ಮಂಗಳೂರು: ಯಕ್ಷಗಾನ ಕ್ಷೇತ್ರದ ಚರಿತ್ರ ನಟ, ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಮೇರು ಕಲಾವಿದ ದಿ|ಅಳಿಕೆ ರಾಮಯ್ಯ ರೈ ಅವರ ಹೆಸರಿನಲ್ಲಿ ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಪ್ರತಿ ವರ್ಷ ನೀಡುವ ಅಳಿಕೆ ಯಕ್ಷ ಸಹಾಯ ನಿಧಿಗೆ 2024 – 25 ನೇ ಸಾಲಿಗೆ ಹಿರಿಯ ಯಕ್ಷಗಾನ ಕಲಾವಿದ, ತೆಂಕುತಿಟ್ಟಿನ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ. ಯಕ್ಷಗಾನ ವಿದ್ವಾಂಸರಾದ ಡಾ.ಎಂ.ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಹಿರಿಯ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಅವರನ್ನೊಳಗೊಂಡ ಸಲಹಾ ಸಮಿತಿಯ ಸೂಚನೆಯಂತೆ ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ಸಹಾಯ ನಿಧಿ ನೀಡಲಾಗುವುದು ಎಂದು ಅಳಿಕೆ ರಾಮಯ್ಯ ರೈ ಪುತ್ರ ಹಾಗೂ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ಅವರು ಮೇ 15 ರಂದು ನಗರದ ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್:
ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಪ್ರಸ್ತುತ ಬಹುಬೇಡಿಕೆಯ ಕಲಾವಿದರಾದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಅವರು 1965 ದಶಂಬರ 17ರಂದು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ಜನಿಸಿದರು. ಬಾಬು ಶೆಟ್ಟಿಗಾರ್ ಮತ್ತು ಗಿರಿಜಮ್ಮ ಅವರ ಹೆತ್ತವರು. ಪ್ರಾಥಮಿಕ ಶಿಕ್ಷಣಕ್ಕಷ್ಟೇ ಓದು ನಿಲ್ಲಿಸಿ ತಮ್ಮ 18ನೇ ವಯಸ್ಸಿನಲ್ಲಿ ಯಕ್ಷಗಾನದತ್ತ ಆಕರ್ಷಿತರಾದ ಅವರು ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾಯರಿಂದ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತರು. ಬಣ್ಣದ ವೇಷದ ದಂತಕಥೆ ಎನಿಸಿದ್ದ ದಿ| ಬಣ್ಣದ ಮಾಲಿಂಗರಿಂದ ಹಲಬಗೆಯ ಬಣ್ಣದ ವೇಷಗಳ ಪಟ್ಟುಗಳನ್ನು ಅಭ್ಯಸಿಸಿ ಮೇಳದ ತಿರುಗಾಟಕ್ಕೆ ತೊಡಗಿದರು. ಅಗರಿ,ಬಲಿಪ,ಇರಾ, ಪದ್ಯಾಣ ಭಾಗವತರು ಹಾಗೂ ಹಲವು ಹಿರಿಯ ವೇಷಧಾರಿಗಳ ಒಡನಾಟದಲ್ಲಿ ಓರ್ವ ಪರಿಪೂರ್ಣ ಕಲಾವಿದರಾಗಿ ಬೆಳೆದರು.



ಸುಮಾರು ನಾಲ್ಕೂವರೆ ದಶಕಗಳ ತಮ್ಮ ಕಲಾಯಾನದಲ್ಲಿ ಸದಾಶಿವ ಶೆಟ್ಟಿಗಾರರು ಕಟೀಲು (10 ವರ್ಷ), ಧರ್ಮಸ್ಥಳ (13 ವ.) ಹೊಸನಗರ (10 ವ.), ಎಡನೀರು (ಒಂದು ವರ್ಷ), ಮೇಳಗಳಲ್ಲಿ ಸಾರ್ಥಕ ಸೇವೆಗೈದು ಪ್ರಸ್ತುತ ಕಳೆದ 8 ವರ್ಷಗಳಿಂದ ಡಾ| ಕೆ.ಶ್ಯಾಮ ಭಟ್ ನೇತೃತ್ವದ ಹನುಮಗಿರಿ ಮೇಳದಲ್ಲಿ ಪ್ರಧಾನ ಬಣ್ಣದ ವೇಷಧಾರಿಯಾಗಿ ದುಡಿಯುತ್ತಿದ್ದಾರೆ. ಮಹಿಷಾಸುರ, ವರಾಹ, ಶೂರಪದ್ಮ, ರಾವಣ, ಕುಂಭಕರ್ಣ, ಸಿಂಹ, ಗಜೇಂದ್ರ, ಶೂರ್ಪನಖಿ, ಅಜಮುಖಿ, ಪೂತನಿ, ವೃತ್ರಜ್ವಾಲೆ ಮುಂತಾದ ಬಣ್ಣದ ವಿವಿಧ ಭೂಮಿಕೆಗಳಲ್ಲಿ ಅವರು ಜನಮನ ಸೆಳೆದಿದ್ದಾರೆ. ‘ಶ್ರೀರಾಮ ಕಾರುಣ್ಯ’ ಪ್ರಸಂಗದ ಕಾಕಾಸುರನ ಪಾತ್ರ ಅವರದೇ ಪರಿಕಲ್ಪನೆಯಲ್ಲಿ ವಿಶೇಷ ರೀತಿಯಿಂದ ಅಭಿವ್ಯಕ್ತಗೊಂಡಿದೆ.
ಯಕ್ಷಗಾನ ರಂಗದ ಸಾಧನೆಗಾಗಿ ಪೇಜಾವರ ಶ್ರೀ ಪ್ರಶಸ್ತಿ, ಕಟೀಲು ಆಸ್ರಣ್ಣ ಪ್ರಶಸ್ತಿ, ಬಣ್ಣದ ಮಾಲಿಂಗ ಪ್ರಶಸ್ತಿ, ಕೀಲಾರು ಪ್ರಶಸ್ತಿ, ಪೊಳಲಿ ಯಕ್ಷಕಲಾ ಪ್ರಶಸ್ತಿ ಇತ್ಯಾದಿ ಗೌರವ – ಸಮ್ಮಾನಗಳನ್ನು ಶೆಟ್ಟಿಗಾರ್ ಪಡೆದಿದ್ದಾರೆ. ಪ್ರಸ್ತುತ ಪತ್ನಿ ಕಲಾವತಿ, ಮಕ್ಕಳಾದ ದಿಲೀಪ್, ಸಂದೀಪ್ ಮತ್ತು ಕವಿತಾರೊಂದಿಗೆ ಸಿದ್ಧಕಟ್ಟೆಯ ಸ್ವಗೃಹದಲ್ಲಿ ವಾಸವಾಗಿದ್ದಾರೆ.

ಗೃಹ ಸನ್ಮಾನ – ನಿಧಿ ಸಮರ್ಪಣೆ:
ಟ್ರಸ್ಟ್ ಸಲಹಾ ಸಮಿತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ 2025 ಮೇ19 ರಂದು ಸೋಮವಾರ ಪ್ರಸ್ತುತ ತೀವ್ರ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಅವರ ಸಿದ್ಧಕಟ್ಟೆಯ ನಿವಾಸಕ್ಕೆ ತೆರಳಿ ಗೃಹ ಸಮ್ಮಾನದೊಂದಿಗೆ ರೂ. 20,000/- ನಿಧಿ ಸಮರ್ಪಣೆ ಮಾಡಲಾಗುವುದು. ಈ ವೇಳೆ ಸಲಹಾ ಸಮಿತಿ ಸದಸ್ಯರು ಮತ್ತು ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿರುವರು’ ಎಂದು ತಿಳಿಸಿದರು. ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸದಸ್ಯರಾದ ಉಮೇಶ್ ಶೆಟ್ಟಿ ಉಬರಡ್ಕ, ಮಹಾಬಲ ರೈ ಬಜನಿ ಗುತ್ತು ಮತ್ತು ಲಕ್ಷ್ಮೀನಾರಾಯಣ ರೈ ಹರೇಕಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





















































































































































































