Author name: editor

ಪ್ರಾದೇಶಿಕ ವಾರ್ತೆಗಳು

“ಅಮೇರಿಕಾದಲ್ಲಿ ಯಕ್ಷಗಾನ ಕಲೆಗೆ ಸಿಕ್ಕ ಗೌರವ ಅವಿಸ್ಮರಣೀಯ”-ಪಟ್ಲ ಸತೀಶ್ ಶೆಟ್ಟಿ. ಅಮೇರಿಕಾ ಪ್ರವಾಸದಿಂದ ತಾಯ್ನಾಡಿಗೆ ಮರಳಿದ ಯಕ್ಷಗಾನ ತಂಡ.

ಮಂಗಳೂರು: ಅಮೇರಿಕ ಪ್ರವಾಸ ಕೈಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ತಮ್ಮ ತಂಡದ ಜೊತೆ ಮಂಗಳವಾರ ರಾತ್ರಿ ತಾಯ್ನಾಡಿಗೆ ಮರಳಿದ್ದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸ್ವಾಗತ ಕೋರಿದರು.ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 9 ಮಂದಿಯ ತಂಡ ಅಮೇರಿಕ ದೇಶದ ಬೇರೆ ಬೇರೆ ತಾಣಗಳಲ್ಲಿ ಯಕ್ಷಗಾನ ಪ್ರದರ್ಶಿಸಿ 75 ದಿನಗಳ ಬಳಿಕ ತಾಯ್ನಾಡಿಗೆ ಮರಳಿದೆ.ಈ ವೇಳೆ ತಮ್ಮ ಅಮೇರಿಕ ಪ್ರವಾಸದ ಕಥನವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡ ಅವರು, “ವಿದೇಶಗಳಲ್ಲಿ ತುಳುನಾಡಿನ ಗಂಡುಮೆಟ್ಟಿನ ಕಲೆಯಾಗಿರುವ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಅನಿಸುತ್ತಿದೆ. ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ವಿಚಾರ” ಎಂದರು. “ಅಮೇರಿಕಾದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ಇಂದು ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ. ಪಟ್ಲ ಫೌಂಡೇಷನ್ ಟ್ರಸ್ಟ್ ಅಮೇರಿಕಾ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮತ್ತಿತರ ಪ್ರಮುಖರು ಅಮೆರಿಕದ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದರು ಅವರಿಗೆ ಧನ್ಯವಾದಗಳು” ಎಂದರು. ಪ್ರೊ.ಎಂ.ಎಲ್. ಸಾಮಗ ಮಾತನಾಡಿ, “ಅಮೇರಿಕಾದ ಜನರು ನಮ್ಮ ಯಕ್ಷಗಾನ ತಂಡದ ಮೇಲೆ ತೋರಿಸಿದ ಪ್ರೀತಿ ಮರೆಯಲಾಗದ್ದು. ಪ್ರತೀ ಪ್ರದರ್ಶನಕ್ಕೂ 500 ಜನರಿಗಿಂತ ಕಡಿಮೆ ಜನರು ಸೇರುತ್ತಿರಲಿಲ್ಲ. ನಮ್ಮ ತಂಡದಲ್ಲಿ ಕಲಾವಿದರು ಮಿತಿಯಲ್ಲಿ ಇದ್ದುದರಿಂದ ಅದಕ್ಕೆ ಸೂಕ್ತ ಎನಿಸುವ ಪ್ರಸಂಗ ಆಡಿ ತೋರಿಸಬೇಕಿತ್ತು. ಕೆಲವರು ತಾವು ವೇಷ ಹಾಕುತ್ತೇವೆ ಎಂದು ಮುಂದೆ ಬಂದರು ಮತ್ತೂ ಕೆಲವರು ಭಾಗವತಿಕೆ ಕಲಿಯಲು ಮುಂದೆ ಬಂದರು. ಆನ್ ಲೈನ್ ಕ್ಲಾಸ್ ಬಗ್ಗೆಯೂ ವಿಚಾರಿಸಿದ್ದಾರೆ. ಮುಂದೆ ಆ ಬಗ್ಗೆ ಯೋಚನೆ ಮಾಡುತ್ತೇವೆ“ ಎಂದರು.ಪಟ್ಲ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು.ಅಮೇರಿಕಾ ನಗರಗಳಲ್ಲಿ “ಪಟ್ಲ ಫೌಂಡೇಶನ್ ಡೇ”!ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಪ್ರದರ್ಶಿಸಿದ ಯಕ್ಷಗಾನ ಹಾಗೂ ಪಟ್ಲ ಫೌಂಡೇಷನ್ ಕಾರ್ಯ ಚಟುವಟಿಕೆಯನ್ನು ಮೆಚ್ಚಿ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್‌ಫೀಲ್ಡ್ ನಗರದ ಮೇಯರ್ ಸ್ಟೀವನ್ ವಿ. ಪೋಂಟೊ ಅವರು ಆಗಸ್ಟ್ 18 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ.ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಅವರು ಜುಲೈ 27 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

`ಅನ್ಯರನ್ನು ನೋಯಿಸದೆ, ಪ್ರೀತಿಸುವುದೇ ಧರ್ಮ’

ಸಾರ್ವಜನಿಕ ಶ್ರೀಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಧಾನ ಪಾತ್ರ ಪಡೆದಿದೆ. ಧರ್ಮವು ಜಾತಿಯಲ್ಲ, ಧರ್ಮವು ಮತವಲ್ಲ, ಧರ್ಮವು ಪಂಥವೂ ಅಲ್ಲ, ಸಂಪ್ರದಾಯವೂ ಅಲ್ಲ.” ಹಾಗಾದರೆಧರ್ಮ” ಎಂದರೆ ಕಾಯದಿಂದ, ಮಾತಿನಿಂದ, ಮನಸ್ಸಿನಿಂದ ಅನ್ಯ ಜನರಿಗೆ ನೋಯಿಸದೇ ಸಕಲರನ್ನೂ ಪ್ರೀತಿಸುವುದೇ ಧರ್ಮವಯ್ಯಾ…… ಎಂದು ಧಾರ್ಮಿಕ ಮುಂದಾಳು ಪುಂಡಲೀಕ ಹೊಸಬೆಟ್ಟು ಶ್ರೀಗಣೇಶ ಭಜನಾ ಮಂದಿರ, ಜನತಾ ಕಾಲನಿಯಲ್ಲಿ ಜರುಗಿದ 37ನೇ ವರ್ಷದ ಶ್ರೀಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಕ್ತರನ್ನುದ್ದೇಶಿಸಿ ಮಾತನಾಡಿದರು.ಇದೇ ಸಂದರ್ಭ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಧಕರನ್ನೂ ಅಭಿನಂದಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಸುರತ್ಕಲ್ ಕ್ಷೇತ್ರದ ಶಾಸಕ ಡಾ. ಭರತ್ ವೈ ಶೆಟ್ಟಿ ಶುಭ ಹಾರೈಸಿದರು. ಕಾರ್ಪೊರೇಟರ್ ಶ್ರೀಮತಿ ಸರಿತಾ ಶಶಿಧರ್, ಜ್ಯೋತಿಷಿ ಸುದರ್ಶನ್ ಬನ್ನಿಂತಾಯ, ಪುಷ್ಪರಾಜ್ ಮುಕ್ಕ, ಭರತ್‌ರಾಜ್ ಕೃಷ್ಣಾಪುರ,ನಾಗೇಶ್ ಬಂಗೇರ, ಶ್ರೀ ಗಣೇಶ ಭಜನಾ ಮಂದಿರದ ಅಧ್ಯಕ್ಷ ಸುಜಿತ್ ಹೆಗ್ಡೆ, ಗೌರವಾಧ್ಯಕ್ಷ ಭೋಜ ಹೆಗ್ಡೆ, ಕಾರ್ಯದರ್ಶಿ ಮಿಲನ್, ಕೋಶಾಧಿಕಾರಿ ಗಣೇಶ್ ಆಚಾರ್ಯ, ಮಹಿಳಾ ಸಮಾಜದ ಅಧ್ಯಕ್ಷೆ ರಾಧಾ ಶೆಟ್ಟಿ, ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಬಿ. ಸುಧಾಮ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಪೂಜಾ ರಾವ್ ಕಾರ್ಯಕ್ರಮ ನಿರೂಪಿಸಿದರು.

ಕರಾವಳಿ ಸುದ್ದಿ

ಶ್ರೀನಿಧಿ ಕ್ಯಾಟರರ‍್ಸ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕೋಟೆಬಾಗಿಲು ಇದರ ಮಾಲಕರಾದ ಸುಧಾಕರ ಹೆಗ್ಡೆಯವರು ಯಶಸ್ವಿ ಉದ್ಯಮಿಯಾದ ಸತ್ಯಕಥೆ.

ಮೂಡಬಿದ್ರಿ :ಕಳೆದ ಮೂವತ್ತೊಂಬತ್ತು ವರ್ಷಗಳಿಂದ ಸಮಾಜಮುಖಿಯಾಗಿ ನಡೆದು ಯಶಸ್ವಿ ಉದ್ಯಮಿಯಾಗಿ ಬೆಳೆದು ಸುಮಾರು 150 ಕ್ಕೂ ಮಿಕ್ಕಿ ಉದ್ಯೋಗಿಗಳಿಗೆ ಅನ್ನದಾತರಾಗಿರುವ ಮೂಡಬಿದ್ರೆ ಕೋಟೆಬಾಗಿಲಿನ ಶ್ರೀನಿಧಿ ಕ್ಯಾಟರರ‍್ಸ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಎಂಬ ರಾಜ್ಯಮಟ್ಟದ ಉದ್ಯಮ ಸಂಸ್ಥೆಯ ಮಾಲಕರಾಗಿರುವ ಸುಧಾಕರ ಹೆಗ್ಡೆಯವರ ವೃತ್ತಿ ಬದುಕಿನ ಯಶಸ್ಸಿನ ಕಥೆ ಯುವಜನರಿಗೆ ಸ್ಪೂರ್ತಿದಾಯಕವಾಗಿದೆ. ಮೂಡಬಿದ್ರೆ ಕೋಟೆಬಾಗಿಲಿನ ಶ್ರೀನಿಧಿ ಕಂಪೌಂಡ್ ನಿವಾಸಿ ಶಿವಣ್ಣ ಹೆಗ್ಡೆಯವರ ಸುಪುತ್ರರಾಗಿರುವ ಸುಧಾಕರ ಹೆಗ್ಡೆಯವರು ಮೂಡಬಿದ್ರೆ ಜೈನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ತನಕ ಓದಿ ತದನಂತರ, ಉದ್ಯೋಗವನ್ನರಸಿಕೊಂಡು ಮುಂಬೈಗೆ ಹೋಗಿದ್ದರು. ಆವಾಗ ಅವರಿಗೆ 11 ವರ್ಷ ಪ್ರಾಯ. ಆರಂಭದಲ್ಲಿ ಮುಂಬೈಯ ಹೊಟೇಲ್‌ವೊಂದರಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ್ದರು. ಆ ಬಳಿಕ ಕಿಚನ್ ಹೆಲ್ಪರ್ ಆಗಿ ಸೇರಿ ಕುಕ್ಕಿಂಗ್ ಜ್ಞಾನ ಪಡೆದರು. ಇದೇ ಸಂದರ್ಭದಲ್ಲಿ ಗೋರೆಗಾಂವ್‌ನ ಸರಸ್ವತಿ ನೈಟ್ ಹೈಸ್ಕೂಲಿನಲ್ಲಿ 9ನೇ ತರಗತಿ ತನಕ ಓದಿದರು. ಹಲವು ವರ್ಷಗಳ ಕಾಲ ಹೊಟೇಲ್‌ನಲ್ಲಿ ದುಡಿದು ದುಡಿದ ಹಣವನ್ನು ಉಳಿಸಿ 3೦ ಸಾವಿರ ರೂಪಾಯಿ ಬಂಡವಾಳ ಸೇರಿಸಿ ಸ್ವಂತ ಕ್ಯಾಂಟೀನ್ ಆರಂಭಿಸಿದರು.ಅನಂತರ,ಹಂತ ಹಂತವಾಗಿ ಸ್ವಂತ ಹೊಟೇಲ್, ಬಾರ್ ಆರಂಭಿಸಿದರು. ಆದರೆ, ಮುಂಬಯಿ ಮಹಾನಗರ ಪಾಲಿಕೆಯು ಅದನ್ನು ನೆಲಸಮಗೊಳಿಸಿದ್ದರಿಂದ ನಷ್ಟ ಅನುಭವಿಸಿ ಊರಿಗೆ ಮರಳಿದರು. ಹೀಗೇ ಸುಮಾರು 27 ವರ್ಷಗಳ ಕಾಲ ಮುಂಬೈಯಲ್ಲಿ ದುಡಿದರು. ತದನಂತರ, ಮಂಗಳೂರಲ್ಲಿ ಕಂಪೆನಿಯೊಂದರ ಕ್ಯಾಂಟೀನ್‌ವೊಂದರಲ್ಲಿ ಕೆಲಸಕ್ಕೆ ಸೇರಿದರು. ಆ ಸಂದರ್ಭದಲ್ಲಿ ಕ್ಯಾಟರಿಂಗ್ ಸರ್ವಿಸ್‌ನಲ್ಲಿ ಕೆಲಸ ಮಾಡಿ ಅನುಭವ ಗಳಿಸಿದರು.ಸ್ನೇಹಿತರ ಆರ್ಥಿಕ ಸಹಕಾರದಿಂದ ಹಣ ಸಂಗ್ರಹಿಸಿ ಮೂಡಿಬಿದ್ರೆಯ ಕೋಟೆಬಾಗಿಲಿನಲ್ಲಿ 5೦ ಸೆಂಟ್ಸ್ ಸ್ವಂತ ಜಾಗ ಖರೀದಿಸಿ ಮಂಗಳೂರಲ್ಲಿ, ಮೂಡಬಿದ್ರೆಯಲ್ಲಿ ಮತ್ತು ಕಾರ್ಕಳದಲ್ಲಿ ಶ್ರೀನಿಧಿ ಕ್ಯಾಟರರ‍್ಸ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಎಂಬ ರಾಜ್ಯಮಟ್ಟದ ಉದ್ಯಮ ಸಂಸ್ಥೆಯನ್ನು ಆರಂಭಿಸಿದರು. ಇದಕ್ಕೀಗ 17 ವರ್ಷ ತುಂಬಿದೆ. ಸುಮಾರು 150 ಕ್ಕೂ ಮಿಕ್ಕಿ ಇದರಲ್ಲಿ ಉದ್ಯೋಗಿಗಳಾಗಿದ್ದು, ಅವರ ಮಕ್ಕಳಿಗೆ ವರ್ಷವರ್ಷವೂ ವಿದ್ಯಾಭ್ಯಾಸದ ನೆರವು ಒದಗಿಸುತ್ತಿದ್ದಾರೆ. ಸಮಾಜಸೇವಕರು, ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಸಹೃದಯ ಉದ್ಯಮಿ ಸುಧಾಕರ ಹೆಗ್ಡೆಯವರು ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಮೂಡಬಿದ್ರೆ ಘಟಕದ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ.ವೀರಮಾರುತಿ ದೇವಸ್ಥಾನ ಕೋಟೆಬಾಗಿಲು, ಮಹಮ್ಮಾಯಿ ದೇವಸ್ಥಾನ ಕೋಟೆಬಾಗಿಲು, ನಿಡ್ಡೋಡಿ ಮಾರಪ್ಪಾಡಿ ಕೊಡಮಣಿತ್ತಾಯ- ಕುಕ್ಕಿತ್ತಾಯ ದೈವಸ್ಥಾನ, ಮಂಜುಶ್ರೀ ಭಜನಾ ಮಂಡಳಿ ಮುರಮೇಲು ಮಾರ್ಪಾಡಿ ಮೊದಲಾದ ಧಾರ್ಮಿಕ ಕ್ಷೇತ್ರಗಳಲ್ಲಿ ಆಡಳಿತ ಮಂಡಳಿ ಸದಸ್ಯರಾಗಿ ಸಕ್ರಿಯರಾಗಿರುವ ಸುಧಾಕರ ಹೆಗ್ಡೆಯವರ ಯಶಸ್ಸಿನ ಹಿಂದೆ ಧರ್ಮಪತ್ನಿ ಪ್ರಮೀಳಾ ಸುಧಾಕರ ಹೆಗ್ಡೆಯವರ ಪ್ರೋತ್ಸಾಹವಿದೆ. ಇವರಿಗೆ ಪ್ರಶ್ವೀತ್ ಮತ್ತು ಉದ್ವೀತ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.ಸುಧಕರ ಹೆಗ್ಡೆಯವರ ನಿಸ್ವಾರ್ಥ ಮನೋಭಾವವನ್ನು ಗುರುತಿಸಿ ಹಲವಾರು ಸಂಘ, ಸಂಸ್ಥೆಗಳು ಅವರನ್ನು ಸನ್ಮಾನಿಸಿ, ಗೌರವಿಸಿದೆ.

ಪ್ರಾದೇಶಿಕ ವಾರ್ತೆಗಳು

ಬಿಜೈ ಕಾಪಿಕಾಡ್ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ

ಮಂಗಳೂರು,ಸೆ.21;ನಗರದ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ಪೌಷ್ಟಿಕ ಆಹಾರದಲ್ಲಿ ಪೌಷ್ಟಿಕಾಂಶದ ಸಂರಕ್ಷಣೆ, ಪೌಷ್ಟಿಕ ಆಹಾರದ ತಯಾರಿಯ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.ಸಮಾರಂಭವನ್ನು ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉದ್ಘಾಟಿಸಿಮಾತನಾಡುತ್ತಾ, ನಿರಂತರ ಚಟುವಟಿಕೆಯಿಂದ ಇರುವ ಬಿಜೈ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆಯ ಕಾಳಜಿ ಯಿಂದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಕೇಂದ್ರ ಮಾದರಿಯಾಗಿದೆ ಎಂದು ಶುಭ ಹಾರೈಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಸಿಂಧು ರವರು ಮಾಹಿತಿ ನೀಡುತ್ತಾ, ಪೌಷ್ಠಿಕಾಂಶ ವನ್ನು ಉಳಿಸಿಕೊಂಡು ನಾವು ತಿನ್ನುವ ಆಹಾರದ ತಯಾರಿ ಹೇಗೆ ,ಗರ್ಭಿಣಿ ಮಹಿಳೆಯರಿಗೆ ಯಾವ ಆಹಾರ ಅಗತ್ಯವಿದೆ, ಸಣ್ಣ ಮಕ್ಕಳ ಬೆಳವಣಿಗೆಗೆ ಅಗತ್ಯ ವಾಗಿ ಬೇಕಾಗುವ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು.ಕೆಎಂಸಿ ಸಮುದಾಯ ಆರೋಗ್ಯ ವಿಭಾಗದ ಅಧಿಕಾರಿ ಶರಾವತಿಯವರು ಆಹಾರದ ಹಿತ ಮಿತ ಆರೋಗ್ಯಕರ ರೀತಿಯಲ್ಲಿ ಸೇವನೆ, ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು.ಸಮಾರಂಭದಲ್ಲಿ ಪೌಷ್ಠಿಕಾಂಶದ ಆಹಾರ,ಹಣ್ಣು,ತಿಂಡಿಗಳ ಪ್ರದರ್ಶನ ಮತ್ತು ಸಹಭೋಜನ ,ವಿಶೇಷವಾಗಿ ಇಬ್ಬರು ಗರ್ಭಿಣಿ ಮಹಿಳೆಯರಿಗೆ ಪೋಷಕಾಂಶ ಭರಿತ ಆಹಾರ ಹಾಗೂ ಇತರ ವಸ್ತುಗಳನ್ನು ನೀಡಿ ಸೀಮಂತ ಕಾರ್ಯಕ್ರಮ. ಇಬ್ಬರು ಎಳೆಯ ಮಕ್ಕಳಿಗೆ ತುತ್ತು ತಿನಿಸುವ ವಿಶೇಷ ಕಾರ್ಯಕ್ರಮ ನಡೆಯಿತು.ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ನಂದಾ ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಂಗನವಾಡಿಯ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿರುವ ಬಗ್ಗೆ ಮತ್ತು ಕೇಂದ್ರಕ್ಕೆ ಕುಡಿಯುವ ನೀರು,ಮಕ್ಕಳಿಗೆ ಸಮವಸ್ತ್ರ,ಇತರ ಸಾಮಾಗ್ರಿಗಳನ್ನು ಒದಗಿಸಿ ಸದಾ ಸಹಕಾರ ನೀಡುತ್ತಿರುವುದನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.ಸಮಾರಂಭದಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಶುಭ ಹಾರೈಸಿದರು.ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸವಿತಾ ಬಿಜೈ ಕಾಪಿಕಾಡ್ ಹಿರಿಯಪ್ರಾಥಮಿಕ ಶಾಲೆಯ ಮುಖ್ಯೋಪಾ ಧ್ಯಾಯಿನಿ ಲೀನಾ,ಸಹಾಯಕಿ ಲಕ್ಷ್ಮಿ, ಆಶಾ ಕಾರ್ಯಕರ್ತೆ ಗಾಯತ್ರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯಿಂದ ಸಂಘಟನಾತ್ಮಕ ಚಟುವಟಿಕೆ: ಪ್ರಿಯಾ ಗಿರೀಶ್ ಶೆಟ್ಟಿ. *ಸುರತ್ಕಲ್ ಬಂಟರಭವನದಲ್ಲಿ ಸಾರಿ ಮೇಳ

ಸುರತ್ಕಲ್: ಸಂಘಟನಾತ್ಮಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವುದರ ಮೂಲಕ ಸಮಾಜ ಬಲಿಷ್ಠವಾಗಲು ಸಾಧ್ಯ ಎಂದು ಶ್ರೀಮತಿ ಪ್ರಿಯಾ ಗಿರೀಶ್ ಶೆಟ್ಟಿ ಕಟೀಲು ನುಡಿದರು. ಅವರು ಸುರತ್ಕಲ್ ಬಂಟರ ಭವನದಲ್ಲಿ ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ವತಿಯಿಂದ ಜಯಲಕ್ಷ್ಮಿ ಸಿಲ್ಕ್ ಉದ್ಯಾವರ ಉಡುಪಿ ವತಿಯಿಂದ ನಡೆದ ಸಾರಿ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬಂಟರ ಸಂಘವು ಹಲವಾರು ಜನಪರ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಇತರ ಸಂಘಗಳಿಗೆ ಮಾದರಿಯಾಗಿದೆ ಎಂದರು.ವೇದಿಕೆಯಲ್ಲಿ ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯಾ ಶೆಟ್ಟಿ, ನಿಕಟಪೂರ್ವ ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಉಪಾಧ್ಯಕ್ಷ ಪುಷ್ಷರಾಜ್ ಶೆಟ್ಟಿ ಕುಡುಂಬೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ನಿಕಟಪೂರ್ವಧ್ಯಕ್ಷ ಸುಧಾಕರ ಪೂಂಜ, ಮಾಜಿ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಮಹಿಳಾ ವೇದಿಕೆಯ ಮಾಜಿ ಅಧ್ಯೆಕ್ಷರಾದ ಬೇಬಿ ಶೆಟ್ಟಿ, ಚಂದ್ರ ಕಲಾ ಶೆಟ್ಟಿ, ಉಪಾಧ್ಯಕ್ಷೆ ಸರೋಜ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಜಾತ ಶೆಟ್ಟಿ ಕೃಷ್ಣಾಪುರ, ಕೋಶಾಧಿಕಾರಿ ಜ್ಯೋತಿ ಪ್ರವೀಣ್ ಶೆಟ್ಟಿ, ಜತೆ ಕಾರ್ಯಾದರ್ಶಿ ವಜ್ರಾಕ್ಷಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಸುಜಾತ ಶೆಟ್ಟಿ ಕಾಟಿಪಳ್ಳ, ಸಂಘಟನಾ ಕಾರ್ಯದರ್ಶಿ ನಾಗಲತಾ ಶೆಟ್ಟಿ ತೋಕೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ‌ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

‘ಸಂಗೀತದ ಆಕರ್ಷಣೆಯಿಂದ ಬದಲಾದ ಬದುಕು’ – ಸಂಗೀತ ನಿರ್ದೇಶಕ ಡಾ.ಗುರುಕಿರಣ್ ಅಭಿಮತ

ಮಂಗಳೂರು : ವೈದ್ಯನಾಗಬೇಕೆಂದು ಹೆತ್ತವರು ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು. ವೈದ್ಯಕೀಯ ಕಾಲೇಜುಆರಂಭಕ್ಕೆ ಸ್ವಲ್ಪ ಸಮಯವಿದೆ ಎಂದು ಸಮಯ ಕಳೆಯಲು ಮಂಗಳೂರಿನ ಸರ್ಕಾರಿ ಕಾಲೇಜಿಗೆ ಸೇರಿದೆ. ಅಲ್ಲಿ ಕಲಾ ಕ್ಷೇತ್ರ ಆಕರ್ಷಿಸಿತು. ಹಾಡುಗಾರನಾದೆ, ನಟನಾದೆ, ಸಂಗೀತ ನಿರ್ದೇಶಕನಾದೆ. ಸಂಗೀತದ ಆಕರ್ಷಣೆಯಿಂದ ಬದುಕೇ ಬದಲಾಯಿತು ಎಂದು ಸಂಗೀತ ನಿರ್ದೇಶಕ, ಬೆಂಗಳೂರು ವಿ.ವಿ. ಗೌರವ ಡಾಕ್ಟರೇಟ್ ಪುರಸ್ಕೃತರಾದ ಗುರುಕಿರಣ್ ತಮ್ಮ ಸಾಧನೆಯ ಹಾದಿಯನ್ನು ತೆರೆದಿಟ್ಟರು.ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ ನಮ್ಮ ಬದುಕನ್ನು ನಾವೇ ವಿನ್ಯಾಸಗೊಳಿಸಬೇಕು. ಕನಸು ಕಟ್ಟುವ ಬದಲು ಇಷ್ಟವಾದ ಕೆಲಸವನ್ನು ಮಾಡುತ್ತಾ ಹೋಗಬೇಕು. ಸಂಗೀತವೇ ನನ್ನ ಮನಸ್ಸಿಗೆ ಖುಷಿ ನೀಡುವ ಕೆಲಸ. ಅದನ್ನು ನಿಷ್ಠೆಯಿಂದ ಮಾಡಿದ ಕಾರಣ ಯಶಸ್ಸು ಸಾಧ್ಯವಾಯಿತು ಎಂದರು.ಸರ್ಕಾರಿ ಕಾಲೇಜಿನಲ್ಲಿ ಕಲಿತ ಕಾರಣ ಎಲ್ಲರೊಂದಿಗೆ ಬೆರೆಯುವ ಗುಣ ಹಾಗೂ ಬದುಕಿನ ಸವಾಲುಗಳನ್ನು ಎದುರಿಸುವ ಛಲ ಬೆಳೆಯಿತು. ನನ್ನದೇ ಆದ ಸಂಗೀತ ತಂಡ ಕಟ್ಟಿ ರಸಮಂಜರಿ ಕಾರ್ಯಕ್ರಮ ನಡೆಸುತಿದ್ದೆ. ಮಾವನ ಹೋಟೆಲ್‌ನ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ದೊರೆತ ಕಾರಣ ಸಂಗೀತದ ಎಲ್ಲ ಉಪಕರಣಗಳನ್ನು ನುಡಿಸಲು ಅಭ್ಯಾಸ ನಡೆಸಿದೆ. ಅಲ್ಲಿಂದ ಸಂಗೀತವನ್ನೇ ವೃತ್ತಿಯಾಗಿಸುವ ಬಯಕೆ ಮೂಡಿತು. ನಾನು ಸಂಗೀತದ ಶಿಕ್ಷಣ ಪಡೆದವನಲ್ಲ. ಸಂಗೀತದ ಪಯಣದಲ್ಲಿ ಹಂತಹಂತವಾಗಿ ಕಲಿಯುತ್ತಾ ಬಂದವನು. ನಾನು ಗಾಯಕ ಆಗಲು ಹೋದೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಮುಂದೆ ಬದುಕು ಅರಿಸಿ ಬೆಂಗಳೂರಿಗೆ ಬಂದಾಗ ವಿ.ಮನೋಹರ್, ಉಪೇಂದ್ರ ಮುಂತಾದವರು ಗೆಳೆಯರಾದರು. ನನ್ನೊಳಗಿನ ಸಂಗೀತಗಾರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು ಎಂದು ಗುರುಕಿರಣ್ ಹೇಳಿದರು.ಪ್ರತಿಭೆ ಇದ್ದವರಿಗೆ ಸಂಗೀತ ಕ್ಷೇತ್ರದಲ್ಲಿ ಭವಿಷ್ಯ ಇದೆ. ಮಂಗಳೂರಿನ ಪ್ರತಿಭೆಗಳು ಸೇರಿದಂತೆ 16ಕ್ಕೂ ಅಧಿಕ ಹೊಸ ಗಾಯಕ, ಗಾಯಕಿಯರನ್ನು ರನ್ನು ಸಿನಿಮಾಕ್ಕೆ ಪರಿಚಯಿಸಿದ್ದೇನೆ. ಅತ್ಯಾಧುನಿಕ ತಂತ್ರಜ್ಞಾನ ಬಂದ ಬಳಿಕ ಸಿನಿಮಾ ಹಾಗೂ ಹಿನ್ನೆಲೆ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೊಸತನಕ್ಕೆ ನಮ್ಮನ್ನು ತೆರೆದುಕೊಳ್ಳಬೇಕು. ದೊರೆತ ಅವಕಾಶವನ್ನು ಬಳಸಿ ಯಶಸ್ಸಿನ ಹಾದಿಯಲ್ಲಿ ಸಾಗಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.ಸಿನಿಮಾದಲ್ಲಿ ಶೋಷಣೆ ತಡೆಯಲು ಕೇರಳ ಮಾದರಿ ಸಮಿತಿ ರಚಿಸ ಬೇಕು ಎನ್ನುವ ಆಗ್ರಹ ಇರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ ಶೋಷಣೆ ಎಲ್ಲ ರಂಗದಲ್ಲೂ ಇದೆ. ಸಿನಿಮಾಕ್ಕೆ ಮಾತ್ರ ಸಮಿತಿ ರಚಿಸುವುದರಲ್ಲಿ ಅರ್ಥವಿಲ್ಲ.ಪ್ರತಿಯೊಂದಕ್ಕೂ ಕಮಿಟಿ ಮಾಡಿದ್ರೆ ಕೆಲಸ ಮಾಡೋಕ್ಕೆ ಆಗಲ್ಲ. ಅಲ್ಲಿಂದ ಸಮಸ್ಯೆಗಳು ಶುರುವಾಗುತ್ತೆ. ಭ್ರಷ್ಟಾಚಾರ ಜಾಸ್ತಿ ಆಗುತ್ತೆ ಅಷ್ಟೇ. ಕೆಲಸ ಇದ್ದವರು ಯಾರೂ ಇಂತಹ ಒತ್ತಾಯ ಮಾಡಲ್ಲ ಎಂದರು.ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್‌ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್., ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು. ಖಜಾಂಜಿ ಪುಷ್ಪರಾಜ್.ಬಿ.ಎನ್. ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಅಂಬೇಡ್ಕರ್ ಪ್ರತಿಮೆಯೊಂದಿಗೆ ಅಂಬೇಡ್ಕರ್ ವೃತ್ತ ನಿರ್ಮಾಣ ಯೋಜನೆಗೆ ಚಾಲನೆ

ಮಂಗಳೂರು,ಸೆ.20: ಸ್ಫೂರ್ತಿದಾಯಕವಾದ ಡಾ ಅಂಬೇಡ್ಕರ್ ಪ್ರತಿಮೆಯೊಂದಿಗೆ ಆಕರ್ಷಕ ಅಂಬೇಡ್ಕರ್ ವೃತ್ತ ನಿರ್ಮಾಣದ ನಕ್ಷೆ – ವಿನ್ಯಾಸವನ್ನು ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಅವರು ಈ ಯೋಜನೆಯ ಪ್ರಾಯೋಜಕತ್ವ ವಹಿಸಿಕೊಂಡಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ ಮಣಿಮೇಖಲಾಯ್ ಅವರಿಗೆ ನೀಡಿ, ಈ ಯೋಜನೆಯನ್ನು ಅತೀ ಶೀಘ್ರದಲ್ಲಿ ಅನುಷ್ಠಾನ ಮಾಡಿ ಡಿ ,6,.2024 ಉದ್ಘಾಟನೆ ಮಾಡಲು ಅನುವು ಮಾಡಿ ಕೊಡಬೇಕು ಎಂದು ಕೋರಿದರು.ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಉಪ ಮೇಯರ್ ಸುನೀತಾ, ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಸ್ಥಳೀಯ ಕಾರ್ಪೋರೇಟರ್ ಎ ಸಿ ವಿನಯಚಂದ್ರ, ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಭರತ್ ಕುಮಾರ್, ಯೂನಿಯನ್ ಬ್ಯಾಂಕ್ ಒಫ್ ಇಂಡಿಯಾ ಮಂಗಳೂರು ವಲಯ ಮುಖ್ಯಸ್ತೆ ಶ್ರೀಮತಿ ರೇನು ನಾಯರ್,ಡಿ ಜಿ ಎಂ, ಎ ರಾಜಮಣಿ, ಎ ಜಿ ಎಂ, ಎನ್ ಗೋಪಿನಾಥ್, ಕಾರ್ಪೋರೇಟರ್ ಮನೋಜ್, ಅಂಬೇಡ್ಕರ್ ವೃತ್ತದ ನಕ್ಷೆ – ವಿನ್ಯಾಸ ಸಿದ್ಧ ಪಡಿಸಿರುವ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ – ಸಂಸ್ಥೆಗಳ ಮಹಾಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ನಗರದ ನಾಗರಿಕ ಸಂಘಟನೆಗಳ ಮುಖಂಡರಾದ ಯೋಗೀಶ್ ಶೆಟ್ಟಿ ಜೆಪ್ಪು, ಮೋಹನಾಂಗಯ್ಯ ಸ್ವಾಮಿ, ರಘು ಎಕ್ಕಾರ್, ಲಕ್ಷ್ಮಣ್ ಕಾಂಚನ್, ಕಾಂಗ್ರೆಸ್ ನಾಯಕರಾದ ಪಿ ವಿ ಮೋಹನ್, ಮಾಜಿ ಶಾಸಕ ಜೆ ಆರ್ ಲೋಬೊ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕಲ್ಜಿಗ ಸಿನಿಮಾ ನೋಡಿ ಮೆಚ್ಚಿದ ರಿಷಬ್ ಶೆಟ್ಟಿ

ಮಂಗಳೂರು: ಕಾಂತಾರ ಸಿನಿಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ ಅರ್ಜುನ್ ಕಾಪಿಕಾಡ್ ಅಭಿನಯದ ಕಲ್ಜಿಗ ಸಿನಿಮಾವನ್ನು ಥಿಯೇಟರ್ ನಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಲ್ಜಿಗ ಸಿನಿಮಾವನ್ನು ವೀಕ್ಷಿಸಿದರು. ಕಲ್ಜಿಗ ಸಿನಿಮಾದಲ್ಲಿ ಬಡ ಕುಟುಂಬವೊಂದು ಕೊರಗಜ್ಜನನ್ನು ಆರಾಧಿಸಿಕೊಂಡು ಬರುವ ಕತೆ, ಮತ್ತು ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಕುಟುಂಬದ ಬೆನ್ನಿಗೆ ನಿಲ್ಲುವ ಕೊರಗಜ್ಜ, ಅಧರ್ಮದಲ್ಲಿ ನಡೆಯುವವರನ್ನು ಶಿಕ್ಷಿಸುವ ಕತೆ ರಿಷಬ್ ಶೆಟ್ಟಿ ಅವರಿಗೆ ತುಂಬಾ ಇಷ್ಟವಾಯಿತು. ಸಿನಿಮಾದ ಕ್ಯಾಮರಾ ವಕ್೯, ಹಿನ್ನಲೆ ಸಂಗೀತವನ್ನು ರಿಷಬ್ ಮೆಚ್ಚಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಪ್ರಗತಿ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಶನಿಲ್ ಗುರು, ನಟ ಅರ್ಜುನ್ ಕಾಪಿಕಾಡ್, ನಿರ್ಮಾಪಕ ಶರತ್ ಕುಮಾರ್ , ನಿರ್ದೇಶಕ ಸುಮನ್ ಸುವರ್ಣ, ಸಿನಿಮಾ ವಿತರಕ ಸಚಿನ್ ಉಪ್ಪಿನಂಗಡಿ, ಶ್ಲಾಘ ಸಾಲಿಗ್ರಾಮ ಉಪಸ್ಥಿತರಿದ್ದರು.

Scroll to Top