ಶ್ರೀನಿಧಿ ಕ್ಯಾಟರರ‍್ಸ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕೋಟೆಬಾಗಿಲು ಇದರ ಮಾಲಕರಾದ ಸುಧಾಕರ ಹೆಗ್ಡೆಯವರು ಯಶಸ್ವಿ ಉದ್ಯಮಿಯಾದ ಸತ್ಯಕಥೆ.

109.6K Views 23 Sep 2024

ಮೂಡಬಿದ್ರಿ :ಕಳೆದ ಮೂವತ್ತೊಂಬತ್ತು ವರ್ಷಗಳಿಂದ ಸಮಾಜಮುಖಿಯಾಗಿ ನಡೆದು ಯಶಸ್ವಿ ಉದ್ಯಮಿಯಾಗಿ ಬೆಳೆದು ಸುಮಾರು 150 ಕ್ಕೂ ಮಿಕ್ಕಿ ಉದ್ಯೋಗಿಗಳಿಗೆ ಅನ್ನದಾತರಾಗಿರುವ ಮೂಡಬಿದ್ರೆ ಕೋಟೆಬಾಗಿಲಿನ ಶ್ರೀನಿಧಿ ಕ್ಯಾಟರರ‍್ಸ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಎಂಬ ರಾಜ್ಯಮಟ್ಟದ ಉದ್ಯಮ ಸಂಸ್ಥೆಯ ಮಾಲಕರಾಗಿರುವ ಸುಧಾಕರ ಹೆಗ್ಡೆಯವರ ವೃತ್ತಿ ಬದುಕಿನ ಯಶಸ್ಸಿನ ಕಥೆ ಯುವಜನರಿಗೆ ಸ್ಪೂರ್ತಿದಾಯಕವಾಗಿದೆ.


ಮೂಡಬಿದ್ರೆ ಕೋಟೆಬಾಗಿಲಿನ ಶ್ರೀನಿಧಿ ಕಂಪೌಂಡ್ ನಿವಾಸಿ ಶಿವಣ್ಣ ಹೆಗ್ಡೆಯವರ ಸುಪುತ್ರರಾಗಿರುವ ಸುಧಾಕರ ಹೆಗ್ಡೆಯವರು ಮೂಡಬಿದ್ರೆ ಜೈನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ತನಕ ಓದಿ ತದನಂತರ, ಉದ್ಯೋಗವನ್ನರಸಿಕೊಂಡು ಮುಂಬೈಗೆ ಹೋಗಿದ್ದರು. ಆವಾಗ ಅವರಿಗೆ 11 ವರ್ಷ ಪ್ರಾಯ. ಆರಂಭದಲ್ಲಿ ಮುಂಬೈಯ ಹೊಟೇಲ್‌ವೊಂದರಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ್ದರು. ಆ ಬಳಿಕ ಕಿಚನ್ ಹೆಲ್ಪರ್ ಆಗಿ ಸೇರಿ ಕುಕ್ಕಿಂಗ್ ಜ್ಞಾನ ಪಡೆದರು. ಇದೇ ಸಂದರ್ಭದಲ್ಲಿ ಗೋರೆಗಾಂವ್‌ನ ಸರಸ್ವತಿ ನೈಟ್ ಹೈಸ್ಕೂಲಿನಲ್ಲಿ 9ನೇ ತರಗತಿ ತನಕ ಓದಿದರು.


ಹಲವು ವರ್ಷಗಳ ಕಾಲ ಹೊಟೇಲ್‌ನಲ್ಲಿ ದುಡಿದು ದುಡಿದ ಹಣವನ್ನು ಉಳಿಸಿ 3೦ ಸಾವಿರ ರೂಪಾಯಿ ಬಂಡವಾಳ ಸೇರಿಸಿ ಸ್ವಂತ ಕ್ಯಾಂಟೀನ್ ಆರಂಭಿಸಿದರು.
ಅನಂತರ,ಹಂತ ಹಂತವಾಗಿ ಸ್ವಂತ ಹೊಟೇಲ್, ಬಾರ್ ಆರಂಭಿಸಿದರು. ಆದರೆ, ಮುಂಬಯಿ ಮಹಾನಗರ ಪಾಲಿಕೆಯು ಅದನ್ನು ನೆಲಸಮಗೊಳಿಸಿದ್ದರಿಂದ ನಷ್ಟ ಅನುಭವಿಸಿ ಊರಿಗೆ ಮರಳಿದರು. ಹೀಗೇ ಸುಮಾರು 27 ವರ್ಷಗಳ ಕಾಲ ಮುಂಬೈಯಲ್ಲಿ ದುಡಿದರು.


ತದನಂತರ, ಮಂಗಳೂರಲ್ಲಿ ಕಂಪೆನಿಯೊಂದರ ಕ್ಯಾಂಟೀನ್‌ವೊಂದರಲ್ಲಿ ಕೆಲಸಕ್ಕೆ ಸೇರಿದರು. ಆ ಸಂದರ್ಭದಲ್ಲಿ ಕ್ಯಾಟರಿಂಗ್ ಸರ್ವಿಸ್‌ನಲ್ಲಿ ಕೆಲಸ ಮಾಡಿ ಅನುಭವ ಗಳಿಸಿದರು.
ಸ್ನೇಹಿತರ ಆರ್ಥಿಕ ಸಹಕಾರದಿಂದ ಹಣ ಸಂಗ್ರಹಿಸಿ ಮೂಡಿಬಿದ್ರೆಯ ಕೋಟೆಬಾಗಿಲಿನಲ್ಲಿ 5೦ ಸೆಂಟ್ಸ್ ಸ್ವಂತ ಜಾಗ ಖರೀದಿಸಿ ಮಂಗಳೂರಲ್ಲಿ, ಮೂಡಬಿದ್ರೆಯಲ್ಲಿ ಮತ್ತು ಕಾರ್ಕಳದಲ್ಲಿ ಶ್ರೀನಿಧಿ ಕ್ಯಾಟರರ‍್ಸ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಎಂಬ ರಾಜ್ಯಮಟ್ಟದ ಉದ್ಯಮ ಸಂಸ್ಥೆಯನ್ನು ಆರಂಭಿಸಿದರು. ಇದಕ್ಕೀಗ 17 ವರ್ಷ ತುಂಬಿದೆ. ಸುಮಾರು 150 ಕ್ಕೂ ಮಿಕ್ಕಿ ಇದರಲ್ಲಿ ಉದ್ಯೋಗಿಗಳಾಗಿದ್ದು, ಅವರ ಮಕ್ಕಳಿಗೆ ವರ್ಷವರ್ಷವೂ ವಿದ್ಯಾಭ್ಯಾಸದ ನೆರವು ಒದಗಿಸುತ್ತಿದ್ದಾರೆ.


ಸಮಾಜಸೇವಕರು, ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಸಹೃದಯ ಉದ್ಯಮಿ ಸುಧಾಕರ ಹೆಗ್ಡೆಯವರು ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಮೂಡಬಿದ್ರೆ ಘಟಕದ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ.
ವೀರಮಾರುತಿ ದೇವಸ್ಥಾನ ಕೋಟೆಬಾಗಿಲು, ಮಹಮ್ಮಾಯಿ ದೇವಸ್ಥಾನ ಕೋಟೆಬಾಗಿಲು, ನಿಡ್ಡೋಡಿ ಮಾರಪ್ಪಾಡಿ ಕೊಡಮಣಿತ್ತಾಯ- ಕುಕ್ಕಿತ್ತಾಯ ದೈವಸ್ಥಾನ, ಮಂಜುಶ್ರೀ ಭಜನಾ ಮಂಡಳಿ ಮುರಮೇಲು ಮಾರ್ಪಾಡಿ ಮೊದಲಾದ ಧಾರ್ಮಿಕ ಕ್ಷೇತ್ರಗಳಲ್ಲಿ ಆಡಳಿತ ಮಂಡಳಿ ಸದಸ್ಯರಾಗಿ ಸಕ್ರಿಯರಾಗಿರುವ ಸುಧಾಕರ ಹೆಗ್ಡೆಯವರ ಯಶಸ್ಸಿನ ಹಿಂದೆ ಧರ್ಮಪತ್ನಿ ಪ್ರಮೀಳಾ ಸುಧಾಕರ ಹೆಗ್ಡೆಯವರ ಪ್ರೋತ್ಸಾಹವಿದೆ. ಇವರಿಗೆ ಪ್ರಶ್ವೀತ್ ಮತ್ತು ಉದ್ವೀತ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.
ಸುಧಕರ ಹೆಗ್ಡೆಯವರ ನಿಸ್ವಾರ್ಥ ಮನೋಭಾವವನ್ನು ಗುರುತಿಸಿ ಹಲವಾರು ಸಂಘ, ಸಂಸ್ಥೆಗಳು ಅವರನ್ನು ಸನ್ಮಾನಿಸಿ, ಗೌರವಿಸಿದೆ.

Read More News

Scroll to Top