ್‌ನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಓದಿದರು. ಪ್ರೌಢಶಿಕ್ಷಣವನ್ನು ಸುರತ್ಕಲ್‌ನ ಕೆ.ಆರ್.ಇ.ಸಿ.ಯಲ್ಲಿ ಪಡೆದರು.


ಆ ಸಂದರ್ಭದಲ್ಲಿ ಅವರ ನಾಯಕತ್ವ ಗುಣವು ಅಲ್ಲಿನ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಹುಟ್ಟೂರು ಬಿಟ್ಟು ಮಹಾರಾಷ್ಟ್ರದ ಪುಣೆಗೆ ಉದ್ಯೋಗವನ್ನರಸಿ ಹೊರಟರು. ಅಲ್ಲಿ ಚಿಕ್ಕಪ್ಪನ ಹೊಟೇಲ್‌ನಲ್ಲಿ ದುಡಿಯುತ್ತಲೇ ಸ್ಥಾನೀಯ ವಾಡಿಯಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಕಲಿತು ಪ್ರತಿಷ್ಠಿತ ಫರ್ಗ್ಯುಸನ್ ಕಾಲೇಜಿನಲ್ಲಿ ಪದವೀಧರರಾದರು.


ತದನಂತರ, ಮಿತ್ರರಿಂದ, ಹಿತೈಷಿಗಳಿಂದ, ಬಂಧುಗಳಿಂದ ಹಣವನ್ನು ಪಡೆದು ‘ಸುಧಾಮ’ ಹೆಸರಿನ ಹೊಟೇಲ್ ಆರಂಭಿಸಿದರು. ಅದರಲ್ಲಿ ಯಶ ಸಾಧಿಸಿ, ಕೊರೋನೆಟ್ ಎಂಬ ತ್ರಿಸ್ಟಾರ್ ಹೊಟೇಲ್ ಪ್ರಾರಂಭಿಸಿದರು. ಇದರ ಜೊತೆಗೆ, ಸುಧಾಮ ರೆಸಿಡೆನ್ಸಿ, ಕಲ್ಪನಾ,ಸ್ವಾಗತ್ ಎಂಬ ಹೊಟೇಲ್‌ಗಳನ್ನು ನಡೆಸತೊಡಗಿದರು.
ಮಹಾಗಣಪತಿ ಡೆವಲಪರ್ಸ್ ಪಡುಬಿದ್ರಿ ಇದರ ಮಾಲೀಕರಾಗಿ ಅನೇಕ ಮಂದಿ ನಿರುದ್ಯೋಗಿಗಳಿಗೆ ಉದ್ಯೋಗದಾತರಾದರು.


ಇದೇ ಹೊತ್ತಲ್ಲಿ ವಿಸ್ತಾರ ಸಮಾಜಸೇವೆಗಾಗಿ ಪುಣೆ ಬಂಟರ ಸಂಘ ಸೇರಿದರು. ಮೊದಲಿಗೆ ಜನಸಂಪರ್ಕ ಕಾರ‍್ಯದ ಜವಾಬ್ದಾರಿ ವಹಿಸಿ ಅದರಲ್ಲಿ ಸೈ ಎನಿಸಿಕೊಂಡು ಪುಣೆ ಬಂಟರ ಸಂಘದ ಕಾರ‍್ಯಾಧ್ಯಕ್ಷರಾದರು. ಬಳಿಕ ಅಧ್ಯಕ್ಷರಾದರು.


ಸುಮಾರು 3೦ ಕೋಟಿ ರೂಪಾಯಿ ಖರ್ಚು ಮಾಡಿ ಪುಣೆಯಲ್ಲಿ ಸುಂದರ, ಮನಮೋಹಕ, ಸುಸಜ್ಜಿತವಾದ ಬಂಟ ಭವನ ನಿರ್ಮಿಸಿದರು. ಇದು ಊರ-ಪರವೂರ ಬಂಟ ದಾನಿಗಳ ಸಹಕಾರದಿಂದ ಸಾಧ್ಯವಾಯಿತು. ಇದರ ನಿರ್ಮಾಣಕ್ಕಾಗಿ ಹಗಲಿರುಳೆನ್ನದೆ ಕಷ್ಟಪಟ್ಟು ಭಗೀರಥ ಪ್ರಯತ್ನವನ್ನೇ ಸಂತೋಷ್ ಶೆಟ್ಟಿಯವರು ಮಾಡಿದ್ದಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ನುಡಿಯುತ್ತಾರೆ.


ಪುಣೆ ಬಂಟರ ಭವನದ ನಿರ್ಮಾಣ ಸಂತೋಷ್ ಶೆಟ್ಟಿಯವರ ಕನಸಾಗಿತ್ತು. ಅವರ ಸಂಘರ್ಷ, ಛಲ, ಪರಿಶ್ರಮ, ಅರ್ಪಣಾ ಮನೋಭಾವದಿಂದ ಇದು ನನಸಾಗಿದೆ ಎಂದರೂ ತಪ್ಪಾಗಲಾರದು.


ಅಂದಾಜು ಒಂದು ಸಾವಿರದ ನೂರು ಜನರು ಕುಳಿತುಕೊಳ್ಳ ಬಹುದಾದ ಆಸನ ವ್ಯವಸ್ಥೆ, ಪಾರ್ಟಿ ಹಾಲ್, ಕೇಟರಿಂಗ್ ಅವಕಾಶ, ಮೀಟಿಂಗ್ ಹಾಲ್, ಸುಸಜ್ಜಿತ ರಂಗ ವೇದಿಕೆ ಹೀಗೇ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಗಳೊಂದಿಗೆ ಸುಸಜ್ಜಿತವಾಗಿ ಪುಣೆ ಬಂಟರ ಭವನ ತಲೆಯೆತ್ತಿ ನಿಲ್ಲಲು ಸಂತೋಷ್ ಶೆಟ್ಟಿಯವರ ಭಗೀರಥ ಪ್ರಯತ್ನವೇ ಕಾರಣವಾಗಿದೆ.


ಇಲ್ಲಿ ವಾಹನ ಪಾರ್ಕಿಂಗ್‌ಗೋಸ್ಕರವೇ ವಿಶಾಲ ಜಾಗದ ಸ್ಥಳಾವಕಾಶವಿದೆ. ಪುಣೆ ಬಂಟರ ಸಂಘದ ಕಟ್ಟಡ ಕೇವಲ ಕಲ್ಲು ಬಂಡೆಯ ಕಟ್ಟಡವಾಗಿರದೆ ಅಲ್ಲೊಂದು ಧನಾತ್ಮಕ ಸಂವೇದನಾಕರ್ಷಣೆಯಿದೆ ಎಂದು ಹಿರಿಯ ಸಮಾಜ ಬಾಂಧವರು ಹೇಳುತ್ತಾರೆ.


ಒಳಗೆ ಪ್ರವೇಶಿಸುತ್ತಲೇ ರಜತ ಲೇಪನದ ದೇವರ ಬೆಳ್ಳಿ ವಿಗ್ರಹ, ಬಳಿಕ ತುಳುನಾಡಿನ ಸಂಸ್ಕೃತಿಗೆ ಅನುಗುಣವಾಗಿ ನಿರ್ಮಿಸಿದ ಒಳಾಂಗಣ ಸಭಾಭವನ, ಇನ್ನು ಬಂಟ ಸಮಾಜದ ಅಭ್ಯುದಯಕ್ಕೆ ಹೆಣಗಿ ಕೀರ್ತಿ ಶೇಷರಾದ ಗಣ್ಯರ ಭಾವಚಿತ್ರಗಳು, ಪುಣೆ ನಗರದ ಗತಿಸಿದ ಬಂಟ ನಾಯಕರ ಮಹಾದಾನಿಗಳ ಭಾವಚಿತ್ರಗಳಿವೆ. ಒಟ್ಟಿನಲ್ಲಿ ಪುಣೆ ಬಂಟರ ಭವನ ಹಲವು ಅದ್ಭುತಗಳ ಸಂಗಮ, ಮನಮೋಹಕ, ಸುಂದರ, ಆಕರ್ಷಣೀಯವಾಗಿದೆ.


ಸಂತೋಷ್ ಶೆಟ್ಟಿಯವರು ಪುಣೆ ಬಂಟರ ಸಂಘದ ಅಧ್ಯಕ್ಷರಾಗಿ ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದಾದ ಸಾಧನೆಯನ್ನು, ಸಮಾಜಸೇವೆಯನ್ನು ಮಾಡಿದ್ದಾರೆ.
ಹುಟ್ಟೂರಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯನ್ನು ಕೈಗೊಂಡು ಜನ ಪ್ರತಿನಿಧಿಗಳ ಸಹಕಾರದೊಂದಿಗೆ ಜನಪರವಾಗಿ ಸಾಗಿದ್ದಾರೆ.


ಊರಿನಲ್ಲಿ ದೇವಾಲಯ, ಅಭಿವೃದ್ಧಿ ಶಾಲೆ, ರಸ್ತೆಗಳ ದುರಸ್ಥೀಕರಣ, ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೆರವು, ರೋಗಿಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ.
ಹೊರನಾಡಿನ ಮರಾಠಿ ಬಾಂಧವರು ಮೂಲನಿವಾಸಿಗಳೊಂದಿಗೆ ಅತ್ಯುತ್ತಮ ಸೌಹಾರ್ದ ಭಾವ ಹೊಂದಿರುವ ಸಂತೋಷ್ ಶೆಟ್ಟಿಯವರು ದೈವ ದೇವರುಗಳ ಮೇಲೆ ಅತೀವ ಭಕ್ತಿ ಇರಿಸಿ ಆತ್ಮ ಸಾಕ್ಷಿಯಂತೆ ಸಮಾಜಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮರಾಠಿ ಕನ್ನಡ ಕವಿ ಸಮ್ಮೇಳನ, ವಿಚಾರಗೋಷ್ಠಿಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಯಕ್ಷಗಾನ, ತಾಳಮದ್ದಳೆ, ನೃತ್ಯ, ನಾಟಕ ಸಾಹಿತ್ಯ ಸಂಭ್ರಮ, ಕವಿಗೋಷ್ಠಿಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಇವರಿಗೆ ಬಂಟ ಭಗೀರಥ, ಬಂಟ ಸೇನಾನಿ, ಸಮಾಜಸೇವಾ ದುರಂಧರ ಹೀಗೇ ಅನೇಕ ಬಿರುದುಗಳು ದೊರಕಿವೆ.
ಪುಣೆ ನಗರದ ಅನ್ಯ ಜಾತೀಯ ಸಂಸ್ಥೆಗಳು, ಸಾಂಸ್ಕೃತಿಕ ಕಲಾ ಸಾಮಾಜಿಕ ಸಂಸ್ಥೆಗಳು, ರಾಜಕೀಯ ಸಂಘಟನೆಗಳು ಇವರನ್ನು ಸನ್ಮಾನಿಸಿವೆ.


ಹುಟ್ಟೂರಿನ ಹೆಮ್ಮೆಯ ಪುತ್ರ ಗೌರವವೂ ಇವರಿಗೆ ದೊರಕಿದೆ. ಇವರ ಧರ್ಮಪತ್ನಿ ದಿವ್ಯಾ ಶೆಟ್ಟಿ, ಮಕ್ಕಳಾದ ಶ್ರಾವ್ಯ, ಸೃಷ್ಟಿ ಇವರ ಸಮಾಜಸೇವೆಗೆ ಸ್ಪೂರ್ತಿಯಾಗಿದ್ದಾರೆ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top