ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನ ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ ಗೆ 2025 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಮಂಗಳೂರು, ಡಿಸೆಂಬರ್ 18, 2025 – ಮಂಗಳೂರಿನ ಖ್ಯಾತ ಕೊಂಕಣಿ ಸಾಹಿತಿ / ಪತ್ರಕರ್ತ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ 2025 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇದು ಅವರ ಪ್ರಶಂಸಿತ ಸಾಹಿತ್ಯ ವಿಮರ್ಶೆ ಕೃತಿಯಾದ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ (2021) ಗೆ ನೀಡಲಾಗಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಭಾರತ ಸರಕಾರ ಸಾಹಿತ್ಯಕ್ಕಾಗಿ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಪ್ರತೀ ವರ್ಷ 22 ಅನುಸೂಚಿತ ಭಾಷೆಗಳ ಜೊತೆಗೆ ಇಂಗ್ಲಿಷ್ ಮತ್ತು ರಾಜಸ್ಥಾನಿ ಹೀಗೆ 24 ಭಾಷೆಗಳ ಉತ್ಕೃಷ್ಟ ಕೃತಿಗಳನ್ನು ಆಯ್ದು ಈ ಪುರಸ್ಕಾರ ನೀಡಲಾಗುತ್ತದೆ. ಕೊಂಕಣಿ ಭಾಷೆಯು 1992 ರಿಂದ ಅನುಸೂಚಿತ ಭಾಷೆಯಾಗಿದ್ದು, ಗೋವಾ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್ ಐದು ರಾಜ್ಯಗಳಲ್ಲಿ ಪ್ರಚಲಿತವಾಗಿರುವ ಕೊಂಕಣಿ ಭಾಷೆಗೆ 1975 ರಲ್ಲಿ ಸಾಹಿತ್ಯ ಅಕಾಡೆಮಿಯಿಂದ ಮಾನ್ಯತೆ ದೊರಕಿತ್ತು. 1977 ರಿಂದ ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷೆಯ ಕೃತಿಗಳಿಗೂ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ಹಿಂದೆ ಮಂಗಳೂರಿನ ಚಾ. ಫ್ರಾ. ದೆಕೊಸ್ತಾ (1992) ಮತ್ತು ಮೆಲ್ವಿನ್ ರೊಡ್ರಿಗಸ್(2011) – ಕವನ ಸಂಕಲನಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರೆ, 2016 ರಲ್ಲಿ ಎಡ್ವಿನ್ ಜೆ.ಎಫ್.ಡಿ. ಸೊಜಾ ಕಾದಂಬರಿಗಾಗಿ – ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಎಚ್. ಎಂ. ಪೆರ್ನಾಲ್ ಅವರು ಈ ಪರಂಪರೆಯನ್ನು ಮುಂದುವರೆಸುತ್ತಿರುವ ಕರ್ನಾಟಕದ ನಾಲ್ಕನೇ ಕೊಂಕಣಿ ಸಾಹಿತಿಯಾಗಿದ್ದಾರೆ. ಪೆರ್ನಾಲ್ ಅವರ ಪ್ರಸ್ತುತ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ ಕೃತಿಯು ಸಾಹಿತ್ಯ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮೊದಲ ಕೊಂಕಣಿ ಕೃತಿ ಎಂಬ ಐತಿಹಾಸಿಕ ಮೈಲುಗಲ್ಲನ್ನು ಸೃಷ್ಟಿಸಿದೆ. ಈ ಕೃತಿಗೆ ಮೊದಲು 2021 ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಮತ್ತು 2023 ರಲ್ಲಿ ಗೋವಾ ಕೊಂಕಣಿ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಲಭಿಸಿತ್ತು. ಈ ಪುಸ್ತಕಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕೊಂಕಣಿ ಸಾಹಿತಿ ದಾಮೋದರ್ ಮೌಜೋ ಅವರ ವಿಸ್ತೃತ ಮುನ್ನುಡಿ ಬರೆದಿದ್ದು, ಮಂಗಳೂರಿನ ಕವಿತಾ ಪಬ್ಲಿಕೇಷನ್ಸ್ ಈ ಪುಸ್ತಕವನ್ನು ಪ್ರಕಟಿಸಿದ್ದಾರೆ. ಉಡುಪಿ ಜಿಲ್ಲೆಯ ಪೆರ್ನಾಲ್ ನಲ್ಲಿ ಹುಟ್ಟಿ, ಶಿರ್ವದ ಹಿಂದೂ ಜೂನಿಯರ್ ಕಾಲೇಜು ಮತ್ತು ಎಂ.ಎಸ್.ಆರ್.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮುಂಬಯಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ಹೆನ್ರಿ ಮೆಂಡೋನ್ಸಾ ವೃತ್ತಿಯಲ್ಲಿ ಕಮರ್ಶಿಯಲ್ ಎಕಾಂವ್ಟೆಂಟ್. ಕನ್ನಡದಲ್ಲಿ – ತರಂಗ, ಸಂಕ್ರಮಣ,ಶೂದ್ರ ಮುಂತಾದ ಪತ್ರಿಕೆಗಳ ಮೂಲಕ ಬರವಣಿಗೆ ಆರಂಭಿಸಿದ ಅವರು 1980 ರ ದಶಕದ ಆರಂಭದಲ್ಲಿ ಯುವಕ್ ಮಾಸಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೊಂಕಣಿಗೆ ಪಾದಾರ್ಪಣೆ ಮಾಡಿ ಪ್ರಸ್ತುತ – ಕಥೆಗಾರ, ಕವಿ, ವಿಮರ್ಶಕ, ಸಂಪಾದಕ, ಪ್ರಕಾಶಕರಾಗಿ ತಮ್ಮದೇ ಛಾಪು ಮೂಡಿಸಿರುತ್ತಾರೆ. 2011 ರಲ್ಲಿ ಅವರು ಸ್ಥಾಪಿಸಿದ ಕಿಟಾಳ್ ಸಾಹಿತ್ಯಿಕ ಅಂತರ್ಜಾಲ ಪತ್ರಿಕೆ ಹಿರಿ – ಕಿರಿಯ ಲೇಖಕರನ್ನೊಳಗೊಂಡು ಸತತ ಹದಿನಾಲ್ಕನೇ ವರ್ಷದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದು, ಡಿಜಿಟಲ್ ಕೊಂಕಣಿ ಸಾಹಿತ್ಯ ನಿರ್ಮಿತಿಯಲ್ಲಿ ಮುಂಚೂಣಿಯಲ್ಲಿದೆ. 2013 ರಲ್ಲಿ ಪಾಕ್ಷಿಕವಾಗಿ ಆರಂಭಿಸಿದ ಆರ್ಸೊ ಸಾಹಿತ್ಯ ಪತ್ರಿಕೆ ಪ್ರಸ್ತುತ ಕವಿ ವಿಲ್ಸನ್ ಕಟೀಲ್ ಸಂಪಾದಕತ್ವದಲ್ಲಿ ಮಾಸಪತ್ರಿಕೆಯಾಗಿ ಹನ್ನೆರಡನೇ ವರ್ಷದಲ್ಲಿ ಪ್ರಕಟವಾಗುತ್ತಿದ್ದು, ಆರ್ಸೊ ವಾರ್ಷಿಕ ವಿಶೇಷಾಂಕಗಳಿಗೆ ಸಾಹಿತ್ಯ ವಿಶ್ವದಲ್ಲಿ ವಿಶೇಷ ಮಾನ್ಯತೆಯಿದೆ. ತಮ್ಮದೇ ಕಿಟಾಳ್ ಪ್ರಕಾಶನ ದ ಮೂಲಕ ಈ ವರೆಗೆ 15 ಕ್ಕೂ ಮಿಕ್ಕಿ ಮೌಲಿಕ ಸಾಹಿತ್ಯ ಕೃತಿಗಳನ್ನೂ ಪೆರ್ನಾಲ್ ಪ್ರಕಟಿಸಿದ್ದಾರೆ. ಈ ವರೆಗೆ ಪೆರ್ನಾಲ್ ಅವರ ನಾಲ್ಕು ಕವನ ಸಂಕಲನಗಳು — ಚಲ್ಯಾಂಕ್ ಚತ್ರಾಯ್ (1999), ಕಯ್ದ್ಯಾಚ್ಯೊ ಕವಿತಾ (2004), ಭಾಮುಣಾಂಚೆಂ ಚೆಡುಂ (2006) ಮತ್ತು ಜನೆಲ್ (2025), ಎರಡು ಕಥಾ ಸಂಕಲನಗಳು — ದೆವಾಕ್ ಸೊಡುಲ್ಲೊ ಪಾಡೊ(2002) ಮತ್ತು ಬೀಗ್ ಆನಿ ಬಿಗಾತ್ (2016) ಹಾಗೂ ಪ್ರಶಸ್ತಿ ವಿಜೇತ ಸಾಹಿತ್ಯ ವಿಮರ್ಶೆಯ ಕೃತಿ ಕೊಂಕಣಿ ಕಾವ್ಯೆಂ : ರುಪಾಂ ಆನಿ ರೂಪಕಾಂ (2021) ಪ್ರಕಟವಾಗಿವೆ. ಅವರ ಬೀಗ್ ಆನಿ ಬಿಗಾತ್‌ಕಥಾ ಸಂಕಲನಕ್ಕೆ ವಿಶ್ವ ಕೊಂಕಣಿ ಕೇಂದ್ರದ – ಖ್ಯಾತ ಉದ್ಯಮಿ ಟಿ. ವಿ. ಮೋಹನದಾಸ ಪೈ – ತಾಯಿಯ ಹೆಸರಿನಲ್ಲಿ ಕೊಡಮಾಡುವ ಶ್ರೀಮತಿ ವಿಮಲಾ ವಿ ಪೈ ಅತ್ಯುತ್ತಮ ಸಾಹಿತ್ಯ ಕೃತಿ ಪ್ರಶಸ್ತಿ (2017), ಕೊಂಕಣಿ ಕಾವ್ಯಕ್ಕೆ ನೀಡಿರುವ ಕೊಡುಗೆಗೆ , ಕವಿತಾ ಟ್ರಸ್ಟ್ ನೀಡುವ ಮಥಾಯಸ್ ಕುಟುಂಬ ದತ್ತಿ ಕಾವ್ಯ ಪ್ರಶಸ್ತಿ (2018), ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ಕಾವ್ಯೆಂ : ರುಪಾಂ ಆನಿ ರೂಪಕಾಂ ಪುಸ್ತಕಕ್ಕೆ ಅತ್ಯುತ್ತಮ ಪುಸ್ತಕ ಪ್ರಶಸ್ತಿ (2021), ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ಸಾಹಿತ್ಯ ಗೌರವ ಪ್ರಶಸ್ತಿ (2022), ಕೊಂಕಣಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2023) ಮತ್ತು ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ ಪುಸ್ತಕಕ್ಕೆ ಗೋವಾ ಕೊಂಕಣಿ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ (2023) ಲಭಿಸಿರುತ್ತದೆ. 850 ಕ್ಕೂ ಹೆಚ್ಚು ಕವಿತೆಗಳು, 100 + ಕಥೆಗಳು ಮತ್ತು 2,000 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಪೆರ್ನಾಲ್ ಅವರು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕೊಂಕಣಿ ಸಾಹಿತ್ಯವನ್ನು ಪೋಷಿಸುತ್ತಾ ಬಂದಿದ್ದು, 2012 ರಿಂದ ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರತೀ ವರ್ಷ ಅಬುದಾಬಿಯ ಉದ್ಯಮಿ, ದಾನಿ ಲಿಯೋ ರೊಡ್ರಿಗಸ್ ಕುಟುಂಬ ದತ್ತಿ ಕಿಟಾಳ್ ಯುವ ಪುರಸ್ಕಾರವನ್ನು ನೀಡುತ್ತಾ ಬಂದಿರುತ್ತಾರೆ. ಈ ಪ್ರಶಸ್ತಿಯು ಸನ್ಮಾನ ಪತ್ರ ಮತ್ತು ರು. 25,000/- ನಗದನ್ನು ಒಳಗೊಂಡಿರುತ್ತದೆ. ಪ್ರಸ್ತುತ ಮೈಕಲ್ ಡಿಸೋಜಾ ವಿಷನ್ ಕೊಂಕಣಿ ಪುಸ್ತಕ ಅನುದಾನ ಯೋಜನೆಯ ಪ್ರಧಾನ ಸಂಪಾದಕರಾಗಿದ್ದು, ಕೊಂಕಣಿ ಲೇಖಕ / ಲೇಖಕಿಯರಿಗೆ ತಮ್ಮ ಕೃತಿಯ ಮುದ್ರಣಕ್ಕಾಗಿ ಪುಸ್ತಕವೊಂದಕ್ಕೆ ರು. 40,000/- ವರೆಗೆ ಅನುದಾನ ನೀಡಲಾಗುತ್ತಿದೆ. ₹ 40 ಲಕ್ಷ ವೆಚ್ಚದ ಈ ಯೋಜನೆಯ ಸಂಪೂರ್ಣ ಖರ್ಚನ್ನು ಅನಿವಾಸಿ ಉದ್ಯಮಿ ಮತ್ತು ಕೊಂಕಣಿ ಭಾಷಾಭಿಮಾನಿ, ಮಹಾದಾನಿ ಶ್ರೀ ಮೈಕಲ್ ಡಿಸೋಜಾ ಪ್ರಾಯೋಜಿಸಿದ್ದು – ವಿಶ್ವ ಕೊಂಕಣಿ ಕೇಂದ್ರದ ಉಸ್ತುವಾರಿಯಲ್ಲಿ 5 ವರ್ಷಗಳ ಅವಧಿಗೆ 100 ಪುಸ್ತಕ ಪ್ರಕಟಣೆಯ ಗುರಿಯನ್ನು ಈ ಯೋಜನೆ ಹೊಂದಿರುತ್ತದೆ. ಕೊಂಕಣಿ ಸಾಹಿತ್ಯ ಸಮುದಾಯದಲ್ಲಿ ಸಮರ್ಪಿತ ನಾಯಕರಾಗಿರುವ ಪೆರ್ನಾಲ್ ಅವರು 2023 ರಲ್ಲಿ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ರಜತ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅಖಿಲ ಭಾರತ ಕೊಂಕಣಿ ಪರಿಷತ್‌ನಲ್ಲಿ ಕೋಶಾಧಿಕಾರಿಯಾಗಿದ್ದಾರೆ. ಅವರು ಕೊಂಕಣಿ ಲೇಖಕರ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು ಪ್ರಸ್ತುತ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

54ನೇ ಕೆವಿನ್ ಮಿಸ್ಕಿತ್ ಸಂಗೀತ ಕಾರ್ಯಕ್ರಮದ ಪೊಸ್ಟರ್ ಬಿಡುಗಡೆ:

ಸಮಾಜಮುಖಿ ಕಾರ್ಯಕ್ರಮಗಳಿಗೆ ಸ್ಪಂದಿಸುವ, ಮಾನಸಿಕ ಅಸ್ವಸ್ಥರಿಗೆ ಉಭಯಹಸ್ತ ನೀಡಿ ಅಶ್ರಯದಾತರಾಗಿ ಹೆಸರುವಾಸಿಯಾಗಿರುವ “ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆ ಮಂಜೆಶ್ವರ” ಇವರ 17 ವರುಷಗಳ ಸೇವೆಯ ತನ್ನ ವಿವಿಧ ಕಾರ್ಯ ಯೋಜನೆಗಳ ಅನುಷ್ಟಾನಕ್ಕೆ ಸಹಾಯರ್ಥವಾಗಿ ಮಂಗಳೂರಿನ ಪ್ರಖ್ಯಾತ ಸಂಗೀತಗಾರ, ಯುವ ಪ್ರತಿಭೆಯಾಗಿರುವ ಕೆವಿನ್ ಮಿಸ್ಕಿತ್ ಇವರ 54ನೇ ಕೊಂಕಣಿ ಸಂಗೀತ ಸಂಜೆಯನ್ನು ಅಯೋಜಿಸಿದೆ.ಇದೇ ಜೂನ್ 21ನೇ ಭಾನುವಾರ ಸಂಜೆ 6.00 ಘಂಟೆಗೆ ಸರಿಯಾಗಿ ಮಂಗಳೂರಿನ ಟೌನ್ ಹಾಲ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನೆರವೇರಿಸಲಾಗುವುದು. ಈ ಪ್ರಯುಕ್ತ ಪ್ರಚಾರ ಘೊಷಣೆಯ ಪೊಸ್ಟರ್ ಬಿಡುಗಡೆ ಕಾರ್ಯಕ್ರಮ ಸ್ನೇಹಾಲಯ ಸಂಸ್ಥೆಯ ಮಂಗಳೂರಿನ ಪ್ರಧಾನ ಕಛೇರಿಯಲ್ಲಿ ನೆರವೇರಿಸಲಾಯಿತು. ಸಂಸ್ಥೆಯ ಸ್ಥಾಪಕರೂ, ಅಧ್ಯಕ್ಷರು ಆಗಿರುವ ಜೋಸೆಫ್ ಕ್ರಾಸ್ತಾ ಪೊಸ್ಟರ್ ಬಿಡುಗಡೆ ಮಾಡಿ ಸಾರ್ವಜನಿಕರ ಸಂಪೂರ್ಣ ಸಹಕಾರ ಕೋರಿದರು. ಸಭಾರಂಭದಲ್ಲಿ ಸ್ನೇಹಾಲಯದ ಹಲವು ಅಭಿಮಾನಿಗಳ ಉಪಸ್ಥಿಯಲ್ಲಿ ಶ್ರೀಯುತ ಶೆಲ್ಡಾನ್ ಕ್ರಾಸ್ತ, ಸಂಸ್ಥೆಯ ಕಾರ್ಯದರ್ಶಿಗಳಾದ ಒಲಿವಿಯಾ ಕ್ರಾಸ್ತಾ, ಸಂಗೀತಗಾರ ಕೆವಿನ್ ಮಿಸ್ಕಿತ್, ಸಲಹೆಗಾರರಾದ ಜಿಯೋ ಡಿ ಸಿಲ್ವ, ಅಗ್ರಾರ್, ಜಾಕ್ಸನ್ ಕಿನ್ನಿಗೋಳಿ ಹಾಗು ಇತರರು ಹಾಜರಿದ್ದರು.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಯಕ್ಷಶಿಕ್ಷಣ. ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆ. ಯಕ್ಷ ಶಿಕ್ಷಣ  ಫೌಂಡೇಶನ್ ನ ಅಭಿವೃದ್ದಾತ್ಮಕ ಯೋಜನೆ : ಪಟ್ಲ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್( ರಿ.) ಮಂಗಳೂರು ಇದರ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯಡಿ ಕರ್ತವ್ಯ ನಿರತ ಯಕ್ಷಗಾನ ಶಿಕ್ಷಕರ‌ ಸಮಾಲೋಚನಾ‌ ಸಭೆಯು ಬಲ್ಲಾಲ್ ಭಾಗ್ ಬಳಿ ಇರುವ ಪತ್ತುಮುಡಿ ಸಭಾಂಗಣದಲ್ಲಿ  ನಡೆಯಿತು.ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ನಿರ್ದೇಶಕರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿ ಯಕ್ಷಧ್ರುವ ಯಕ್ಷಶಿಕ್ಷಣವು ಪಟ್ಲ ಫೌಂಡೇಶನ್ ನ ಅಭಿವೃದ್ಧಾತ್ಮಕವಾದ ಯೋಜನೆಯಾಗಿದ್ದು ಭವಿತವ್ಯದ ಸುಸಂಸ್ಕೃತ ಪ್ರೇಕ್ಷಕರು ಮತ್ತು ಉತ್ತಮ ಕಲಾವಿದರನ್ನು ತಯಾರುಗೊಳಿಸುವ ನಿಭಾವಣೆಯನ್ನು ಹೊತ್ತ ಯೋಜನೆಯಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಯಕ್ಷಗಾನ ಶಿಕ್ಷಕರು ಕರ್ತವ್ಯವನ್ನು ನಿರ್ವಹಿಸುವಲ್ಲಿ ಸಫಲತೆಯನ್ನು ಸಾಧಿಸಬೇಕು ಎಂದರು. ಈ‌ ಸಂದರ್ಭದಲ್ಲಿ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳರು ಕಳೆದ ಶೈಕ್ಷಣಿಕ ವರ್ಷದ ತರಗತಿಯ ಅವಲೋಕನ ಮಾಡಿದರು. ಈ ವೇಳೆ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ನೀತಿಸಂಹಿತೆಯನ್ನು ಪ್ರಸ್ತಾಪಿಸಿ ಚರ್ಚಿಸಲಾಯಿತು.ಪ್ರಸಕ್ತ ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ತರಗತಿ, ಯಕ್ಷಗಾನ ಶಿಕ್ಷಕರ ಕಾರ್ಯಗಾರ, ಶಾಲಾ ಸಮಿತಿಯ ಸಭೆ ಸಹಿತ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಕೇಂದ್ರೀಯ ಸಮಿತಿಯ ಕಾರ್ಯದರ್ಶಿಗಳಾದ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ CA ಸುದೇಶ್ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಸಹಿತ ವಿವಿಧ ಪದಾಧಿಕಾರಿಗಳು, ಯಕ್ಷಗಾನ ಶಿಕ್ಷಕರು ಉಪಸ್ಥಿತರಿದ್ದರು. ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಸಂಯೋಜಕ ದೀವಿತ್ ಎಸ್ ಕೆ ಪೆರಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಮಾ.21ರಂದು ಮಂಗಳೂರಿನಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ-ಡಾ.ಎಂ.ಮೋಹನ ಆಳ್ವ

ಮಂಗಳೂರು : ಆಳ್ವಾಸ್ ನುಡಿಸಿರಿ- ವಿರಾಸತ್ ಮಂಗಳೂರು ಘಟಕದ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕಲಾವಿದರಿಂದ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಮಾ.21ರಂದು ಸಾಯಂಕಾಲ 6ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ನಮ್ಮ ಸಾಂಸ್ಕೃತಿಕ, ಜನಪದ ಹಾಗೂ ಶಾಸ್ತ್ರೀಯ ಕಲೆಗಳನ್ನುಜನಮಾನಸಕ್ಕೆ ತಲುಪಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ತಿಳಿಸಿದರು.ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಸಲಾಗಿದ್ದು, ಅಪಾರ ಜನಮನ್ನಣೆ ಗಳಿಸಿದೆ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 3 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣದ ಜತೆಗೆ ನುಡಿಸಿರಿ, ವಿರಾಸತ್‌ನಂತಹ ಕಾರ್ಯಕ್ರಮಗಳ ಮೂಲಕ ನಮ್ಮ ನಾಡು,ನುಡಿ,ಕ್ರೀಡೆ ಹಾಗೂ ಕಲೆಗಳಪೋಷಣೆಗೆ ಶ್ರಮಿಸುತ್ತಿದೆ. ನಮ್ಮ ಶಾಸ್ತ್ರೀಯ, ಜನಪದ ಕಲೆಗಳು ಮರೆಯಾಗದಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಜತೆಗೆ ಸಾಂಸ್ಕೃತಿಕ ಶಿಕ್ಷಣ ನೀಡುವುದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಉದ್ದೇಶವಾಗಿದೆ. ಮಂಗಳೂರಿನಲ್ಲಿ ನಡೆಯಲಿರುವ ಆಳ್ವಾಸ್ ಸಾಂಸ್ಕೃತಿಕ ವೈಭವಕ್ಕೆ ಸಮಾನ ಮನಸ್ಕರು ಕೈಜೋಡಿಸಬೇಕು ಎಂದು ಡಾ.ಎಂ.ಮೋಹನ್ ಆಳ್ವ ವಿನಂತಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ ತಮ್ಮ ಹಿರಿಯರ ಆದರ್ಶದಲ್ಲಿ ನಡೆದು ಬಂದ ಡಾ.ಎಂ. ಮೋಹನ್ ಆಳ್ವರು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಎಂದು ಮರೆತವರಲ್ಲ. ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಂಡು ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿರುವಡಾ.ಆಳ್ವ ಅವರು ಮೂಡುಬಿದಿರೆಯನ್ನು ಸಾಂಸ್ಕೃತಿಕ ಕೇಂದ್ರವಾಗಿಸಿ ಹೊಸ ಕ್ರಾಂತಿ ಮಾಡಿದ್ದಾರೆ ಎಂದರು.ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಪದ್ಮರಾಜ್ ಆರ್. ಪೂಜಾರಿ, ಡಾ.ಆಶಾ ಜ್ಯೋತಿ ರೈ, ಭಾಸ್ಕರ ರೈ ಕುಕ್ಕುವಳ್ಳಿ, ರತ್ನಾಕರ ಜೈನ್, ಲೀಲಾಕ್ಷ ಕರ್ಕೇರ, ಕದ್ರಿ ನವನೀತ ಶೆಟ್ಟಿ, ವಿದುಷಿ ರಾಜಶ್ರೀ ಉಳ್ಳಾಲ್, ಯುವಜನ ಕ್ರೀಡಾಧಿಕಾರಿ ಪ್ರದೀಪ್ ಡಿಸೋಜ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಆಳ್ವಾಸ್ ನುಡಿಸಿರಿ ವಿರಾಸತ್ ಮಂಗಳೂರು ಘಟಕದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪ್ರಸಾದ್ ರೈ ಕಲ್ಲಿಮಾರ್, ಖಜಾಂಚಿ ಶಶಿರಾಜ್ ರಾವ್ ಕಾವೂರು ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಅಭಾಸಾಪ ದ.ಕ.ಜಿಲ್ಲಾ ಅದ್ಯಕ್ಷೆಯಾಗಿ ವೀಣಾ.ಟಿ.ಶೆಟ್ಟಿ ಆಯ್ಕೆ

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ದ.ಕ.ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ವೀಣಾ. ಟಿ .ಶೆಟ್ಟಿ ಆಯ್ಕೆಯಾಗಿದ್ದಾರೆ ಕಾರ್ಯದರ್ಶಿಯಾಗಿ ಲತೇಶ ಬಾಕ್ರಬೈಲ್ , ಜತೆ ಕಾರ್ಯದರ್ಶಿಗಳಾಗಿ ಗೀತಾ ಲಕ್ಷ್ಮೀಶ, ಶ್ರೀಲಕ್ಷ್ಮೀ ಮಠದಮೂಲೆ, ಕೋಶಾಧಿಕಾರಿಯಾಗಿ ರತ್ನಾವತಿ ಬೈಕಾಡಿ.ಮಾಧ್ಯಮ ಪ್ರಮುಖರಾಗಿ ಚಂದ್ರಶೇಖರ ಕುಳವರ್ಮ,ಮಹಿಳಾ ಪ್ರಕಾರ ಪ್ರಮುಖರಾಗಿ ಸುಮಂಗಲ ರತ್ನಾಕರ , ಮಕ್ಕಳ ಪ್ರಕಾರ ಪ್ರಮುಖರಾಗಿ ರಮೇಶ ಮಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ.ಬಿ. ಹರೀಶ್ ರೈ , ಡಾ.ಸುರೇಶ ನೆಗಳಗುಳಿಪ್ರಕಾಶ ನಾರಾಯಣ ಚಾರ್ಮಾಡಿ , ರವೀಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಾಹೆಯ ಉಪ ಕುಲಪತಿಯಾಗಿ ಡಾ.ಶರತ್ ಕುಮಾರ್ ರಾವ್

ಮಣಿಪಾಲ-ಮಣಿಪಾಲ ಕೆಎಂಸಿ ಆಸ್ಪತ್ರೆಯ ಖ್ಯಾತ ಮತ್ತು ಯಶಸ್ವಿ ಮೂಳೆ ಶಸ್ತ್ರ ಚಿಕಿತ್ಸಕ, ಮೂಳೆ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಶರತ್ ಕುಮಾರ್ ರಾವ್ ಅವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಾಹೆಯ ಉಪ ಕುಲಪತಿಯಾಗಿ ನೇಮಕಗೊಂಡಿದ್ದಾರೆ. ಅವರಿಗೆ Mp mla’s news ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್ ಅವರು ಶುಭ ಹಾರೈಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸಾಲದ ಹೊರೆ ಹೆಚ್ಚಿಸಿದ ಬಜೆಟ್-ನಳಿನ್ ಕುಮಾರ್ ಕಟೀಲ್

ಮಂಗಳೂರು ‌: ಸಿದ್ದರಾಮಯ್ಯ ಅವರ ಈ ಹಿಂದಿನ‌ ಬಜೆಟ್‌ನಂತೆ ಈ ಬಜೆಟ್ ಕೂಡಾ ಕೇವಲ ಘೋಷಣೆಗೆ ಸೀಮಿತವಾದ ಹಾಗಿದೆ. ಬಜೆಟ್ ಗಾತ್ರ ಹಿಗ್ಗಿದೆ. ಜತೆಗೆ ಸಾಲದ ಹೊರೆಯೂ ಇಮ್ಮಡಿಯಾಗಿದೆ. ಅಬಕಾರಿ ಇಲಾಖೆ ಮೂಲಕ ಸರ್ಕಾರ ಹೆಚ್ಚಿನ ರಾಜಸ್ವ ನಿರೀಕ್ಷಿಸಿರುವುದು ರಾಜ್ಯದ ಜನತೆಯ ದುರಂತ.ಸಾಲದಲ್ಲಿ ಮುಳುಗಿರುವ ಈ ಸರ್ಕಾರ ಬಜೆಟ್ ನ ಶೇ. 25ರಷ್ಟು ಘೋಷಣೆಗಳನ್ನು ಕೂಡಾ ಕಾರ್ಯಗತ ಮಾಡುವುದು ಸಾಧ್ಯವಿಲ್ಲ.ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿರುವುದೇ ಬಜೆಟ್ ನ ದೊಡ್ಡ ಸಾಧನೆ. ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಪುತ್ತೂರು ಮೆಡಿಕಲ್ ಕಾಲೇಜ್ ಗೆ ಯಾವುದೇ ಅನುದಾನ ಘೋಷಣೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಗೆ ನಿರಾಶಾದಾಯಕ ಬಜೆಟ್.-ನಳಿನ್ ಕುಮಾರ್ ಕಟೀಲುಮಾಜಿ ಸಂಸದರು, ದ.ಕ.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ಮಾದಿಗ ಮಹಾಸಭಾದ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಅಶೋಕ್ ಪೂಜಾರ್ ಆಯ್ಕೆ

ಮಂಗಳೂರು : ಕರ್ನಾಟಕ ಮಾದಿಗ ಮಹಾಸಭಾದ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಮೂಲ್ಕಿಯ ಯುವ ಸಾಮಾಜಿಕ ನೇತಾರ ಅಶೋಕ್ ಎಚ್. ಪೂಜಾರ್ ಆಯ್ಕೆಯಾಗಿದ್ದಾರೆ. ಕರ್ನಾಟಕ ಮಾದರ ಮಹಾಸಭಾದ ರಾಜ್ಯಾಧ್ಯಕ್ಷ ಡಾ. ಕೆ.ಹೆಚ್. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.ಕರ್ನಾಟಕ ಮಾದರ ಮಹಾಸಭೆಯು 2015ರಲ್ಲಿ ಮಾದಿಗ ಸಮುದಾಯದ ಸಬಲೀಕರಣ ಮತ್ತು ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ಸ್ಥಾಪಿತವಾಗಿದೆ. ಮಾದಿಗ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ನೀವು ನಿಷ್ಠೆಯಿಂದ ಹಾಗೂ ತ್ಯಾಗಮನೋಭಾವದಿಂದ ಕೆಲಸ ಮಾಡುವ ಇಂಗಿತವನ್ನು ಅಶೋಕ್ ಪೂಜಾರ್ ಹೊಂದಿದ್ದಾರೆ.ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯ ಕರಾವಳಿ ಆದಿಜಾಂಬವ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿಯೂ ಅಶೋಕ್ ಪೂಜಾರ್ ಸಮುದಾಯವನ್ನು ಸಂಘಟಿಸುತಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ದಾಮಸ್‌ಕಟ್ಟೆ ಕಿರೆಂ ಚರ್ಚ್‌ನಲ್ಲಿ “ವೇಳ್‌ಘಡಿ” ಕೊಂಕಣಿ ಸಿನಿಮಾಕ್ಕೆ ಮುಹೂರ್ತ. ‘ಸಿನಿಮಾ ಮನರಂಜನೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡಲಿ’ : ಫಾ. ಓಸ್ವಾಲ್ಡ್ ಮೊಂತೇರೋ

ಮಂಗಳೂರು: ಜನರನ್ನು ಬಹುಬೇಗ ಆಕರ್ಷಿಸುವ ಸಿನಿಮಾವು ಮನರಂಜನೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವಂತಾಗಬೇಕು, ಕೊಂಕಣಿ ಭಾಷಾ ಸಿನಿಮಾಕ್ಕೆ ಉತ್ತಮ ಭವಿಷ್ಯವಿದೆ. ತಂತ್ರಜ್ಞರು, ಕಲಾವಿದರು ಜೊತೆಯಾಗಿ ಉತ್ತಮ ಸಿನಿಮಾವನ್ನು ನಿರ್ಮಿಸಿದಲ್ಲಿ ಪ್ರೇಕ್ಷಕರು ಸಹ ಅವರಿಗೆ ಮುಕ್ತ ಬೆಂಬಲ ನೀಡುತ್ತಾರೆ. “ವೇಳ್‌ಘಡಿ” ಕೊಂಕಣಿ ಸಿನಿಮಾವು ಉತ್ತಮವಾಗಿ ಮೂಡಿಬರಲಿ ಎಂದು ದಾಮಸ್‌ಕಟ್ಟೆಯ ಕಿರೆಂ ಚರ್ಚ್‌ನ ಧರ್ಮಗುರು ಫಾ. ಒಸ್ವಾಲ್ಡ್ ಮೊಂತೇರೋ ಹೇಳಿದರು.ಅವರು ಕಿನ್ನಿಗೋಳಿ ಬಳಿಯ ದಾಮಸ್‌ಕಟ್ಟೆಯ ಕಿರೆಂ ಚರ್ಚ್‌ನ ಶಾಲೋಮ್ ಹಾಲ್‌ನ ಕಿರು ಸಭಾಂಗಣದಲ್ಲಿ ರೋಶನ್ ನೆಲ್ಲಿಗುಡ್ಡೆ ಅವರ ಸೋನುಲವಿ ಸಿನೆ ಕ್ರಿಯೇಶನ್ಸ್‌ನ ಬ್ಯಾನರ್ ಅಡಿಯಲ್ಲಿ, ಜಾನ್ ವಿಲ್ಸನ್ ಲೋಬೋ ಅವರ ನಿರ್ಮಾಣದ ನೋರ್ಬಾರ್ಟ್ ಜಾನ್ ನಿರ್ದೇಶನದ “ವೇಳ್‌ಘಡಿ” ಕೊಂಕಣಿ ಸಿನಿರ್ಮಾಣದ ಮುಹೂರ್ತವನ್ನು ನೆರವೇರಿಸಿ ಆಶೀರ್ವಚನ ನೀಡಿದರು.ಚಿತ್ರ ನಿರ್ಮಾಪಕ ಜಾನ್ ವಿಲ್ಸನ್ ಲೋಬೋ ಮಾತನಾಡಿ, ಕೊಂಕಣಿ ಸಿನಿಮಾವೊಂದನ್ನು ನಿರ್ಮಿಸಬೇಕು ಎಂಬ ಕನಸು ಈಗ ಈಡೇರುತ್ತಿದೆ. ಒಂದು ಉತ್ತಮ ಕಥೆಯುಳ್ಳ, ಸಮಾಜದ ಯುವ ಪೀಳಿಗೆಗೆ ಜಾಗೃತಿ ಸಂದೇಶವನ್ನು ನೀಡುವ ಸಿನಿಮಾವಾಗಿ ನಿರ್ಮಾಣವಾಗಲಿದೆ, ಎಲ್ಲರ ಪ್ರೋತ್ಸಾಹ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು. ಮುಂಬೈ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮಾತನಾಡಿ, ಸಮಾಜವು ಬದಲಾವಣೆಯಾಗಲು ಸಿನಿಮಾ ಕ್ಷೇತ್ರ ಬಹಳಷ್ಟು ಕೊಡುಗೆಯನ್ನು ನೀಡಿದೆ. ಪ್ರಾದೇಶಿಕ ಭಾಷೆಯಾದ ಕೊಂಕಣಿಯ ಪ್ರೇಕ್ಷಕರು ವಿಶ್ವಮಟ್ಟದಲ್ಲಿದ್ದು, ಎಲ್ಲರೂ ಈ ಸಿನಿಮಾವನ್ನು ನೋಡುವಂತಹ ವಾತಾವರಣ ನಿರ್ಮಾಣವಾಗಲಿ ಎಂದರು.ಸೋನುಲವಿ ಸಿನೆ ಕ್ರಿಯೇಶನ್ಸ್‌ನ ಪ್ರವರ್ತಕ ರೋಶನ್ ನೆಲ್ಲಿಗುಡ್ಡೆ ಸಿನಿಮಾ ಹಾಗೂ ಅದರ ತಂತ್ರಜ್ಞನರ, ಕಲಾವಿದರ ಪರಿಚಯಿಸಿ, ಸ್ವಾಗತಿಸಿದರು.ಮಂಗಳೂರಿನ ಹಿರಿಯ ಕಲಾವಿದ ಡೊಲ್ಲಂ, ಎಂಸಿಸಿ ಬ್ಯಾಂಕ್‌ನ ನಿರ್ದೇಶಕ ಹಾಗೂ ನ್ಯಾಯವಾದಿ ಜೆ.ಬಿ. ಮೋಂತೆರೋ, ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಹನ್ ಡಿ.ಕೋಸ್ತ ಶುಭ ಹಾರೈಸಿದರು.ಸಿನಿಮಾ ನಿರ್ದೇಶಕ ನೋರ್ಬಾರ್ಟ್ ಜಾನ್, ಪ್ರೋಡಕ್ಷನ್ ಇಂಜಿನಿಯರ್ ಆಲ್ವಿನ್ ಸಿಕ್ವೇರಾ, ಡಿಒಪಿ ಫೆಸ್‌ವಿತ್ ಮಂಗಳೂರು, ಸಹಾಯಕ ರಾಯನ್, ಸಿನಿಮಾ ಪಿಆರ್‌ಒ ಸುನಿಲ್ ನೆಲ್ಲಿಗುಡ್ಡೆ, ಕಲಾವಿದರು ಮತ್ತಿತರರು ಉಪಸ್ಥಿತರಿದ್ದರು.ಸೆನೆಟ್ ಡಿಕೋನ್ಹ ಕಾರ್ಯಕ್ರಮ ನಿರೂಪಿಸಿದರು. “ವೇಳ್‌ಘಡಿ” ಕೊಂಕಣಿ ಸಿನಿಮಾ….ಸಮಾಜದಲ್ಲಿ ಒಂದು ಘಟನೆ ಕ್ಷಣಿಕವಾಗಿ ನಡೆದಾಗ ಅದು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ರೋಷಕ ಕಥೆಯ ಎಳೆಯೊಂದಿಗೆ ನಡೆಯುವ ತಾಕಲಾಟದ ಚಿತ್ರಣವೇ “ವೇಳ್‌ಘಡಿ” ಕೊಂಕಣಿ ಸಿನಿಮಾದ ಕಥಾ ಸಾರಾಂಶವನ್ನು ರೋಶನ್ ನೆಲ್ಲಿಗುಡ್ಡೆ ಅವರು ರಚಿಸಿದ್ದು, ಸಹ ನಿರ್ದೇಶನ ಹಾಗೂ ತಮ್ಮದೇ ಸೋನುಲವಿ ಸಿನೆ ಕ್ರಿಯೇಶನ್ಸ್‌ನ ಮೂಲಕ ತೆರೆಗೆ ತರಲಿದ್ದಾರೆ. ನಿರ್ಮಾಣದಲ್ಲಿ ಜಾನ್ ವಿಲ್ಸನ್ ಲೋಬೋ ಸಹಕಾರ ನೀಡಲಿದ್ದಾರೆ. ಸಿನಿಮಾ ಕ್ಷೇತ್ರದ ತಂತ್ರಜ್ಞರಾಗಿ ಸಾಕಷ್ಟು ಅನುಭವ ಇರುವ ನೋರ್ಬಾರ್ಟ್ ಜಾನ್ ನಿರ್ದೇಶನದ ಜೊತೆಗೆ ಚಿತ್ರಕಥೆಯನ್ನು ಬರೆದಿದ್ದಾರೆ. ಯುವ ಸಂಗೀತಗಾರ ರಸ್ಸೆಲ್ ರೋಡ್ರಿಗಸ್ ಸಂಗೀತ ನೀಡಲಿದ್ದಾರೆ. ಪ್ರೋಡಕ್ಷನ್ ಇಂಜಿನಿಯರ್ ಆಗಿ ಆಲ್ವಿನ್ ಸಿಕ್ವೇರಾ, ಡಿಒಪಿಯಲ್ಲಿ ಫೆಸ್‌ವಿತ್ ಮಂಗಳೂರು ಸಹಾಯಕರಾಗಿ ರಾಯನ್, ಸಾಹಿತಿ ವಿಲ್ಸನ್ ಕಟೀಲು ಮತ್ತು ವಿಲ್ಫ್ರೇಡ್ ಪಾಂಗಳ ಸಿನಿಮಾ ತಂಡದಲ್ಲಿದ್ದು, ಸುನಿಲ್ ನೆಲ್ಲಿಗುಡ್ಡೆ ಪಿಆರ್‌ಒ ಆಗಿದ್ದಾರೆ. ಕಲಾವಿದರಾಗಿ ಹೊಸ ಮುಖಗಳೊಂದಿಗೆ ಅನುಭವಿ ಕಲಾವಿದರಿದ್ದಾರೆ. ಕಿನ್ನಿಗೋಳಿ, ಮಂಗಳೂರು, ಬಜಪೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ನಗರದಲ್ಲಿ ಮೊದಲ ಪೆಟ್ ಡಯಾಲಿಸಿಸ್ ಸೌಲಭ್ಯ- ಕುಳಶೇಖರದ ಲಿಟಲ್ ಪಾಸ್ ವೆಟರಿನರಿ ಕ್ಲಿನಿಕ್‌ನಲ್ಲಿ ಆರಂಭ

ಮಂಗಳೂರು: ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕುಪ್ರಾಣಿಗಳಿಗೆ ಅತ್ಯಾವಶ್ಯಕವಾದ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಮಹತ್ವದ ಹೆಜ್ಜೆಯಾಗಿ, ಕುಳಶೇಖರದಲ್ಲಿರುವ ಲಿಟಲ್ ಪಾಸ್ ವೆಟರಿನರಿ ಕ್ಲಿನಿಕ್ ನಲ್ಲಿ ಪೆಟ್ ಡಯಾಲಿಸಿಸ್ ಯಂತ್ರವನ್ನು ಅಧಿಕೃತವಾಗಿ ಆರಂಭಿಸಲಾಯಿತು. ಮೂತ್ರಪಿಂಡ ಸಂಬಂಧಿತ ತೊಂದರೆಗಳಿಂದ ಬಳಲುವ ಸಾಕುಪ್ರಾಣಿಗಳಿಗೆ ಇದು ಜೀವ ರಕ್ಷಕ ಚಿಕಿತ್ಸೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ.ಈ ಡಯಾಲಿಸಿಸ್ ಘಟಕವನ್ನು ವಿನ್ಸೆಂಟ್ ಜೋಸೆಫ್ ನೀಲಿಯಾರ (ಶಾಜು) ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ವೈದ್ಯರು ಹಾಗೂ ರೋಟರಿ ಸಂಘದ ಸದಸ್ಯರು ಉಪಸ್ಥಿತರಿದ್ದರು.ಈ ಉಪಕ್ರಮವನ್ನು ಭಾಜಪ ಕರ್ನಾಟಕ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿ ಜೆಸ್ಸೆಲ್ ಡಿಸೋಜಾ ಅವರು ಸಮನ್ವಯಗೊಳಿಸಿ, ವಿವಿಧ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಸಹಕಾರವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.ಈ ಯೋಜನೆಯ ಪರಿಕಲ್ಪನೆ ಡಾ. ಶ್ರೇಯಸ್ ಸೊರಕೆ, ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್ ಸರ್ಜನ್ ಅವರದು. ಮಂಗಳೂರು ಮತ್ತು ಸುತ್ತಮುತ್ತಲಿನ ಸುಮಾರು 200 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾಕುಪ್ರಾಣಿಗಳಿಗೆ ಡಯಾಲಿಸಿಸ್ ಸೌಲಭ್ಯ ಇಲ್ಲದಿರುವುದನ್ನು ಗಮನಿಸಿ, ಈ ಅಗತ್ಯವನ್ನು ಪೂರೈಸುವ ದೃಷ್ಟಿಯಿಂದ ಅವರು ಈ ಪ್ರಯತ್ನಕ್ಕೆ ಚಾಲನೆ ನೀಡಿದರು. ಅವರ ಈ ದಿ ಗೌರವಿಸಿ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು. ‘ದೀರ್ಘ ದೃಷ್ಟಿ ಮತ್ತು ಸೇವಾಭಾವವನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಜಿಲ್ಲಾ 3181 ರ ಸಹಾಯಕ ಗವರ್ನರ್ ಆರ್‌ಟಿಎನ್ ಡಾ. ರವಿಶಂಕರ್ ರಾವ್, ಮಂಗಳೂರುಂತಹ ಬೆಳೆಯುತ್ತಿರುವ ನಗರಕ್ಕೆ ಇಂತಹ ಮಾನವೀಯ ಹಾಗೂ ನವೀನ ಉಪಕ್ರಮಗಳು ಅತ್ಯಂತ ಅಗತ್ಯವೆಂದು ಹೇಳಿದರು. “ಸ್ಮಾರ್ಟ್ ಸಿಟಿ ಎಂದರೆ ಮೂಲಸೌಕರ್ಯಗಳ ಜೊತೆಗೆ ಪ್ರಾಣಿಗಳ ಕಲ್ಯಾಣಕ್ಕೂ ಆದ್ಯತೆ ನೀಡುವ ನಗರವಾಗಿರಬೇಕು” ಎಂದು ಅವರು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಂಗಳೂರು ಸೌತ್ ಅಧ್ಯಕ್ಷ ಆರ್‌ಟಿಎನ್ ಹರೀಶ್ ಅಡ್ಯಾರ್, ಕಾರ್ಯದರ್ಶಿ ಆರ್‌ಟಿಎನ್ ಸೂರ್ಯಕಾಂತ್ ನಾಯಕ್, ಆರ್‌ಟಿಎನ್ ಜಿ.ಕೆ. ಶೆಟ್ಟಿ, ಕರ್ನಾಟಕ ಸೆಕ್ಯುರಿಟಿಯ ಉದ್ಯಮಿ ಮತ್ತು ರೋಟೇರಿಯನ್‌ ಆರ್‌ಟಿಎನ್ ಟಿ.ಎ. ಅಶೋಕನ್, ಅನಿಮಲ್ ಕೇರ್ ಟ್ರಸ್ಟ್‌ನ ಸುಮಾ ನಾಯಕ್,ಡಯಾಲಿಸಿಸ್ ತಂತ್ರಜ್ಞ ನಿತಿನ್ ಕುಮಾರ್ ಹಾಗೂ ಲಿಟಲ್ ಪಾಸ್ ವೆಟರಿನರಿ ಕ್ಲಿನಿಕ್‌ ಡಾ. ಯಶಸ್ವಿ ನಾರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಈ ಡಯಾಲಿಸಿಸ್ ಸೌಲಭ್ಯದಿಂದ ಮಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾಕುಪ್ರಾಣಿಗಳಿಗೆ ತುರ್ತು ಮತ್ತು ಪ್ರಗತಿಪರ ಚಿಕಿತ್ಸೆಯನ್ನು ಸ್ಥಳೀಯವಾಗಿ ಪಡೆಯುವ ಅವಕಾಶ ದೊರೆಯಲಿದ್ದು, ಪ್ರಾಣಿಪ್ರೇಮಿಗಳಿಗೂ ಇದು ದೊಡ್ಡ ಸಹಾಯವಾಗಲಿದೆ.ಸಾಕುಪ್ರಾಣಿಗಳ ಆರೈಕೆಯಲ್ಲಿ ಮಂಗಳೂರಿನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ಈ ಉಪಕ್ರಮವು ಪ್ರಾಣಿಗಳ ಆರೋಗ್ಯ ಸೇವೆಗೆ ಹೊಸ ದಿಕ್ಕು ನೀಡಲಿದೆ.

Scroll to Top