ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯೆಂದು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ನಿರ್ಧಾರ ಪ್ರಕಟಿಸಿದ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲಾ ಮಂತ್ರಿಗಳಿಗೆ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಸ್ಥಾನ (NSCDF) ಅಧ್ಯಕ್ಷ ಗಂಗಾಧರ್ ಗಾಂಧೀ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (KSSAP) ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ,ಹಾಗೂ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನ (AKAP) ಅಧ್ಯಕ್ಷೆ ಸೌಮ್ಯ ಶೆಟ್ಟಿ ತಮ್ಮ ಸಂಯುಕ್ತ ಮಾಧ್ಯಮ ಪ್ರಕಟಣೆಯಲ್ಲಿ, ಅಭಿನಂದನೆ ಮತ್ತು ಧನ್ಯವಾದವನ್ನು ಸಲ್ಲಿಸಿದ್ದಾರೆ.
ಕಳೆದ ಬಾರಿಯ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ತುಳು ಭಾಷೆಗೆ ಅಧಿಕೃತ ಮಾನ್ಯತೆಯನ್ನು ನೀಡುವ ಮೂಲಕ ಸರಕಾರ ನುಡಿದಂತೆ ನಡೆದಿದೆ ಎಂದು ಗಂಗಾಧರ್ ಗಾಂಧೀ, ರಾಣಿ ಪುಷ್ಪಲತಾ ದೇವಿ ಹಾಗೂ ಸೌಮ್ಯ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ನಿಟ್ಟಿನಲ್ಲಿ ತುಳುವರ ಪರವಾಗಿ ಕಾಳಜಿ ವಹಿಸಿದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವ ಶಿವರಾಜ್. ಎಸ್. ತಂಗಡಗಿ ಅವರಿಗೆ, ಸರಕಾರದ ಮುಂದೆ ವಿಷಯವನ್ನು ನಿರಂತರವಾಗಿ ಮಂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಪುತ್ತೂರಿನ ಶಾಸಕ ಅಶೋಕ್ ರೈ ಹಾಗೂ ಕರಾವಳಿಯ ಎಲ್ಲಾ ಶಾಸಕರನ್ನು ಮತ್ತು ಸರಕಾರದ ಮೇಲೆ ಒತ್ತಾಯ, ಆಗ್ರಹಗಳನ್ನು ನಿರಂತರವಾಗಿ ತಂದ ದೇಶ ವಿದೇಶದ ಎಲ್ಲಾ ತುಳು ಸಂಘ ಸಂಸ್ಥೆಗಳಿಗೂ ಇದೇ ಸಂದರ್ಭದಲ್ಲಿ ಅವರು ಧನ್ಯವಾದಗಳನ್ನು ಮತ್ತು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸಮಸ್ತ ತುಳುವರಿಗೆ ಇದೊಂದು ಐತಿಹಾಸಿಕ ದಿನವಾಗಿದ್ದು ಜಗತ್ತಿನಾದ್ಯಂತ ನೆಲೆಸಿರುವ ತುಳು ಭಾಷಿಗರಲ್ಲಿ ಆತ್ಮ ವಿಶ್ಮಾಸವನ್ನು ಅರಳಿಸುವಂತೆ ಮಾಡಿದ ದಿನವಾಗಿದೆ. ತುಳು ಭಾಷೆಯ ಸಮಗ್ರ ಬೆಳವಣಿಗೆಯ ನಿಟ್ಟಿನಲ್ಲಿ ಇದೊಂದು ಅಭೂತಪೂರ್ವ ಕ್ರಮವಾಗಿದೆ ಎಂದ ಅವರು ಆಡಳಿತಾತ್ಮಕವಾದ ಕಾರ್ಯಕ್ರಮ ಶೀಘ್ರದಲ್ಲಿ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.













































































































































































