ಉದ್ಯಮಿ, ಸಂಘಟಕ, ಸಮಾಜ ಸೇವಕ ಪುತ್ತೂರು ಮೂಲದ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿಯವರಿಗೆ ಪ್ರತಿಷ್ಠಿತ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್

90.8K Views 29 Jan 2025

ಅಬುಧಾಬಿ: ಅಬುಧಾಬಿಯ ಖ್ಯಾತ ಉದ್ಯಮಿ, ವಿಶ್ವದ ಅತೀ ದೊಡ್ಡ ಅನಿವಾಸಿ ಭಾರತೀಯರ ಸಂಘಟನೆಯಾಗಿರುವ ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಬರಲ್ ಸೆಂಟರ್ ಅಧ್ಯಕ್ಷರಾಗಿರುವ ಪುತ್ತೂರು ಮೂಲದ ಮಿತ್ರಂಪಾಡಿ ಜಯರಾಮ ರೈಯವರಿಗೆ ವಿಶ್ವವಾಣಿ ಪತ್ರಿಕೆ ಕೊಡಮಾಡುವ ಪ್ರತಿಷ್ಠಿತ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಪ್ರಶಸ್ತಿ ಲಭಿಸಿದೆ.
ಒಮನ್ ರಾಜಧಾನಿ ಮಸ್ಕತ್‌ನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಅಂತರಾಷ್ಟ್ರೀಯ ಸಾಧಕರ ಸಮ್ಮುಖ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರತಿಷ್ಠಿತ ಮಿತ್ರಂಪಾಡಿ ಮನೆತನದ ಜಯರಾಮ ರೈ ತನ್ನ ಸಂಘಟನಾ ಸಾಮರ್ಥ್ಯ, ಜನಪ್ರತೀತಿ, ಮಾನವೀಯ ಕಳಕಳಿ, ಕಲಾಪ್ರೇಮ ಹಾಗೂ ಪರೋಪಕಾರ ಸ್ವಭಾವಕ್ಕೆ ಹೆಸರಾದವರು.
ಅಬುಧಾಬಿ ಕನ್ನಡಿಗರ ಒಗ್ಗಟ್ಟು ಸ್ಥಾಪಿಸಿ ಏಕಸೂತ್ರದಲ್ಲಿ ಒಟ್ಟುಗೂಡಿಸುವ ಕೆಲಸವನ್ನು ತನ್ನ ಸಾಂಸ್ಕೃತಿಕ ಸಂಘಟನೆ ಮೂಲಕ ಮಾಡಿರುವ ರೈಗಳು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ’ದ ಮೂಲಕ ಹಳ್ಳಿಹಳ್ಳಿಗೂ ಕನ್ನಡದ ಕಂಪನ್ನು ಪಸರಿಸುವ ಜೊತೆಗೆ ದೇಶ ವಿದೇಶಗಳಲ್ಲೂ ಕನ್ನಡದ ಕಂಪು ಪಸರಿಸಿದವರು.
ಕೊರೋನಾ ದುರಿತ ಕಾಲದಲ್ಲಿ ಪುತ್ತೂರು ತಾಲೂಕಿನ ಸಾವಿರಕ್ಕೂ ಹೆಚ್ಚು ಬಡಕುಟುಂಬಗಳಿಗೆ ಅಕ್ಕಿ ವಿತರಿಸಿದ್ದು ಮಾತ್ರವಲ್ಲದೆ ಪುತ್ತೂರು ಜಾತ್ರೆ ಸಂದರ್ಭದಲ್ಲಿ ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ, ಜಾಯಿಂಟ್ ವೀಲ್ ನಡೆಸುವ 60ಕ್ಕೂ ಹೆಚ್ಚು ಸದಸ್ಯರಿರುವ 9 ಕುಟುಂಬಕ್ಕೆ ಸುಮಾರು ಒಂದು ತಿಂಗಳ ಊಟೋಪಚಾರ ನೀಡಿದ ಆಶ್ರಯದಾತ. ಕರೋನಾ ಸಂಕಷ್ಟದಿಂದ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ್ದ ಅನೇಕ ಭಾರತೀಯರಿಗೆ ಸ್ವದೇಶಕ್ಕೆ ಮರಳಲು ಆರ್ಥಿಕ ನೆರವು ಒದಗಿಸಿದವರು.
ವಿಶ್ವದಾಖಲೆ: ಕನ್ನಡ ನಾಡಿಗೆ ಕೊಡುಗೆ ನೀಡುವ ಜೊತೆಗೆ ಕನ್ನಡ ಭಾಷೆ ಪ್ರೇಮಿಯಾಗಿರುವ ಜಯರಾಮ ರೈಯವರು ಸಂಗೀತಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಡಾ| ಹರ್ಷ ಕುಮಾರ್ ರೈ ಅವರ ನಿರ್ಮಾಣದ ಅಷ್ಟ ಕ್ಷೇತ್ರ ಗಾನ ವೈಭವ ಎಂಬ ಕನ್ನಡ ಉಕ್ತಿಗೀತೆಯನ್ನು ಹೊರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಈ ಕನ್ನಡದ ಭಕ್ತಿ ಗೀತೆಯನ್ನು ಎಂಟು ರಾಷ್ಟ್ರಗಳಲ್ಲಿ ಬಿಡುಗಡೆಗೊಳಿಸಿದ್ದು, ಇದು ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್‌ ನಲ್ಲೂ ಕೂಡ ವಿಶ್ವದಾಖಲೆ.
ದೂರದ ಗಲ್ಫ್ ರಾಷ್ಟ್ರದಲ್ಲಿ ಇದ್ದರೂ ಸದಾ ಭಾರತ ದೇಶ, ಕನ್ನಡ ನಾಡು, ನುಡಿ, ನೆಲ, ಜಲದಶ್ರೇಯೋಭಿವೃದ್ಧಿಗಾಗಿ ಸದಾ ತನ್ನನ್ನು ತಾನು ತೊಡಗಿಸಿಕೊಂಡು 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವರೈಯವರು ಈಗ ಬಿನ್ ಫರ್ದನ್ ಸಂಸ್ಥೆಯ ಸಿಎಫ್‌ಒ. ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ಗೌರವಾಧ್ಯಕ್ಷರಾಗಿ, ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿ ಮಹತ್ತರ ಕಾರ್ಯವನ್ನು ಮಾಡಿದ್ದಾರೆ. 2023 ರ ಗಡಿನಾಡ ಸದ್ಭಾವನ ಭೂಷಣ ಪ್ರಶಸ್ತಿ, ‘ಇಂಟರ್‌ನ್ಯಾಷನಲ್ ಐಕಾನ್ ಪ್ರಶಸ್ತಿ’, ‘ಟೋಸ್ಟ್ ಮಾಸ್ಟರ್’ ಅಂತರಾಷ್ಟ್ರೀಯ ಪ್ರಶಸ್ತಿಯಾದ ಡಿಟಿಎಂ ಮತ್ತು ‘ಟ್ರಿಪಲ್ ಕ್ರೌನ್’ ಪ್ರಶಸ್ತಿ ಸಹಿತ ಹತ್ತು ಹಲವು ಪ್ರಶಸ್ತಿಗಳು ಇವರ ಸಾಧನೆಗೆ ಸಂದಿವೆ. ಇವರು ಕೃಷಿ ಪ್ರಧಾನ ಕುಟುಂಬದ ಕೆದಂಬಾಡಿ ಗ್ರಾಮದ ದಿ| ಚೆನ್ನಪ್ಪ ರೈ ಮಿತ್ರಂಪಾಡಿ ಹಾಗೂ ದಿವಂಗತ ಡಿಂಬ್ರಿ ಗುತ್ತು ಶ್ರೀಮತಿ ಸರಸ್ವತಿ ಸಿ. ರೈ ಅವರ ಪುತ್ರ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top