ಹೊಟ್ಟೆಗೆ ಜ್ವರ ಹೇಗೆ ಬರುತ್ತದೆ. ಇದಕ್ಕೆ ಚಿಕಿತ್ಸೆ ಯಾವ ರೀತಿ

104.8K Views 10 Feb 2024

ಹೊಟ್ಟೆಗೆ ಜ್ವರ ಹೇಗೆ ಬರುತ್ತದೆ. ಇದಕ್ಕೆ ಚಿಕಿತ್ಸೆ ಯಾವ ರೀತಿ ಎಂಬುವುದರ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಆಫ್ 

ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಡಾ.ಅನುರಾಗ್ ಜೆ. ಶೆಟ್ಟಿಯವರ ವಿಶೇಷ ವೈದ್ಯಕೀಯ ಲೇಖನ.

ಗ್ಯಾಸ್ಟ್ರೋಎಂಟರೈಟಿಸ್ ಎಂಬುದನ್ನು ಸರಳವಾಗಿ ಹೊಟ್ಟೆಯ/ಕರುಳಿನ ಜ್ವರ ಎಂಬುದಾಗಿಯೂ ಹೇಳಬಹುದು; ಇದು ಕರುಳಿನಲ್ಲಿ ಉಂಟಾಗುವ ವೈರಾಣು ಸೋಂಕಿನಿಂದ ಕಾಣಿಸಿಕೊಳ್ಳುತ್ತದೆ. ಸೋಂಕುಪೀಡಿತ ವ್ಯಕ್ತಿಯ ಸಂಪರ್ಕ ಅಥವಾ ಕಲುಷಿತ ನೀರು, ಆಹಾರದಿಂದ ಇದು ಹರಡುತ್ತದೆ. ಮಳೆಗಾಲದಲ್ಲಿ ಕೊಳಕು ನೀರು ಕುಡಿಯುವ ನೀರಿನ ಜತೆಗೆ ಸೇರಿಕೊಳ್ಳುವುದರಿಂದಾಗಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಇದರ ಉಪದ್ರವ ಹೆಚ್ಚು. 

ಸಾಮಾನ್ಯವಾಗಿ ಸರಿಯಾದ ಆರೈಕೆ ಒದಗಿಸಿದರೆ ಇದು ತಾನಾಗಿಯೇ ವಾಸಿಯಾಗುತ್ತದೆ. ಈ ಕಾಯಿಲೆಯ ಬಹಳ ಸಾಮಾನ್ಯವಾದ ಲಕ್ಷಣ ಎಂದರೆ ರಕ್ತಮಿಶ್ರಿತವಲ್ಲದ, ಆದರೆ ನೀರಾದ ಮಲವಿಸರ್ಜನೆಯ ಜತೆಗೆ ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ ಇವುಗಳ ಜತೆಗೆ ಹೊಟ್ಟೆ ನೋವು ಮತ್ತು ಕರುಳು ಹಿಡಿದುಕೊಳ್ಳುವುದೂ ಇರಬಹುದು. ಕೆಲವರಲ್ಲಿ ಜ್ವರ ಕಾಣಿಸಿಕೊಳ್ಳಬಹುದು. ಆಗೀಗೊಮ್ಮೆ ತಲೆನೋವು ಮತ್ತು ಮೈಕೈ ನೋವು ಕೂಡ ಇರಬಹುದಾಗಿದೆ. ರೋಗಿಗಳು ಸಾಮಾನ್ಯವಾಗಿ ಒಂದೆರಡು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ; ಆದರೆ ಕೆಲವೊಮ್ಮೆ ಲಕ್ಷಣಗಳು ಒಂದು ವಾರದವರೆಗೂ ಇರಬಹುದು. ಆದರೆ ಸಣ್ಣ ಮಕ್ಕಳು ಮತ್ತು ವಯೋವೃದ್ಧರಲ್ಲಿ ಹಾಗೂ ರೋಗ ನಿರೋಧಕ ಶಕ್ತಿಯು ದುರ್ಬಲವಾಗಿರುವವರಲ್ಲಿ ಈ ಹೊಟ್ಟೆಯ ಜ್ವರವು ಅಪಾಯಕಾರಿಯಾಗಿದ್ದು, ರೋಗ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದ ತತ್‌ಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳಬೇಕು. ಲಕ್ಷಣಗಳು                ತೀವ್ರವಾಗಿದ್ದು, ಸೂಕ್ತವಾದ ಆರೈಕೆಯನ್ನು ಪಡೆಯದೆ ಇದ್ದಲ್ಲಿ ಅದರಿಂದ ಮೂತ್ರಪಿಂಡ ವೈಫಲ್ಯ, ರಕ್ತದೊತ್ತಡ ಕಡಿಮೆಯಾಗುವಂತಹ ಪ್ರಾಣಾಪಾಯಕಾರಿ ಸಮಸ್ಯೆಗಳು ತಲೆದೋರಬಹುದಾಗಿದೆ. ಮಲದಲ್ಲಿ ರಕ್ತ, ವಾಂತಿಯಾಗುವುದು, ನಿರ್ಜಲೀಕರಣದ ಲಕ್ಷಣಗಳು (ಬಾಯಾರಿಕೆ ಹೆಚ್ಚುವುದು, ಮೂತ್ರ ವಿಸರ್ಜನೆ ಕಡಿಮೆಯಾಗುವುದು, ಗಾಢ ಬಣ್ಣದ ಮೂತ್ರ) ಇತ್ಯಾದಿ ಎಚ್ಚರಿಕೆಯ ಲಕ್ಷಣಗಳು ಕಾಣಿಸಿಕೊಂಡರೆ ಅಥವಾ ಲಕ್ಷಣಗಳು ಒಂದೆರಡು ದಿನಗಳಿಗಿಂತ ಹೆಚ್ಚು ಕಾಲ ಇದ್ದಲ್ಲಿ ತತ್‌ಕ್ಷಣ ವೈದ್ಯಕೀಯ ಆರೈಕೆಗೆ ಒಳಗಾಗಬೇಕು.

ಈ ಅನಾರೋಗ್ಯದ ಸಮಯದಲ್ಲಿ ಆರೈಕೆಯ ಪ್ರಧಾನ ವಿಧಾನವೆಂದರೆ ಸಾಕಷ್ಟು ನೀರು ಕುಡಿಯುವ ಮೂಲಕ ದೇಹದಲ್ಲಿ ನೀರಿನಂಶ ಕುಸಿಯದಂತೆ ಕಾಪಾಡಿಕೊಳ್ಳುವುದು ಮತ್ತು ಜೀರ್ಣಗೊಳ್ಳಲು ಸುಲಭವಾದ ಲಘು -ಮೃದು ಆಹಾರ ಸೇವನೆ, ಚಹಾ, ಚಹಾದಂತಹ ಹಾಲು ಬೆರೆಸದ ಪಾನೀಯಗಳು, ಹಾಲು ಮತ್ತು ಮೊಸರು, ಸೋಡಾ ಪಾನೀಯಗಳ ಸೇವನೆ ಬೇಡ. ಶಕ್ತಿಯ ತತ್‌ಕ್ಷಣದ ಮೂಲವಾಗಬಲ್ಲ ಹಣ್ಣಿನ ರಸಗಳು, ಪ್ರೊಬಯೋಟಿಕ್ಸ್ ಮೂಲವಾಗಿರುವ ಮಜ್ಜಿಗೆಯನ್ನು ಸೇವಿಸಬಹುದು. ಚೇತರಿಸಿಕೊಳ್ಳುವ ತನಕ ಸಾಕಷ್ಟು ವಿಶ್ರಾಂತಿ ಪಡೆಯಿರಿ ಮತ್ತು ದೇಹ ದಣಿಯುವಂತಹ, ದೇಹ ದಂಡಿಸುವ ಕೆಲಸಗಳಲ್ಲಿ ತೊಡಗಬೇಡಿ.

ರೋಗ ಬಂದ ಬಳಿಕ ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ಏನೇ ಇದ್ದರೂ ರೋಗ ಬಾರದಂತೆ ತಡೆಯುವುದೇ ಅತ್ಯಂತ ಸೂಕ್ತ. ಹಾಗಾಗಿ ಊಟ-ಉಪಾಹಾರ ಸೇವಿಸುವುದಕ್ಕೆ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು, ಕುದಿಸಿ ಆರಿಸಿದ ನೀರನ್ನೇ ಕುಡಿಯುವುದು, ಆಹಾರವನ್ನು ಸರಿಯಾಗಿ ಬೇಯಿಸಿ, ಕುದಿಸಿ ಸೇವಿಸುವಂತಹ ವೈಯಕ್ತಿಕ ನೈರ್ಮಲ್ಯ ಕ್ರಮಗಳನ್ನು ಪಾಲಿಸುವುದು ಉತ್ತಮ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top