ಮಂಗಳೂರು: ವಿದೇಶದಲ್ಲಿ ಕಳೆದ ಒಂದೂವರೆ ದಶಕಕ್ಕೂ ಅಧಿಕ ವರ್ಷಗಳಿಂದ ನಿರಂತರ ತುಳು, ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಸರಣಿ ಕಾರ್ಯಕ್ರಮ ಸಮಾರಂಭ ಹಾಗೂ ಸಾಮಾಜಿಕ ಕಳಕಳಿಯ ಸೇವೆ ನಡೆಸಿ ಮುನ್ನಡೆಯುತ್ತಿರುವ ಗಮ್ಮತ್ ಕಲಾವಿದೆರ್ ದುಬೈ ಇದರ 2026-27ನೇ ಸಾಲಿನ ಅಧ್ಯಕ್ಷರಾಗಿ ಹಿರಿಯ ನಾಟಕ ಹಾಗೂ ಕಿರುಚಿತ್ರ ಕಲಾವಿದ ವಾಸು ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ದುಬೈನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ನಾಟಕ ಹಾಗೂ ಯಕ್ಷಗಾನ ಕಲಾವಿದೆ ಸಮಂತಾ ಗಿರೀಶ್, ಕೋಶಾಧಿಕಾರಿಯಾಗಿ ಅನುಭವಿ ರಂಗಕಲಾವಿದೆ ಜೆನೆಟ್ ಸಿಕ್ಕೇರ, ಸಲಹಾ ಸಮಿತಿಯ ಗೌರವ ಪೋಷಕರಾಗಿ ಉಧ್ಯಮಿ ಹರೀಶ್ ಬಂಗೇರ, ತಂಡದ ಕಲಾತ್ಮಕ ಮಾರ್ಗದರ್ಶಕರಾಗಿ ರಂಗ ನಿರ್ದೇಶಕ ವಿಶ್ವನಾಥ ಬಿ. ಶೆಟ್ಟಿ ಆಯ್ಕೆಯಾಗಿದ್ದಾರೆ.
ಗಮ್ಮತ್ ಕಲಾವಿದರ್ ಯುಎಇ ವಾರ್ಷಿಕ ಸಭೆ
ಯುಎಇಯ ಪ್ರಸಿದ್ಧ ತುಳು ನಾಟಕ ತಂಡ ಗಮ್ಮತ್ ಕಲಾವಿದರ್ ಯುಎಇ 2011ರಲ್ಲಿ ಸ್ಥಾಪನೆಗೊಂಡು ತುಳು ರಂಗಭೂಮಿಯನ್ನು ಸಕ್ರಿಯವಾಗಿ ಮರಳುನಾಡಿನಲ್ಲಿ ಬೆಳೆಸಿಕೊಂಡು ಬರುತ್ತಿದ್ದು, ಗುಣಮಟ್ಟದ ನಾಟಕ ಪ್ರದರ್ಶನಗಳು, ಪರಿಪಕ್ವವಾದ ಅಭಿನಯಗಳ ಮೂಲಕ ಕೊಲ್ಲಿ ರಾಷ್ಟ್ರದಲ್ಲಿ ಮಾತ್ರವಲ್ಲದೆ ತಾಯ್ನಾಡಿನ ತುಳು ರಂಗಭೂಮಿಯಲ್ಲಿ ತನ್ನದೇ ಆದ ಗೌರವಾನ್ವಿತ ಸ್ಥಾನವನ್ನು ಗಳಿಸಿದೆ.
ರಂಗಭೂಮಿಯ ಚಟುವಟಿಕೆಗಳಷ್ಟೇ ಅಲ್ಲದೆ, ಗಮ್ಮತ್ ಕಲಾವಿದರ್ ಯುಎಇ ಕಳೆದ ಒಂದು ದಶಕಕ್ಕಿಂತ ಹೆಚ್ಚು ಕಾಲ ಸ್ವದೇಶದಲ್ಲಿನ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಸಹಾಯ ಹಸ್ತ ನೀಡುತ್ತಾ ಸಾಂಸ್ಕೃತಿಕ ಪ್ರಚಾರದ ಜೊತೆಗೆ ಅರ್ಥಪೂರ್ಣ ಸಾಮಾಜಿಕ ಸೇವೆಯನ್ನು ಸಮತೋಲನದಿಂದ ಮುಂದುವರೆಸುತ್ತಿರುವುದು ಗಮನಾರ್ಹ ಅಂಶ.
ಗಮ್ಮತ್ ಕಲಾವಿದರ್ ಯುಎಇ ತಮ್ಮ ಮುಂದಿನ ಕಾರ್ಯಕ್ರಮಗಳು ಮತ್ತು ಯೋಜನೆಗಳಿಗೆ ಬಲ ತುಂಬುವ ಉದ್ದೇಶದಿಂದ, 2026–27 ಅವಧಿಯ ನೂತನ ಕಾರ್ಯಕಾರಿ ಸಮಿತಿಯನ್ನು 18 ಜನವರಿ 2026ರಂದು ದುಬೈಯ ಬರ್ ದುಬೈಯಲ್ಲಿರುವ ಗ್ರ್ಯಾಂಡ್ ಎಕ್ಸೆಲ್ಸಿಯರ್ ಹೋಟೆಲ್‌ನ ಘಜಲ್ ರೆಸ್ಟೋರೆಂಟ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ರಚಿಸಲಾಯಿತು.
ವಾರ್ಷಿಕ ಸಭೆಯು ಸಂಸ್ಥೆಯ ಗೌರವ ಪೋಷಕರು ಹಾಗೂ ಕನ್ನಡ ಚಿತ್ರ ನಿರ್ಮಾಪಕರಾದ ಶ್ರೀ ಹರೀಶ್ ಬಂಗೇರ ಹಾಗೂ ನಾಟಕ ನಿರ್ದೇಶಕ “ರಂಗಸಾರಥಿ” ವಿಶ್ವನಾಥ್ ಶೆಟ್ಟಿ ಅವರು ಮಾರ್ಗದರ್ಶನ ಜರುಗಿದ್ದು, ಸಭೆಯಲ್ಲಿ ಹಿರಿಯ ನಾಟಕ ಹಾಗೂ ಕಿರುಚಿತ್ರ ಕಲಾವಿದರಾದ ವಾಸು ಕುಮಾರ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ನಾಟಕ ಹಾಗೂ ಯಕ್ಷಗಾನ ಕಲಾವಿದೆಯಾದ ಸಮಂತಾ ಗಿರೀಶ್ ಅವರನ್ನು ಕಾರ್ಯದರ್ಶಿಯಾಗಿ, ಹಾಗೂ ಅನುಭವೀ ರಂಗಕಲಾವಿದೆಯಾದ ಜೆನೆಟ್ ಸಿಕ್ವೇರಾ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಹರೀಶ್ ಬಂಗೇರ ಅವರು ಪೋಷಕರಾಗಿ ಮುಂದುವರಿಯಲಿದ್ದು, ನಿರ್ದೇಶಕ “ರಂಗಸಾರಥಿ” ವಿಶ್ವನಾಥ್ ಶೆಟ್ಟಿ ಅವರು ತಂಡದ ಕಲಾತ್ಮಕ ಮಾರ್ಗದರ್ಶನವನ್ನು ಮುಂದುವರೆಸಲಿದ್ದಾರೆ.
ನೂತನ ಅಧ್ಯಕ್ಷರಾದ ವಾಸು ಕುಮಾರ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮರಳುನಾಡಿನಲ್ಲಿ ತುಳು ರಂಗಭೂಮಿಯ ಬೆಳವಣಿಗೆ ಹಾಗೂ ತುಳು ಸಂಸ್ಕೃತಿಯ ಸಂರಕ್ಷಣೆಗೆ ಪೋಷಕರು , ತುಳು ರಂಗಭೂಮಿ ಅಭಿಮಾನಿಗಳು , ಸದಸ್ಯರು ಮತ್ತು ಹಿತೈಷಿಗಳು ತಮ್ಮ ಸಹಕಾರ ಮತ್ತು ಬೆಂಬಲವನ್ನು ಮುಂದುವರೆಸಬೇಕಾಗಿ ಮನವಿ ಮಾಡಿದ್ದಾರೆ.





















































































































































































